- ನಾಡ ಪ್ರವಾಸಿ ತಾಣಗಳು, ಶಿಲ್ಪಕಲೆ, ಪಾಕಶೈಲಿ ಮತ್ತು ಸಂಸ್ಕೃತಿಯ ಪ್ರಚಾರ
- ವಿಧಾನಸೌಧ,ವಿಕಾಸಸೌಧದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರಖ್ಯಾತ ಪ್ರವಾಸಿ ತಾಣಗಳ ಛಾಯಾಚಿತ್ರಗಳ ಅಳವಡಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅನಾವರಣ
ಬೆಂಗಳೂರು: ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳ ಛಾಯಾಚಿತ್ರಗಳನ್ನು ಅಳವಡಿಸಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರವಾಸೋದ್ಯಮ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್ ಕೆ ಪಾಟೀಲ್ ಅವರು ವಿಧಾನಸೌಧದ ಕ್ಯಾಬಿನೆಟ್ ಹಾಲ್ ಮುಂಭಾಗ ಕಳೆದ ವರ್ಷ ಯುನೆಸ್ಕೋ ಪಟ್ಟಿಗೆ ಸೇರಿದ ಚೆನ್ನಕೇಶವ ದೇವಾಲಯ, ಸೋಮನಾಥಪುರ ಹಾಗೂ ವಿಷ್ಣು ಮೂರ್ತಿ, ಗುಹಾಂತರ ದೇವಾಲಯ ಬಾದಾಮಿಯ ಛಾಯಾಚಿತ್ರಗಳನ್ನು ಗುರುವಾರ ಅನಾವರಣಗೊಳಿಸಿದರು.
ವಿಧಾನಸೌಧದಲ್ಲಿ ವಿಜಯಪುರದ ಗೋಲಗುಮ್ಮಟ, ವೀರನಾರಾಯಣ ದೇವಾಲಯ, ಗದಗ, ಪಟ್ಟದಕಲ್ಲು, ಹಂಪಿ, ಮೈಸೂರು ದಸರಾ, ಮೈಸೂರು ಅರಮನೆಯ ದರ್ಬಾರ್ ಹಾಲ್, ಜೋಗಜಲಪಾತ, ಕಬಿನಿ,ಯಕ್ಷಗಾನ, ಕಂಬಳ ಮತ್ತು ಕರ್ನಾಟಕ ರಾಜ್ಯದ Geographical Indication (G I) ಉತ್ಪನ್ನಗಳ ಛಾಯಾಚಿತ್ರಗಳನ್ನು ಅಳವಡಿಸಲಾಗುತ್ತಿದೆ.
ವಿಧಾನಸೌಧ ಹಾಗೂ ವಿಕಾಸಸೌಧ ಕಟ್ಟಡಗಳ ಸೌಂದರ್ಯವನ್ನು ಹೆಚ್ಚಿಸಲು ಹಾಗೂ ನಮ್ಮ ರಾಜ್ಯದ ಪ್ರಖ್ಯಾತ ಪ್ರವಾಸಿ ತಾಣಗಳು, ಶಿಲ್ಪಕಲೆ, ಪಾಕಶೈಲಿ ಮತ್ತು ಸಂಸ್ಕೃತಿಯನ್ನು ಪ್ರಚಾರಪಡಿಸುವ ಹಿತದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖಾ ವತಿಯಿಂದ ಛಾಯಾಚಿತ್ರಗಳನ್ನು ಅಳವಡಿಸಲಾಗುವುದು.
ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದ ಅನ್ವಯ ಪ್ರವಾಸಿ ತಾಣಗಳ ಛಾಯಾಚಿತ್ರಗಳನ್ನು ಅಳವಡಿಸಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಹಾಗೂ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಗಳ ನೂತನ ವರ್ಷದ ಕ್ಯಾಲೆಂಡರ್ ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರವಾಸೋದ್ಯಮ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್ ಕೆ ಪಾಟೀಲ್ ಹಾಗೂ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿಗಳಾದ ಸಲ್ಮಾ ಕೆ ಫಹೀಂ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾದ ಡಾ.ಕೆ.ವಿ.ರಾಜೇಂದ್ರ ಹಾಗೂ ಇಲಾಖೆಯ ಇತರೆ ಹಿರಿಯ ಅಧಿಕಾರಿಗಳು ಹಾಜರಿದ್ದರು.