ನಾಲ್ಕು ವರ್ಷಗಳ ಬಳಿಕ ಬೀದರ್‌ ನಲ್ಲಿರುವ ಝರಣೀ ನರಸಿಂಹ ಕ್ಷೇತ್ರ ದೇಗುಲಕ್ಕೆ ಭಕ್ತರ ಪ್ರವೇಶ

ಮಬ್ಬು ಕತ್ತಲಿನ ಗುಹೆಯಲ್ಲಿ ಸದಾ ಹರಿಯುವ ನೀರಿನಲ್ಲಿ ನಡೆದು ಹೋಗಿ ದೇವರ ದರ್ಶನ ಪಡೆಯುತ್ತಿರುವ ಭಕ್ತರು

ವರದಿ ಡಾ.ವರ ಪ್ರಸಾದ್ ರಾವ್ ಪಿವಿ
ಕರ್ನಾಟಕದ ಬಿದರ್ ನಲ್ಲಿದೊಂದು ವಿಶೇಷ ದೇವಾಲಯವಾಗಿದೆ. ನೀವು ಬೇಕಾದಷ್ಟು ಗುಹಾದೇವಾಲಯವನ್ನು ನೋಡಿರುವಿರಿ. ಆದರೆ ಗುಹೆಯೊಳಗೆ ನೀರಿನ ಕಣಿವೆಯಲ್ಲಿ ನಡೆದುಕೊಂಡು ಹೋಗುವಂತಹ ಕ್ಷೇತ್ರಕ್ಕೆ ಯಾವತ್ತಾದರೂ ಹೋಗಿದ್ದೀರಾ? ಈ ಬಗ್ಗೆ ಗೊತ್ತಾ? ನಾವಿಂದು ಅಂತಹದ್ದೇ ಒಂದು ದೇವಾಲಯವದ ಬಗ್ಗೆ ಪರಿಚಯಿಸಲಿದ್ದೇವೆ. ಇಂತಹದ್ದೊಂದು ದೇವಾಲಯವನ್ನು ನೀವು ಬೇರೆಲ್ಲೂ ನೋಡಿರಲಿಕ್ಕಿಲ್ಲ ಅನ್ನಿಸುತ್ತದೆ.
ದೇವಾಲಯಗಳ ಬೀಡಾದ ಕರ್ನಾಟಕ ರಾಜ್ಯದಲ್ಲಿ ಹಲವು ದೇವಾಲಯಗಳಿವೆ, ಪ್ರತಿಯೊಂದು ದೇವಾಲಯವು ತನ್ನದೇ ಆದ ಐತಿಹಾಸಿಕ ಹಿನ್ನೆಲೆ, ಪೌರಾಣಿಕ ಹಿನ್ನೆಲೆ, ವಿಶೇಷತೆಯನ್ನು ಹೊಂದಿದೆ.ದಕ್ಷಿಣ ಭಾರತದ ಸುಪ್ರಸಿದ್ಧ ಹಾಗೂ ಪೌರಾಣಿಕ ನರಸಿಂಹ ಝರಣಾ ಧಾರ್ಮಿಕ ಅಪರೂಪದ ಯಾತ್ರಾಸ್ಥಳ ಜತೆಗೆ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಭಕ್ತರ ಆರಾಧ್ಯ ಕ್ಷೇತ್ರವಾಗಿದೆ.ಇದೊಂದು ಗುಹಾಂತರ ದೇವಾಲಯವಾಗಿದೆ. ಬಹಳಷ್ಟು ನರಸಿಂಹಸ್ವಾಮಿ ದೇವಾಲಯವಿದ್ದರೂ ಈ ದೇವಾಲಯ ವಿಶೇಷತೆಯಿಂದ ಹೆಸರುವಾಸಿಯಾಗಿದೆ. ಈ ದೇವಸ್ಥಾನಕ್ಕೆ ಬೇರೆ ರಾಜ್ಯ, ದೇಶ, ವಿದೇಶಗಳಿಂದ ಭಕ್ತರು ಬರುತ್ತಾರೆ. 