ನಂಜುಂಡಪ್ಪ.ವಿ.
ಬೆಂಗಳೂರು : ಡಿ.ಅರ್. ವಿಜಯ ಸಾರಥಿ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಹಿರೇಕಟ್ಟಿಗೇನ ಹಳ್ಳಿಯವರು. ಶಿಕ್ಷಣ ತಜ್ಞ, ಸಮಾಜ ಸೇವಕ ಮತ್ತು ಪರೋಪಕಾರಿ ವಲಯದಲ್ಲಿ ಗುರುತಿಸಿಕೊಂಡವರು.
ಶಾಲಾ ಶಿಕ್ಷಣವನ್ನು ತಮ್ಮ ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಿ ಪಡೆದು, ಕಾಲೇಜು ಶಿಕ್ಷಣವನ್ನು ಕೆ.ಜಿ.ಎಫ್ ನಲ್ಲಿ ಪೂರ್ಣಗೊಳಿಸಿದರು. ಹಿರೇಕಟ್ಟಿಗೇನ ಹಳ್ಳಿಯಿಂದ ಸಣ್ಣ ಝರಿಯಂತೆ ಆರಂಭವಾದ ಅವರ ಸಾಹಸದ ಬದುಕು ನಂತರ ತೊರೆ ತೊರೆಯಾಗಿ ಹರಿದು ಕೆರೆ, ಸರೋವರ, ನದಿಗಳಂತೆ ಘನ, ಗಾಂಭೀರ್ಯದಿಂದ ಸಾಗಿತು. ಶಿಕ್ಷಣ ತಜ್ಞರಾಗಿ, ಕೈಗಾರಿಕೋದ್ಯಮಿಯಾಗಿ, ಹೋಟೆಲ್ ಉದ್ಯಮಿ, ಬ್ಯಾಂಕರ್ ಹೀಗೆ ಹತ್ತು ಹಲವು ಮಜಲುಗಳನ್ನು ದಾಟಿ ಬಂದರು. ತನ್ಮೂಲಕ ತನ್ನ ಬದುಕಿನ ಹೆಜ್ಜೆ ಗುರುತಲ್ಲ, ಹೆಗ್ಗುರುತುಗಳನ್ನೇ ಅವರು ಮೂಡಿಸಿದ್ದಾರೆ. ಸಮರ್ಪಣಾಭಾವ, ಸಮಯಪ್ರಜ್ಞೆ, ಬದ್ಧತೆ, ಕಠಿಣ ಪರಿಶ್ರಮದಿಂದ ವಿಶ್ವಾಸದ ಹೆಜ್ಜೆ ಇಟ್ಟ ಸಾಧಕರಿವರು. ಡಿ.ಆರ್. ವಿಜಯ ಸಾರಥಿ ಅವರ ಹಾದಿ ಅಷ್ಟೇನು ಸುಗಮವಾಗಿರಲಿಲ್ಲ. ಕಲ್ಲು. ಮುಳ್ಳುಗಳನ್ನು ಮೆಟ್ಟಿ, ಒಂದೊಂದೇ ಹೆಜ್ಜೆ ಇಟ್ಟು ಯಶಸ್ಸಿನತ್ತ ಮುನ್ನಡೆದಿದ್ದಾರೆ.
