ಬದುಕಿಗೆ ಬಣ್ಣ ತಂದವರು ಚಿತ್ರ ಕಲಾವಿದರು

ದೇವನಹಳ್ಳಿ : ಸಾವಿರಾರು ಪದಗಳನ್ನು ಒಂದು ಚೌಕಟ್ಟಿನಲ್ಲಿ ತರುವ ಸಾಮರ್ಥ್ಯ ಚಿತ್ರಕಲೆಗೆ ಇದೆ. ಚಿತ್ರಕಲೆಯ ಮಹತ್ವ ಬಹಳ ಹಿರಿದಾದ್ದು ಎಂದು ಚಿತ್ರಕಲಾ ಶಿಕ್ಷಕ
ಮುದ್ದಪ್ಪ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಗಾಂಧಿಚೌಕದ ಮಹಂತಿನ ಮಠದ ಆವರಣದಲ್ಲಿ ಕರ್ನಾಟಕ ರಾಜ್ಯ ದೇವನಹಳ್ಳಿ ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ನಿಮ್ಮ ಕಲ್ಪನೆಯಲ್ಲಿ ದಸರಾ ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ಮಾತನಾಡಿ, ಮಕ್ಕಳು ತಮ್ಮ ಓದಿನ ಜೊತೆ ಲಲಿತ ಕಲೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ. ಚಿತ್ರಕಲೆಯಿಂದ ಏಕಾಗ್ರತೆ ಹೆಚ್ಚುತ್ತದೆ. ಇದರಿಂದ ಓದಿನಲ್ಲೂ ಏಕಾಗ್ರತೆ, ಸ್ಮರಣಾ ಶಕ್ತಿ ಹೆಚ್ಚುತ್ತದೆ. ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರವೂ ಚಿತ್ರಕಲೆಯ ಪರೀಕ್ಷೆಯನ್ನು ನಡೆಸುತ್ತದೆ. ಇದು ಸಹ ಆರು ವಿಷಯಗಳನ್ನು ಒಳಗೊಂಡಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಅಭಿವೃದ್ಧಿ ದೃಷ್ಟಿಯಲ್ಲಿಯೂ ಚಿತ್ರಕಲೆಗೆ ಒತ್ತು ನೀಡಿ ಎಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ಬೆಂ.ಗ್ರಾ.ಜಿ.ಅಧ್ಯಕ್ಷ ಚಂದ್ರಶೇಖರ್ ಹಡಪದ ಮಾತನಾಡಿ, ಬದುಕಿಗೆ ಬಣ್ಣ ತುಂಬಿದವರು ಚಿತ್ರಕಾರರು. ನೂರಾರು ವಿಚಾರಗಳನ್ನು ಒಂದೇ ಚಿತ್ರದಲ್ಲಿ ಬಿಂಬಿಸುವ ಕಲೆಗಾರ ಚಿತ್ರಕಾರ. ಚಿತ್ರಕಲೆ ಒಂದು ವಿಶಿಷ್ಟ ಅಭಿರುಚಿ. ಇಂದು ತಾಂತ್ರಿಕತೆ ಮುಂದುವರೆದಂತೆಲ್ಲಾ ಚಿತ್ರಗಳ ವಿನ್ಯಾಸ ಒಂದು ಹೊಸ ರೂಪವನ್ನೇ ಪಡೆದಿದೆ. ಆದರೂ ವ್ಯಕ್ತಿಯ ಕೈಯಲ್ಲಿ ಮೂಡುವ ಚಿತ್ರ ವಿಶಿಷ್ಟ, ಇದೊಂದು ಉತ್ತಮ ಹವ್ಯಾಸ ಎಂದು ತಿಳಿಸಿದರು. 83 ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅದರಲ್ಲಿ 15 ಜನ ವಿದ್ಯಾರ್ಥಿಗಳಲ್ಲಿ ಆಯ್ಕೆ ಮಾಡಿ, ಮತ್ತೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ಪ್ರಥಮ ಬಹುಮಾನ – ಯು.ಖುಷಿ
ದ್ವಿತೀಯ ಬಹುಮಾನ – ಆರ್.ತ್ರಿಶಾ ತೃತೀಯ ಬಹುಮಾನ – ವಿ.ಆರ್.ವಂಶಿ ಪಡೆದರು.

ಕಾರ್ಯಕ್ರಮದಲ್ಲಿ ದೇವನಹಳ್ಳಿ ತಾಲ್ಲೂಕು ಘಟಕ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಬಸವರಾಜು, ಉಪಾಧ್ಯಕ್ಷ ವಿಶ್ವನಾಥ್, ಗೌರವಕಾರ್ಯದರ್ಶಿ ಎಸ್.ಪಿ.ಮೋಹನ್, ಕೋಶಾಧಿಕಾರಿ ಸುಮನ್, ಸಂಘಟನಾ ಕಾರ್ಯದರ್ಶಿ ಅಕ್ಷಯ್.ವಿ, ಅಭಿ , ಶಿಕ್ಷಕರಾದ ಕೆ.ಎಚ್ ಪ್ರಸನ್ನ ಮತ್ತಿತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top