400 ವರ್ಷಕ್ಕಿಂತಲೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಾಲಯದಲ್ಲಿ ಮಹಾವಿಷ್ಣುವಿನ ಅವತಾರವಾದ ಉಗ್ರನರಸಿಂಹನು ನೆಲೆಸಿದ್ದಾನೆ.
ಈ ಕ್ಷೇತ್ರದ ಪೌರಾಣಿಕ ಕಥೆ:
ನರಸಿಂಹ ವಿಷ್ಣುವಿನ ದಶಾವತಾರಗಳಲ್ಲಿ ನರಸಿಂಹಾವತಾರವೂ ಒಂದು. ತ್ರೇತಾಯುಗದಲ್ಲಿ ಮಣಿಮಂದಾಸುರ ಮತ್ತು ಝಾರಾಸುರ ಎಂಬ ಇಬ್ಬರು ರಾಕ್ಷಸರು ಈ ಕ್ಷೇತ್ರಕ್ಕೆ ಬರುತ್ತಾರೆ. ಆ ಸಮಯದಲ್ಲಿ ಒಂದೆಡೆ ಹಿರಣ್ಯ ಕಶ್ಯಪುವಿನ ಸಂಹಾರದ ನಂತರ ನರಸಿಂಹ ಸ್ವಾಮಿ ಈ ಇಬ್ಬರು ರಾಕ್ಷಸರನ್ನು ಸಂಹರಿಸಲು ಬರುತ್ತಾನೆ. ಆಗ ಇವರಲ್ಲಿ ಝಾರಾಸುರ ಎಂಬ ರಾಕ್ಷಸ ಈ ಕ್ಷೇತ್ರದಲ್ಲಿ ಇರುವಂಥ ಒಂದು ಗುಹೆಯಲ್ಲಿ ಶಿವನನ್ನು ಪ್ರತಿಷ್ಠಾಪಿಸಿ ಪೂಜೆ ಮತ್ತು ತಪ್ಪಸ್ಸನ್ನು ಮಾಡುತ್ತಿರುತ್ತಾನೆ.
ಯುದ್ಧದ ಬಳಿಕ ಜಲಾಸುರನು ಸೋಲನ್ನೋಪ್ಪಿ, ಸಾವನ್ನೋಪ್ಪುವಾಗ ನರಸಿಂಹನ ಕಾಲು ಹಿಡಿದು ಇಲ್ಲಿಯೇ ವಾಸಮಾಡಿ ಬಂದ ಭಕ್ತರಿಗೆ ಆಶಿರ್ವಾದ ಮಾಡುವಂತೆ ವರ ಕೇಳಿ ಕೊಳ್ಳುತ್ತಾ ನರಸಿಂಹನ ಪಾದದಿಂದ ನೀರಾಗಿ ಹರಿಯಲು ಶುರುಮಾಡುತ್ತಾನೆ. ಅವನಿಗೆ ಕೊಟ್ಟ ಮಾತಿನಂತೆ ದೇವರು ಗುಹೆಯೊಳಗೆ ಐಕ್ಯವಾದರೆಂದು ಪ್ರತೀತಿ. ನರಸಿಂಹನ ಪಾದದಿಂದ ನೀರು ಸತತವಾಗಿ ಸುರಿಯುವುದರಿಂದಲೇ ಇ ಸ್ಥಳಕ್ಕೆ “ನರಸಿಂಹ ಝೀರ” ಎಂದು ಹೆಸರಿಡಲಾಗಿದೆ.

