ತೆಲಂಗಾಣದಲ್ಲಿ ಟೆಂಪರರಿ ಸಿಎಂ, ಡೂಪ್ಲಿಕೇಟ್‌ ಸಿಎಂ ಸುಳ್ಳು ಪ್ರಚಾರ; ಸಿಎಂ, ಡಿಸಿಎಂ ವಿರುದ್ಧ ಪ್ರಹಾರ

ಪಂಚರಾಜ್ಯಗಳ ಜನರಿಗೆ ಸುಳ್ಳು ಗ್ಯಾರಂಟಿಗಳ ಮಂಕುಬೂದಿ: ಹೆಚ್.ಡಿ.ಕುಮಾರಸ್ವಾಮಿ ಕಟುಟೀಕೆ

ತೆಲಂಗಾಣದ ಜನರು ಕಾಂಗ್ರೆಸ್ ಪೊಳ್ಳು ಗ್ಯಾರಂಟಿಗಳಿಗೆ ಮರುಳಾಗಬಾರದು

ದಾಖಲೆ ಸಮೇತ ಗ್ಯಾರಂಟಿಗಳ ಜನ್ಮ ಜಾಲಾಡಿದ ಹೆಚ್ಡಿಕೆ

ಮುಖ್ಯಾಂಶಗಳು

ಶಕ್ತಿ: ಬಸ್ಸುಗಳಿಲ್ಲ, ಜೆಸಿಬಿಗಳಲ್ಲಿ ಶಾಲಾ ಮಕ್ಕಳ ಪ್ರಯಾಣ

ಗೃಹಜ್ಯೋತಿ: ಮಹಾದೇವಪ್ಪ ನಿಂಗೂ‌ ಕತ್ತಲು ಫ್ರೀ! ನಂಗೂ ಕತ್ತಲು ಫ್ರೀ!! ಕಾಕಾ ಪಾಟೀಲ್ ನಿಂಗೂ ಕತ್ತಲು ಫ್ರೀ!!

ಗೃಹಲಕ್ಷ್ಮೀಗೆ ಸರ್ವರ್‌ ಸಮಸ್ಯೆ!

 

ಅಕ್ಕಿಭಾಗ್ಯಕ್ಕೆ ನೂರೆಂಟು ನೆಪ

ಬೆಂಗಳೂರು: ಕರ್ನಾಟಕದಲ್ಲಿ ಜಾರಿ ಮಾಡಿರುವ ಸುಳ್ಳುಪೊಳ್ಳಿನ ಗ್ಯಾರಂಟಿ ಯೋಜನೆಗಳನ್ನು ಇಡೀ ದೇಶಕ್ಕೆ ವಿಸ್ತರಿಸಿ ಜನರಿಗೆ ಮಂಕುಬೂದಿ ಎರಚಲು ಕಾಂಗ್ರೆಸ್ ಹುನ್ನಾರ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ನೆರೆಯ ತೆಲಂಗಾಣ ಸೇರಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಐದೂ ರಾಜ್ಯಗಳ ಮತದಾರರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸುಳ್ಳು ಭರವಸೆಗಳಿಗೆ ಮರುಳಾಗಬಾರದು ಎಂದು ನಾನು ಮನವಿ ಮಾಡುತ್ತೇನೆ. ಕರ್ನಾಟಕದಲ್ಲಿ ಈ ಗ್ಯಾರಂಟಿಗಳು ಸಂಪೂರ್ಣ ವಿಫಲಗೊಂಡು ಜನ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಅವರು ದಾಖಲೆಗಳ ಸಮೇತ ದೂರಿದ್ದಾರೆ.

 

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಕರೆಯಲಾಗಿದ್ದ ತುರ್ತು ಮಾಧ್ಯಮಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿಗಳು ಮಾತನಾಡಿದರು.

