ಆಂತರಿಕ ಭದ್ರತೆ ಸವಾಲೊಡ್ಡುವವರಿಗೆ ಕಾನೂನು ಪಾಠ ಬೋಧಿಸಿ

ಕಲಬುರಗಿ.ಫೆ.19 : ನೆಲದ ಕಾನೂನಿಗೆ ವಿರುದ್ಧವಾಗಿ ನಡೆಯುವ ಮತ್ತು ಆಂತರಿಕ ಭದ್ರತೆಗೆ ಸವಾಲೊಡ್ಡುವ ದುಷ್ಟಶಕ್ತಿಗಳಿಗೆ ಕಾನೂನು ಪಾಠ ಬೋಧಿಸಬೇಕು ಎಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸ್ ರಿಗೆ ಕರೆ ನೀಡಿದರು. ಶನಿವಾರ ಕಲಬುರಗಿಯ ನಾಗನಹಳ್ಳಿಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ 1ನೇ ತಂಡದ ಪ್ರೊ. ಡಿಎಸ್‍ಪಿ/ 10ನೇ ತಂಡದ ಪ್ರೊ. ಪಿ.ಎಸ್.ಐ (ಸಿವಿಲ್), 6ನೇ ತಂಡದ ಆರ್.ಎಸ್.ಐ./ ಸ್ಪೆಷಲ್ ಆರ್.ಎಸ್.ಐ./ 6ನೇ ತಂಡದ ಪಿ.ಎಸ್.ಐ. (ನಿಸ್ತಂತು) ಹಾಗೂ 2ನೇ ತಂಡದ ಪಿ.ಎಸ್.ಐ. (ಎಫ್.ಪಿ.ಬಿ.) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ ಸಮಾರಂಭದಲ್ಲಿ ಭಾಗವಹಿಸಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ರಾಜ್ಯದ 1 ಲಕ್ಷ ಪೊಲೀಸ್ ಬಲಕ್ಕೆ ಇಂದು 288 ಜನ ಪೊಲೀಸ್ ಅಧಿಕಾರಿಗಳಾದ ನೀವು ಹೊಸ ಶಕ್ತಿಯಾಗಿ ಸೇರ್ಪಡೆಯಾಗುತ್ತಿದ್ದು, ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಸಾರ್ವಜನಿಕರ ಆಸ್ತಿ-ಪಾಸ್ತಿ, ಪ್ರಾಣಿ ಹಾನಿ ಸಂರಕ್ಷಣೆಯ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ. ಯಾವುದೇ ಜಾತಿ-ಧರ್ಮಕ್ಕೆ ಸರ್ವರ ಕಲ್ಯಾಣಕ್ಕಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಕರ್ನಾಟಕ ಪೊಲೀಸ್‍ಗೆ ದೇಶದಲ್ಲಿ ಅತ್ಯುನ್ನತವಾದ ಸ್ಥಾನವಿದೆ. ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಹೊಸದಾಗಿ ಸೇರ್ಪೆಯಾಗುವ ಪೊಲೀಸ್ರ ಮೇಲಿದೆ. ಪೊಲೀಸ್ ಠಾಣೆಗೆ ಹೋದರೆ ಗೌರವ ಸಿಗುವುದಿಲ್ಲ ಎಂಬ ಸಾಮಾನ್ಯ ದೂರು ಸಾರ್ವಜನಿಕರದ್ದಾಗಿದೆ. ಠಾಣೆಗೆ ನ್ಯಾಯ ಕೇಳಿ ಬರುವ ಅಸಹಾಯಕರಿಗೆ, ಬಡವರಿಗೆ ನ್ಯಾಯ ಒದಗಿಸುವ, ಅಭಯ ನೀಡುವ ಮತ್ತು ಅವರನ್ನು ಗೌರಯುತವಾಗಿ ನಡೆದುಕೊಳ್ಳುವ ಕರ್ತವ್ಯ ನಿಮ್ಮದಾಗಿದೆ ಎಂದರು. ನಮ್ಮ ಸರ್ಕಾರ ಬರುವ ಮುನ್ನ 1 ಲಕ್ಷ ಪೊಲೀಸ್ ಬಲದಲ್ಲಿ 35 ಸಾವಿರ ಹುದ್ದೆಗಳು ಖಾಲಿ ಇದ್ದವು. ಕಳೆದ ಮೂರು ವರ್ಷದಲ್ಲಿ ಪಿ.ಎಸ್.ಐ, ಎ.ಎಸ್.ಐ, ವೈಜ್ಣಾನಿಕ ಅಧಿಕಾರಿ, ಕ್ರೈಮ್ ಅಧಿಕಾರಿ, ಪೇದೆ ಒಟ್ಟು 16,811 ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಮುಂದಿನ 2022-23 ರಲ್ಲಿ 4,500 ಪೇದೆ, 300 ಪಿ.ಎಸ್.ಐ. ನೇಮಕಾತಿ ಮಾಡಿಕೊಳ್ಳಲು ಈಗಾಗಲೆ ಅನುಮತಿ ನೀಡಲಾಗಿದೆ ಎಂದರು.

