ಬೆಂಗಳೂರು: ರಾಜ್ಯ ಸರ್ಕಾರ ತುಷ್ಟೀಕರಣದ ರಾಜಕಾರಣದಲ್ಲಿ ನಿರತರಾಗಿದ್ದು, ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ , ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಮಂಗಲ, ದಾವಣಗೆರೆ ಸೇರಿದಂತೆ ರಾಜ್ಯದ ಇನ್ನಿತರ ಭಾಗಗಳಲ್ಲಿ ನಡೆದ ಗಣೇಶೋತ್ಸವ ವಿಸರ್ಜನೆ ಗಲಭೆಗೆ ಸಂಬಂಧಿಸಿದಂತೆ ಒಂದು ಸಮುದಾಯವನ್ನು ಓಲೈಕೆ ಮಾಡುತ್ತಿದೆ. ಇದು ಸರಿಯಲ್ಲ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ನಿರತರಾಗಿದ್ದು, ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ರಾಜ್ಯಪಾಲರ ಜೊತೆ ಸಂಘರ್ಷಕ್ಕೆ ಇಳಿದಿದೆ. ಇದು ಸರಿಯಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರ ಮುಖ್ಯಮಂತ್ರಿಯ ಅಧಿಕಾರಾವಧಿಯಲ್ಲಿ ನಡೆದ ಹಲವು ಘಟನೆಗಳಿಗೆ ಸಂಬಂಧಿಸಿದಂತೆ ಸರ್ಕಾರ ರಾಜಕಾರಣ ಮಾಡುತ್ತಿದೆ. ಇದು ಕೂಡ ಒಳ್ಳೆಯ ಬೆಳವಣಿಗೆಯಲ್ಲ ಎಂದು ತಿಳಿಸಿದರು.
ಒಂದು ದೇಶ- ಒಂದು ಚುನಾವಣೆ ಸೇರಿದಂತೆ ಕೇಂದ್ರ ಸರ್ಕಾರ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಂಡರೂ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ವಿರೋಧ ಮಾಡುವುದೇ ಅವರ ಪ್ರಮುಖ ಕೆಲಸವಾಗಿದೆ ಎಂದರು.
ಈರುಳ್ಳಿ ಬೆಲೆ ನಿಯಂತ್ರಣ ಸಂಬಂಧ 570 ಕಡೆಗಳಲ್ಲಿ ನಿಗಾ ವಹಿಸಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.