ಜಿಟಿ ದೇವೇಗೌಡರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ, ವೈ ಎಸ್ ವಿ ದತ್ತಾ ಸಂಚಾಲಕ ಸಂಘಟಿತ ಹೋರಾಟಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರ ತಾಕೀತು
ಬೆಂಗಳೂರು: ಇದೇ ಆಗಸ್ಟ್ 15ರ ನಂತರ ಪಕ್ಷ ಸಂಘಟನೆಗಾಗಿ ಜಾತ್ಯತೀತ ಜನತಾದಳ ಪಕ್ಷದ ಮುಖಂಡರು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ಮುಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ, ಪಕ್ಷ ಸಂಘಟನೆ ಹಾಗೂ ನೂತನ ಕೋರ್ ಕಮಿಟಿ ರಚನೆ ಸೇರಿದಂತೆ ಹಲವು ವಿಷಯಗಳ ಚರ್ಚೆಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಪ್ರಧಾನಮಂತ್ರಿಗಳೂ ಆಗಿರುವ ಹೆಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಯ ಬಗ್ಗೆ ಎದೆಗುಂದದೆ ಪಕ್ಷದ ಸಂಘಟನೆ ಕಡೆ ಹೆಚ್ಚು ಗಮನ ನೀಡಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರು ತಾಕೀತು ಮಾಡಿದ್ದು, ಅವರ ಆದೇಶದಂತೆ ಪಕ್ಷ ಸಂಘಟನೆಗೆ ಬಹಳಷ್ಟು ಒತ್ತು ಕೊಟ್ಟು ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಜಿಟಿ ದೇವೇಗೌಡರ ನೇತೃತ್ವದಲ್ಲಿ ಕೋರ್ ಕಮಿಟಿ:
ಮಾಜಿ ಸಚಿವರಾದ ಜಿಟಿ ದೇವೇಗೌಡರ ಅಧ್ಯಕ್ಷತೆಯಲ್ಲಿ ನೂತನ ಕೋರ್ ಕಮಿಟಿ ರಚನೆಗೆ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಮಾಜಿ ಶಾಸಕರಾದ ವೈ ಎಸ್ ವಿ ದತ್ತಾ ಅವರು ಈ ಕಮಿಟಿಗೆ ಸಂಚಾಲಕರಾಗಿರುತ್ತಾರೆ. ಒಟ್ಟು 20 ಸದಸ್ಯರು ಕಮಿಟಿಯಲ್ಲಿ ಇರುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
15ರ ನಂತರ ಸಂಘಟನೆಗೆ ಪ್ರವಾಸ:
ಪಕ್ಷದ ಸಂಘಟನೆ ಹಾಗೂ ಲೋಕಸಭೆ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಆಗಸ್ಟ್ 15ರ ನಂತರ ರಾಜ್ಯಾಧ್ಯಂತ ಪಕ್ಷದ ಪ್ರಮುಖ ಮುಖಂಡರು ಪ್ರವಾಸ ಮಾಡಲಿದ್ದಾರೆ. ನಾನೂ ಸೇರಿ ಪಕ್ಷದ ಬಹುತೇಕ ಹಿರಿಯ ನಾಯಕರು ಪ್ರವಾಸ ಕೈಗೊಳ್ಳುವರು ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ನಮ್ಮ ಹೋರಾಟ ಸಂಘಟಿರವಾಗಿರಬೇಕು ಹಾಗೂ ವಿಷಯಾಧಾರಿತ ಆಗಿರಬೇಕು. ಜನಪರವಾಗಿ ಇರಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರು ನಿರ್ದೇಶನ ನೀಡಿದ್ದಾರೆ. ಅದರಂತೆ ನಾವು ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಪಕ್ಷದ ವಿವಿಧ ವಿಭಾಗಗಳಿಗೆ ಮುಖ್ಯಸ್ಥರನ್ನು ನೇಮಕ ಮಾಡುವ ಬಗ್ಗೆಯೂ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು ಎಂದು ಅವರು ಹೇಳಿದ್ದಾರೆ. ಸಭೆಯಲ್ಲಿ ಹಿರಿಯ ನಾಯಕರಾದ ಬಂಡೆಪ್ಪ ಕಾಷೆಂಪೂರ್, ಹೆಚ್.ಕೆ.ಕುಮಾರಸ್ವಾಮಿ, à, ಅಲ್ಕೊಡ್ ಹನುಮಂತಪ್ಪ, ಸುರೇಶಗೌಡ, ಅನ್ನದಾನಿ, ನಿಸರ್ಗ ನಾರಾಯಣಸ್ವಾಮಿ, ಕೆ.ಎನ್.ತಿಪ್ಪೇಸ್ವಾಮಿ, ನೆಮಿರಾಜ್ ನಾಯ್ಕ, ವೈಎಸ್ ವಿ ದತ್ತಾ, ಲಿಂಗೇಶ್, ಅಪ್ಪಾಜಿ ಗೌಡ, ವೀರಭದ್ರಯ್ಯ ಹಾಲರವಿ, ಮಾಗಡಿ ಮಂಜುನಾಥ್, ಸೂರಜ್ ನಾಯಕ್ ಸೋನಿ, ತಿಮ್ಮರಾಯಪ್ಪ, ದೊಡ್ಡನಗೌಡ ಪಾಟೀಲ್, ಅಶ್ವಿನ್ ಕುಮಾರ್, ಚೌಡರೆಡ್ಡಿ, ಶ್ರೀಕಂಠೇಗೌಡ ಸೇರಿದಂತೆ ಇನ್ನೂ ಅನೇಕ ನಾಯಕರು ಭಾಗಿಯಾಗಿದ್ದರು.