ಬೆಂಗಳೂರು : ಕೃಷಿ ಕ್ಷೇತ್ರದ ಸುಸ್ಥಿರ ಅಭಿವೃದ್ಧಿ ನಮ್ಮ ಆಶಯ ಇದಕ್ಕಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು. ವಿಕಾಸ ಸೌಧದ ತಮ್ಮ ಕೊಠಡಿಯಲ್ಲಿಂದು
ಕೃಷಿ ಕ್ಷೇತ್ರದ ಸುಧಾರಣೆಗಳ ಮೂಲಕ ರಾಜ್ಯದಲ್ಲಿ ಗ್ರಾಮೀಣ ಜನರ ಸಾಮಾಜಿಕ ಆರ್ಥಿಕ ಅಭಿವೃದ್ದಿ ಕುರಿತು ರಾಜ್ಯದ ವಿವಿಧ ರೈತ ಸಂಘಟನೆಗಳ ಪ್ರಮುಖರು ಹಾಗೂ ಸಾಮಾಜಿಕ ಚಿಂತಕರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಆಲಿಸಿ ಸಚಿವರು ಮಾತನಾಡಿದರು.
ರಾಜ್ಯದಲ್ಲಿ ಗ್ರಾಮೀಣ ಜನರು ಅದರಲ್ಲೂ ಮುಖ್ಯವಾಗಿ ರೈತಾಪಿ ವರ್ಗದ ಮಹಿಳೆಯರ ಶ್ರೇಯೋಭಿವೃದ್ದಿ ಗಮನದಲ್ಲಿರಿಸಿ ರಾಜ್ಯ ಸರ್ಕಾರ ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ.ರೈತರಿಗೆ ಶಕ್ತಿ ತುಂಬಲು ಇನ್ನಷ್ಟು ದೂರಗಾಮಿ ಯೋಜನೆಗಳ ಜಾರಿಗೆ ಸರ್ಕಾರ ಸಿದ್ದವಿದೆ ಎಂದು ಸಚಿವರು ಹೇಳಿದರು.
ಸಂಘಟನೆಗಳ ಪ್ರಸ್ತಾಪ :
ಎಲ್ಲಾ ಬೆಳೆಗಳನ್ನು ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ತಂದು ಹಂತಹಂತವಾಗಿ ಜಾರಿಗೊಳಿಸುವುದು, ಕೃಷಿ ಬೆಲೆ ಆಯೋಗಕ್ಕೆ ಸ್ವಾಯತ್ತತೆ ನೀಡುವುದು,
ಹಾಲಿ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಹೆಚ್ಚುವರಿ ಅಕ್ಕಿಗೆ ಹಣ ನೀಡವ ಬದಲು ಪೂರಕ ಪೌಷ್ಟಿಕ ಆಹಾರವಾದ ರಾಗಿ ಜೋಳ, ಕಡಲೆಕಾಯಿ ಎಣ್ಣೆ ವಿತರಿಸುವುದು, ರೈತ ಮಹಿಳೆಯರನ್ನು ಫ್ರೂಟ್ಸ್ ಐಡಿಯಲ್ಲಿ ನೊಂದಣಿ ಮಡುವುದು, ರೈತ ಉತ್ಪಾದಕ ಸಂಸ್ಥೆಗಳ ಬಲ ವರ್ಧನೆ, ಸಿರಿ ಧಾನ್ಯ ಪ್ರೋತ್ಸಾಹ ಯೋಜನೆಯಡಿ ಖಾಯಂ ಮಾರುಕಟ್ಟೆ ಸೃಷ್ಟಿಮಾಡಿ ಕೊಡಬೇಕು.
ಸಾಂಪ್ರದಾಯಿಕ ಬೀಜ ವೈವಿಧ್ಯತೆ ಪುನಶ್ಚೇತನ ,ಸಂರಕ್ಷಣೆ ಬೀಜೋತ್ಪಾದನೆ, ವಿತರಣೆ ಯೋಜನೆ ಜಾರಿಗೊಳಿಸುವುದು,
ಸಹಜ ಕೃಷಿ ಉಳಿವಿಗೆ ಧೀರ್ಘ ಕಾಲದ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಅಗತ್ಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಂಘಟನೆಗಳ ಮುಖ್ಯಸ್ಥರು ಅನೇಕ ಉತ್ತಮ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿ ವಿಚಾರ ಮಂಡಿಸಿದರು.
