ಹಠಾತ್ ಸಾವುಗಳು, ಮುನ್ನೆಚ್ಚರಿಕೆ ಇರಲಿ – ಗಾಬರಿಯಾಗಬೇಡಿ : ಹೃದ್ರೋಗ ತಜ್ಞ ಡಾ. ತಮೀಮ್ ಅಹಮದ್

Kannada Nadu
ಹಠಾತ್ ಸಾವುಗಳು, ಮುನ್ನೆಚ್ಚರಿಕೆ ಇರಲಿ – ಗಾಬರಿಯಾಗಬೇಡಿ : ಹೃದ್ರೋಗ ತಜ್ಞ ಡಾ. ತಮೀಮ್ ಅಹಮದ್

ನಂಜುಂಡಪ್ಪ.ವಿ.
ಬೆಂಗಳೂರು: ಇತ್ತೀಚೆಗೆ ಮಕ್ಕಳು ಒಳಗೊಂಡಂತೆ ಅಲ್ಲಲ್ಲಿ ಹಠಾತ್ ಸಾವುಗಳು ಸಂಭವಿಸುತ್ತಿದ್ದು, ಈ ಕುರಿತು ಗಾಬರಿಯಾಗುವ ಅಗತ್ಯವಿಲ್ಲ. ಹಾಗೆಂದು ನಿರ್ಲಕ್ಷ್ಯ ಮಾಡುವುದೂ ಸಲ್ಲದು. ವಿಶೇಷವಾಗಿ ಕೋವಿಡ್ ಸೋಂಕಿಗೆ ಒಳಗಾದವರು, ದೀರ್ಘಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದವರು ಕಡ್ಡಾಯವಾಗಿ ಹೃದಯ ತಪಾಸಣೆ ಮಾಡಿಸಿಕೊಳ್ಳಲೇಬೇಕು. ಮುನ್ನೆಚ್ಚರಿಕೆ ಎಲ್ಲದಕ್ಕೂ ಪರಿಹಾರ ಎಂದು ಹಿರಿಯ ಹೃದ್ರೋಗ ತಜ್ಞ ಡಾ. ತಮೀಮ್ ಅಹಮದ್ ಹೇಳಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ಹೃದಯಾಘಾತ, ಹೃದಯ ಸ್ತಂಭನ, ಮೆದುಳು ಮತ್ತು ನರ ಸಂಬಂಧಿ ಸಮಸ್ಯೆಗಳಿಂದ ಯುವ ಸಮೂಹ ಹಠಾತ್ ಸಾವಿಗೀಡಾಗುತ್ತಿವೆ. ಇದಕ್ಕೆ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳು ಕಾರಣವೇ. ಇಂತಹ ಸಾವುಗಳನ್ನು ತಡೆಯುವ ವಿಧಾನ ಕುರಿತಂತೆ ತಜ್ಞರ ಮತ್ತು ವಿಜ್ಞಾನಿಗಳ ಸಮಿತಿ ರಚಿಸಿ ವರದಿ ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿರುವ ಹಿನ್ನೆಲೆಯಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಹೃದಯ ಶಸ್ತ್ರ ಚಿಕಿತ್ಸೆ ನಡೆಸಿರುವ, ದೆಹಲಿ ಏಮ್ಸ್ ನಲ್ಲಿ 4 ವರ್ಷ ಸೇವೆ ಸಲ್ಲಿಸಿರುವ, ರಾಜ್ಯದಲ್ಲಿ ಅತ್ಯುತ್ತಮ ಹೃದಯ ಶಸ್ತ್ರ ಚಿಕಿತ್ಸಕರ ತಂಡವನ್ನು ಮುನ್ನಡೆಸುತ್ತಿರುವ ಡಾ. ತಮೀಮ್ ಅಹಮದ್ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊಂಡರು.