ಚುನಾವಣೆ ವೇಳೆ ಅಬ್ಬರದ ಪ್ರಚಾರ ಮಾಡಿ ಜನತೆ ದಿಕ್ಕುತಪ್ಪಿಸಿ ಕರ್ನಾಟಕದಲ್ಲಿ ಜಾರಿ ಮಾಡಿರುವ ʼಗೃಹಜ್ಯೋತಿʼ, ʼಗೃಹಲಕ್ಷ್ಮೀʼ, ʼಶಕ್ತಿʼ, ʼಅನ್ನಭಾಗ್ಯʼ ಗ್ಯಾರಂಟಿ ಯೋಜನೆಗಳು ಗುರಿ ಮುಟ್ಟಿಲ್ಲ. ಇನ್ನೊಂದು ಗ್ಯಾರಂಟಿ ʼಯುವನಿಧಿʼ ಐದು ತಿಂಗಳಾದರೂ ಜಾರಿ ಆಗಿಲ್ಲ. ಕರ್ನಾಟಕದ ಜನರಿಗೆ ಗ್ಯಾರಂಟಿ ಹೆಸರಿನಲ್ಲಿ ಕಿವಿಗೆ ಹೂ ಮುಡಿಸುತ್ತಿದೆ ಕಾಂಗ್ರೆಸ್. ಈಗ ಐದು ರಾಜ್ಯಗಳ ಜನರ ಕಿವಿಗೆ ಹೂ ಮುಡಿಸಲು ಹೊರಟಿದ್ದಾರೆ. ಚುನಾವಣೆ ನಡೆಯುತ್ತಿರುವ ರಾಜ್ಯಗಳ ಜನರಿಗೆ ಕಾಂಗ್ರೆಸ್ ಗ್ಯಾರಂಟಿಗಳ ಸಾಧಕ-ಬಾಧಕ ತಿಳಿಸುವುದು ನನ್ನ ಕರ್ತವ್ಯ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಕಾಟಾಚಾರಕ್ಕೆ, ಚುನಾವಣೆ ಲಾಭಕ್ಕಾಗಿ ಮಾಡಿದ ಈ ಗ್ಯಾರಂಟಿಗಳು ಆರೇ ತಿಂಗಳಲ್ಲಿ ಹಳಿತಪ್ಪಿವೆ. ಈಗಾಗಲೇ ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿಗೆ ಹಣ ಇಲ್ಲವೆಂದು ಆಡಳಿತ ಪಕ್ಷದ ಶಾಸಕರೇ ಗಲಾಟೆ ಮಾಡುತ್ತಿದ್ದಾರೆ. ಹಾಗಾದರೆ, ಉಳಿದ ನಾಲ್ಕೂವರೆ ವರ್ಷಗಳ ಪಾಡೇನು? ವಾಸ್ತವಸ್ಥಿತಿ ಹೀಗಿರುವಾಗ ಕಾಗ್ರೆಸ್ಸಿಗರು ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವೇ? ಇಂಥ ಸುಳ್ಳನ್ನು ನಂಬಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.

 

ಕಾಂಗ್ರೆಸ್ ಪಕ್ಷವು ಕರ್ನಾಟಕದ ಟೆಂಪರರಿ ಸಿಎಂ (TCM), ಡೂಪ್ಲಿಕೇಟ್‌ ಸಿಎಂ (DCM) ಅವರನ್ನು ತೆಲಂಗಾಣಕ್ಕೆ ಕಳಿಸಿ ಜನರಿಗೆ ಸುಳ್ಳುಗಳನ್ನು ಹೇಳಿಸುತ್ತಿದೆ ಎಂದು ಕುಮಾರಸ್ವಾಮಿ ಅವರು ನೇರವಾಗಿ ಆರೋಪಿಸಿದರು.

ಜೆಸಿಬಿಯಲ್ಲಿ ಶಾಲಾ ಮಕ್ಕಳ ಪ್ರಯಾಣ!!:

          ʼಶಕ್ತಿʼ ಯೋಜನೆಯಡಿ ಬಸ್ಸುಗಳೇ ಇಲ್ಲ. ಮಕ್ಕಳು ಶಾಲೆಗೆ ಹೋಗುವುದಕ್ಕೆ ಬಸ್ಸುಗಳಿಲ್ಲದೆ ಜೆಸಿಬಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಕ್ಯಾಬ್, ಆಟೋ ಚಾಲಕರು ಬೀದಿ ಪಾಲಾಗಿದ್ದಾರೆ. ಒಬ್ಬ ಆಟೋ ಚಾಲಕ ಮಕ್ಕಳಿಗೆ ಶಾಲಾ ಶುಲ್ಕ ಕಟ್ಟಿಲ್ಲ ಎಂದು ವಿಷ ಸೇವಿಸಿದ್ದಾನೆ. ಇಂತಹ ದುರಂತ ಸ್ಥಿತಿಯನ್ನು ಇಡೀ ದೇಶಕ್ಕೆ ವಿಸ್ತರಿಸಲು ಕಾಂಗ್ರೆಸ್ ಹೊರಟಿದೆ. ಅದಕ್ಕೆಂದೇ ತೆಲಂಗಾಣಕ್ಕೆ ಕರ್ನಾಟಕದ ನಾಯಕರನ್ನು ಕರೆಸಿಕೊಂಡು ಟೋಪಿ ಹಾಕಿಸುವ ಕೆಲಸ ಮಾಡುತ್ತಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.

