ಅತ್ತೆಮಗಳ ಕೊಂದು ನಾಪತ್ತೆಯಾಗಿದ್ದವ ಶವವಾಗಿ ಪತ್ತೆ

ಮಸ್ಕಿ ,ಮಾ,29 :ಪಟ್ಟಣದಲ್ಲಿ ಪ್ರೇಮ ವಿಚಾರಕ್ಕೆ ನಡೆದಿದ್ದ ವಿದ್ಯಾರ್ಥಿನಿ ಕೊಲೆ ಪ್ರಕರಣ ಈಗ ಮತ್ತೊಂದು ತಿರುವು ಪಡೆದಿದೆ. ಕೃತ್ಯ ನಡೆದು 33 ದಿನಗಳ ಬಳಿಕ ಪಾಗಲ್ ಪ್ರೇಮಿ ಶವವಾಗಿ ಪತ್ತೆಯಾಗಿದ್ದಾನೆ. ಆರೋಪಿ ರಮೇಶ್(26) ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಿಯತಮೆಯನ್ನ ಕೊಂದ ಜಾಗದ ಪಕ್ಕದಲ್ಲೇ ಶವವಾಗಿ ಪತ್ತೆಯಾಗಿದ್ದಾನೆ. ಭೂಮಿಕಾ(15) ಕೊಲೆಯಾಗಿದ್ದ ವಿದ್ಯಾರ್ಥಿನಿ. ಫೆಬ್ರವರಿ 25 ರಂದು ಭೂಮಿಕಾ ಕೊಲೆ ನಡೆದಿತ್ತು. ಭೂಮಿಕಾಳ ಸೋದರ ಮಾವನ ಮಗ ರಮೇಶ್ ಪಟ್ಟಣದ ಸಾನಬಾಳ ರಸ್ತೆಯ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿ ನಾಪತ್ತೆಯಾಗಿದ್ದ. ಆದರೆ ಇತ್ತೀಚೆಗೆ ಅದೇ ಜಾಗದ ಪಕ್ಕದ ಪೊದೆಯಲ್ಲಿ ರಮೇಶ್ ಶವ ಪತ್ತೆಯಾಗಿದೆ. ಪೊದೆಯಲ್ಲಿದ್ದ ಮೃತದೇಹವನ್ನ ನಾಯಿಗಳು ಎಳೆದು ಹೊರತಂದಿವೆ. ಸದ್ಯ ಮಸ್ಕಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಯುವತಿ ಕೊಲೆಯಾದ ಎರಡು ಮೂರು ದಿನಗಳ ಬಳಿಕ ರಮೇಶ್ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಭೂಮಿಕಾ ಕೊಲೆಯಾದ ಜಾಗದಲ್ಲಿ ಕ್ರಿಮಿನಾಶಕ ಬಾಟಲಿ ಬಿದ್ದಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತ ಪೊಲೀಸರು ಶಂಕಿಸಿದ್ದಾರೆ. ಸೋದರ ಅತ್ತೆ ಮಗಳಾಗಿದ್ದ ಭೂಮಿಕಾಳನ್ನು ರಮೇಶ ಪ್ರೀತಿಸಿದ್ದ. ಮೊದಲು ಮದುವೆಗೆ ಒಪ್ಪಿ, ಕೊನೆಗೆ ಯುವತಿ ಮದುವೆಗೆ ನಿರಾಕರಣೆ ಮಾಡಿದ್ದರಿಂದ ಕುಪಿತನಾಗಿದ್ದ. ಶಾಲೆಯಿಂದ ಕರೆತರೊ ನೆಪದಲ್ಲಿ ಭೂಮಿಕಾಳನ್ನು ಹತ್ಯೆಗೈದು ರಮೇಶ್ ನಾಪತ್ತೆಯಾಗಿದ್ದ. ಕೊಲೆ ಆರೋಪಿಗಾಗಿ 33 ದಿನಗಳಿಂದ ಕಾರ್ಯಾಚರಣೆ ನಡೆಸಿದ್ದ ಪೊಲೀಸರ ಮೂರು ವಿಶೇಷ ತಂಡ ಬೆಂಗಳೂರು, ಮಸ್ಕಿ ತಾಲೂಕು ಸೇರಿ ವಿವಿಧೆಡೆ ಹುಡುಕಾಟ ನಡೆಸಿತ್ತು. ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *

Translate »
Scroll to Top