ಬೆಂಗಳೂರು: ಸಮಾಜದಲ್ಲಿನ ನ್ಯೂನತೆಗಳು, ಸಮಾಜಘಾತುಕ ಶಕ್ತಿಗಳನ್ನು ಸರಿಪಡಿಸಲು ಸಂಗೀತದಿಂದ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ತಾವು ಸಂಬಂಧಪಟ್ಟ ಪಾಲುದಾರರ ಜೊತೆ ಸಮಾಲೋಚನೆ ನಡೆಸುತ್ತಿರುವುದಾಗಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದ್ದಾರೆ.
ನಗರದ ನಯನ ಸಭಾಂಗಣದಲ್ಲಿ “ಇದು ನಿಮ್ಮ ವಾಹಿನಿ ಕಲಾ ವೇದಿಕೆ”ಯಿಂದ ನಡೆದ 5 ನೇ ‘ಸಾಹಿತ್ಯ ಸಿಂಚನ ‘ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಸಂಗೀತಕಾರರು, ತುಮಕೂರಿನ ರಾಮಕೃಷ್ಣ ಮಠದ ಸ್ವಾಮೀಜಿ ಅವರೊಂದಿಗೆ ಈ ಕುರಿತು ಚರ್ಚೆ ನಡೆಸಲಾಗಿದೆ. ಸಂಗೀತದಿಂದ ಸಾಕಷ್ಟು ಸಾಮಾಜಿಕ ಬದಲಾವಣೆಗಳನ್ನು ತರಬಹುದಾಗಿದೆ. ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಈಗಾಗಲೇ ಆರೋಗ್ಯ ಕ್ಷೇತ್ರದಲ್ಲಿ ಸಂಗೀತವನ್ನು ಬಳಸಲಾಗುತ್ತಿದೆ. ಮಾನಸಿಕ ವ್ಯಾದಿಗಳಿಗೂ ಸಂಗೀತ ಮದ್ದು ಎಂದರು.
ಸಾಂಸ್ಕೃತಿಕ ಸುಗ್ಗಿಯಲ್ಲಿ ವಿವಿಧ ಕಲಾ ತಂಡಗಳ 180 ಕ್ಕೂ ಅಧಿಕ ನೃತ್ಯ ಪ್ರಕಾರಗಳು ಹಾಗೂ ರೂಪಕಗಳು ಗಮನ ಸೆಳೆಯಿತು. ವಿಶೇಷವಾಗಿ ಚಿಣ್ಣರ ಕಾರ್ಯಕ್ರಮಗಳು ಮನಸೂರೆಗೊಂಡವು.
ಇಂಡಿಯನ್ ವೆಹಿಕಲ್ ಡ್ರೈವರ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಕನ್ನಡ ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕೆಪಿಸಿಸಿ ಯ ಪ್ರಧಾನ ಕಾರ್ಯದರ್ಶಿ ಡಿ ಕೆ ಮೋಹನ್ ಹಾಗೂ ಪತ್ರಕರ್ತ ವಿ ನಂಜುಂಡಪ್ಪ ಮತ್ತಿತರರು ಉಪಸ್ಥಿತರಿದ್ದರು.