 

ಇಂದಿರಾ ಕ್ಯಾಂಟಿನ್ʼನಲ್ಲೂ ಕಮಿಷನ್ ಹೊಡೆಯುವ ಇವರು ʼಇಂದಿರಮ್ಮ ಇಲ್ಲುʼ (ಇಂದಿರಾ ಮನೆ) ಹೇಗೆ ಕಟ್ಟುತ್ತಾರೆ? ಗ್ಯಾರಂಟಿ ಹೆಸರಲ್ಲಿ ತಮ್ಮ ಕಿಸೆಗಷ್ಟೇ ಕಮೀಷನ್ ಗ್ಯಾರಂಟಿ ಮಾಡಿಕೊಂಡಿದ್ದಾರೆ. ಐದು ರಾಜ್ಯಗಳ ಜನ ಕಾಂಗ್ರೆಸ್ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅವರಿಗೆ ಕರ್ನಾಟಕದ ದುಸ್ಥಿತಿ ಕಟ್ಟಿಟ್ಟ ಬುತ್ತಿ ಎಂದು ಕುಮಾರಸ್ವಾಮಿ ಅವರು ನೇರ ಎಚ್ಚರಿಕೆ ನೀಡಿದರು.

 ಸಿದ್ದರಾಮಯ್ಯ ಮಾಡಿದ ಸಾಲವೆಷ್ಟು?:

ತೆಲಂಗಾಣದಲ್ಲಿ ನರೇಂದ್ರ ಮೋದಿ ಅವರಿಗೆ ಸಿದ್ದರಾಮಯ್ಯ ಅವರು ಚಾಲೆಂಜ್ ಮಾಡಿದ್ದಾರೆ. ನನ್ನ ಹೆಸರು ಕೇಳಿದರೆ ಅವರಿಗೆ ಭಯ, ಸಾಲದಿಂದ ದೇಶ ದಿವಾಳಿಯಾಗಿದೆ ಎಂದಿದ್ದಾರೆ. ಆದರೆ, ಇವರ ಸರಕಾರದಲ್ಲಿ ಏನಾಗಿದೆ? ಎಷ್ಟು ಸಾಲ ಮಾಡಿದ್ದಾರೆ? ಈಗ 85,815 ಕೋಟಿ ರೂ. ಸಾಲ ಮಾಡಲು ಹೊರಟಿದ್ದಾರೆ. ನನ್ನ 20 ತಿಂಗಳ ಆಡಳಿತದಲ್ಲಿ 3,500 ಕೋಟಿ ಸಾಲ ಮಾಡಲಾಗಿತ್ತು. ಕಳೆದ 12 ವರ್ಷದಲ್ಲಿ ಇದ್ದ ಸರಕಾರಗಳು 1 ಲಕ್ಷ ಕೋಟಿ ಸಾಲ ಮಾಡಿವೆ. ಹಿಂದೆ 5 ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ 2,45,000 ಕೋಟಿ ರೂ. ಸಾಲ ಮಾಡಿದ್ದರು. ಸಾಲದ ಬಗ್ಗೆ ಮಾತನಾಡಲು ಇವರಿಗೆ ಯಾವ ನಿಮಗೆ ಯಾವ ನೈತಿಕತೆ ಇದೆ ಎಂದು ಕುಮಾರಸ್ವಾಮಿ ಅವರು ಟೀಕಿಸಿದರು.