ಕೋವಿಡ್ ಲಸಿಕೆಯಿಂದ ಅಡ್ಡಪರಿಣಾಮಗಳಾಗಿವೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಜನಜನಿತವಾಗಿದೆ. ಆದರೆ ಈ ಕುರಿತು ಅಧ್ಯಯನ ನಡೆದಿಲ್ಲ. ಹೀಗಿರುವಾಗ ಇಂತಹದೇ ಕಾರಣದಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ನಾವೀಗ ಕೋವಿಡ್ ನಂತರದ ಯುಗದಲ್ಲಿದ್ದೇವೆ. ಹಾಗಾಗಿ ಕೋವಿಡ್ ಸೋಂಕಿತರು ಒಮ್ಮೆ ಸಮಗ್ರವಾಗಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು. ಇಕೋ ಪರೀಕ್ಷೆ ಒಳ್ಳೆಯದು. ನಾಲ್ಕು ವಾರಗಳಿಗಿಂತ ದೀರ್ಘ ಕಾಲ ಸೋಂಕಿಗೆ ಒಳಗಾಗಿದ್ದವರು, ತೀವ್ರ ನಿಗಾ ಘಟಕದಲ್ಲಿದ್ದವರು ಮೊದಲು ತಜ್ಞ ವೈದ್ಯರನ್ನು ಕಾಣಬೇಕು. ಎಚ್ಚರಿಕೆ ವಹಿಸಲೇಬೇಕು. ಸೋಂಕಿತರಾದವರಿಗೆ ಬ್ಲಡ್ ಥಿನ್ನರ್ ಅಗತ್ಯವಿದೆಯೇ ಎಂಬುದನ್ನು ವೈದ್ಯರು ನಿರ್ಧರಿಸಲಿದ್ದಾರೆ. ಆದರೆ ಒಂದಂತೂ ಸತ್ಯ ಶೇ 99 ರಷ್ಟು ಮಂದಿಗೆ ಸಮಸ್ಯೆಗಳಿರುವುದಿಲ್ಲ ಎಂದು ಸಮಾಧಾನ ಹೇಳಿದರು.
ನೋಡಿ ನಮ್ಮ ಆಹಾರ, ವಿಹಾರ, ಜೀವನ ಶೈಲಿಯಲ್ಲಿ ಸಮಗ್ರವಾಗಿ ಬದಲಾವಣೆಯಾಗಿದೆ. ದುರದೃಷ್ಟಕರವೆಂದರೆ ಇಂದಿನ ದಿನಮಾನಗಳಲ್ಲಿ 20 ರಿಂದ 30 ವರ್ಷದವರಲ್ಲೂ ಹೃದಯ ಸಂಬಂಧಿ ಸಮಸ್ಯೆಗಳು ಕಂಡು ಬರುತ್ತಿವೆ. ಕೆಲವರಿಗೆ ವಂಶವಾಹಿನಿಯಿಂದ ಸಮಸ್ಯೆ ಬಂದಿರುತ್ತದೆ. ಗ್ರಾಮೀಣ ಪ್ರದೇಶ ನಗರೀಕರಣವಾಗುತ್ತಿದೆ. ಸಾಮಾಜಿಕ ಸಮಸ್ಯೆಗಳು ಹೆಚ್ಚಾಗಿವೆ. ಸಾಮಾಜಿಕ ಜಾಲತಾಣ, ಮೊಬೈಲ್ ಮೂಲಕ ನೋಡುವ ನಕಾರಾತ್ಮಕ ಚಿತ್ರಗಳು ನಮ್ಮ ಚಿತ್ತವನ್ನು ಕೆಣಕುತ್ತಿವೆ. ಮಾನಸಿಕ ಸಮಸ್ಯೆಗಳು ಕೂಡ ಹೃದಯ ಸಂಬಂಧೀ ಸಮಸ್ಯೆಗಳಿಗೆ ಒಂದು ಕಾರಣವಾಗಿದೆ. ಜೊತೆಗೆ ದೈಹಿಕ ಚಟುವಟಿಕೆ ಕಡಿಮೆಯಾಗಿವೆ. ಜನ ಸಾಮಾಜಿಕವಾಗಿ ಬೆರೆಯುವುದು ಕಡಿಮೆಯಾಗಿದ್ದು, ಇದರಿಂದ ಒತ್ತಡ ಹೆಚ್ಚಾಗುತ್ತಿದೆ. ಹಳ್ಳಿಗಳಲ್ಲಿ ಅರಳಿ ಮರದ ಕೆಳಗಡೆ ಹತ್ತಾರು ಹಿರಿಯರು ಹರಟೆ ಹೊಡೆಯುತ್ತಿರುತ್ತಾರೆ. ಆದರೆ ಬಹುತೇಕರಲ್ಲಿ ಹೃದಯ ಸಮಸ್ಯೆ ಇರುವುದಿಲ್ಲ.