ಹಿರೇಕಟ್ಟಿಗೇನ ಹಳ್ಳಿಯಲ್ಲಿ ಅಧ್ಯಯನ ಮಾಡುತ್ತಿರುವಾಗಲೇ ಡಿ.ಆರ್. ವಿಜಯ ಸಾರಥಿ ಅವರಿಗೆ ಶಿಕ್ಷಣದ ಮಹತ್ವದ ಅರಿವಾಯಿತು. ಸ್ಥಳೀಯ ಶಾಲೆಯಲ್ಲಿ ಶಿಕ್ಷಕರ ಕೊರತೆ ಮತ್ತು ಗುಣಮಟ್ಟದ ಶಿಕ್ಷಣದ ನ್ಯೂನತೆಗಳನ್ನು ಮನಗಂಡರು. ಅವರ ಸಹೋದರ ಡಿ.ಆರ್. ರಾಜಾರಾಂ ಶಿಕ್ಷಕರಾಗಿ ಕೆಲಸ ಮಾಡಿದವರು. ನಂತರ ಅವರು ಶಿಕ್ಷಣ ಅಧಿಕಾರಿಯಾಗಿ ಬಡ್ತಿ ಪಡೆದರು. ಹೀಗಾಗಿ ಕಾಲೇಜು ಶಿಕ್ಷಣದ ನಂತರ ಡಿ.ಆರ್. ವಿಜಯ ಸಾರಥಿ ಅವರು ಬೆಂಗಳೂರಿಗೆ ಬಂದು ಅಣ್ಣನ ಜೊತೆಗೂಡಿದರು. ಸಹೋದರನ ಶಿಸ್ತು, ಪ್ರಾಮಾಣಿಕತೆ, ಬದ್ಧತೆಯ ಗುಣಗಳನ್ನು ಅವರು ಮೈಗೂಡಿಸಿಕೊಂಡರು. “ನನ್ನ ಪ್ರತಿಯೊಂದು ಯಶಸ್ಸಿಗೆ ಸಹೋದರ ಡಿ.ಆರ್. ರಾಜಾರಾಂ ಅವರೇ ಕಾರಣ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಡಿ.ಆರ್. ವಿಜಯ ಸಾರಥಿ.
ಮೊತ್ತ ಮೊದಲಿಗೆ ಡಿ.ಆರ್. ವಿಜಯ ಸಾರಥಿ ಶಿಕ್ಷಕ ವೃತ್ತಿ ಆರಂಭಿಸಿದರು. ನಂತರ 1992 ರಲ್ಲಿ ಮೊದಲ ಬಾರಿಗೆ ಎಸ್.ವಿ. ಪ್ಯಾಕೇಜಿಂಗ್ ಪ್ರವೈಟ್ ಲಿಮಿಟೆಡ್ ಪಾಲುದಾರರಾಗಿ ಉದ್ಯಮದ ಬದುಕಿಗೆ ಕಾಲಿಟ್ಟರು. ತರುವಾಯ ಎಸ್.ವಿ. ಪ್ಯಾಕೇಜಿಂಗ್ ಸಂಸ್ಥೆಯ ಸಂಪೂರ್ಣ ಮಾಲೀಕತ್ವ ಪಡೆದುಕೊಂಡರು. ಆತಿಥ್ಯ ವಲಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರು, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಿರತರಾಗಿ ಎರಡು ಬಡಾವಣೆಗಳನ್ನು ಅಭಿವೃದ್ಧಿಪಡಿಸಿದರು. ಇದರಿಂದ ಸ್ವಲ್ಪ ಮಟ್ಟಿನ ಆದಾಯ ಪಡೆದುಕೊಂಡಿದ್ದಾಗಿ ವಿಜಯ ಸಾರಥಿ ಹೇಳುತ್ತಾರೆ.
ನಂತರ 2003 ರಲ್ಲಿ ವಿಜಯ ಸಾರಥಿ ಅವರು ತಮಗೆ ಪ್ರಿಯವಾದ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ಅರ್ಪಿಸಿಕೊಂಡರು. ಮೊದಲಿಗೆ 45 ವಿದ್ಯಾರ್ಥಿಗಳಿಗಾಗಿ ಶಾಲೆ ತೆರೆದ ಅವರು, 14 ಶಿಕ್ಷಕರ ಬೃಹತ್ ತಂಡವನ್ನೇ ನೇಮಿಸಿಕೊಂಡರು. ಇದೀಗ ವಾಸವಿ ಜ್ಞಾನಪೀಠ ಶಿಕ್ಷಣ ಸಂಸ್ಥೆಯಲ್ಲಿ 3,000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಶಿಕ್ಷಕರ ಸಂಖ್ಯೆ 84 ಕ್ಕೆ ಏರಿಕೆಯಾಗಿದೆ. ಅನುಕೂಲಕರ ವಾತಾವರಣ, ಕ್ರಿಯಾಶೀಲ ಮನೋಭಾವ, ಉತ್ತಮ ಮಾರ್ಗದರ್ಶನ ಹಾಗೂ ಗುಣಮಟ್ಟದ ಶಿಕ್ಷಣದ ಕಾರಣಕ್ಕಾಗಿ ಶಿಕ್ಷಣ ಸಂಸ್ಥೆ ಉತ್ತಮ ಫಲಿತಾಂಶಕ್ಕೆ ಕಾರಣವಾಯಿತು. “ನಾವು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಅವರ ಪೋಷಕರಿಗೂ ಕೂಡ ತಮ್ಮ ಮಕ್ಕಳ ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಅಭಿನಂದನಾ ಸಮಾರಂಭ ಆಯೋಜಿಸುತ್ತೇವೆ. ಬಿಸಿಎ ಮತ್ತು ಬಿಬಿಎಯಲ್ಲಿ ವಿದ್ಯಾರ್ಥಿಗಳ ತೇರ್ಗಡೆ ಶೇಕಡಾ 100 ರಷ್ಟಿದೆ. ವಿದ್ಯಾರ್ಥಿಗಳ ಕಲಿಕೆ, ಮಾರ್ಗದರ್ಶನ ನೀಡುತ್ತಾ ಸಹಾಯ ಮಾಡುತ್ತಿರುವ ಶಿಕ್ಷಕರನ್ನು ಪ್ರಶಂಸಿಸಲು ಬಯಸುತ್ತೇನೆ. ಇದೀಗ ಶೈಕ್ಷಣಿಕ ವಲಯದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದು, ಎಂ.ಬಿ.ಎ ಕೋರ್ಸ್ ಆರಂಭಿಸಲು ಶಿಕ್ಷಣ ಇಲಾಖೆಯ ಅನುಮತಿ ನಿರೀಕ್ಷೆಯಲ್ಲಿದ್ದೇವೆ” ಎನ್ನುತ್ತಾರೆ.
ಪರೀಕ್ಷೆಗಳಲ್ಲಿ ಉತ್ತಮ ಶ್ರೇಯಾಂಕ, ತೇರ್ಗಡೆ ಪ್ರಮಾಣ ಹೆಚ್ಚಳಕ್ಕೆ ಶಿಕ್ಷಕರೇ ಕಾರಣ. ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲು, ಸೂಕ್ತ ಮಾರ್ಗದರ್ಶನ ಮಾಡಲು, ರಚನಾತ್ಮಕವಾಗಿ ಮಕ್ಕಳನ್ನು ತಿದ್ದಿ ತೀಡಲು ಶಿಕ್ಷಕರು ಸದಾ ಸಿದ್ಧರಿರುತ್ತಾರೆ. “ಶಿಕ್ಷಕರ ವಿಶೇಷತೆ ಎಂದರೆ ಅದು ಸಮರ್ಪಣಾ ಭಾವ ಮತ್ತು ಬದ್ಧತೆಯಾಗಿದೆ. ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳ ಶಾಲಾ ಶುಲ್ಕ ಪಾವತಿ, ಪುಸ್ತಕ ಖರೀದಿ, ಸಮವಸ್ತ್ರಕ್ಕಾಗಿ ಶಿಕ್ಷಕರೇ ಧನ ಸಹಾಯ ಮಾಡುವಷ್ಟು ಕಳಕಳಿಯನ್ನು ಮೈಗೂಡಿಸಿಕೊಂಡಿದ್ದಾರೆ ನಮ್ಮ ಶಿಕ್ಷಕರು. ಇಂತಹ ಉದಾತ್ತ ಮನೋಭಾವದ ಶಿಕ್ಷಕರನ್ನು ನಾವು ಗುರುತಿಸಿ ಗೌರವಿಸುತ್ತೇವೆ. ಆದರೆ ಶೈಕ್ಷಣಿಕ ಉದ್ದೇಶಕ್ಕೆ ವ್ಯತಿರಿಕ್ತವಾಗಿರುವ ಶಿಕ್ಷಕರನ್ನು ನಾವು ಸಹಿಸುವುದಿಲ್ಲ. ಕೆಲವು ಶಿಕ್ಷಕರು ನನ್ನ ವಿರುದ್ಧ ಅಸಮಾಧಾನ ಹೊಂದಿದ್ದರೆ ನಾನು ಸಹಿಸಬಲ್ಲೆ. ಆದರೆ ಅವರು ಶಿಕ್ಷಣ ಸಂಸ್ಥೆಯ ವಿರುದ್ಧ ಕೆಲಸ ಮಾಡುವುದನ್ನು ಸಹಿಸಲಾಗದು. ಯಾವುದೇ ಸಂಸ್ಥೆಯ ಯಶಸ್ಸಿಗೆ ನೌಕರರ ನಿಷ್ಠೆ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಡಿ.ಆರ್. ವಿಜಯ ಸಾರಥಿ ತಮ್ಮ ಅನುಭವವನ್ನು ಉಲ್ಲೇಖಿಸಿ ಹೇಳುತ್ತಾರೆ.