ಈಗ ರಾಜ್ಯದ ಸಾಲ ಪ್ರಮಾಣ 5,71,600 ಕೋಟಿ ರೂ.ಗಳಷ್ಟಿದೆ. ಹೊಸದಾಗಿ ಇವರು ಬಜೆಟ್‌ʼನಲ್ಲಿ 85,815 ಕೋಟಿ ರೂ. ಸಾಲದ ಗುರಿ ಇಟ್ಟುಕೊಂಡಿದ್ದಾರೆ. ಪ್ರತೀ ವರ್ಷ 56,000 ಕೋಟಿ ರೂ. ಬಡ್ಡಿ ಕಟ್ಟಬೇಕು ಎಂದು ಸ್ವತಃ ಸಿಎಂ ಹೇಳಿದ್ದಾರೆ. ನಿಮ್ಮ ಸರಕಾರದ ಅಧಿಕಾರಿಗಳೇ ರಾಜ್ಯದ ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತವಾಗಿದೆ ಎನ್ನುತ್ತಿದ್ದಾರೆ. ಇದನ್ನೇ ತೆಲಂಗಾಣಕ್ಕೆ, ಇನ್ನಿತರೆ ರಾಜ್ಯಗಳಿಗೆ ವಿಸ್ತರಿಸುತ್ತೀರಾ? ಎಂದು ಅವರು ಪ್ರಶ್ನಿಸಿದರು.

ಪರಿಸ್ಥಿತಿ ಇಷ್ಟು ಹದಗೆಟ್ಟಿದ್ದರೂ ಕಪ್ಪುಹಣಕ್ಕೆ ಕೊರತೆ ಇಲ್ಲ, ಕಲೆಕ್ಷನ್ನಿಗೂ ಸಮಸ್ಯೆ ಇಲ್ಲ. ಖಜಾನೆಯಲ್ಲಿ ದುಡ್ಡಿಲ್ಲ, ಅದರೆ ಆಯ್ದ ವ್ಯಕ್ತಿಗಳ ಮನೆಯಲ್ಲಿ ದುಡ್ಡಿದೆ. ಮೊನ್ನೆಯ ಐಟಿ ದಾಳಿಯಲ್ಲಿ ಯಾರಯಾರ ಮನೆಯಲ್ಲಿ ಎಷ್ಟೆಷ್ಟು ಕೋಟಿ ಹಣ ಸಿಕ್ಕಿತು ಎನ್ನುವುದನ್ನು ಜನ ನೋಡಿದ್ದಾರೆ. ಕರ್ನಾಟಕದ ದುಡ್ಡಿನಲ್ಲಿ ಕಾಂಗ್ರೆಸ್‌ ಪಕ್ಷ ಐದು ರಾಜ್ಯಗಳ ಚುನಾವಣೆ ನಡೆಸುತ್ತಿದೆ. ಇದು ಸತ್ಯ ಎಂದು ಅವರು ಹೇಳಿದರು.

 

ಕಾಂಗ್ರೆಸ್ ಹೈಕಮಾಂಡ್ ಸಿಎಂ, ಡಿಸಿಎಂ ಹಾಗೂ ಮಂತ್ರಿಗಳಿಗೆ ಟಾರ್ಗೆಟ್ ಕೊಟ್ಟಿದ್ದಾರೆ. ಯಾರು ಹೆಚ್ಚು ಹಣ ಕೊಡುತ್ತಾರೆ ಅವರು ಮಂತ್ರಿ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಯಾರು ಕೊಡುವುದಿಲ್ಲವೋ ಅವರು ಮಂತ್ರಿಗಳಾಗಿರೋದಿಲ್ಲ. ಹಣ ಕೊಟ್ಟವರಿಗೆ ಅಧಿಕಾರ ಇರುತ್ತದೆ. ಇಲ್ಲಿ ಅಧಿಕಾರ ಹಂಚಿಕೆ ಎನ್ನುವುದು ಇಲ್ಲವೇ ಇಲ್ಲ. ಹಣ ಕೊಟ್ಟವರಿಗೆ ಅಧಿಕಾರ ಅಷ್ಟೇ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಇದನ್ನೇ ಹೇಳಿದೆ ಎಂದರು ಕುಮಾರಸ್ವಾಮಿ ಅವರು. ‌

          ಒಂದು ಕರ್ನಾಟಕ, ಐದು ರಾಜ್ಯಗಳ ಚುನಾವಣೆ:

