ಕೊಪ್ಪಳದಲ್ಲಿ ಉಕ್ಕು ಕಾರ್ಖಾನೆ: ಬಲ್ಡೋಟಾ ಕಂಪನಿ ಪರ ನಿಂತ ಸಂಘ-ಸಂಸ್ಥೆಗಳು

- ಪರಿಸರಕ್ಕೆ ಹಾನಿಯಾಗದಂತೆ ಕಾರ್ಖಾನೆ ಸ್ಥಾಪಿಸುವುದಾಗಿ ಬಲ್ಡೋಟಾ ಕಂಪನಿ ಭರವಸೆ - ಉಕ್ಕಿನ ಕಾರ್ಖಾನೆಗೆ ಅನುಕೂಲ ಮಾಡುವಂತೆ ವಿವಿಧ ಸಂಘಟನೆಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Kannada Nadu
ಕೊಪ್ಪಳದಲ್ಲಿ ಉಕ್ಕು ಕಾರ್ಖಾನೆ: ಬಲ್ಡೋಟಾ ಕಂಪನಿ ಪರ ನಿಂತ  ಸಂಘ-ಸಂಸ್ಥೆಗಳು

ಬೆಂಗಳೂರು: ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಕೊಪ್ಪಳದಲ್ಲಿ ಬಲ್ದೋಟಾ ಸಂಸ್ಥೆ ಬಿ.ಎಸ್.ಪಿ.ಎಲ್ ಹೆಸರಿನಲ್ಲಿ ಇಂಟಿಗ್ರೇಟೆಡ್ ಉಕ್ಕಿನ ಕಾರ್ಖಾನೆ ಸ್ಥಾಪಿಸಲು ಮುಂದಾಗಿರುವ ಬೃಹತ್ ಉದ್ಯಮಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಸ್ಥಳೀಯ ಸಂಘ-ಸಂಸ್ಥೆಗಳು ಜಿಲ್ಲಾಡಳಿತವನ್ನು ಒತ್ತಾಯಿಸಿವೆ.

ಕೊಪ್ಪಳದಲ್ಲಿ 54 ಸಾವಿರ ಕೋಟಿ ರೂ. ವೆಚ್ಚದಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಬಲ್ಡೋಟಾ ಸಂಸ್ಥೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಉಕ್ಕು ಕಾರ್ಖಾನೆ ಸ್ಥಾಪಿಸುವ ಬಲ್ಡೋಟಾ ಸಂಸ್ಥೆಯ ನಿರ್ಧಾರಕ್ಕೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಬೆಂಬಲಾಗಿ ನಿಂತಿದ್ದು, ಶೀಘ್ರವೇ ಕಾರ್ಯಾರಂಭ ಮಾಡಲು ಅವಕಾಶ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಿವೆ.

ಬಲ್ಡೋಟಾ ಸ್ಟೀಲ್ ಮತ್ತು ಪವರ್ ಲಿಮಿಟೆಡ್ (BSPL) ಹೆಸರಿನಲ್ಲಿ ಉಕ್ಕು ಕಾರ್ಖಾನೆ ಸ್ಥಾಪಿಸಲಾಗುತ್ತಿದ್ದು, ಇದರಿಂದ ಉಕ್ಕು ಉತ್ಪಾದನೆ ಹೆಚ್ಚುವುದರ ಜತೆಗೆ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಉದ್ಯೋಗ ಅರಸಿಕೊಂಡು ಜಿಲ್ಲೆಯ ಜನರು ಬೇರೆ ನಗರಗಳತ್ತ ವಲಸೆ ಹೋಗುವುದು ತಪ್ಪುತ್ತದೆ. ಆರ್ಥಿಕತೆ ಹೆಚ್ಚಳಕ್ಕೂ ಅನುಕೂಲವಾಗುತ್ತದೆ ಎಂದು ಸಂಘ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.

ಬಲ್ಡೋಟಾ ಸಂಸ್ಥೆ ಉಕ್ಕು ಕಾರ್ಖಾನೆ ಸ್ಥಾಪಿಸುವ ಕುರಿತು ಸರ್ಕಾರದಿಂದ ಒಪ್ಪಂದ ಮಾಡಿಕೊಳ್ಳುತ್ತಿದ್ದಂತೆ ಕೆಲವು ಸ್ಥಳೀಯ ಸಂಸ್ಥೆಗಳು ಮತ್ತು ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಉಕ್ಕು ಕಾರ್ಖಾನೆ ಸ್ಥಾಪಿಸಿದರೆ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಸಿದ್ದರು.

