ಟಿ.ಬಿ.ಎ ಗಣಿ ಕಾರ್ಮಿಕರಿಗೆ ಬಾಕಿ ಇರುವ ವೇತನ, ಪಿ.ಎಫ್, ಬೋನಸ್, ಗ್ರಾಚುಟಿ, ಭದ್ರತೆ ಗೆ ಆಗ್ರಹಿಸಿ ಬಳ್ಳಾರಿಯ ವಿವಿಧ ಇಲಾಖೆಯ ಕಛೇರಿಗಳ ಮುಂದೆ ಪ್ರತಿಭಟನೆ

ಬಳ್ಳಾರಿ : ಇಂದು ಎಐಯುಟಿಯುಸಿ ಗೆ ಸಂಯೋಜಿತ ಗೊಂಡ ಸಂಯುಕ್ತ ಗಣಿ ಕಾರ್ಮಿಕರ ಸಂಘದ ವತಿಯಿಂದ ಹರಗಿನದೋಣಿ ಟಿ.ಬಿ.ಎ ಕಬ್ಬಿಣ ಅದಿರು ಮತ್ತು ರೆಡ್ ಆಕ್ಸೈಡ್ ಗಣಿಯ ಕಾರ್ಮಿಕರು ತಮ್ಮ ನ್ಯಾಯಬದ್ದ ಬೇಡಿಕೆಗಳಿಗಾಗಿ ಮಾನ್ಯ ಜಿಲ್ಲಾಧಿಕಾರಿ/ ಸಿ.ಇ.ಸಿ ಸದಸ್ಯರಿಗೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಹಾಯಕ ನಿರ್ದೇಶಕರಿಗೆ, ಪ್ರಾದೇಶಿಕ ಕಾರ್ಮಿಕ ಆಯುಕ್ತರು (ಕೇಂದ್ರ) ಹಾಗು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಇವರಿಗೆ ಪ್ರತಿಬಟನೆ ನಡೆಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಸಂಯುಕ್ತ ಗಣಿ ಕಾರ್ಮಿಕರ ಸಂಘಟನೆ ಅಧ್ಯಕ್ಷರು ಹಾಗೂ ಎಐಯುಟಿಯುಸಿ ರಾಜ್ಯ ಅಧ್ಯಕ್ಷರಾದ ಕೆ.ಸೋಮಶೇಖರ್ ಅವರು ಮಾತನಾಡುತ್ತಾ “ಈ ಗಣಿಯಲ್ಲಿ ಹತ್ತಾರು ವರ್ಷಗಳಿಂದ ಕಾರ್ಮಿಕರು ದುಡಿದು ಸೇವೆ ಸಲ್ಲಿಸುತ್ತ ಬಂದಿದ್ದಾರೆ, 2015 ನಂತರ ಇವರ ನ್ಯಾಯಬದ್ಧ ಬೇಡಿಕೆಗಳಾದ ವೇತನ, ಬೋನಸ್, ಗ್ರಾಚುಟಿ, ಪಿ.ಎಫ್ ಹಾಗೂ ಇತರೆ ಸಮರ್ಪಕವಾಗಿ ಪಾವತಿಯಾಗಿಲ್ಲ. ಗಣಿ ಆಡಳಿತ ಇವರ ಭವಿಷ್ಯ ನಿಧಿ ಹಣವನ್ನು ಇಲಾಖೆಗೆ ಪಾವತಿಸಿಲ್ಲ. ನಿವೃತ್ತರಾದವರಿಗೆ ಪಿಂಚಣಿ ಸಿಕ್ಕಿಲ್ಲ, ಇವರಿಗೆ ಬರಬೇಕಾದ ಯಾವುದೇ ನ್ಯಾಯಬದ್ಧ ಸೌಲಭ್ಯಗಳು ಇಲ್ಲಿಯವರೆಗೆ ಸಿಗದೇ ವಂಚಿತರಾಗಿದ್ದಾರೆ. ಅವಲಂಬಿತ ಕಾರ್ಮಿಕರ ಕುಟುಂಬಗಳು ಬೀದಿ ಪಾಲಾಗಿವೆ. ಇಂದಿನ ದುಬಾರಿ ಜೀವನ ವೆಚ್ಚದ ಕಾಲದಲ್ಲಿ ಬದುಕುಳಿಯುವುದೇ ಸಂಕಷ್ಟವಾಗಿದೆ.

ಈಗ ಗಣ ಅವಧಿ ಮುಗಿದು ಹೋಗಿದೆ. ಆದರೆ ಈ ಗಣಿಯಲ್ಲಿ ಕಾರ್ಮಿಕರು ಉತ್ಪಾದಿಸಿದ 100 ಕೋಟಿಯಷ್ಟು ಬೆಲೆ ಬಾಳುವ ಅದಿರು ಸ್ಟಾಕ್ ಇದೆ. ಮಾನಿಟರಿಂಗ್ ಕಮಿಟಿ/ ಗಣಿ ಮತ್ತು ಭೂಗರ್ಭ ಇಲಾಖೆಯ ಸುಪರ್ದಿಯಲ್ಲಿ ಸುಮಾರು 11.50 ಕೋಟಿಯಷ್ಟು ಹಣವಿದೆ. ಆದರೆ ಇಂದು ಸರ್ಕಾರವಾಗಲಿ ಅಥವಾ ಕಾರ್ಮಿಕ ಇಲಾಖೆಯಾಗಲೀ ಕಾರ್ಮಿಕರ ಬೇಡಿಕೆಗಳ ಬಗ್ಗೆ ಕಾಳಜಿ ತೋರದೆ ಈ ಟೆಂಡರ್ ಮೂಲಕ ಗಣಿಯನ್ನು ಹರಾಜು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲು ಹೊರಟಿದ್ದಾರೆ. ಇದನ್ನು ತಿಳಿದ ಕಾರ್ಮಿಕರು ಮತ್ತಷ್ಟು ದಿಗ್ಭ್ರಮೆಗೊಂಡಿದ್ದಾರೆ.

ಆದ್ದರಿಂದ ಕಾರ್ಮಿಕರ ಇಲಾಖೆ ಹಾಗೂ ಸರ್ಕಾರವು ಮಧ್ಯಸ್ಥಿಕೆ ವಹಿಸಿ ಕಾರ್ಮಿಕರ ನ್ಯಾಯಬದ್ಧ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೀರ್ಘ ಹೋರಾಟ ಅನಿವಾರ್ಯವಾಗುತ್ತದೆ” ಎಂದು ಹೇಳಿದರು.ಈ ಪ್ರತಿಭಟನೆಯಲ್ಲಿ ಸಂಯುಕ್ತ ಗಣಿ ಕಾರ್ಮಿಕರ ಸಂಘದ ಕಾರ್ಯದರ್ಶಿ ಆರ್.ಸೋಮಶೇಖರ್ ಗೌಡ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಎ.ದೇವದಾಸ್ , ಜಿಲ್ಲಾ ಸಮಿತಿ ಸದಸ್ಯರಾದ ಸುರೇಶ್.ಜಿ, ಕಾರ್ಮಿಕರಾದ ಶಂಕರಪ್ಪ, ಗಿರಿರಾಜ, ಜಡೆಪ್ಪ, ಹೊಸಗೇರಿ ಹಾಗು ಇನ್ನಿತರರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top