ನಗರ ಪ್ರದೇಶಗಳಲ್ಲಿ ಜೀವನ ಶೈಲಿ ಬದಲಾಗಿದ್ದು, ಆಹಾರ ಸೇವನೆ ಹೆಚ್ಚಾಗಿದೆ. ಕ್ಯಾಲರಿ ಬರ್ನ್ ಆಗುತ್ತಿಲ್ಲ. ಇತ್ತೀಚೆಗೆ ಟ್ರೆಡ್ ಮಿಲ್ ನಲ್ಲಿ ನಾಯಿ ಓಡುತ್ತಿದ್ದ ಚಿತ್ರ ಬಂತು. ಮನುಷ್ಯ ಈ ಚಿತ್ರವನ್ನು ಟಿವಿಯಲ್ಲಿ ನೋಡುತ್ತಿದ್ದ. ಹೀಗೆ ಪ್ರಾಣಿಗಳಿಗೂ ದೈಹಿಕ ಚಟುವಟಿಕೆ ಇಲ್ಲ. ಮನುಷ್ಯ ಆರಾಮ ಜೀವಿಯಾಗಿ ಪರಿವರ್ತನೆಯಾಗಿರುವುದು ಹೃದಯ ಸಂಬಂಧಿ ಸಮಸ್ಯೆಗಳಿಗೆ ರಹದಾರಿಯಾಗಿವೆ.
ಬೇರೆ ದೇಶಗಳಿಗೆ ಹೋಲಿಸಿದರೆ ಭಾರತೀಯ ಮಕ್ಕಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಿವೆ. ಮಕ್ಕಳ ಹೃದಯದ ಅನಾಟಮಿ ಬದಲಾಗುವ ಸಂದರ್ಭದಲ್ಲಿ ಸಮಸ್ಯೆಗಳು ಕಂಡು ಬರುತ್ತವೆ. ಹೃದಯ ಸಮಸ್ಯೆ ಇದ್ದರೆ ದೇಹ ನೀಲಿ ಬಣ್ಣಕ್ಕೆ ತಿರುಗುತ್ತದೆ. ಮಕ್ಕಳಲ್ಲಿ ಹಠಾತ್ ಹೃದಯಾಘಾತ ಅತ್ಯಂತ ವಿರಳವಾಗಿ ಕಂಡು ಬರುತ್ತಿದ್ದು, ಈ ಬಗ್ಗೆ ಗಾಬರಿಗೊಳ್ಳುವ ಅಗತ್ಯವಿಲ್ಲ. ಸೋಂಕಿನ ಕಾರಣದಿಂದಲೂ ಹೃದಯ ಸಮಸ್ಯೆಗಳು ಎದುರಾಗಬಹುದು. ಮಗು ಹುಟ್ಟಿದಾಗ ಉಸಿರಾಡಲು ಕಟ್ಟಪಡುತ್ತಿದ್ದರೆ, ಹಾಲು ಕುಡಿಯಲು ತ್ರಾಸವಾಗುತ್ತಿದ್ದರೆ, ಓಡಾಡಲು ಕಷ್ಟ ಇದ್ದರೆ ಹೃದಯ ಸಮಸ್ಯೆ ಇರಬಹುದು. ಹಠಾತ್ ಹೃದಯಾಘಾತ ಅತ್ಯಂತ ವಿರಳ. ಹೈಪೋಟ್ರೋಫಿಕ್ ಕಾರ್ಡಿಯೋ ಮಯೋಪತಿ ಸಮಸ್ಯೆ ಇದ್ದರೆ ಅಂತಹವರಲ್ಲಿ ಹಠಾತ್ ಹೃದಯಾಘಾತ ಸಂಭವಿಸಬಹುದು. ಇದು ವಂಶವಾಹಿನಿ ಮೂಲಕ ಬರಬಹುದು. ಇದಕ್ಕೆ ಕೌಟುಂಬಿಕ ಹಿನ್ನೆಲೆ ಇರುತ್ತದೆ. ಇಂತಹವರು ಸಮಗ್ರ ತಪಾಸಣೆಗೆ ಒಳಗಾಗಬೇಕಾಗುತ್ತದೆ.