ರೈತ ಸಂಘಟನೆಯ ಪ್ರಮುಖರಾದ ಶಾಸಕರಾದ ದರ್ಶನ ಪುಟ್ಟಣ್ಣಯ್ಯ, ಚಾಮರಸ ಮಾಲಿ ಪಾಟೀಲ್ , ಬಡಗಲಪುರ ನಾಗೇಂದ್ರ ಈ ದಿನ ಡಾಟ್ ಕಾಮ್ ಹಾಗೂ ಜಾಗೃತ ಕರ್ನಾಟಕದ ಎಚ್. ವಿ ವಾಸು, ಡಾ ಬಸವರಾಜು ಸುಸ್ಥಿರ ಕೃಷಿ ಮೈತ್ರಿ ಕೂಟದ ಕವಿತಾ ಕುರುಗಂಟೆ, ನಮ್ಮ ರೈತರ ಮಾರುಕಟ್ಟೆ ಸಂಘಟನೆಯ ಕವಿತಾ ಶ್ರೀನಿವಾಸನ್ ಸಹಜ ಆರ್ಗಾನಿಕ್ಸ್ ನ ಸೋಮಶೇಖರ್ ಬಿ.
ಸಾವಯವ ಕೃಷಿಕರಾದ ಎಸ್ ಬೋರೇಗೌಡ , ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿ ಕಿರಣ್ ಪೂಣಚ್ಚ, ಕೆ.ಅರ್.ಅರ್ ಎಸ್ ಸಂಘಟನೆಯ ಜಿ.ಎಂ ವೀರ ಸಂಗಯ್ಯ ಮತ್ತಿತರು ಸುಧಾ ಹೆಚ್ಚನ ಆರ್ಥಿಕ ಹೊರೆ ಇಲ್ಲದೆ ಹಾಲಿ ಸ್ಥಿತಿಯಲ್ಲೇ ಮಾಡಬಹುದಾದ ಸುಧಾರಣೆಗಳ ಬಗ್ಗೆ ಕೃಷಿ ಸಚಿವರಿಗೆ ವಿವರಿಸಿದರು. ಎಲ್ಲರ ಅಭಿಪ್ರಾಯ ,
ಸಲಹೆಗಳನ್ನು ಸಮಾಧಾನದಿಂದ ಆಲಿಸಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಚರ್ಚೆ ವೇಳೆ ಕೇಳಿ ಬಂದ ಕೆಲವು ಚಿಂತನೆಗಳನ್ನು ಈಗಾಗಲೇ ಇಲಾಖೆಯಲ್ಲಿ ಜಾರಿಗೊಳಿಸಲಾಗುತ್ತಿದೆ,ಅಲ್ಲದೆ ಸಭೆಯಲ್ಲಿ ಕೇಳಿ ಬಂದ ಎಲ್ಲಾ ರಚನಾತ್ಮಕ ಸಲಹೆ,ಪ್ರಸ್ತಾಪಗಳನ್ನು ಕ್ರೋಢೀಕರಿಸಿ ಮುಖ್ಯ ಮಂತ್ರಿಯವರೊಂದಿಗೆ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದರು
ಕೃಷಿ ಇಲಾಖೆ ಕಾರ್ಯದರ್ಶಿ ವಿ. ಅನ್ಬುಕುಮಾರ್, ಆಯುಕ್ತರಾದ ವೈ ಎಸ್ ಪಾಟೀಲ್,ನಿರ್ದೇಶಕರಾದ ಜಿ.ಟಿ .ಪುತ್ರ ಅವರು ಸಹ ಇಲಾಖೆಯಲ್ಲಿ ಭವಿಷ್ಯದಲ್ಲಿ ಸುಸ್ಥಿರ ಕೃಷಿ ಅಭಿವೃದ್ಧಿಗೆ ರೂಪಿಸಿ ಅನುಷ್ಠಾನ ಗೊಳಿಸುತ್ತಿರುವ ಯೋಜನೆಗಳ ಬಗ್ಗೆ ವಿವರಿಸಿದರು.