ಭ್ರಷ್ಟಾಚಾರ ಪ್ರಕರಣದಲ್ಲಿ  ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅರೆಸ್ಟ್

ಅಮರಾವತಿ: ಸ್ಕಿಲ್ ಡೆವಲಪ್ಮೆಂಟ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥರಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರನ್ನು ಶನಿವಾರ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

 

          ನಂದ್ಯಾಲ್ ರೇಂಜ್ ಡಿಐಜಿ ರಘುರಾಮಿ ರೆಡ್ಡಿ ಮತ್ತು ಅಪರಾಧ ತನಿಖಾ ದಳ (ಸಿಐಡಿ) ನೇತೃತ್ವದ ಪೊಲೀಸರ ತಂಡ ನಂದ್ಯಾಲ ಪಟ್ಟಣದಲ್ಲಿ ಆರ್‌.ಕೆ ಫಂಕ್ಷನ್ ಹಾಲ್‌ನಲ್ಲಿ ಶಿಬಿರದಲ್ಲಿದ್ದ ಚಂದ್ರಬಾಬು ನಾಯ್ಡು ಅವರನ್ನು ಇಂದು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ನಾಯ್ಡು ಅವರು ತಮ್ಮ ಕಾರವಾನ್‌ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಸಿಐಡಿ ಪೊಲೀಸರು ಬಂಧಿಸಲು ತೆರಳಿದ್ದಾಗ ಎಸ್‌ಪಿಜಿ ಪಡೆಗಳು ಪೊಲೀಸರಿಗೆ ವಶಕ್ಕೆ ಪಡೆಯಲು ಅನುಮತಿ ನೀಡಲಿಲ್ಲ. ನಿಯಮಗಳ ಪ್ರಕಾರ ಬೆಳಗ್ಗೆ 5.30 ರವರೆಗೆ ನಾಯ್ಡುರನ್ನು ಭೇಟಿಯಾಗಲು, ತಲುಪಲು ಯಾರಿಗೂ ಅವಕಾಶ ನೀಡಲಾಗುವುದಿಲ್ಲ ಎಂದು ಎಸ್‌ಪಿಜಿ ಪಡೆಗಳು ತಿಳಿಸಿದರು. ಹೀಗಾಗಿ ಬೆಳಗ್ಗೆ 6 ಗಂಟೆಯವರೆಗೆ ಕಾದು ನಾಯ್ಡು ಹೊರಹೋಗುವ ಸಂದರ್ಭದಲ್ಲಿ ನಾಯ್ಡು ಅವರ ವಾಹನ ಬಾಗಿಲು ಬಡಿದು ಕೆಳಗಿಳಿಸಿ ಬಂಧಿಸಿದ್ದಾರೆ.

 

          ವಾಹನದಿಂದ ಚಂದ್ರಬಾಬು ನಾಯ್ಡು ಅವರನ್ನು ಕೆಳಗಿಳಿಸಿದ ಬಳಿಕ ಸ್ಕಿಲ್ ಡೆವೆಲಪ್‌ಮೆಂಟ್ ಹಗರಣ ಸಂಬಂಧ ಬಂಧಿಸಲಾಗುತ್ತಿದೆ ಎಂದು ಡಿಐಜಿ ಅವರಿಗೆ ತಿಳಿಸಿದರು ಈ ವೇಳೆ ಕಾರ್ಯಕರ್ತರಿಂದ ಪ್ರತಿರೋಧ ವ್ಯಕ್ತಪಡಿಸಿದ್ದರ ನಡುವೆಯೂ ವಶಕ್ಕೆ ಪಡೆದ ಪೊಲೀಸರು. ಸದ್ಯ ಚಂದ್ರಬಾಬು ನಾಯ್ಡುರನ್ನು ವಿಜಯವಾಡಕ್ಕೆ ಶಿಫ್ಟ್  ಮಾಡಿದ್ದಾರೆ.

