ಬೆಂಗಳೂರು ; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಜನ ಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿಗೆ ಶೇ 15 ರಿಂದ ಶೇ 17 ಮತ್ತು ಪರಿಶಿಷ್ಟ ವರ್ಗಗಳಿಗೆ ಶೇ 3 ರಿಂದ ಶೇ 7.5 ಮೀಸಲಾತಿಯನ್ನು ಜಾರಿಗೊಳಿಸುವ ಕುರಿತು “ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್” ವರದಿಯನ್ನು ಜಾರಿಗೊಳಿಸಲು ಒತ್ತಾಯಿಸಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಶತದಿನ ಸಮೀಪಿಸಿದೆ. ಕಳೆದ 98 ದಿನಗಳಿಂದ ಬೆಂಗಳೂರಿನ ಪ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಯುತ್ತಿದ್ದು, ಗುರುವಾರ 100 ನೇ ದಿನಕ್ಕೆ ಕಾಲಿಡಲಿದೆ. ಬೇಡಿಕೆ ಈಡೇರದಿದ್ದಲ್ಲಿ ಮೀಸಲಾತಿಗಾಗಿ ನಡೆಯುತ್ತಿರುವ ನಮ್ಮ ಹೋರಾಟ ತೀವ್ರಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಎಚ್ಚರಿಕೆ ನೀಡಿದೆ.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಜ್ಯಧ್ಯಕ್ಷ ವೆಂಕಟಸ್ವಾಮಿ, ಪ್ರತಿಭಟನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಪ್ರತಿಯೊಂದು ತಾಲ್ಲೂಕು ಕೇಂದ್ರಗಳಲ್ಲಿ ಹೋರಾಟ ನಡೆಸಿ ತಹಶೀಲ್ದಾರ್ ಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಬೃಹತ್ ಸಮಾವೇಶ ನಡೆಸಿ ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸಲಾಗುವುದು ಎಂದರು.2011 ರ ಜನಗಣತಿಯ ಪ್ರಕಾರ ರಾಜ್ಯದ ಒಟ್ಟಾರೆ ಜನಸಂಖ್ಯೆ 6,10,95,297 ರಷ್ಟಿದ್ದು ಇದರಲ್ಲಿ ಪರಿಶಿಷ್ಟ ಜಾತಿ 1,04,74,992 [17.15] ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ 42,48,987 [ಶೇ 7] ರಷ್ಟಿರುತ್ತದೆ. 1958 ರಲ್ಲಿ ಶೈಕ್ಷಣಿಕ ಸಂಸ್ಥೆಗಳ ಪ್ರವೇಶ ಮತ್ತು ರಾಜ್ಯ ಸರ್ಕಾರದ ನೇಮಕಾತಿಗಳಲ್ಲಿ ತಾತ್ಕಾಲಿಕವಾಗಿ ಪರಿಶಿಷ್ಟ ಜಾತಿಯವರಿಗೆ ಶೇಕಡ 15 ಮತ್ತು ಪರಿಶಿಷ್ಟ ಪಂಗಡದವರಿಗೆ ಶೇಕಡ 3 ರಷ್ಟು ಮತ್ತು ಹಿಂದುಳಿದ ವರ್ಗದವರಿಗೆ ಶೇ 57 ರಷ್ಟು ಮೀಸಲಾತಿಯನ್ನು ನಿಗದಿಪಡಿಸಿ ಆದೇಶಿಸಿತ್ತು. ಹತ್ತು ವರ್ಷಗಳಿಗೆ ಒಮ್ಮೆ ಮೀಸಲಾತಿ ಪರಿಷ್ಕರಣೆಯಾಗಬೇಕು. ಆದರೆ ಇನ್ನೂ ಹಳೆಯ ಮೀಸಲಾತಿ ಪದ್ಧತಿಯಲ್ಲಿದ್ದೇವೆ. ಹೀಗಾಗಿ ನಮ್ಮ ಬೇಡಿಕೆ ಈಡೇರುವ ತನಕ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ವಿಶೇಷವಾಗಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿಗಳಿಗೆ ಅವರ ಪ್ರಾತಿನಿಧ್ಯತೆ ಸಂಬಂಧ ಅನೇಕ ವರ್ಷಗಳಿಂದ ದೊಡ್ಡ ಅನ್ಯಾಯವಾಗುತ್ತಾ ಬಂದಿದೆ. ಪರಿಶಿಷ್ಟ ಪಂಗಡದವರಿಗೆ ಶೈಕ್ಷಣಿಕ ಸಂಸ್ಥೆಗಳ ಪ್ರವೇಶ ಮತ್ತು ರಾಜ್ಯ ಸರ್ಕಾರದ ಸೇವೆಗಳಲ್ಲಿ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗನಗುಣವಾಗಿ ಶೇಖಡ 7.5 ಕ್ಕೆ ಹೆಚ್ಚಿಸಬೇಕೆಂದು ಕಳೆದ ಹಲವಾರು ದಶಕಗಳಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದರೂ ಬೇಡಿಕೆ ಬೇಡಿಕೆಹಯಾಗಿಯೇ ಉಳಿದಿದೆ. ಈ ಸಂಬಂಧವಾಗಿ ಹರಿಹರ ತಾಲ್ಲೂಕ್ ರಾಜನಹಳ್ಳಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಂಡು ನಡೆಸುತ್ತಿರುವ ಹೋರಾಟ ಕೊನೆಗೊಳ್ಳುವುದಿಲ್ಲ ಎಂದು ಹೇಳಿದರು. ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಸಂಚಾಲಕರಾದ ಬಸವರಾಜ ನಾಯಕ, ಚಳುವಳಿ ರಾಜಣ್ಣಹಾಗೂ ಬೆಳ್ಳಿ ಗಂಗಾಧರ್, ದಲಿತ ಮುಖಂಡರುಗಳಾದ ಮಾರಸಂದ್ರ ಮುನಿಯಪ್ಪ, ಡಿಎಸ್ಎಸ್ ಮೂರ್ತಿ, ಮಾಜಿ ಬಿಬಿಎಂಪಿ ಸದಸ್ಯ ನರಸಿಂಹ ನಾಯಕ, ವೀರೇಂದ್ರ ಸಿಂಹ, ರಮೇಶ್ ಆರ್ ಎನ್ ಎನ್, ಬೆಳ್ಳಿ ಗಂಗಾಧರ್, ಸಿ ಆಂಜನಪ್ಪ, ಡಿಎಸ್ಎಸ್ ಬಸವರಾಜ್, ವಾಲ್ಮೀಕಿ ಪರಿಷತ್ ಬಸವರಾಜ್ ನಾಯಕ, ಮುಂತಾದವರು ಭಾಗವಹಿಸಿದ್ದರು.