ಗಾಯನ ಕಲಾಶ್ರೀ  ಗಮಕಿ ಸಿ.ಪಿ. ವಿದ್ಯಾಶಂಕರ್ ಮಂಡ್ಯ

ಮಂಡ್ಯ ಜಿಲ್ಲೆಯಲ್ಲಿ ಸಂಗೀತ ಗಮಕ ಗಾಯನ ಕ್ಷೇತ್ರದ ಚಿರಪರಿಚಿತ ಹೆಸರು ಸಿ.ಪಿ. ವಿದ್ಯಾಶಂಕರ್. ಮೂಲತ: ಸಂಗೀತ ಮನೆತನದಿಂದ ಬಂದ ಇವರ ತಂದೆ ಸಿ.ಆರ್. ಪಾಂಡುರಂಗಶಾಸ್ತ್ರಿಯವರು ಸಂಗೀತ ಸಾಮವೇದ ಸಂಸ್ಕೃತ ಪಂಡಿತರು. ಹುಟ್ಟಿದ್ದು ಚನ್ನರಾಯಪಟ್ಟಣ, ತಾ. 29-4-1959. ತಾಯಿ ಕಮ್ಮಲಮ್ಮ. ಹಾಸನದ ಎಲ್.ವಿ. ಪಾಲಿಟೆಕ್ನಿಕ್‌ನಲ್ಲಿ ಮೆಕಾನಿಕಲ್ ಇಂಜಿನಿಯರ್.  ಇವರ ಗಮನ ಉದ್ಯೋಗದತ್ತ ಹರಿಯದೇ ಗಮಕದತ್ತ ಹೊರಳಿದ್ದೇ ವಿಶೇಷ.

 

ಪ್ರಾಥಮಿಕ ಸಂಗೀತಾಭ್ಯಾಸ ತಂದೆಯವರಲ್ಲಿ. ಗಮಕ ಬಗ್ಗೆ ತೀವ್ರಾಸಕ್ತಿ. ಗಮಕಿ ಗುರು ವೀರಭದ್ರಾಚಾರ್, ಚ.ರ.ರಂಗಸ್ವಾಮಿ, ಗಮಕಿ ಕೃಷ್ಣಮೂರ್ತಿ ಬಾಂಬೆ,  ಗಮಕಿ ರಾಘವೇಂದ್ರರಾವ್ ಇವರಲ್ಲಿ ಕಲಿತವರು. ಶ್ರೀ ರಂಜಿನಿ ಕಲಾ ವೇದಿಕೆ ಸ್ಥಾಪಿಸಿ ಈ ಮೂಲಕ ಹೊಸ ವರ್ಷ ಕಾರ್ಯಕ್ರಮ, ಯುಗಾದಿ ಪುರಸ್ಕಾರ, ಮಕ್ಕಳ ಪ್ರತಿಭಾ ಪ್ರದರ್ಶನ, ವಿವಿಧ ಸ್ಫರ್ಧೆಗಳ ಆಯೋಜನೆ, ಗಮಕೋತ್ಸವ, ಸುಗಮ ಸಂಗೀತ, ಗಮಕ ಸಪ್ತಾಹ ಹೀಗೆ ವೈವಿಧ್ಯ ಕಾರ್ಯಕ್ರಮಗಳ ರೂವಾರಿ. ಇವರದೇ ಸಂಗೀತ ತಂಡ ಇದೆ. ಈ ತಂಡ ರಾಜ್ಯಾದ್ಯಂತ ಸುಗಮ ಸಂಗೀತ ಕಾರ್ಯಕ್ರಮ ನೀಡಿದೆ. 