ಕಳೆದ ನಾಲ್ಕು ವರ್ಷಗಳ ಬಳಿಕ ಭಕ್ತರಿಗೆ ತೆರೆದುಕೊಂಡಿದೆ.ಮೊದಲು ಆಕ್ಸಿಜನ್ ಹಾಗೂ ನೀರಿನ ಸಮಸ್ಯೆಯಿಂದ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಇರಲಿಲ್ಲ. ಜೊತೆಗೆ ಕೊರೊನಾ ಕೂಡ ಒಂದು ಕಾರಣವಾಗಿತ್ತು. ಹಾಗಾಗಿ, ನಾಲ್ಕು ವರ್ಷಗಳಿಂದ ಗುಹಾ ದೇವಾಲಯದಲ್ಲಿರುವ ಉಗ್ರ ನರಸಿಂಹ ಸ್ವಾಮಿಯ ದರ್ಶನ ಭಾಗ್ಯವೇ ಭಕ್ತರಿಗಿರಲಿಲ್ಲ.

ವಿಶೇಷ ಅನುಭವ

ಈ ದೇವಸ್ಥಾನದ ಇನ್ನೊಂದು ವೈಶಿಷ್ಠ್ಯ. ಝರಣಿ ಎಂದರೆ ನೀರಿನ ಸೆಲೆ ಎಂದರ್ಥ. ಗುಹೆಯ ಒಳಗಡೆ ನೀರಿನ ಸೆಲೆಯೊಂದಿಗೆ ನಡೆದು ದೇವರ ದರ್ಶನ ಮಾಡಬೇಕಾದುದರಿಂದಲೇ ಗುಡಿಗೆ ಝರಣಿ ನರಸಿಂಹ ದೇವಾಲಯ ಎಂಬ ಹೆಸರು ಬಂದಿದೆ
ನರಸಿಂಹ ಝರಣಿ ಗುಹಾ ದೇವಾಲಯ ಮಬ್ಬು ಕತ್ತಲಿನ ಗುಹೆಯಲ್ಲಿ ಸದಾ ಹರಿಯುವ ನೀರಿನಲ್ಲಿ ಸುಮಾರು 500 ಅಡಿಗಳಷ್ಟು ದೂರ ನಡೆದು ಹೋಗಿ ದೇವರ ದರ್ಶನ ಮಾಡಬೇಕು. ಎದೆಮಟ್ಟದ ಉಗುರು ಬೆಚ್ಚಗಿನ ನೀರಲ್ಲಿ ನಡೆದು ಸಾಗುವುದು ಒಂದು ವಿಶಿಷ್ಟ ಅನುಭವ.

ಗುಹೆಯ ಮಬ್ಬುಗತ್ತಲಿನಲ್ಲಿ ನೀರಿನಲ್ಲಿ ನಡೆದು ಹೋಗಲು ಮಾನಸಿಕ ಸಿದ್ಧತೆ ಇದ್ದರೆ ದರ್ಶನ ಸುಲಭ. ಗುಹೆಯೊಳಗಿನ ನೀರು ಯಾವುದೇ ಸಂದರ್ಭದಲ್ಲೂ ಎದೆಮಟ್ಟ ಮೀರುವುದಿಲ್ಲ. ಈ ನೀರಲ್ಲಿ ಎಷ್ಟು ಸಲ ಓಡಾಡಿದರೂ ಶೀತ ಆಗುವುದಿಲ್ಲ! ಈ ನೀರಿನಲ್ಲಿ ಗಂಧಕ (ಸಲ್ಫರ್)ದ ಅಂಶವಿದೆ. ನೀರು ಚಳಿಗಾಲದಲ್ಲೂ ಬೆಚ್ಚಗಿನ ಅನುಭವ ನೀಡುತ್ತದೆ. ಈ ನೀರಿನಲ್ಲಿ ನೆನೆದರೆ ಚರ್ಮದ ರೋಗಗಳು ನಿವಾರಣೆ ಆಗುತ್ತವೆ ಎಂಬ ನಂಬಿಕೆ ಇದೆ.
ಝರಣಿ ನರಸಿಂಹ ಸ್ವಾಮಿ ಮಂದಿರ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿದ್ದು, ಶ್ರೀ ನರಸಿಂಹ ಸ್ವಾಮಿಯ ದರ್ಶನ ಪಡೆಯಲು ಗುಹೆ ಒಳಗಡೆ ನಡೆದುಕೊಂಡು ಹೋಗುವ ಮುನ್ನ ಪಂಚೆ (ಲುಂಗಿ), ಟವೆಲ್, ಮಹಿಳೆಯರು ಪ್ರತ್ಯೇಕ ಸೀರೆ ತರಬೇಕು. ಕೌಂಟರ್ ನಲ್ಲಿ ಟಿಕೆಟ್ ಪಡೆದು ಗುಹೆಯ ಮುಂಭಾಗದಲ್ಲಿ ಸರತಿಯಲ್ಲಿ ನಿಂತು ಶ್ರೀ ನರಸಿಂಹ ಸ್ವಾಮಿ ದೇವರತ್ತ ಸಾಗಬೇಕು. ಇದಕ್ಕೂ ಮುನ್ನ ಗುಹೆಯಿಂದ ಹರಿದು ಗೋಮುಖದ ಮೂಲಕ ನೀರಿನಲ್ಲಿ ಸ್ನಾನ ಮಾಡಬೇಕು. ಅನಾರೋಗ್ಯ, ಇಳಿ ವಯಸ್ಸು ಮತ್ತಿತರೆ ಕಾರಣಗಳಿಂದಾಗಿ ಗುಹೆ ಒಳಗಡೆ ನಡೆದು ಹೋಗಲು ಆಗದವರಿಗೆ ಮಂದಿರದ ಮುಂಭಾಗದಲ್ಲಿಯೇ ಶ್ರೀ ನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿ ಮಂಗಳಾರತಿ ಸಮರ್ಪಿಸುವ ವ್ಯವಸ್ಥೆ ಮಾಡಲಾಗಿದೆ.