80 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ಸ್ಥಾಪಿಸಲಾಗುತ್ತಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ರಾಜ್ಯದ 156 ಪೊಲೀಸ್ ಠಾಣೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ 14 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಕಳೆದ ಮೂರು ವರ್ಷದಲ್ಲಿ 725 ದ್ವಿಚಕ್ರ, 125 ನಾಲ್ಕು ಚಕ್ರ ಸೇರಿದಂತೆ 1,890 ವಾಹನಗಳನ್ನು ಇಲಾಖೆಗೆ ಖರೀದಿಸಲಾಗಿದೆ. 11 ಸಾವಿರ ಪೊಲೀಸ್ ವಸತಿ ಗೃಹ ನಿರ್ಮಿಸಲಾಗಿದೆ. ಒಟ್ಟಾರೆಯಾಗಿ ಕಳೆದ 3 ವರ್ಷದಲ್ಲಿ ಪೊಲೀಸ್ ಇಲಾಖೆಯ ಮೂಲಸೌಕರ್ಯ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಿ ಇಲಾಖೆಗೆ ಹೊಸ ಚೈತನ್ಯ ನೀಡಲಾಗಿದೆ ಎಂದರು. ರಾಜ್ಯದ ಶಾಂತಿ ಮತ್ತು ಸುವ್ಯಸ್ಥೆ ಕಾಪಾಡಲು ಹಗಲಿರುಳು ಕಾರ್ಯನಿರ್ವಹಿಸುವ ಪೊಲೀಸರ ಕಲ್ಯಾಣದ ಜವಾಬ್ದಾರಿ ಸರ್ಕಾರದ್ದಾಗಿದೆ. ಆರೋಗ್ಯ ಭಾಗ್ಯ ಯೋಜನೆಯಡಿ ಪೊಲೀಸರ ಚಿಕಿತ್ಸೆಗಾಗಿ 111 ಕೋಟಿ ರೂ. ಮೀಸಲಿಡಲಾಗಿದೆ. ರಾಜ್ಯದ 180 ಆಯ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದ್ದು, ಹೊಸದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 3 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸರ ಮಾನಸಿಕ ಒತ್ತಡ ನಿವಾರಣೆಗೆ ಯೋಗ, ಧ್ಯಾನಕ್ಕೂ ಆದ್ಯತೆ ನೀಡಲಾಗಿದೆ ಎಂದರು. ದೇಶದ ಗಡಿಯಲ್ಲಿ ಶತ್ರುವಿನ ವಿರುದ್ಧ ಹೋರಾಡುವ ಸೈನಿಕರ ಕೆಲಸ ಮಾಡು ಇಲ್ಲವೇ ಮಡಿಯಾದರೆ, ಒಳನಾಡಿನಲ್ಲಿ ಕಾರ್ಯನಿರ್ವಹಿಸುವ ಪೊಲೀಸರ ಕಾರ್ಯ ವಿಭಿನ್ನವಾಗಿದೆ. ಆಂತರಿಕವಾಗಿ ಸಮುದಾಯದೊಂದಿಗಿದ್ದು, ದುಷ್ಟಶಕ್ತಿಗಳ ವಿರುದ್ಧ ಲಾಠಿ ಬೀಸಬೇಕಿದೆ. ಇತ್ತೀಚೆಗೆ ಕೆಲ ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿಯ ನಡವಳಿಕೆಯಿಂದ ಇಲಾಖೆಗೆ ಕಪ್ಪು ಚುಕ್ಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಸಮಾಜ ಸೇವೆಗೆ ಅಣಿಯಾಗಿರುವ ಪ್ರಶಿಕ್ಷಣಾರ್ಥಿಗಳು ಅಪರಾಧಿಗಳನ್ನು ಬಂಧಿಸುವೆ, ಆದರೆ ಅಪರಾಧಿಯಾಗಲಾರೆ ಎಂಬ ಸಂಕಲ್ಪ ಮಾಡಬೇಕು ಎಂದು ಗೃಹ ಸಚಿವ ಆರಗ ಜ್ನಾನೇಂದ್ರ ಅವರು ತಿಳಿಸಿದರು.

