ಕಿಡಿಗೇಡಿಗಳು ಹೊಟ್ಟೆಪಾಡಿಗೆ ದೇಶವನ್ನು ಹಾಳು ಮಾಡುತ್ತಿದ್ದಾರೆ

ರಾಮನಗರ: ಸಮಾಜದ ಶಾಂತಿ ಕದಡುತ್ತಿರುವ ಹಿಂದೂ ಪರಿಷತ್, ಭಜರಂಗದಳದ ಕೆಲ ಕಿಡಿಗೇಡಿಗಳು ನಿಜಕ್ಕೂ ಸಮಾಜಘಾತುಕರು. ದಿನ ಬೆಳಗಾದರೆ ಕರಪತ್ರಗಳನ್ನು ಹಂಚುತ್ತಾ ಜನರ ಮನಸ್ಸನ್ನು ಕೆಡಿಸುತ್ತಿರುವ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದರು. ಚನ್ನಪಟ್ಟಣದ ಚಕ್ಕೆರೆ ಗ್ರಾಮದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಹಿಂಸೆ ಹಾಗೂ ಶಾಂತಿಗೆ ಭಂಗ ತರುತ್ತಿರುವ ಸಂಘಟನೆಗಳ ವಿರುದ್ಧ ಕಿಡಿಕಾರಿದರು. ದಿನ ಬೆಳಗಾದರೆ ತಹಸೀಲ್ದಾರ್ ಬಳಿ ಹೋಗಿ ಅರ್ಜಿ ಕೊಡೋದು, ಅಂಗಡಿಗಳಿಗೆ ಹೋಗಿ ಕರಪತ್ರ ಕೊಡೋದನ್ನು ಇವರು ಮಾಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅನಾಹುತ ಉಂಟಾಗುತ್ತಿದೆ ಎಂದು ಅವರು ಹೇಳಿದರು. ಹಿಂದೂ ಪರಿಷತ್, ಭಜರಂಗದಳದವರು ಕಿಡಿಗೇಡಿಗಳು, ಸಮಾಜಘಾತುಕರು. ಇವರಿಗೆ ರೈತರ ಬದುಕು ಗೊತ್ತಿದೆಯಾ? ನಮ್ಮ ರೈತರು ಕತ್ತರಿಸುವ ಮಾಂಸ ಸ್ವಚ್ಚ ಮಾಡಲು ಅದೇ ಸಮಾಜದವರೇ ಬರಬೇಕು. ಈಗ ಇವರು ಬಂದು ಹಲಾಲ್ ಕಟ್ – ಜಟ್ಕಾ ಕಟ್ ಅಂತಿದ್ದಾರೆ. ರೈತರಿಂದ ಮಾವು, ದ್ರಾಕ್ಷಿ, ರೇಷ್ಮೆ ಖರೀದಿ ಮಾಡಲಿಕ್ಕೆ ಈ ಪೋಲಿಗಳು ಬರುತ್ತಾರಾ? ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಅಕಾಲಿಕ ಮಳೆಯಿಂದಾಗಿ ಮಾವು ನಷ್ಟವಾಗಿದೆ. ರೈತರ ಕಷ್ಟ ಕಾಲಕ್ಕೆ ಇವರು ನೆರವಿಗೆ ಬರುತ್ತಾರಾ? ಬೆಳೆ ಖರೀದಿ ಮಾಡುತ್ತಾರ ಎಂದು ಪ್ರಶ್ನೆ ಮಾಡಿದ ಅವರು, ಇದಕ್ಕೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದವರು ಬರುತ್ತಾರಾ? ಇವರ ಹೊಟ್ಟೆಪಾಡಿಗೆ, ದೇಶ ಹಾಳು ಮಾಡಲು ಇಂತಹ ವಿಚಾರ ಇಟ್ಟುಕೊಂಡು ಬಂದಿದ್ದಾರೆ. ಇದಕ್ಕೆಲ್ಲ ನಾನು ಕೇರ್ ಮಾಡುವುದಿಲ್ಲ ಎಂದರು. ಇಷ್ಟು ವರ್ಷ ಹಲಾಲ್ ತಿಂದಿದ್ದೇವೆ, ಏನಾಗಿದೆ ಚೆನ್ನಾಗಿದ್ದೀವಲ್ಲ. ಈಗ ಹಲಾಲ್ ತಿಂದರೆ ತೊಂದರೆ ಆಗುತ್ತದಾ? ನಮ್ಮ ದೇವರು ಮೆಚ್ಚಲ್ವ? ಹಲವಾರು ವರ್ಷಗಳಿಂದ ಹಲಾಲ್ ನಡೆಯುತ್ತಿದೆ, ಈಗಿನದ್ದಲ್ಲ. ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ ಜನ ಸತ್ತರು. ಆ ಸಂದರ್ಭವನ್ನು ಸರಕಾರ ಹೇಗೆ ನಿರ್ವಹಣೆ ಮಾಡಿತು ಎನ್ನುವುದನ್ನು ನಾವೆಲ್ಲ ನೋಡಿದ್ದೇವೆ. ಬಿಜೆಪಿ ಸರಕಾರದ ಯೋಗ್ಯತೆಗೆ ಆಸ್ಪತ್ರೆ ನಿರ್ವಹಣೆ ಮಾಡಲು ಅಗಲಿಲ್ಲ. ಆಗ ಎಲ್ಲಿದ್ದರು ವಿಶ್ವ ಹಿಂದೂ ಪರಿಷತ್ , ಭಜರಂಗದಳದವರು? ಎಂದು ಕುಮಾರಸ್ವಾಮಿ ಗುಡುಗಿದರು.