ಹಠಾತ್ ಸಾವುಗಳ ಬಗ್ಗೆ ನಮಗೆ ಮುನ್ನೆಚ್ಚರಿಕೆಗಳು ಸಿಗುತ್ತದೆ. ಪ್ರತಿದಿನ 100 ಕಿ.ಮಿ. ಸೈಕಲ್ ಓಡಿಸುತ್ತಿದ್ದವ, ಕಾಲ ಕ್ರಮೇಣ ಒಂದು ಅಥವಾ ಎರಡು ಕಿ.ಮೀ. ಸೈಕಲ್ ತುಳಿದರೆ ಸುಸ್ತಾಗುತ್ತದೆ ಎಂದರೆ ಅಲ್ಲಿ ಸಮಸ್ಯೆ ಇದ್ದೇ ಇರುತ್ತದೆ. ನಡೆಯುತ್ತಿದ್ದಾಗ, ಕುಳಿತಿದ್ದಾಗ ಬೆನ್ನು, ದವಡೆ ಮತ್ತಿತರೆ ಪ್ರದೇಶದಲ್ಲಿ ನೋವು ಕಂಡು ಬರುವುದು ಹೃದಯದ ನರಗಳಲ್ಲಿ ಅಡೆತಡೆ ಇರುವ ಮುನ್ನೆಚ್ಚರಿಕೆಗಳಾಗಿವೆ. ಎದೆ ಉರಿ, ಎದೆ ನೋವು ಬಹುತೇಕ ಒಂದೇ ರೀತಿ ಇರುತ್ತದೆ. ಆದರೆ ವ್ಯತ್ಯಾಸ ತಿಳಿದುಕೊಳ್ಳುವುದು ಸೂಕ್ತ ಎಂದು ಡಾ. ತಮೀಮ್ ಅಹಮದ್ ಕಿವಿ ಮಾತು ಹೇಳಿದರು.
ನಾವು ಬಳಸುವ ಆಹಾರ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. 20 ರಿಂದ 30 ವರ್ಷಗಳ ಹಿಂದೆ ತುಪ್ಪಾ ತುಂಬಾ ಒಳ್ಳೆಯದು ಎನ್ನುತ್ತಿದ್ದರು. ತುಪ್ಪದ ವಿಚಾರದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ತುಪ್ಪದ ಗುಣಮಟ್ಟದ ಬಗ್ಗೆ ಪ್ರತಿ ಐದು ವರ್ಷಗಳಿಗೊಮ್ಮೆ ಟ್ರೆಂಡ್ ಬದಲಾಗುತ್ತದೆ. ಹಿಂದೆ ಕಲ ಬೆರಕೆಯಿತ್ತು. ತೆಂಗಿನ ಎಣ್ಣೆಯೂ ಸಹ ಇದೀಗ ಉತ್ತಮವಾದದ್ದು ಎಂಬ ವರದಿಯಿದೆ. ರೀಫೈನ್ಡ್ ಖಾದ್ಯ ತೈಲವೂ ಸಹ ಅಷ್ಟೊಂದು ಒಳ್ಳೆಯದಲ್ಲ. ಆಲೀವ್ ಆಯಿಲ್ ನಮಗೆ ಬೇಕಾದಷ್ಟು ಸಿಗುತ್ತಿಲ್ಲ. ಖರೀದಿ ಮಾಡಲು ಸಾಮಾನ್ಯ ಜನರಿಗೆ ಸಾಧ್ಯವಿಲ್ಲ. ಕೆಟ್ಟ ಕೊಲೆಸ್ಟ್ರಾಲ್ ಇದ್ದವರು ವೈದ್ಯರ ಸಲಹೆ ಮೇರೆಗೆ ಮಾತ್ರೆ ತೆಗೆದುಕೊಳ್ಳಬೇಕು. ಸೀಮಿತ ಪ್ರಮಾಣದಲ್ಲಿ ಡ್ರೈ ಫ್ರೂಟ್ಸ್ ಸೇವನೆ ಒಳ್ಳೆಯದು.