ಪೊಲೀಸ್ ಠಾಣೆ ಹೆಚ್ಚಳಕ್ಕೆ ಕಳವಳ: ನಾನು ಪ್ರವಾಸ ಮಾಡಿದ ಎಲ್ಲೆಡೆ ಠಾಣೆ ಮೇಲ್ದರ್ಜೇಗೇರಿಸಿ, ಹೊಸ ಠಾಣೆ ಮಂಜೂರು ಮಾಡಿ ಎಂಬ ಪ್ರಸ್ತಾವನೆ ಹೆಚ್ಚು ಬರುತ್ತಿವೆ. ಮೌಲ್ಯಯುತ ಶಿಕ್ಷಣದ ಕೊರತೆ ಪರಿಣಾಮ ಅಪರಾಧಗಳ ಸಂಖ್ಯೆ ಹೆಚ್ಚಾಗಿ ಪೊಲೀಸ್ ಠಾಣೆಗೆ ಬೇಡಿಕೆ ಹೆಚ್ಚಿದ್ದು ಕಳವಳಕಾರಿಯಾಗಿದೆ ಎಂದ ಅವರು ನೈತಿಕ ಮೌಲ್ಯ ನೀಡುವ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

100 ಠಾಣೆಗೆ ಸ್ವಂತ ಕಟ್ಟಡದ ಭಾಗ್ಯ: ಹಿಂದೆಲ್ಲಾ ವರ್ಷಕ್ಕೆ 4-5 ಠಾಣೆಗಳು ಸ್ವಂತ ಕಟ್ಟಡ ಭಾಗ್ಯ ಪಡೆಯುತ್ತಿದ್ದವು. ನಮ್ಮ ಸರ್ಕಾರವು ಪ್ರಸ್ತುತ ವರ್ಷದಲ್ಲಿ 100 ಠಾಣೆಗಳಿಗೆ ಸ್ವಂತ ಕಟ್ಟಡದ ಸೌಭಾಗ್ಯ ನೀಡಲಿದೆ. ಇದಕ್ಕಾಗಿ 200 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.

ಪಥಸಂಚಲನ ಬ್ಯೂಟಿಪುಲ್: ಪ್ರಶಿಕ್ಷಾಣಾರ್ಥಿಗಳ ಪಥಸಂಚಲವನ್ನು ಸೂಕ್ಷ್ಮವಾಗಿ ಗಮನಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತುಂಬಾ ಶಿಸ್ತಿನಿಂದ ಕೂಡಿದ ಬ್ಯೂಟಿಫುಲ್ ಪಥಸಂಚಲನ ಇದಾಗಿತ್ತು ಎಂದು ಪ್ರಶಂಸಿದಲ್ಲದೆ ಕನ್ನಡದಲ್ಲಿಯೇ ರಿವೂವ್ ಆರ್ಡರ್ ಸಹ ಸಮರ್ಪರ್ಕವಾಗಿ ಬಳಸಿದ್ದು ಸಂತಸ ತಂದಿದೆ. ಸಾಮಾನ್ಯ ಪದವಿ ಅರ್ಹತೆವಿರುವ ಹುದ್ದೆಗಳಿಗೆ ಇಲ್ಲಿರುವ 288 ಪ್ರಶಿಕ್ಷಣಾರ್ಥಿಗಳ ಪೈಕಿ ಬಿ.ಇ., ಎಂ.ಕಾಂ, ಎಂ.ಎಸ್ಸಿ, ಎಂ.ಟೆಕ್, ಎಂ.ಎ., ಎಂ.ಬಿ.ಎ., ಎಂ.ಸಿ.ಎ. ಪದವೀಧರರು ಸೇರಿದ್ದು ತಮಗೆ ಹೆಚ್ಚಿನ ಸಂತೋಷವಾಗಿದೆ. ಹೆಚ್ಚಿನ ವಿದ್ಯಾಭಾಸದ ಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮೆಚ್ಚುಗೆ ನುಡಿಗಳನ್ನಾಡಿದರು.