ಮುಖ್ಯಮಂತ್ರಿ ಮೌನ ಸರಿಯಲ್ಲ: ರಾಜ್ಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಏನು ಗೊತ್ತಿಲ್ಲದಂತೆ ಸರಕಾರ ಮೌನವಾಗಿರಬಾರದು. ಮುಖ್ಯಮಂತ್ರಿಗಳ ಮೌನಕ್ಕೆ ಅರ್ಥ ಏನು? ಸಮಾಜ ಒಡೆಯುವ ಶಕ್ತಿಗಳು ಹ್ಯಾಂಡ್ ಬಿಲ್ ಹಂಚುತ್ತಿದ್ದಾರೆ. ಅಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಪಡಿಸಿದರು. ಯಾವ ಸಂವಿಧಾನಕ್ಕೆ ಗೌರವಿಸುತ್ತಿದ್ದೀರಿ, ಯಾಕೆ ಅಂಬೇಡ್ಕರ್ ಜಯಂತಿ ಆಚರಿಸುತ್ತೀರಿ? ಅದೆಲ್ಲ ತವ ಪುರುಷಾರ್ಥಕ್ಕೆ? ಇಂಥದ್ದನ್ನು ನಡೆಯಲು ಬಿಟ್ಟು ಸಂವಿಧಾನ, ಅಂಬೇಡ್ಕರ್ ಅವರ ಹೆಸರು ಹೇಳಿದರೆ ಏನು ಪ್ರಯೋಜನ? ಎಂದ ಅವರು, ನನಗೆ ವೋಟ್ ಮುಖ್ಯವಲ್ಲ, ಈ ನಾಡು ಶಾಂತಿಯಿಂದ ಬದುಕಬೇಕು. ಅದು ಮುಖ್ಯ ನನಗೆ. ನಾನು ಮೌನವಾಗಿರಲು ಸಾಧ್ಯವಿಲ್ಲ ಎಂದರು. ಕಾಂಗ್ರೆಸ್ ನವರಿಗೆ ಮಾತನಾಡಲು ತಾಕತ್ತಿಲ್ಲ. ನಾನು ಸುಮ್ಮನಿರಲಾರೆ. ಹಿಂದೂಗಳು ವೋಟ್ ಹಾಕ್ತಾರೋ ಇಲ್ಲವೋ ಎಂಬ ಭಯ ನನಗಿಲ್ಲ. ಉತ್ತರ ಪ್ರದೇಶದಲ್ಲಿ ನಿಮ್ಮ ಆಟ ಆಡಿಕೊಳ್ಳಿ, ಇಲ್ಲಿ ಬೇಡ ಎಂದು ಪ್ರಚೋದನೆ ನೀಡುತ್ತಿರುವ ಸಂಘಟನೆಗಳಿಗೆ ಎಚ್ಚರಿಕೆ ನೀಡಿದರು ಅವರು.

Leave a Comment

Your email address will not be published. Required fields are marked *

Translate »
Scroll to Top