ಬೆಂಗಳೂರು : ಬಿಜೆಪಿಯವರು ಸಮಾಜದ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಜನರ ಮುಂದೆ ತಮ್ಮ ಸಾಧನೆಗಳ ಬಗ್ಗೆ ಮಾತನಾಡಲು ಅವರ ಬಳಿ ಸಾಧನೆಗಳೇ ಇಲ್ಲ. ಸರ್ಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿದೆ, ಅದನ್ನು ಮುಚ್ಚಿಡಲು ಹಿಜಾಬ್, ಹಲಾಲ್, ಮಸೀದಿಗಳ ಧ್ವನಿವರ್ಧಕ ಮುಂತಾದ ಧಾರ್ಮಿಕ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ. ಈಗ ಮಾವಿನ ಹಣ್ಣಿನ ವ್ಯಾಪಾರ ಮಾಡುವ ವಿಚಾರದಲ್ಲೂ ವಿವಾದ ಸೃಷ್ಟಿಸಿದ್ದಾರೆ. ಹಲವಾರು ವರ್ಷಗಳಿಂದ ಹಿಂದೂ ಮುಸ್ಲಿಮರು ಪರಸ್ಪರ ಹೊಂದಾಣಿಕೆ, ಸಹಕಾರದಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು. ನಮ್ಮ ಮೈಸೂರು ಭಾಗದಲ್ಲಿ ಮಾವಿನ ತೋಟ ಇದ್ದವರು ಮುಸ್ಲಿಂ ವರ್ತಕರಿಗೆ ಮಾವಿನ ಹಣ್ಣನ್ನುಮಾರುತ್ತಿದ್ದರು, ಇಂಥದ್ದಕ್ಕೆಲ್ಲ ಅಡ್ಡ ಬರುತ್ತಾರೆ ಎಂದರೆ ಏನರ್ಥ? ಬಿಜೆಪಿಯವರು ಚುನಾವಣೆಗಾಗಿ ಸಮಾಜ ವಿಭಜಿಸಿ ಮತಗಳ ಕ್ರೋಢೀಕರಣ ಮಾಡುತ್ತಿದ್ದಾರೆ. ಇಂಥಾ ಧಾರ್ಮಿಕ ಆಚರಣೆ, ನಂಬಿಕೆಗಳನ್ನು ವಿವಾದ ಮಾಡುತ್ತಾ ಹೋದರೆ ಮುಂದೆ ಬಿಜೆಪಿಗೆ ಇದು ತಿರುಗುಬಾಣವಾಗುತ್ತೆ. ಜನರಿಗೆ ಇವರ ಹುನ್ನಾರ ಅರ್ಥವಾಗಿದೆ, ಜನ ಬೇಸತ್ತಿದ್ದಾರೆ. ಯಾರಾದರೂ ಮಾವಿನಹಣ್ಣಿನ ವ್ಯಾಪಾರಕ್ಕೂ ಅಡ್ಡ ಬರುತ್ತಾರ? ಜಾತ್ರೆಗಳಲ್ಲಿ ಹಿಂದೂ ಮುಸ್ಲಿಮರು ವ್ಯಾಪಾರ ಮಾಡುತ್ತಾ ಬಂದಿದ್ದರು, ಅದಕ್ಕೂ ನಿರ್ಬಂಧ ಮಾಡ್ತಿದ್ದಾರೆ. ಎಷ್ಟೋ ವರ್ಷಗಳಿಂದ ಹಲಾಲ್ ನಡೆದುಕೊಂಡು ಬಂದಿದೆ, ನಾವು ಕೂಡ ಹಲಾಲ್ ಮಾಂಸ ತಿಂದಿದ್ದೇವೆ, ಯಾರೋ ಮಾಂಸ ತಿನ್ನದವರು ಮಾಂಸ ತಿನ್ನುವ ಜನರ ದಾರಿ ತಪ್ಪಿಸುತ್ತಿದ್ದಾರೆ.