ಬಳ್ಳಾರಿ-ಬೆಳಗಾವಿಯಲ್ಲಿ ಎಫ್.ಎಸ್.ಎಲ್. ಲ್ಯಾಬ್ ಸ್ಥಾಪನೆ: ಇತ್ತೀಚೆಗೆ ರಸ್ತೆ ದರೋಡೆ ಕಡಿಮೆಯಾಗಿದೆ. ಆದರೆ ಸೈಬರ್ ಕ್ರೈಮ್ ಹೆಚ್ಚಿದೆ. ಸೈಬರ್ ಕ್ರೈಮ್ ನಿಗ್ರಹಕ್ಕೆ ಪ್ರತಿ ಜಿಲ್ಲೆಯಲ್ಲಿ ಸೈಬರ್ ವಿಭಾಗ ಆರಂಭಿಸಲಾಗಿದೆ. ಬಳ್ಳಾರಿ ಮತ್ತು ಬೆಳಗಾವಿಯಲ್ಲಿ ಫಾರೆಂಸಿಕ್ ಸೈನ್ಸ್ ಲ್ಯಾಬರೋಟರಿ ಸ್ಥಾಪಿಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಕಲಬುರಗಿ ಆಯುಕ್ತಾಲಯ ಕಟ್ಟಡ 6 ತಿಂಗಳಲ್ಲಿ ಪೂರ್ಣ; ಕಲಬುರಗಿ ಮತ್ತು ಬೆಳಗಾವಿಯಲ್ಲಿ ನೂತನ ಪೊಲೀಸ್ ಆಯುಕ್ತಾಲಯ ಕಟ್ಟಡ ನಿರ್ಮಾಣವಾಗುತ್ತಿದ್ದು, ಮುಂದಿನ 6 ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ ಎಂದರು. ಕಾರ್ಯಕ್ರಮದಲ್ಲಿ ಎಂ.ಎಲ್.ಸಿ. ಶಶೀಲ ಜಿ. ನಮೋಶಿ, ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ. ಹರಿಶೇಖರನ್, ಈಶಾನ್ಯ ವಲಯದ ಐ.ಜಿ.ಪಿ. ಮನೀಷ ಖರ್ಬಿಕರ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್.ಪಿ. ರಶ್ಮಿ ಜಿ.ಕೆ., ಜೆಸ್ಕಾಂ ಎಸ್.ಪಿ. ಸವಿತಾ ಹೂಗಾರ, ಹೆಚ್ಚುವರಿ ಎಸ್.ಪಿ. ಪ್ರಸನ್ನ ದೇಸಾಯಿ, ಕೆ.ಎಸ್.ಆರ್.ಪಿ ಕಮಾಂಡೆಂಟ್ ಬಸವರಾಜ ಅವರುಗಳು ಇದ್ದರು.

ಕಲಬುರಗಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಪ್ರಾಂಶುಪಾಲ ಮತ್ತು ಎಸ್.ಪಿ ಯಡಾ ಮಾರ್ಟಿನ್ ಮಾರ್ಬ್ ನ್ಯಾಂಗ್ ಅವರು ಪ್ರಶಿಕ್ಷಾಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಹಾವಿದ್ಯಾಲಯದ ವರದಿ ವಾಚನ ಮಾಡಿದರು. ಉಪ ಪ್ರಾಂಶುಪಾಲ ಮಹೇಶ ಮೇಘಣ್ಣನವರ ಅವರು ವಂದಿಸಿದರು. ಇದಕ್ಕೂ ಮುನ್ನ ಪರೇಡ್ ಕಮಾಂಡರ್ ಝೂರಿಲಾಲ ನಾಯ್ಕ್ ಮತ್ತು ಉಪ ಪರೇಡ್ ಕಮಾಂಡರ್ ಪ್ರಭಾವತಿ ಪಾಂಡುರಂಗ ನೇತೃತ್ವದಲ್ಲಿ 10 ತುಕಡಿಗಳ ಆಕರ್ಷಕ ಪಥಸಂಚಲನ ಜರುಗಿತು. ಇದಕ್ಕೆ ಪೊಲೀಸ್ ಬ್ಯಾಂಡ್ ವೃಂದ ಸಾಥ್ ನೀಡಿತು. ಇದೇ ಸಂದರ್ಭದಲ್ಲಿ ಒಳಾಂಗಣ ಮತ್ತು ಹೊರಾಂಗಣದ ವಿವಿಧ ಸ್ಪರ್ಧೇ/ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪ್ರಶಿಕ್ಷಣಾರ್ಥಿಗಳಿಗೆ ಸಚಿವ ಆರಗ ಜ್ಞಾನೇಂದ್ರ ಅವರು ಬಹುಮಾನ ವಿತರಣೆ ಮಾಡಿದರು.

Leave a Comment

Your email address will not be published. Required fields are marked *

Translate »
Scroll to Top