ಕರ್ನಾಟಕ ರಾಜ್ಯದ ಸಂಪತ್ತು ಬೇರೆ ರಾಜ್ಯಗಳ ಚುನಾವಣೆಗೆ ವೆಚ್ಚವಾಗುತ್ತಿದೆ. ಗ್ಯಾರಂಟಿಗಳ ಮೂಲಕ ಎಲ್ಲಾ ರಾಜ್ಯದ ಚುನಾವಣೆ ಮಾಡಲು‌ ಹೊರಟಿದ್ದಾರೆ ಇವರು. ಒಂದು ಕರ್ನಾಟಕ, ಐದು ರಾಜ್ಯಗಳ ಚುನಾವಣೆ ಎನ್ನುವಂತಾಗಿದೆ ಎಂದು ಕುಮಾರಸ್ವಾಮಿ ಅವರು ದೂರಿದರು.

 

ಡುಪ್ಲಿಕೇಟ್ ಸಿಎಂ (ಡಿಸಿಎಂ) ತೆಲಂಗಾಣದಲ್ಲಿ ವೀರಾವೇಶದ ಭಾಷಣ ಮಾಡಿದ್ದಾರೆ. ಆದರೆ, ನಮ್ಮ ರಾಜ್ಯದ ಸಮಸ್ಯೆಗಳ ಬಗ್ಗೆ ಅವರಿಗೆ ವ್ಯವಧಾನವೇ ಇಲ್ಲ. ಅಲ್ಲಿ ಅವರು ರೈತರ ಪ್ರೋತ್ಸಾಹ ಧನದ ಬಗ್ಗೆ ಭಾಷಣ ಮಾಡಿದ್ದಾರೆ. ಆದರೆ, ಕಳೆದ ಹತ್ತು ವರ್ಷಗಳಿಂದ ಕೆಸಿಆರ್‌ ಅವರು ಅಲ್ಲಿ ರೈತಬಂಧು ಕಾರ್ಯಕ್ರಮ ಕೊಡುತ್ತಿದ್ದಾರೆ. ನಿಮ್ಮ ಐದು ವರ್ಷದ ಸರಕಾರದ ಕಾಲದಲ್ಲಿ ಎರಡೂ ಮುಕ್ಕಾಲು ಲಕ್ಷ ಸರಕಾರಿ ನೌಕರರ ನೇಮಕಾತಿ ಮಾಡದೆ ಖಾಲಿ ಇಟ್ಟುಕೊಂಡಿದ್ದಿರಿ. ಮೊದಲು ಆ ಖಾಲಿ ಹುದ್ದೆ ಭರ್ತಿ ಮಾಡಿ, ಆಮೇಲೆ ತೆಲಂಗಾಣದಲ್ಲಿ ಭಾಷಣ ಮಾಡಿ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು. 

ಇವರದ್ದು 5 ಗಂಟೆ, ಅವರದ್ದು 24 ಗಂಟೆ ವಿದ್ಯುತ್:

ನಮ್ಮ ಡೂಪ್ಲಿಕೇಟ್‌ ಸಿಎಂ (ಡಿಸಿಎಂ) ತೆಲಂಗಾಣದಲ್ಲಿ ದಿನಕ್ಕೆ 5 ಗಂಟೆ ಉಚಿತ ವಿದ್ಯುತ್‌ ಕೊಡುತ್ತೇವೆ ಎಂದು ಹೇಳಿದ್ದಾರೆ. ಅವರಿಗೆ ಗೊತ್ತಿಲ್ಲದ ವಿಷಯ ಎಂದರೆ, ಕೆಸಿಆರ್‌ ಅವರು ಈಗಾಗಲೇ ಅಲ್ಲಿ ದಿನಕ್ಕೆ 24 ಗಂಟೆಯೂ ಉಚಿತ ವಿದ್ಯುತ್‌ ಕೊಡುತ್ತಿದ್ದಾರೆ. 5 ಗಂಟೆ ವಿದ್ಯುತ್‌ ಕೊಡುವವರಿಗೆ ವೋಟು ಹಾಕಬೇಕಾ? ಅಥವಾ 24 ಗಂಟೆ ವಿದ್ಯುತ್‌ ಕೊಡುವವರಿಗೆ ವೋಟು ಹಾಕಬೇಕಾ? ಎನ್ನುವುದನ್ನು ತೆಲಂಗಾಣದ ಜನರೇ ತೀರ್ಮಾನ ಮಾಡುತ್ತಾರೆ ಎಂದು ಅವರು ಕಾಂಗ್ರೆಸ್‌ ನಾಯಕರಿಗೆ ಟಾಂಗ್‌ ನೀಡಿದರು.