ಶಿಕ್ಷಣಕ್ಕೆ ಪ್ರದಾನ ಆದ್ಯತೆ ನೀಡಿದ ಕಾರಣದಿಂದಾಗಿ ವಾಸವಿ ಜ್ಞಾನಪೀಠ ಪ್ರಥಮ ದರ್ಜೆ ಕಾಲೇಜಿನ ಕೆಲ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ಇನ್ಫೋಸಿಸ್ ಮತ್ತು ಡೆಲ್ ನಂತಹ ಪ್ರಮುಖ ಐಟಿ ಕಂಪನಿಗಳಲ್ಲಿ ಕೆಲಸ ಪಡೆದುಕೊಂಡಿದ್ದಾರೆ. “ಕ್ಯಾಂಪಸ್ ಆಯ್ಕೆಯಲ್ಲಿ ವಾಸವಿ ಜ್ಞಾನಪೀಠ ಪ್ರಥಮ ದರ್ಜೆ ಕಾಲೇಜಿನ ಸುಮಾರು 20 ವಿದ್ಯಾರ್ಥಿಗಳು ಇನ್ಪೋಸಿಸ್ ಸಂಸ್ಥೆಗೆ ಆಯ್ಕೆಯಾಗಿದ್ದಾರೆ. ನಾವು ಕ್ಯಾಂಪಸ್ ಆಯ್ಕೆ ಪ್ರಕ್ರಿಯೆ ನಡೆಸುತ್ತಿದ್ದು, ಇಲ್ಲಿ ನಮ್ಮ ಕಾಲೇಜು ವಿದ್ಯಾರ್ಥಿಗಳಲ್ಲದೇ ಇತರೆ ಕಾಲೇಜು ವಿದ್ಯಾರ್ಥಿಗಳು ಸಹ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದ್ದೇವೆ. ಪ್ರತಿ ವರ್ಷ ನಡೆಯುವ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಪ್ರಮುಖ 22 ಕ್ಕೂ ಅಧಿಕ ಕಂಪೆನಿಗಳು ಪಾಲ್ಗೊಳ್ಳುತ್ತಿವೆ” ಎಂದರು.
ವಾಸವಿ ಜ್ಞಾನಪೀಠ ಪ್ರಥಮ ದರ್ಜೆ ಕಾಲೇಜಿನ ವಿಶೇಷತೆ ಎಂದರೆ ಶಿಸ್ತು. ಜೊತೆಗೆ ಕೋಮು ಸೌಹಾರ್ದತೆ ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಲಾಗಿದೆ. 2022 ರಲ್ಲಿ ಹಿಜಾಬ್ ವಿವಾದದ ಸಂದರ್ಭದಲ್ಲಿ ಕಾಲೇಜಿನಲ್ಲಿ ಸಣ್ಣ ಸಮಸ್ಯೆ ಆಗಲು ಬಿಡಲಿಲ್ಲ. “ನಮ್ಮ ಶಾಲೆಯಲ್ಲಿ ಮುಸ್ಲೀಂ ಸಮುದಾಯದ 120 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈ ಪೈಕಿ ಇಬ್ಬರು ಮಾತ್ರ ಹಿಜಾಬ್ ಧರಿಸುತ್ತಿದ್ದರು. ನಂತರ ಪ್ರತಿಯೊಬ್ಬರೂ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಿದರು. ನಾವು ಯಾವುದೇ ಜಾತಿ, ಧರ್ಮದ ಪರವಾಗಿಲ್ಲ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜಾತಿ ನಮಗೆ ಬೇಕಿಲ್ಲ. ಇಲ್ಲಿನ ಕೋಮು ಸೌಹಾರ್ದತೆ ಬಗ್ಗೆ ಪೊಲೀಸರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಸ್ಲೀಂ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕೆ ನೆರವಾಗುತ್ತಿದ್ದೇವೆ”, ನಮ್ಮದು ವಿಶ್ವಮಾನವ ಪರಿಕಲ್ಪನೆ ಎನ್ನುತ್ತಾರೆ ಡಿ.ಆರ್. ವಿಜಯಸಾರಥಿ.