ಸರ್ಕಾರ ಬೆಲೆಯೇರಿಕೆ ಬಗ್ಗೆ ಮಾತನಾಡಲಿ. ಕಳೆದ ಹದಿನೈದು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 9 ರೂಪಾಯಿ ಜಾಸ್ತಿಯಾಗಿದೆ, ಗ್ಯಾಸ್, ಅಡುಗೆ ಎಣ್ಣೆ, ಗೊಬ್ಬರ, ಹೋಟೆಲ್ ತಿಸಿಸು, ಜನೌಷಧ, ವಿದ್ಯುತ್ ದರ ಮುಂತಾದವುಗಳ ಬೆಲೆ ಜಾಸ್ತಿಯಾಗಿದೆ. ಇದರ ಬಗ್ಗೆ ಬಿಜೆಪಿಯವರು ಮಾತನಾಡಲ್ಲ. ಇವೆಲ್ಲ ಜನರ ಜೀವನಕ್ಕೆ ಸಂಬಂಧಪಟ್ಟವು, ಈ ವಿಚಾರಗಳು ಚರ್ಚೆಯಾಗಬೇಕು. ಜನರ ಜೀವನಕ್ಕೆ ಸಂಬಂಧಿಸದ ವಿಚಾರಗಳನ್ನು ಮಾತನಾಡಿ ಅವರ ಧಾರ್ಮಿಕ ಭಾವನೆಗಳನ್ನು ಕೆರೆಳಿಸುವುದು ಖಂಡನೀಯವಾದುದ್ದು. ಯಾರದ್ದೇ ಕೊಲೆಯಾದರೂ ನಾನು ಖಂಡಿಸುತ್ತೇನೆ. ಅದು ಹಿಂದೂವಾಗಿರಲಿ, ಮುಸ್ಲಿಂ ಆಗಿರಲಿ. ಯಾರೇ ಸತ್ತರೂ ಅದು ಒಂದು ಜೀವವಲ್ಲವೇ? ಶಿವಮೊಗ್ಗದ ಹರ್ಷನ ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದಿದ್ದೀನಿ. ಈ ಗೃಹ ಸಚಿವರಿಗೆ ಅನುಭವವೂ ಇಲ್ಲ, ಗೃಹ ಇಲಾಖೆಯನ್ನು ನಿಭಾಯಿಸುವ ಸಾಮರ್ಥ್ಯವೂ ಇಲ್ಲ. ನರಗುಂದದಲ್ಲಿ ಕೊಲೆಯಾದ ಸಮೀರ್ ಎಂಬ ಯುವಕನಿಗೆ ಸರ್ಕಾರ ಪರಿಹಾರ ಕೊಟ್ಟಿದೆಯಾ? ಬೆಳ್ತಂಗಡಿಯಲ್ಲಿ ಭಜರಂಗದಳದ ಕಾರ್ಯಕರ್ತರನಿಂದ ಕೊಲೆಯಾದ ದಲಿತ ಯುವಕ ದಿನೇಶ್ ಕುಟುಂಬಕ್ಕೆ ಪರಿಹಾರ ನೀಡಿದ್ರಾ? ಹರ್ಷ, ದಿನೇಶ್, ಸಮೀರ್ ಎಲ್ಲರೂ ಮನುಷ್ಯರೆ.
ಮುಖ್ಯಮಂತ್ರಿಗಳು ಮಂಗಳೂರಿಗೆ ಹೋಗಿದ್ದಾಗ ನೈತಿಕ ಪೊಲೀಸ್ ಗಿರಿಗೆ ಸಂಬಂಧಿಸಿದ ಪ್ರಶ್ನೆಗೆ ಕ್ರಿಯೆ ಪ್ರತಿಕ್ರಿಯೆ ಇರುತ್ತೆ ಎಂದರು. ಇದು ಕುಮ್ಮಕ್ಕು ಕೊಟ್ಟಂತಾಗಲ್ವ? ಮೈಸೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಆದಾಗ ಗೃಹ ಸಚಿವರು ಆ ಯುವತಿ ಅಷ್ಟು ಹೊತ್ತಿನಲ್ಲಿ ಅಲ್ಲಿಗೇಕೆ ಹೋಗಿದ್ದು? ಕಾಂಗ್ರೆಸ್ ನವರು ನನ್ನನ್ನೇ ಅತ್ಯಾಚಾರ ಮಾಡುತ್ತಿದ್ದಾರೆ ಎಂದರು. ದುರಾದೃಷ್ಟವಶಾತ್ ಇಂಥವರು ನಮ್ಮ ಗೃಹ ಸಚಿವರು. ಇವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರೆಯುವ ನೈತಿಕತೆ ಇದೆಯ? ಇವರಿಗೆ ಮುಖ್ಯಮಂತ್ರಿಗಳು ಬೆಂಬಲ ಕೊಡ್ತಾರೆ. ಸರ್ವಜನಾಂಗದ ಶಾಂತಿಯ ತೋಟ ಎಂಬ ಕುವೆಂಪು ಅವರ ಮಾತಿನಲ್ಲಿ ಬಿಜೆಪಿಗೆ ನಂಬಿಕೆ ಇದೆಯ? ಸಚಿವ ಈಶ್ವರಪ್ಪ, ಕೇಂದ್ರ ಸಚಿವ ಭಗವಂತ್ ಖೂಬಾ 144 ಸೆಕ್ಷನ್ ಉಲ್ಲಂಘಿಸಿದ್ದರು.