ನೆಲಮಂಗಲ: ಚಿಕ್ಕಬಳ್ಳಾಪುರದ ಲೋಕಸಭಾ ಕ್ಷೇತ್ರದ ನೆಲಮಂಗಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಬಿರುಬಿಸಿಲಿನಲ್ಲಿ ಅಬ್ಬರದ ಪ್ರಚಾರ ನಡೆಸಿದರು.
ನೆಲಮಂಗಲ ಕ್ಷೇತ್ರದ ಶಾಸಕ ಎನ್. ಶ್ರೀನಿವಾಸ್, ಬೆಮೆಲ್ ಕಾಂತರಾಜ್ ಅವರ ಸಾರಥ್ಯದಲ್ಲಿ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು ಮತ್ತು ಜನಪ್ರತಿನಿಧಿಗಳ ಜೊತೆ ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ನಡೆಸಿ ಮತಯಾಚಿಸಿದರು. ಮಾರುಕಟ್ಟೆ, ಅಂಗಡಿ ಮುಂಗಟ್ಟು ಮತ್ತಿತರೆ ಪ್ರದೇಶಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿದರು.
ಪ್ರತಿಯೊಂದು ಗ್ರಾಮದಲ್ಲೂ ರಕ್ಷಾ ರಾಮಯ್ಯ ಅವರನ್ನು ಜನತೆ ಪ್ರೀತಿಯಿಂದ ಸ್ವಾಗತಿಸಿದರು. ಮಹಿಳೆಯರು, ಹಿರಿಯ ನಾಗರಿಕರು ಸಹ ರಕ್ಷಾ ರಾಮಯ್ಯ ಅವರ ಜೊತೆ ಹೆಜ್ಜೆ ಹಾಕಿದರು.
ಬಹುತೇಕ ಗ್ರಾಮಗಳಲ್ಲಿ ಬಿಜೆಪಿ – ಜೆಡಿಎಸ್ ತೊರೆದು ನೂರಾರು ಮಂದಿ ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಮುಖಂಡರು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ರಕ್ಷಾ ರಾಮಯ್ಯ ಮತ್ತು ಶಾಸಕರಾದ ಎನ್. ಶ್ರೀನಿವಾಸ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಅನ್ಯ ಪಕ್ಷಗಳ ಮುಖಂಡರು ಸಾಮೂಹಿಕವಾಗಿ ಕಾಂಗ್ರೆಸ್ ಗೆ ಸೇರಿ ಜೈಕಾರ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಾ ರಾಮಯ್ಯ, ಬಾರಿ ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ನನಗೆ ಶಕ್ತಿ ತುಂಬಬೇಕು. ಯುವ ಶಕ್ತಿ ದೇಶದ ಶಕ್ತಿಯಾಗಿದ್ದು, ಯುವ ಸಮೂಹ ಕಾಂಗ್ರೆಸ್ ಶಕ್ತಿಯಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಲ್ಲಿ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ದೊರೆಯಲಿದೆ ಎಂದರು.
ನಮ್ಮದು ಬಡವರ ಪಕ್ಷವಾಗಿದ್ದು, ಬಡವರ ಶ್ರೇಯೋಭಿವೃದ್ಧಿಗಾಗಿ ನಾವು ಕೆಲಸ ಮಾಡಲಿದ್ದೇವೆ. ದೇಶದಲ್ಲಿ ಶೇ 75 ರಷ್ಟು ಯುವ ಜನಾಂಗ ಮತ್ತು ಮಹಿಳೆಯರಿದ್ದು, ಇವರೇ ನಮ್ಮ ಪಕ್ಷದ ಶಕ್ತಿಯಾಗಿದ್ದಾರೆ. ವಿಶೇಷವಾಗಿ ಯುವ ಜನಾಂಗದ ಸರ್ವಾಂಗೀಣ ಪ್ರಗತಿಗಾಗಿ ನಾವು ಟೊಂಕಕಟ್ಟಿ ನಿಲ್ಲುತ್ತೇವೆ. ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪಕ್ಷ ನನ್ನ ಮೇಲೆ ನಂಬಿಕೆ ಇರಿಸಿ ಟಿಕೆಟ್ ನೀಡಿದ್ದು, ನನ್ನನ್ನು ಗೆಲ್ಲಿಸಿದರೆ ನಾನು ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದರು.
ನಮ್ಮ ನೆಲಮಂಗಲ ಕ್ಷೇತ್ರದ ಶಾಸಕರಾದ ಎನ್. ಶ್ರೀನಿವಾಸ್ ಅವರು ಅತಿ ಹೆಚ್ಚು ಅನುದಾನ ತಂದಿದ್ದು, ನಮ್ಮ ಚಿಕ್ಕಬಳ್ಳಾಪುರ ಕ್ಷೇತ್ರದ ಜನಪ್ರತಿಯ ಶಾಸಕರಾಗಿದ್ದಾರೆ. ನಾನು ಕೂಡ ಶಾಸಕರೊಂದಿಗೆ ಕೈಜೋಡಿಸಿ ಕ್ಷೇತ್ರದ ಅಭಿವೃದ್ಧಿಗೆ ಸಾಧ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಸಂವಿಧಾನವೇ ನಮ್ಮ ಶಕ್ತಿಯಾಗಿದ್ದು, ಇಂತಹ ಪವಿತ್ರ ಗ್ರಂಥವಾದ ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಬೆಂಬಲಿಸಬೇಕು. ಬಿಜೆಪಿ ಆಡಳಿತದಲ್ಲಿ ಜನರಿಗೆ ಬೆಲೆ ಏರಿಕೆ ಬರೆ ಬಿದ್ದಿದ್ದು, ಕಾಂಗ್ರೆಸ್ ಪಕ್ಷ ಜನರ ಕಷ್ಟಗಳನ್ನು ದೂರ ಮಾಡಲಿದೆ ಎಂದರು.