ಮತ್ತೆ ಚುರುಕಾದ ಮುಂಗಾರು : ಭಾರಿ ಮಳೆಯಾಗುವ ಸಾಧ್ಯತೆ

ಬೆಂಗಳೂರು: ವಾತಾವರಣದಲ್ಲಿ  ಸಾಕಷ್ಟು ಬದಲಾವಣೆಗಳಾಗಿರುವ  ಹಿನ್ನೆಲೆಯಲ್ಲಿ  ಮುಂಗಾರು  ಮಳೆ ಮತ್ತಷ್ಟು  ಚುರುಕಾಗಿದ್ದು, ರಾಜ್ಯದಲ್ಲಿ  ಭಾರೀ ಮಳೆಯಾಗುವ  ಮುನ್ಸೂಚನೆಗಳಿವೆ.

ಕೇರಳದ ಕರಾವಳಿಯಿಂದ ಮಹಾರಾಷ್ಟ್ರದವರೆಗೂ ಮೇಲುಬ್ಬರ ನಿರ್ಮಾಣವಾಗಿದೆ. ಅಲ್ಲದೇ ಮೇಲ್ಮೈ ಸುಳಿಗಾಳಿಯು ಉಂಟಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ವಾತಾವರಣದಲ್ಲಾಗಿರುವ ಈ ರೀತಿಯ ಬದಲಾವಣೆಯಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

 

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬೀಳುತ್ತಿರುವ ಭಾರೀ ಮಳೆ ಮುಂದುವರೆಯಲಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲೂ ಮಳೆ ಹೆಚ್ಚಾಗುವ ಮುನ್ಸೂಚನೆಗಳಿವೆ.

ನಿರಂತರ ಭಾರೀ ಮಳೆಯಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅತಿವೃಷ್ಟಿ ಉಂಟಾಗಿದ್ದು, ಗುಡ್ಡ ಕುಸಿತ, ಮನೆ, ರಸ್ತೆ, ವಿದ್ಯುತ್ ಸಂಪರ್ಕಗಳಿಗೆ ಹಲವೆಡೆ ಹಾನಿಯಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯಿಂದ ಕಾವೇರಿ, ಕಪಿಲಾ, ಹೇಮಾವತಿ, ನೇತ್ರಾವತಿ, ಕೃಷ್ಣಾ, ತುಂಗಾಭದ್ರಾ ಮೊದಲಾದ ನದಿಗಳು ಮೈದುಂಬಿ ಹರಿಯುತ್ತಿವೆ. ಕಾವೇರಿ ಮತ್ತು ಕೃಷ್ಣಾ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಮಳೆ ಹೆಚ್ಚಾಗುವ ಮುನ್ಸೂಚನೆ ಇರುವುದರಿಂದ ನದಿಗಳ ನೀರಿನ ಪ್ರಮಾಣವೂ ಹೆಚ್ಚಾಗಲಿದೆ.

 

ಜಲ ವಿದ್ಯುತ್ ಉತ್ಪಾದಿಸುವ ಉದ್ದೇಶದ ಜಲಾಶಯಗಳನ್ನು ಹೊರತುಪಡಿಸಿ ಉಳಿದ ರಾಜ್ಯದ ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ. ಸಾಕಷ್ಟು ಒಳಹರಿವು ಇರುವುದರಿಂದ ಹೆಚ್ಚಿನ ಪ್ರಮಾಣದ ನೀರನ್ನು ಕೃಷ್ಣಾ ಹಾಗೂ ಕಾವೇರಿ ಕೊಳ್ಳದ ಜಲಾಶಯಗಳಿಂದ ನದಿ ಬಿಡಲಾಗುತ್ತಿದೆ. ಹೀಗಾಗಿ ರಾಜ್ಯವು ಅತಿವೃಷ್ಟಿಯ ಜೊತೆಗೆ ಪ್ರವಾಹ ಪರಿಸ್ಥಿತಿ ಎದುರಿಸುವಂತಾಗಿದೆ.

ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಜೋರಾದ ಗಾಳಿಯೊಂದಿಗೆ ಅತಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ವಾರಾಂತ್ಯಕ್ಕೆ ಮಳೆ ಕಡಿಮೆಯಾಗುವ ಮುನ್ಸೂಚನೆಗಳಿವೆ.

 

ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಲಕ್ಷಣಗಳಿವೆ. ಕರಾವಳಿಯಂತೆ ದಕ್ಷಿಣ ಒಳನಾಡಿನಲ್ಲೂ ಬಲವಾದ ಮೇಲ್ಮೈ ಗಾಳಿ ಬೀಸಲಿದೆ. ಜತೆಗೆ ಮೋಡ ಕವಿದ ವಾತಾವರಣವಿದ್ದು, ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೆಲವೆಡೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದೆ. ಹೀಗಾಗಿ ರಾಜ್ಯ ಅತಿವೃಷ್ಟಿ, ಪ್ರವಾಹದ ಸಂಕಷ್ಟಕ್ಕೆ ಸಿಲುಕಿದೆ.

Facebook
Twitter
LinkedIn
WhatsApp
Telegram
Email
Print

Leave a Comment

Your email address will not be published. Required fields are marked *

Translate »
Scroll to Top