ಇಂದಿಗೂ ನಿಂತಿಲ್ಲ.  ಒಂದು ಕಾಲದಲ್ಲಿ ದಕ್ಷಿಣ ಭಾರತವೆಂದರೆ ಮದ್ರಾಸ್ ಎಂಬ ಪರಿಕಲ್ಪನೆ. ಧ್ವನಿ ಮುದ್ರಣ ಧ್ವನಿ ಪರೀಕ್ಷೆ ಹಾಡಿನ ಅವಕಾಶ ದೂರದರ್ಶನದ ಕನ್ನಡ ಕಾರ್ಯಕ್ರಮದ ಪ್ರಸಾರ ಕೇಂದ್ರ ಎಲ್ಲಾ ಮದ್ರಾಸ್ ಆಗಿತ್ತು. ನಾನು ಆತ್ಮವಿಶ್ವಾಸದಿಂದ ಮದ್ರಾಸ್ ರೈಲು ಹತ್ತಿ ಸ್ಟುಡಿಯೋಗೆ ಹೋದೆ.  ಧ್ವನಿ ಪರೀಕ್ಷಕರು ಪ್ರಸಿದ್ಧ ಗಾಯಕರು ಪಿ.ಬಿ.ಶ್ರೀನಿವಾಸ್. ನನ್ನನ್ನು ಮಾತನಾಡಿಸಿ ಮೆಚ್ಚುಗೆ ಸೂಚಿಸಿ ಧ್ವನಿ ಪರೀಕ್ಷೆಯಲ್ಲಿ ಪಾಸು ಮಾಡಿದ್ದು ನನ್ನ ಆತ್ಮಬಲ ಹೆಚ್ಚಿಸಿತು ಎಂದರು.  ವಿಶ್ವ ಕನ್ನಡ ಸಂಗೀತ ಸಮ್ಮೇಳನ, ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ವಚನ ಸಮ್ಮೇಳನ, ಗಮಕ ಸಮ್ಮೇಳನ, ಮೈಸೂರು ದಸರಾ, ತಲಕಾಡು ಪಂಚಲಿಂಗ ಗೀತೋತ್ಸವ ಹೀಗೆ ನೀಡಿದ ಕಾರ್ಯಕ್ರಮಗಳು ನೂರಾರು.

 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಂಸ್ಕೃತಿಕ ಸೌರಭ, ವಚನ ಗಾಯನ, ಕಾವ್ಯ ವಾಚನ, ಕಾವ್ಯ ಕಾವೇರಿ, ತಿಂಗಳ ಸೊಬಗು ಹೀಗೆ ಇವರ ಸೊಬಗಿನ ಕಾರ್ಯಕ್ರಮಗಳು ಒಂದಲ್ಲ ಹಲವು ಬಗೆ. ಇವರ ನಿರಂತರ  ಗಮಕ ಸೇವೆ ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೧೩-೧೪ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಕುಮಾರವ್ಯಾಸ ಭಾರತ, ಶ್ರೀರಾಮಾಯಣ ದರ್ಶನಂ, ಜೈಮಿನಿ ಭಾರತ, ಹರಿಶ್ಚಂದ್ರ ಕಾವ್ಯ ಒಳಗೊಂಡು   ೩೫ಕ್ಕೂ ಹೆಚ್ಚು ಮಹಾಕಾವ್ಯಗಳನ್ನು ವಾಚಿಸಬಲ್ಲರು. ಕವಿ ಕೆ.ಸಿ. ಶಿವಪ್ಪ ಅವರ ಮುದ್ದುರಾಮ ಚೌಪದಿಗಳಿಗೆ ಸಂಗೀತ ನಿರ್ದೇಶನ, ಟಿ.ಶಿವಕುಮಾರ್ ಅವರ ಶ್ರೀ ರಾಮ ಕಾವ್ಯ. ಡಿವಿಜಿಯವರ ಮಂಕುತಿಮ್ಮನ ಕಗ್ಗ, ಡಾ.ಎಸ್.ಶ್ರೀನಿವಾಸಶೆಟ್ಟಿ ಅವರ ಶ್ರೀನಿವಾಸ ಕಗ್ಗ, ಡಾ, ವಿ.ಸೌಗಂಧಿಕ ಜೋಯಿಸ್ ಅವರು ದಿನ ಕಳಿಸುತ್ತಿದ್ದ ಸುಭಾಷಿತಗಳಿಗೆ ಗಾಯನ ಮಾಡಿರುವ ಇವರು ದಕ್ಷಿಣ  ಬದರಿ ಮೇಲುಕೋಟೆ, ಮಹಾಭಾರತ ಧ್ವನಿ ಸುರುಳಿಗೆ ಸಾಹಿತ್ಯ ರಚಿಸಿದ್ದಾರೆ. 