ನರಸಿಂಹ ಜಯಂತಿಯಂದು ಇಲ್ಲಿ ವಿಶೇಷ ಪೂಜೆ, ಹೋಮ-ಹವನಗಳು ನಡೆಯುತ್ತವೆ. ಅದನ್ನು ಬಿಟ್ಟರೆ ಇಲ್ಲಿ ವರ್ಷದಲ್ಲಿ ವಿಶೇಷ ಆಚರಣೆಗಳಿಲ್ಲ. ಹರಕೆ ಹೊತ್ತವರು ಸಾಮಾನ್ಯವಾಗಿ ಮಂಗಳವಾರ ಮತ್ತು ಶನಿವಾರ ಇಲ್ಲಿಗೆ ಬರುತ್ತಾರೆ. ದೇವಸ್ಥಾನದ ಮುಂಭಾಗದಲ್ಲಿ ನೈವೇದ್ಯಕ್ಕಾಗಿ ಅಡುಗೆ ಮಾಡಲು ಬೇಕಾದ ಸೌದೆ ಮತ್ತಿತರ ವಸ್ತುಗಳು ದೊರೆಯುತ್ತವೆ. ಎರಡು ಕಣಿವೆಗಳ ನಡುವೆ ಇರುವ ಪ್ರದೇಶದಲ್ಲಿ ಕಟ್ಟಿಗೆಯ ಒಲೆ ಹೂಡಿ ಎಣ್ಣೆ ಹೋಳಿಗೆ, ಅನ್ನ ನೈವೇದ್ಯ ಮಾಡಿ ಅರ್ಪಿಸುತ್ತಾರೆ.

ತಲುಪುವ ಮಾರ್ಗಗಳು


ಬೆಂಗಳೂರಿನಿಂದ ಬರಲು ರೈಲು ಸೌಕರ್ಯವಿದೆ. ಬೆಂಗಳೂರು-ನಾಂದೇಡ್ ಎಕ್ಸ್‍ಪ್ರೆಸ್ ಟ್ರೇನ್ ಬೀದರ್ ಮೂಲಕ ತನ್ನ ಗಮ್ಯ ಸೇರುತ್ತದೆ. ಇದಲ್ಲದೆ ಯಶವಂತಪುರ-ಬೀದರ್ ಎಕ್ಸ್‍ಪ್ರೆಸ್ ಟ್ರೇನ್ ಉಂಟು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಐರಾವತ, ಕರೋನಾ ಮತ್ತು ಸುಹಾಸ್ ಮಾದರಿಯ ಬಸ್ಸುಗಳು ಬೆಂಗಳೂರು-ಬೀದರ್ ಸಂಚರಿಸುತ್ತವೆ. ಈ ಮಂದಿರ ಹೈದರಾಬಾದ್ ಹಾಗೂ ಕಲಬುರಗಿಯಿಂದ ಕ್ರಮವಾಗಿ 120 ಕಿಮಿ ಮತ್ತು 100 ಕಿಮಿಗಳ ಅಂತರದಲ್ಲಿದೆ.
ಭಕ್ತರ ಹರಿಕೆ
ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ- ಮಹಾರಾಷ್ಟ್ರಗಳಿಂದ ನವ ವಧುವರರು ನರಸಿಂಹ ಝರಣಿಗೆ ಬಂದು ಪೂಜಿಸುವ ಸಂಪ್ರದಾಯವಿದೆ. ಮಕ್ಕಳಾಗದ ದಂಪತಿ ಸಂತಾನ ಪ್ರಾಪ್ತಿಗಾಗಿ ನರಸಿಂಹ ದೇವರಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ

Leave a Comment

Your email address will not be published. Required fields are marked *

Translate »
Scroll to Top