ಶಿಕ್ಷಕ ವೃತ್ತಿ ಗೌರವಾನ್ವಿತ ಹಾಗೂ ಶ್ರೇಷ್ಠ ವೃತ್ತಿ

ದೇವನಹಳ್ಳಿ: ಅತ್ಯಂತ ಉದಾತ್ತವಾದ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿಯೂ ಒಂದು. ಒಬ್ಬ ಒಳ್ಳೆಯ ಶಿಕ್ಷಕನನ್ನು ವಿದ್ಯಾರ್ಥಿಗಳು ಅವರ ಜೀವನದುದ್ದಕ್ಕೂ ಸ್ಮರಿಸುತ್ತಾರೆ ಎಂದು ಹಿರಿಯ ಶಸ್ತ್ರಚಿಕಿತ್ಸಕರಾದ ಡಾ.ಟಿ.ಹೆಚ್. ಆಂಜಿನಪ್ಪ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಗಿರಿಜಾಶಂಕರ ಕಲ್ಯಾಣ ಮಂಟಪದಲ್ಲಿ ಪ್ರಗತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವತಿಯಿಂದ ದ್ವಿತೀಯ ಪಿ.ಯು ವಿದ್ಯಾರ್ಥಿಗಳಿಗೆ ನೀಡಿದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗಾಗಿ ತಮ್ಮ ಜೀವನವನ ಬಹುಭಾಗ ಸಮರ್ಪಿಸುತ್ತಾರೆ. ತಂದೆ ತಾಯಿಗಳಿಂತ ಹೆಚ್ಚಾಗಿಯೇ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸುತ್ತಾರೆ. ವಿದ್ಯಾರ್ಥಿಗಳ ಜೀವನ ರೂಪಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಿ, ಉನ್ನತ ಹುದ್ದೆಯಲ್ಲಿ ಇದ್ದರೂ ಶಿಕ್ಷಕರು ಕಂಡಾಗ ಅವರಿಗೆ ತೋರುವ ಗೌರವಾದರದಿಂದಲೇ ಶಿಕ್ಷಕ ವೃತ್ತಿ ಪ್ರವಿತ್ರ ಎಂದು ತಿಳಿಯುತ್ತದೆ. ಇಂತಹ ಅನುಭವ ನನ್ನ ಜೀವನದಲ್ಲೂ ಆಗಿದೆ. ಶಿಕ್ಷಕ ವೃತ್ತಿ ಸಾರ್ಥಕ ಎನಿಸುತ್ತದೆ ಎಂದು ತಿಳಿಸಿದರು.

ಪ್ರಗತಿ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಕೃಪಾಶಂಕರ್ ಮಾತನಾಡಿ, ಕೋವಿಡ್ ಮಹಾಮಾರಿ ಇಂದ ಶಿಕ್ಷಣಕ್ಕೆ ಹೊಡೆತ ಬಿದ್ದಿದ್ದು, ಶಿಕ್ಷಣ ಹಾಗೂ ಶಿಕ್ಷಕರ ಅವಶ್ಯಕತೆ ಎಷ್ಟಿದೆ ಎಂಬುದರ ಅರಿವು ಎಲ್ಲರಿಗೂ ಆಗಿದೆ. ಈಗ ಶಿಕ್ಷಣವನ್ನು ನಿರ್ಲಕ್ಷ್ಯ ಮಾಡಿ ಮುಂದೊಂದು ದಿನ ಪಶ್ಚಾತ್ತಾಪ ಪಡುವುದಕ್ಕಿಂತ ಓದಿನ ವಿಚಾರದಲ್ಲಿ ಏಕಾಗ್ರತೆ, ಶ್ರದ್ಧೆ, ಆಸಕ್ತಿ ವಹಿಸಿ ಉತ್ತಮ ಫಲಿತಾಂಶ ಪಡೆಯಬೇಕು. ಎಲ್ಲರೂ ಏಕಲವ್ಯ ಆಗುವುದು ಸಾಧ್ಯವಿಲ್ಲ. ಆದರೆ ಅರ್ಜುನನಿಗೆ ದ್ರೋಣಾಚಾರ್ಯ ಸಿಕ್ಕಂತೆ ಎಲ್ಲರಿಗೂ ಗುರುಗಳು ಸಿಕ್ಕಿದ್ದು, ಅವರ ಮಾರ್ಗದರ್ಶನದಂತೆ ಓದುವ ಅವಕಾಶ ಸಿಕ್ಕಿದೆ. ಇದು ಸ್ಪರ್ಧಾತ್ಮಕ ಪ್ರಪಂಚ. ನಾವು ಜ್ಞಾನವನ್ನು ಹೊಂದಿದಷ್ಟೂ ಜೀವನದಲ್ಲಿ ಉನ್ನತವಾದುದನ್ನು ಸಾಧಿಸಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಗತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುರೇಶ್.ಎಸ್, ಕಾಲೇಜಿನ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.

Leave a Comment

Your email address will not be published. Required fields are marked *

Translate »
Scroll to Top