ಸೆ.15 ರ ವರೆಗೆ ’ಗ್ಲಾಸ್ ಬ್ರಿಡ್ಜ್’ ವೀಕ್ಷಣೆ ಸ್ಥಗಿತಗೊಳಿಸಿ: ವೆಂಕಟ್ ರಾಜಾ

ಮಡಿಕೇರಿ: ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ’ಗ್ಲಾಸ್ ಬ್ರಿಡ್ಜ್’ಗಳನ್ನು ಸೆಪ್ಟೆಂಬರ್, 15 ರವರೆಗೆ ಸ್ಥಗಿತಗೊಳಿಸುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ. 

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

 

ಸೆಪ್ಟೆಂಬರ್, 15 ರವರೆಗೆ ಗ್ಲಾಸ್ ಬ್ರಿಡ್ಜ್ ಸ್ಥಗಿತ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಿಂದ ಆದೇಶ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.  

ಜಿಲ್ಲೆಯಲ್ಲಿ ಯಾವುದೇ ರೀತಿಯ ಸುರಕ್ಷತೆ ಇಲ್ಲದೆ ಗ್ಲಾಸ್ ಬ್ರಿಡ್ಜ್ಗಳ ನಿರ್ಮಾಣ ಮಾಡಲಾಗಿದೆ. ಸುರಕ್ಷತೆ ಇಲ್ಲದಿರುವ ಗ್ಲಾಸ್ ಬ್ರಿಡ್ಜ್ಗಳಿಗೆ ಪಿಡಿಒಗಳು ಹೇಗೆ ಎನ್ಒಸಿ ನೀಡುತ್ತಾರೆ. ಸಭೆಯ ನಡಾವಳಿ ಮಾಡಿಕೊಂಡು ಎನ್ಒಸಿ ನೀಡಿದರೆ ಸಾಕೆ, ಸುರಕ್ಷತೆ ಬೇಡವೇ ಎಂದು ಜಿಲ್ಲಾಧಿಕಾರಿ ಅವರು ಪ್ರಶ್ನಿಸಿದರು.  

ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ’ಗ್ಲಾಸ್ ಬ್ರಿಡ್ಜ್’ ವೀಕ್ಷಣೆಗೆ ಭೇಟಿ ನೀಡುವುದರಿಂದ ಏನಾದರೂ ತೊಂದರೆಯಾದಲ್ಲಿ ಯಾರೂ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ಎಂದು ಪಂಚಾಯತ್ ರಾಜ್ ಅಧಿಕಾರಿಗಳಿಗೆ ಎಚ್ಚರಿಸಿದರು. 

 

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮುಂದಿನ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕಿದೆ ಎಂದರು. 

ಜುಲೈ ಮೊದಲ ವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಲಿದ್ದು, ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯ ವರದಿಯನ್ನು ಜುಲೈ, ೦೫ ರೊಳಗೆ ನೀಡಬೇಕು. ಬಾಕಿ ಕಾಮಗಾರಿಗಳ ಬಗ್ಗೆ ಅಧ್ಯಯನ ಮಾಡಿಕೊಂಡು ಸಭೆಗೆ ಹಾಜರಾಗಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಶಾಲೆಗಳು ಸೇರಿದಂತೆ ಸರ್ಕಾರಿ ಕಟ್ಟಡಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಶಿಥಿಲ ವ್ಯವಸ್ಥೆಯಲ್ಲಿರುವ ಶಾಲೆಗಳ ಮಾಹಿತಿ ನೀಡಬೇಕು. ಈ ಸಂಬಂಧ ಅಗತ್ಯ ಕ್ರಮವಹಿಸುವಂತೆ  ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್ಗಳಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ರಸ್ತೆ ಸಾರಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು, ರಸ್ತೆಗಳ ಬಗ್ಗೆ ಗಮನಹರಿಸಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರಿಂದ ದೂರು ಬರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಾಕೀತು ಮಾಡಿದರು.

ತಗ್ಗು ಪ್ರದೇಶದಲ್ಲಿ ಹೆಚ್ಚಿನ ಮಳೆಯಿಂದಾಗಿ ಮನೆಗೆ ನೀರು ನುಗ್ಗುವುದು ಸೇರಿದಂತೆ ಮಳೆಯಿಂದ ಉಂಟಾಗುವ ಹಾನಿಯ ಬಗ್ಗೆ ನಿಖರ ಮಾಹಿತಿ ಒದಗಿಸಬೇಕು, ನಿಯಮಾನುಸಾರ ಪರಿಹಾರ ನೀಡಬೇಕು ಎಂದರು. 

ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಯಾರೂ ಸಹ ಕೇಂದ್ರ ಸ್ಥಾನದಿಂದ ಹೊರಗೆ ಹೋಗಬಾರದು. ಸಮಸ್ಯೆಗಳಿದ್ದಲ್ಲಿ ಅನುಮತಿ ಪಡೆಯಬೇಕು. ಬೆಂಗಳೂರಿನಲ್ಲಿ ಸಭೆ ಇದೆ ಎಂದು ತೆರಳಬಾರದು. ಈ ಸಂಬಂಧ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿ ವಿನಾಯತಿ ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಅಪಘಾತಗಳು ಸಂಭವಿಸಿದಲ್ಲಿ ದೂರುಗಳು ಕೇಳಿ ಬರುತ್ತದೆ. ಈ ಬಗ್ಗೆ ಮಾಹಿತಿ ಫಲಕಗಳನ್ನು ಅಳವಡಿಸಬೇಕು, ರಸ್ತೆಗಳನ್ನು ಸರಿಪಡಿಸಬೇಕು ಎಂದು ಸಲಹೆ ಮಾಡಿದರು. 

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ.ಅನನ್ಯ ವಾಸುದೇವ್ ಅವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇತರರು ಇದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top