ಹೊಸದಿಲ್ಲಿ: ಹೆಣ್ಣುಮಕ್ಕಳ ವಿವಾಹದ ಕಾನೂನಾತ್ಮಕ ಕನಿಷ್ಠ ವಯಸ್ಸನ್ನು ೧೮ ರಿಂದ ೨೧ ಕ್ಕೆ ಹೆಚ್ಚಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಪುರುಷರು ಹಾಗೂ ಮಹಿಳೆಯರು ಮದುವೆಯಗುವ ವಯಸ್ಸಿನಲ್ಲಿ ಏಕರೂಪತೆ ತರುವ ಪ್ರಸ್ತಾಪವನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬ಕ್ಕೆ ತಿದ್ದುಪಡಿ ತರಲು ಕೇಂದ್ರ ಸರಕಾರ ಮಸೂದೆ ತರುವ ಸಾಧ್ಯತೆ ಕೂಡ ಇದೆ ಎಂದು ತಿಳಿದುಬಂದಿದೆ
ಮಸೂದೆ ವಿವಾಹದ ವಯಸ್ಸಿನಲ್ಲಿ ಏಕರೂಪತೆ ತರಲು ವಿವಿಧ ಸಮುದಾಯಗಳ ವಿವಾಹಕ್ಕೆ ಸಂಬಂಧಿಸಿದ ವೈಯುಕ್ತಿಕ ಕಾನೂನುಗಳಲ್ಲಿ ಪರಿಣಾಮಕಾರಿ ಬದಲಾವಣೆಗಳನ್ನು ಮಾಡಲು ಪ್ರಯತ್ನಿಸಬಹುದು ಎಂದು ಹೇಳಿದೆ. ಪ್ರಸಕ್ತ ಮಹಿಳೆಯರ ವಿವಾಹದ ಕಾನೂನಾತ್ಮಕ ವಯಸ್ಸು ೧೮ ಆಗಿದ್ದರೆ, ಪುರುಷರ ವಿವಾಹದ ಕಾನೂನಾತ್ಮಕ ವಯಸ್ಸು ೨೧. ಮಹಿಳೆಯರ ವಿವಾಹದ ಕನಿಷ್ಠ ವಯಸ್ಸು ಎಷ್ಟಿರಬೇಕು ಎಂಬ ಬಗ್ಗೆ ಸರಕಾರ ಚಿಂತಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಒಂದು ವರ್ಷದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಮತ ಪಕ್ಷದ ಮಾಜಿ ವರಿಷ್ಠ ಜಯಾ ಜೇಟ್ಲಿ ನೇತೃತ್ವದ ನಾಲ್ವರು ಸದಸ್ಯರ ಕಾರ್ಯಪಡೆ ಶಿಫಾರಸಿನ ಆಧಾರದಲ್ಲಿ ಈ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆರೋಗ್ಯ ಸಚಿವಾಲಯ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಕಾರ್ಯ ಪಡೆಯನ್ನು ಕಳೆದ ವರ್ಷ ರಚಿಸಲಾಗಿತ್ತು.
ಈ ಶಿಫಾರಸಿನ ಬಗ್ಗೆ ಮಾತನಾಡಿದ ಜಯಾ ಜೇಟ್ಲಿ, ಈ ಪ್ರಸ್ತಾವನೆಯಲ್ಲಿ ಎರಡು ಮುಖ್ಯ ಅಂಶಗಳ ಬಗ್ಗೆ ಗಮನ ಕೇಂದ್ರೀಕರಿಸಲಾಗಿದೆ ಎಂದಿದ್ದಾರೆ.