50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರಲ್ಲಿ ಹೃದಯಾಘಾತ ಹೆಚ್ಚಿದ್ದು, 20 ರಿಂದ 30 ವರ್ಷದ ಪುರುಷರಲ್ಲಿ ಹೃದಯಾಘಾತವಾಗುತ್ತಿವೆ. ಈ ಅವಧಿಯಲ್ಲಿ ಮಹಿಳೆಯರಿಗೆ ಹಾರ್ಮೋನ್ ಗಳು ರಕ್ಷಣೆ ನೀಡುತ್ತವೆ. ಮಹಿಳೆಯರು ಮೊನೋಪಾಸ್ ಆದ ಬಳಿಕ ಪುರುಷರು – ಮಹಿಳೆಯರಲ್ಲಿ ಹೃದಯ ಸಮಸ್ಯೆಗಳು ಸಮಾನವಾಗಿ ಕಾಣಿಸಿಕೊಳ್ಳುತ್ತವೆ.

ಜಪಾನ್ ನಲ್ಲಿ ಸರಾಸರಿ 85 ವರ್ಷ ಬದುಕುತ್ತಾರೆ. ಇಟಲಿ, ಗ್ರೀಸ್ ನಲ್ಲಿ ಅತಿ ಹೆಚ್ಚು ಮಾಂಸಹಾರ ಸೇವನೆಯಿದ್ದು, ಆದರೆ ಇಲ್ಲಿ ಹೃದಯಾಘಾತ ಪ್ರಮಾಣ ಕಡಿಮೆ. ಪ್ರತಿಯೊಬ್ಬರೂ ಕೆಂಪು ಮಾಂಸ ಸೇವನೆ ಕಡಿಮೆ ಮಾಡಬೇಕು. ಸಸ್ಯಜನ್ಯ ತೈಲಗಳ ಬಳಕೆಯೂ ತಗ್ಗಬೇಕು. ಭಾರತದಲ್ಲಿ ಸಸ್ಯಹಾರಿಗಳಲ್ಲೂ ಹೃದಯಾಘಾತ ಸಂಭವಿಸುತ್ತವೆ. ಹಾಗಾಗಿ ನಾವು ಕಾರ್ಬೋ ಹೈಡ್ರೈಟ್ಸ್, ಫಿಜ್ಜಾ, ಬರ್ಗರ್ ನಂತಹ ವಸ್ತುಗಳ ಬಳಕೆಯನ್ನು ಸೀಮಿತಗೊಳಿಸಬೇಕು. ತರಕಾರಿ, ಹಣ್ಣುಗಳನ್ನು ಹೆಚ್ಚೆಚ್ಚು ಸೇವಿಸಬೇಕು. ಪ್ರತಿದಿನ 30 ನಿಮಿಷದಿಂದ 60 ನಿಮಿಷಗಳ ವರೆಗೆ ವ್ಯಾಯಾಮ, ಯೋಗ, ಧ್ಯಾನದ ಜೊತೆ ದೇಹದಲ್ಲಿ ಸಂತೋಷದ ಹಾರ್ಮೋನ್ಸ್ ಗಳು ಬಿಡುಗಡೆಯಾಗುವಂತೆ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಹೃದಯಕ್ಕೂ – ಸಂಗೀತಕ್ಕೂ ಅವಿನಾಭಾವ ಸಂಬಂಧವಿದೆ. ಹೃದಯ ಸಂಗೀತದಂತೆ ಮಿಡಿಯುತ್ತದೆ. ಹಾಗಾಗಿ ಸಂಗೀತ ಹೃದಯಕ್ಕೆ ಒಳ್ಳೆಯದು. ಉತ್ತಮ ಸಂಗೀತ ಕೇಳುತ್ತಾ ನಾವು ಹೃದಯ ಶಸ್ತ್ರ ಚಿಕಿತ್ಸೆ ನಡೆಸುತ್ತೇವೆ. ಹೃದಯ ಬೇನೆ ಕಂಡು ಬಂದಲ್ಲಿ ಇಕೋಸ್ಪ್ರಿನ್ ಮಾತ್ರೆಯನ್ನು ಬಾಯಿಯಲ್ಲಿ ಹಾಕಿಕೊಂಡು ಚೀಪಬೇಕು. ತಕ್ಷಣವೇ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಬೇಕು ಎಂದು ಡಾ. ತಮೀಮ್ ಅಹಮದ್ ಸಲಹೆ ಮಾಡಿದರು

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";