ಇದಕ್ಕೆ ಪ್ರತಿಯಾಗಿ ಇದೀಗ ಶ್ರೀ ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸಮಾಜ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ), ಎಚ್.ಶಿವರಾಮಗೌಡ ನೇತೃತ್ವದ ಕರ್ನಾಕ ರಕ್ಷಣಾ ವೇದಿಕೆ, ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ಸೇನೆ ಮಂತಾದ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಉಕ್ಕಿನ ಕಾರ್ಖಾನೆ ಸ್ಥಾಪಿಸಲು ಅಗತ್ಯ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿವೆ.
ಅಲ್ಲದೆ, ಬಲ್ಡೋಟಾ ಕಂಪನಿಯು ಸ್ಥಾಪಿಸುವ ಉಕ್ಕು ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಶೇ. 80ರಷ್ಟು ಉದ್ಯೋಗಾವಕಾಶ ಕಲ್ಪಿಸಲಾಗುತ್ತದೆ. ಮಹಿಳಾ ಸಬಲೀಕರಣ, ಸಸಿ ನೆಡುವುದು, ಶೌಚಾಲಯ ನಿರ್ಮಾಣ, ಕೌಶಲ್ಯಾಭಿವೃದ್ಧಿ ಮುಂತಾದ ಕಾರ್ಯಕ್ರಮಳನ್ನು ಹಮ್ಮಿಕೊಳ್ಳುತ್ತದೆ. ಸ್ಥಳೀಯರಿಗೆ ವಿದ್ಯಾಭ್ಯಾಸಕ್ಕೂ ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ಹೇಳಿದ್ದಾರೆ.

ಪರಿಸರಕ್ಕೆ ಹಾನಿ ಇಲ್ಲ: ಕಂಪನಿ ಭರವಸೆ
ಈ ಮಧ್ಯೆ, ಬಲ್ಡೋಟಾ ಕಂಪನಿ ಕೂಡ ಪರಿಸರದ ಕುರಿತಾದ ತನ್ನ ಕಾಳಜಿ ವ್ಯಕ್ತಪಡಿಸಿದ್ದು, ಉಕ್ಕು ಕಾರ್ಖಾನೆ ಸ್ಥಾಪಿಸುವ ಮೊದಲು ಪರಿಸರ ಸಂಬಂಧಿ ಎಲ್ಲಾ ನಿಯಮಗಳನ್ನು ಪಾಲಿಸಿ ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿದ ಅನುಮತಿ ಪಡೆಯಲಾಗಿದೆ. ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದೆ

ಜತೆಗೆ, ತಾನು ಇತರೆ ಕಡೆಗಳಲ್ಲಿ ಕಾರ್ಖಾನೆ ಸ್ಥಾಪಿಸಿದ ಸಂದರ್ಭದಲ್ಲಿ ಕೈಗೊಂಡಿರುವ ಸಮಾಜಮಖಿ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದೆ. 70 ವರ್ಷಗಳಿಂದ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಕೇಂದ್ರ ಸರ್ಕಾರದಿಂದ ಸತತವಾಗಿ 6 ವರ್ಷಗಳಿಂದ ಪಂಚತಾರಾ ರೇಟಿಂಗ್‌ ಪ್ರಶಸ್ತಿ ಪಡೆದುಕೊಂಡಿದೆ. ಸುಮಾರು 20 ಲಕ್ಷ ಸಸಿಗಳನ್ನು ನೆಟ್ಟಿರುವುದಲ್ಲದೆ, ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ 20 ಹಳ್ಳಿಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಿದೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣ, ಆರೋಗ್ಯ ಶಿಬಿರಗಳು, ನೈರ್ಮಲ್ಯತೆ ಮತ್ತು ಸ್ತ್ರೀ ಸಬಲೀಕರಣ ಕುರಿತ೦ತೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಹೀಗಾಗಿ ಸ್ಥಳೀಯರಿಗೆ ಯಾವುದೇ ಆತಂಕ ಬೇಡ ಎಂದು ಹೇಳಿದೆ.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";