ವಿಜಯ ಸಾರಥಿ ಅವರು ಬ್ಯಾಂಕರ್ ಆಗಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. 30 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಶ್ರೀ ಸುಬ್ರಮಣ್ಯೇಶ್ವರ ಸಹಕಾರ ಬ್ಯಾಂಕ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. “ತಾವು ಉಪಾಧ್ಯಕ್ಷರಾಗುವ ಮುನ್ನ ಬ್ಯಾಂಕ್ ನಷ್ಟದಲ್ಲಿತ್ತು. ಇದೀಗ ಲಾಭದತ್ತ ಮುನ್ನಡೆದಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಬ್ಯಾಂಕ್ 5 ಕೋಟಿ ರೂಪಾಯಿ ಆದಾಯ ಗಳಿಸುವ ನಿರೀಕ್ಷೆ ಇದೆ. ನನ್ನ ಅಧಿಕಾರಾವಧಿಯಲ್ಲಿ ಮಂಜೂರಾದ ಒಂದೇ ಒಂದು ಸಾಲವನ್ನು ಲಾಭರಹಿತ ಆಸ್ತಿ (ಎನ್.ಪಿ.ಎ) ಆಗಿ ಪರಿವರ್ತಿಸಿಲ್ಲ. ತಾವು ಪಾಲ್ಗೊಳ್ಳುವ ಸಭೆಗಳಲ್ಲಿ ಬ್ಯಾಂಕ್ ಹಣದಿಂದ ಕಾಫಿ ಅಥವಾ ಚಹಾ ಸೇವಿಸುವುದಿಲ್ಲ. ಬ್ಯಾಂಕ್ ಹಣ ಉಳಿಸಲು ನಿರ್ದೇಶಕ ಮಂಡಳಿ ಸದಸ್ಯರು ಒಂದೇ ದಿನದಲ್ಲಿ ಐದು ಸಭೆಗಳಲ್ಲಿ ಭಾಗವಹಿಸುತ್ತಾರೆ. ಮಂಡಳಿ ಸದಸ್ಯರಿಗೆ ಪ್ರಯಾಣ ವೆಚ್ಚ ಮತ್ತಿತರೆ ಸೌಲಭ್ಯಗಳನ್ನು ಸಹ ನೀಡುವುದಿಲ್ಲ. ನಾವೆಲ್ಲರೂ ಬ್ಯಾಂಕ್ ಗಾಗಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದೇವೆ. ಬಾಕಿ ಸಾಲಗಳ ಮರುಪಾವತಿಗಾಗಿ ಒಂದು ಬಾರಿಯ ಇತ್ಯರ್ಥ ಯೋಜನೆಯನ್ನು ಜಾರಿಗೆ ತರಲು ನಾವು ಯೋಚಿಸುತ್ತಿದ್ದೇವೆ” ಎಂದರು ವಿಜಯ ಸಾರಥಿ.
“ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ನರ್ಸರಿ ಶಿಕ್ಷಣಕ್ಕೆ ಸೇರಿದ ನಂತರ ಮಾಸ್ಟರ್ ಡಿಗ್ರಿವರೆಗೆ ಅಧ್ಯಯನ ನಡೆಸಬೇಕು. ಪ್ರತಿಯೊಬ್ಬರಿಗೂ ಉದ್ಯೋಗದ ಖಾತರಿ ದೊರಕಿಸಿಕೊಡಬೇಕು. ಉದ್ಯೋಗದ ಆದೇಶ ಪತ್ರದೊಂದಿಗೆ ಸಂಭ್ರಮದಿಂದ ಮನಗೆ ಮರಳಬೇಕು” ಎಂದು ತಮ್ಮ ಕನಸುಗಳನ್ನು ಅನಾವರಣಗೊಳಿಸುತ್ತಾರೆ ಡಿ.ಆರ್. ವಿಜಯ ಸಾರಥಿ. ಶಿಕ್ಷಣ ಕ್ಷೇತ್ರ ಒಳಗೊಂಡಂತೆ ಸಮಾಜಕ್ಕೆ ನೀಡಿದ ಕೊಡುಗೆಗಾಗಿ “ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ನಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿಜಯ ಸಾರಥಿ ಭಾಜನರಾಗಿದ್ದಾರೆ”
ತಾವಷ್ಟೇ ಅಲ್ಲದೇ ತಮ್ಮ ಕುಟುಂಬ ಸದಸ್ಯರು ಸಹ ಸಮಾಜ ಮುಖಿಯಾಗಿರಬೇಕು ಎಂದು ಬಯಸುತ್ತಾರೆ. ನಮ್ಮ ಹೆಣ್ಣು ಮಕ್ಕಳು ಮತ್ತು ಅಳಿಯಂದಿರು ಕೂಡ ಸಮಾಜ ಸೇವೆಯಲ್ಲಿ ತೊಡಗಬೇಕು ಎಂಬ ಅದಮ್ಯ ಆಸೆಯನ್ನು ಅವರು ಹೊಂದಿದ್ದಾರೆ. “ನನ್ನ ಮಕ್ಕಳ ಪೈಕಿ ಒಬ್ಬ ಮಗಳು ಮಕ್ಕಳ ತಜ್ಞೆ. ಅಳಿಯ ಸರ್ಜನ್ ಆಗಿದ್ದಾರೆ. ಪ್ರತಿದಿನ ಒಬ್ಬ ರೋಗಿಗೆ ಉಚಿತ ಚಿಕಿತ್ಸೆ ನೀಡುವಂತೆ ನಾನು ಮಗಳು, ಅಳಿಯನಿಗೆ ಸಲಹೆ ನೀಡಿದ್ದೇನೆ. ಇದು ನನಗೆ ಅವರು ಸಲ್ಲಿಸುವ ಗೌರವ ಮತ್ತು ಸಮಾಜಕ್ಕೆ ನೀಡುವ ಕೊಡುಗೆ ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ. ಇದನ್ನು ಅವರು ಸಹ ಚಾಚೂ ತಪ್ಪದೇ ಪರಿಪಾಲಿಸುತ್ತಿದ್ದಾರೆ. ನನ್ನ ಮತ್ತೊಬ್ಬ ಮಗಳು ಸಾಪ್ಟ್ ವೇರ್ ಇಂಜಿನಿಯರ್, ಅಳಿಯ ಕೂಡ ಇದೇ ವೃತ್ತಿಯಲ್ಲಿದ್ದಾರೆ ಎನ್ನುತ್ತಾರೆ.
ತಮ್ಮ ವಾಸವಿ ಜ್ಞಾನ ಪೀಠ ಪ್ರಥಮ ದರ್ಜೆ ಕಾಲೇಜಿನ ಕುರಿತು ಮಾತನಾಡಿದ ಅವರು, “ಹೆಚ್ಚಿನ ಪ್ರಮಾಣದ ಶಿಕ್ಷಕರು 15 ವರ್ಷಗಳಿಗಿಂತ ಅಧಿಕ ಕಾಲದಿಂದ ಕೆಲಸ ಮಾಡುತ್ತಿದ್ದಾರೆ. ಪದವಿ ಪಡೆದ ನಾಲ್ವರು ವಿದ್ಯಾರ್ಥಿಗಳು ಶಿಕ್ಷಕರಾಗಿ ಕರ್ತವ್ಯ ನಿರತರಾಗಿದ್ದಾರೆ. ನನ್ನ ಗುರಿ ನನ್ನ ಧ್ಯೇಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದಾಗಿದೆ. ಪ್ರತಿಯೊಬ್ಬರನ್ನು ಉತ್ತಮ ಮನುಷ್ಯರನ್ನಾಗಿ, ಉತ್ತಮ ಪ್ರಜೆಗಳನ್ನಾಗಿ ಮಾಡುವುದೇ ತಮ್ಮ ಆದ್ಯತೆ” ಎನ್ನುತ್ತಾರೆ. ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ರೂಪಿಸುವ ಮೂಲಕ ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳುತ್ತಾ ಸಾಗಿದ್ದಾರೆ ಡಿ.ಆರ್. ವಿಜಯ ಸಾರಥಿ.
Your article helped me a lot, is there any more related content? Thanks!