ನಾಡೋಜ ಚನ್ನವೀರ ಕಣವಿ ನಿಧನಕ್ಕೆ ಸ್ಪೀಕರ್ ಸಂತಾಪ

ಬೆಂಗಳೂರು, ಫೆ.16: ಖ್ಯಾತ ಸಾಹಿತಿ, ಕವಿ, ಚಿಂತಕ, ಬೋಧಕ ಶ್ರೀ ಚನ್ನವೀರ ಕಣವಿ ಅವರ ನಿಧನಕ್ಕೆ ವಿಧಾನಸಭೆಯ ಸ್ಪೀಕರ್ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಕಂಬನಿ ಮಿಡಿದಿದ್ದಾರೆ. ಹೊಸಗನ್ನಡ ಕಾವ್ಯ ಪರಂಪರೆಯ 2ನೇ ತಲೆಮಾರಿನ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಹಿರಿಯ ಕವಿ ಚನ್ನವೀರ ಕಣವಿಯವರ ನಿಧನದಿಂದ ಸಾಹಿತ್ಯಲೋಕದ ಮತ್ತೊಂದು ಕೊಂಡಿ ಕಳಚಿದ್ದು, ಈ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶ್ರೀ ಕಾಗೇರಿ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.


ಪ್ರಥಮತಃ ಶಿಕ್ಷಕರಾಗಿ, ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಕಣವಿ ಅವರು ತಮ್ಮ ಪ್ರತಿಮಾನಿಷ್ಠ ಕವಿತೆಗಳ ಮೂಲಕ ಜನತೆಯ ಕವಿಯಾಗಿ ಗುರುತಿಸಿಕೊಂಡಿದ್ದರು. ಸರಳ, ಸಜ್ಜನಿಕೆಗೆ ಹೆಸರಾಗಿದ್ದ ಕಣವಿ ಅವರ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯ ಗೌರವ ಲಭಿಸಿತ್ತು. ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಗೌರವಕ್ಕೆ ಪಾತ್ರರಾಗಿ, ಚೆಂಬಳಕಿನ ಕವಿ ಎಂದೇ ಖ್ಯಾತರಾಗಿದ್ದ ಕಣವಿ ಅವರು ತುಂಬು ಜೀವನ ನಡೆಸಿದ್ದರು. ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ.ಶಾಂತಿ.,

Leave a Comment

Your email address will not be published. Required fields are marked *

Translate »
Scroll to Top