ಜಾತಿ, ಮೀಸಲಾತಿ ಬಗ್ಗೆ ಮಾತನಾಡುವುದು ತರವಲ್ಲ

ಬೆಂಗಳೂರು,ಮಾ,2 : `ಉಕ್ರೇನಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಹಾವೇರಿಯ ವಿದ್ಯಾರ್ಥಿ ನವೀನ್ ಅವರು ಶೆಲ್ ದಾಳಿಗೆ ಸಿಲುಕಿ ಸಾವನ್ನಪ್ಪಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಈ ದುಃಖದ ಸಮಯದಲ್ಲಿ ಸರಕಾರವು ಅವರ ಕುಟುಂಬದೊಂದಿಗೆ ನಿಲ್ಲಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಬುಧವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, `ನವೀನ್ ಅವರ ಅಕಾಲಿಕ ನಿಧನ ನೋವಿನ ಸಂಗತಿಯಾಗಿದೆ. ಆದರೆ, ಇದನ್ನೇ ನೆಪವಾಗಿಟ್ಟುಕೊಂಡು ಜಾತಿ ವ್ಯವಸ್ಥೆ ಮತ್ತು ಮೀಸಲಾತಿ ಬಗ್ಗೆಯೆಲ್ಲ ಮಾತನಾಡುವುದು ಅನುಚಿತವಾಗುತ್ತದೆ. ಸರಕಾರವು ಕಡುಬಡವರು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವವರ ಬಗ್ಗೆಯೂ ಚಿಂತಿಸಬೇಕಾಗುತ್ತದೆ. ಒಂದು ಪ್ರಕರಣವನ್ನು ಇಟ್ಟುಕೊಂಡು ವ್ಯವಸ್ಥೆಯ ಬಗ್ಗೆ ಷರಾ ಬರೆಯುವುದು ಸರಿಯಲ್ಲ’ ಎಂದರು.

`ಇಡೀ ದೇಶದಲ್ಲೇ ನಮ್ಮ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವೈದ್ಯಕೀಯ ಕಾಲೇಜುಗಳಲ್ಲಿ ಪರಿಶಿಷ್ಟರಿಗೆ ಉಚಿತವಾಗಿ ನೀಡಲಾಗುತ್ತಿದೆ. ಶೇ.40ರಷ್ಟು ಸೀಟುಗಳನ್ನು ಪ್ರತಿಭಾವಂತ ಬಡವರಿಗೆ ರಿಯಾಯಿತಿ ದರದಲ್ಲಿ ಕೊಡಲಾಗುತ್ತಿದೆ. ಇದನ್ನು ದೇಶದಾದ್ಯಂತ ಶೇ 60ಕ್ಕೆ ಏರಿಸಬೇಕೆನ್ನುವುದು ಪ್ರಧಾನಿ ಮೋದಿಯವರ ಹಂಬಲವಾಗಿದೆ. ಇದು ಮುಂಬರುವ ವರ್ಷಗಳಲ್ಲಿ ಸಾಧ್ಯವಾಗಬಹುದು’ ಎಂದು ಅವರು ನುಡಿದರು. ನೀಟ್ ಪರೀಕ್ಷೆಯ ಮೂಲಕ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಇದರಿಂದ ಬಡಕುಟುಂಬದ ಮಕ್ಕಳೂ ವೈದ್ಯರಾಗಬಹುದು. ಇದನ್ನು ವಿರೋಧಿಸುವವರು ಧನದಾಹಿಗಳು ಮತ್ತು ದ್ರೋಹಿಗಳು’ ಎಂದು ಅವರು ತೀಕ್ಷ್ಣವಾಗಿ ಅಭಿಪ್ರಾಯಪಟ್ಟರು. `ಉಕ್ರೇನಿನಲ್ಲಿದ್ದ 20 ಸಾವಿರ ಭಾರತೀಯರ ಪೈಕಿ ಈಗಾಗಲೇ 2 ಸಾವಿರ ಮಂದಿಯನ್ನು ಕರೆತರಲಾಗಿದೆ. ಉಳಿದವರನ್ನು ಕೂಡ ಸದ್ಯದಲ್ಲೇ ಕರೆದುಕೊಂಡು ಬರಲಾಗುವುದು. ಈ ಸಂಬಂಧ ಉಕ್ರೇನ್, ರಷ್ಯಾ, ಪೋಲೆಂಡ್, ರುಮೇನಿಯಾ ಮುಂತಾದ ದೇಶಗಳೊಂದಿಗೆ ಕೇಂದ್ರ ಸರಕಾರವು ಈಗಾಗಲೇ ಮಾತುಕತೆ ನಡೆಸುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ಇವು ಎಲ್ಲ ಕಾಲದಲ್ಲೂ ಇರುತ್ತವೆ’ ಎಂದು ಅಶ್ವತ್ಥನಾರಾಯಣ ವಿವರಿಸಿದರು.

Leave a Comment

Your email address will not be published. Required fields are marked *

Translate »
Scroll to Top