ಅವರ ಮೇಲೆ ಯಾವುದಾದರೂ ಕಾನೂನು ಕ್ರಮ ಕೈಗೊಂಡಿದ್ದಾರ? ಈ ಇಬ್ಬರನ್ನೂ ಸಚಿವ ಸಂಪುಟದಿಂದ ವಜಾ ಮಾಡಬೇಕಿತ್ತು. ಇದರಿಂದ ರಾಜ್ಯದ ಶಾಂತಿ, ಸುವ್ಯವಸ್ಥೆ ಹಾಳಾಗುತ್ತೆ, ಬಂಡವಾಳ ಹೂಡಿಕೆಯಾಗಲ್ಲ. ನಮ್ಮ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಅಧಿವೇಶನದಲ್ಲಿ ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಎಷ್ಟು ಬಂಡವಾಳ ಹೂಡಿಕೆ ಆಗಿದೆ ಮತ್ತು ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂದು ಸರ್ಕಾರವನ್ನು ಪ್ರಶ್ನೆ ಕೇಳಿದ್ದರು. ಒಂದು ರೂಪಾಯಿ ಬಂಡವಾಳವೂ ಬಂದಿಲ್ಲ, ಒಂದೇ ಒಂದು ಉದ್ಯೋಗ ಸೃಷ್ಟಿಯಾಗಿಲ್ಲ ಎಂದು ಸರ್ಕಾರ ಉತ್ತರ ನೀಡಿದೆ. ಇದ್ದ ಕಂಪನಿಗಳು ತಮಿಳುನಾಡಿಗೆ ಹೋಗುತ್ತಿವೆ, ನಮ್ಮಲ್ಲಿ ಬಂಡವಾಳ ಹೂಡಿಕೆಗೆ ಬೇಕಾದ ಪೂರಕ ವಾತಾವರಣ ಇಲ್ಲ. ಆಂದ್ರಪ್ರದೇಶದವರು ಕರ್ನಾಟಕದಲ್ಲಿ ವಾತಾವರಣ ಸರಿಯಿಲ್ಲದಿದ್ದರೆ ನಮ್ಮ ರಾಜ್ಯಕ್ಕೆ ಬನ್ನಿ ಎಂದು ಕಂಪನಿಗಳನ್ನು ಕರೆಯುತ್ತಿದ್ದಾರೆ. ಬಿಜೆಪಿಯವರಿಗೆ ಇವರನ್ನು ಉಳಿಸಿಕೊಳ್ಳುವ ಯೋಗ್ಯತೆ ಇದೆಯ? ರಾಜ್ಯವನ್ನು ಹಾಳು ಮಾಡ್ತಿದ್ದಾರೆ. ಈ ಬಿಜೆಪಿ ಸರ್ಕಾರ ತೊಲಗಿದ್ರೆ ಸಾಕು ಎಂದು ಜನ ಕಾಯ್ತಾ ಇದ್ದಾರೆ.
ನಾವು ಬಿಜೆಪಿಯ ದುರಾಡಳಿತವನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಹಿಂದುತ್ವದ ಹೆಸರೇಳಿಕೊಂಡು ದ್ವೇಷ ಹರಡಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದನ್ನು ಜನರಿಗೆ ಅರ್ಥ ಮಾಡಿಸುತ್ತೇವೆ. ಜನ ಮೋಸ ಹೋಗಬಾರದು ಎಂಬುದು ನಮ್ಮ ಕಾಳಜಿ. ದೇಶದ ಜಾತ್ಯಾತೀತ ತತ್ವವನ್ನು ಉಳಿಸುವುದು ನಮ್ಮ ಕರ್ತವ್ಯ. ಕಾಂಗ್ರೆಸ್ ಪಕ್ಷ ಎಲ್ಲ ಧರ್ಮಗಳ ಜನರಿಗೆ ರಕ್ಷಣೆ ಕೊಡುತ್ತದೆ. ಸರ್ಕಾರಕ್ಕೆ ಧರ್ಮವಿಲ್ಲ, ನಮಗೆ ಮಾನವೀಯತೆಯಲ್ಲಿ ನಂಬಿಕೆ ಇದ್ದರೆ, ಬಿಜೆಪಿ ಮನುವಾದದಲ್ಲಿ ನಂಬಿಕೆ ಇಟ್ಟಿದೆ.