ರಾಜ್ಯದ ನಾಯಕರು ತೆಲಂಗಾಣದಲ್ಲಿ 200 ಯುನಿಟ್ ಬಗ್ಗೆ ಭಾಷಣ ಬಿಗಿಯುತ್ತಿದ್ದಾರೆ. ಆದರೆ, ಕರ್ನಾಟಕದ ಪರಿಸ್ಥಿತಿ ಏನಿದೆ ಎನ್ನುವುದ ಐದೂ ರಾಜ್ಯಗಳ ಜನರಿಗೆ ಹೇಳಬೇಕಿದೆ. ಕರ್ನಾಟಕ ಈಗ ಕಗ್ಗತ್ತಲ ಕರ್ನಾಟಕ ಆಗಿದೆ. ಫ್ರೀ ವಿದ್ಯುತ್‌ ಎಂದು ಹೇಳಿ ಏಕಾಏಕಿ ದರ ಏರಿಕೆ ಮಾಡಿದರು. ಕಳೆ ಐದು ತಿಂಗಳಲ್ಲಿ ರಾಜ್ಯ ಕಗ್ಗತ್ತಲಲ್ಲಿದೆ. ಅಧಿಕಾರಿಗಳು, ಸಚಿವರು ಮೊಬೈಲ್ ಲೈಟ್ ಹಾಕಿಕೊಂಡು ಸಭೆ ನಡೆಸಿದ್ದಾರೆ ಎಂದು ಟೀಕಿಸಿದ ಅವರು; ಮೊದಲು “ಮಹಾದೇವಪ್ಪ ನಿಂಗೂ‌ ಫ್ರೀ, ನಂಗೂ ಫ್ರೀ.., ಕಾಕಾ ಪಾಟೀಲ್ ನಿಂಗೂ ಫ್ರೀ” ಎಂದು ಇವರು ಭಾಷಣ ಮಾಡಿದ್ದರು. ಈಗ ನೋಡಿದರೆ “ಮಹಾದೇವಪ್ಪ ನಿಂಗೂ‌ ಕತ್ತಲು ಫ್ರೀ, ನಂಗೂ ಕತ್ತಲು ಫ್ರೀ.., ಕಾಕಾ ಪಾಟೀಲ್ ನಿಂಗೂ ಕತ್ತಲು ಫ್ರೀ” ಎನ್ನುವಂಥ ದುಸ್ಥಿತಿ ಸೃಷ್ಟಿ ಆಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಇಂಥ ಸ್ಥಿತಿಯನ್ನೇ ಕರ್ನಾಟಕದಲ್ಲಿ ಇಟ್ಟುಕೊಂಡು 24 ಗಂಟೆ ಉಚಿತ ಕರೆಂಟ್‌ ಪಡೆಯುವ ತೆಲಂಗಾಣದ ಜನರಿಗೆ 5 ಗಂಟೆ ವಿದ್ಯುತ್‌ ಕೊಡುತ್ತೇವೆ ಎಂದು ನಮ್ಮ ಡುಪ್ಲಿಕೇಟ್ ಸಿಎಂ ಹೇಳಿದ್ದಾರೆ. ಈಗ ತೆಲಂಗಾಣದ ಜನರು, “ನಮಗೆ ಫ್ರೀ ಕರೆಂಟ್ ಬೇಕಾ? ಅಥವಾ ಕಾಂಗ್ರೆಸ್‌ ಬೇಕಾ?” ಎಂಬುದನ್ನು ನಿರ್ಧಾರ ಮಾಡಬೇಕು. ಅವರು ಕರೆಂಟ್‌ ಕೊಡುವ ಪಕ್ಷಕ್ಕೆ ಮತ ಹಾಕುತ್ತಾರೆ ಎನ್ನುವುದು ನನಗೆ ಗೊತ್ತಿದೆ ಎಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಕುಟುಕಿದರು ಮಾಜಿ ಮುಖ್ಯಮಂತ್ರಿಗಳು.

 

ಮಾಜಿ ಶಾಸಕ ಹಾಗೂ ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಪಕ್ಷದ ಹಿರಿಯ ಮುಖಂಡ ಮುನೇಗೌಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top