ಪೊಲೀಸರು ನೀಡಿದ ನೋಟಿಸ್ ಪ್ರಕಾರ, ನಾಯ್ಡು ಅವರನ್ನು ಐಪಿಸಿ ಸೆಕ್ಷನ್ 120 (8), 166, 167, 418, 420, 465, 468, 471, 409, 201, 34 & 37 ಹಾಗೂ ಭ್ರಷ್ಟಾಚಾರ ತಡೆ ಕಾಯಿದೆ, 1988 ಇತರ ವಿಭಾಗಗಳಡಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

          ಅಲ್ಲದೇ ನೋಟಿಸ್ನಲ್ಲಿ ಜಾಮೀನು ರಹಿತ ಅಪರಾಧ, ಜಾಮೀನಿನ ಮೇಲೆ ಬಿಡುಗಡೆಯಾಗುವಂತಿಲ್ಲ ಎಂದು ತಿಳಿಸಲಾಗಿದೆ. ಆದರೆ, ನ್ಯಾಯಾಲಯದ ಮೂಲಕ ಮಾತ್ರ ಜಾಮೀನು ಪಡೆಯಬಹುದು ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ.

 

2014ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾಗಿದ್ದ ನಾರಾ ಚಂದ್ರಬಾಬು ನಾಯ್ಡು ಅವರು, ಆಂಧ್ರದ ಕೌಶಲ್ಯಾಭಿವೃದ್ಧಿ ನಿಗಮದಲ್ಲಿ 371 ಕೋಟಿ ರೂಗಳ ಭ್ರಷ್ಟಾಚಾರ ನಡೆಸಿರುವ ಆರೋಪದಲ್ಲಿ ಬಂಧಿಸಲಾಗಿದೆ. ಟೆಂಡರ್ ಕರೆಯದೆ 371 ಕೋಟಿ ಹಣ ಬಿಡುಗಡೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹಗರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿದ್ದ ಸಿಎಂ ಜಗನ್ ಅವರು ಹಗರಣದ ಬಗ್ಗೆ ಉತ್ತರಿಸಲು ಸೂಚಿಸಲಾಗಿತ್ತು. ಆದರೆ ಸೂಕ್ತ ಉತ್ತರ ನೀಡದ ಕಾರಣ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲು ಹೈಕೋರ್ಟ್‍ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗಿನ ಜಾವ 6 ಗಂಟೆಗೆ ಎ1 ಆರೋಪಿ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿದೆ.

ನಾನು ಯಾವುದೇ ಅವ್ಯವಹಾರ ಭ್ರಷ್ಟಾಚಾರ : ಚಂದ್ರಬಾಬು ನಾಯ್ಡು

          ನಾನು ಯಾವುದೇ ಅವ್ಯವಹಾರ ಮಾಡಿಲ್ಲ. ಸೂಕ್ತ ಮಾಹಿತಿಗಳಿಲ್ಲದೆಯೇ ಸಿಐಡಿ ಅಧಿಕಾರಿಗಳು ನನ್ನನ್ನು ಬಂಧಿಸಿದ್ದಾರೆ ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

          ವಿಜಯವಾಡಕ್ಕೆ ಸ್ಥಳಾಂತರಗೊಳ್ಳುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಜನರ ಸಮಸ್ಯೆ ಬಗೆಹರಿಸಲು ಹೋರಾಟ ನಡೆಸುತ್ತಿದ್ದೇನೆ. ನನ್ನ ಧ್ವನಿಯನ್ನು ಹತ್ತಿಕ್ಕಲು ಬಂಧನಕ್ಕೊಳಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

 

          ನಾನು ಮುಗ್ಧ. ಯಾವುದೇ ಭ್ರಷ್ಟಾಚಾರವಾಗಲೀ, ಅವ್ಯವಹಾರವಾಗಲೀ ನಡೆಸಿಲ್ಲ. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ. ಅಧಿಕಾರಿಗಳು ಸಮರ್ಥಿಸಿಕೊಳ್ಳಲು ಅವರ ಬಳಿ ಪುರಾವೆಗಳಿಲ್ಲ ಎಂದು ತಿಳಿಸಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top