ಟಿವಿ ಚಂದನದ ಬೆಳಗು ಕಾರ್ಯಕ್ರಮ, ಇವರು ಹಾಗೂ ಸಾಹಿತಿ ಡಾ. ಪ್ರದೀಪ್‌ಕುಮಾರ್ ಹೆಬ್ರಿ ಇಬ್ಬರು ಚಂದನದಲ್ಲಿ ಸಾದರಪಡಿಸಿದ ಗಮಕ ಶೈಲಿಯ ವಚನಾಮೃತ ದೇಶ ವಿದೇಶ ತಲುಪಿದೆ. ಯುಗಾವತಾರಿ, ಅಚಾರ್ಯ ಮದ್ವರ ಕುರಿತ ಸಿಡಿ ಹೊರಬಂದಿವೆ. ಹೆಬ್ರಿಯವರ ರಘು ಕುಲೋತ್ಸಮ ಮಹಾಕಾವ್ಯ  ಸ್ವರ್ಣ ವಾಹಿನಿಯಲ್ಲಿ ಒಂದು ವರ್ಷ ಪ್ರತಿದಿನ ಬೆಳಿಗ್ಗೆ ಪ್ರಸಾರವಾಗಿದೆ. ಉದಯ ಟಿವಿಯ ನಾದ, ಬೆಂಗಳೂರು ಮದ್ರಾಸ್ ಆಕಾಶವಾಣಿಯಲ್ಲಿ ಹಾಡಿ ಶ್ರೋತೃಗಳ ಕಿವಿಗಳಿಗೆ ಹಾಡಿನ ಕಂಪು ಹರಿಸಿದ್ದಾರೆ.  ಇವರ ಕುವೆಂಪು ವಿರಚಿತ ರಾಮಾಯಣ ದರ್ಶನಂ ಗಮಕ ವಾಚನ ಮೈಸೂರು ಆಕಾಶವಾಣಿಯಲ್ಲಿ ಧ್ವನಿ ಮುದ್ರಿತವಾಗಿದೆ. ರೇಡಿಯೋ ಸಿಲೋನ್‌ನಲ್ಲಿ ಹಾಡಿರುವ ಕ್ರೈಸ್ತ ಗೀತೆಗಳು ಸತತ ಐದು ವರ್ಷ ಪ್ರಸಾರವಾಗಿದೆ.  ಹಾಡುಗಾರಿಕೆ ಅಷ್ಟೇ ಅಲ್ಲಾ ಕೀ ಬೋರ್ಡ್ ಕೂಡ ನುಡಿಸಬಲ್ಲರು.

 

ನನ್ನ (ಗೊರೂರು ಅನಂತರಾಜು) ಹತ್ತಕ್ಕೂ ಹೆಚ್ಚು ಕವನ ಭಾವಗೀತೆಗಳಿಗೆ ವಿದ್ಯಾಶಂಕರ್ ರಾಗ ಸಂಯೋಜಿಸಿ ಹಾಡಿ, ಆಡಿಯೋ ವಿಡಿಯೋ ಮಾಡಿ ಯೂ ಟ್ಯೂಬ್, ಪೇಸ್ ಬುಕ್‌ಗಳಲ್ಲಿ ಪ್ರಸಾರಿಸಿದ್ದಾರೆ. ನನ್ನಂತೆಯೇ ಹಲವಾರು ಕವಿಗಳ ಕಾವ್ಯಗಳಿಗೆ ರಾಗ ಸಂಯೋಜನೆ ಮಾಡಿ ಹಾಡಿರುವರು. ನೂರಾರು ಮಕ್ಕಳಿಗೆ ಸಂಗೀತ ತರಭೇತಿ ನೀಡಿ ಅಪಾರ ಶಿಷ್ಯಬಳಗ ಬೆಳೆಸಿದ್ದಾರೆ. ಇವರ  ಸಂಗೀತ ಸಾಧನೆಗೆ 1992ರಲ್ಲಿ ಗಣರಾಜ್ಯೋತ್ಸವ, 2008ರಲ್ಲಿ ಜಿಲ್ಲಾ ರಾಜ್ಯೋತ್ಸವ, ಚೈತನ್ಯ ಶ್ರೀ ಪ್ರಶಸ್ತಿ, ದಿವಂಗತ ಕೆ. ಪ್ರಹ್ಲಾದರಾವ್ ಸ್ಥಾಪಿತ ಸಂಸ್ಥೆಯ ಸಂಸ್ಕೃತಿ ಪ್ರಶಸ್ತಿ ಸೇರಿದಂತೆ ಹಲವು ಸನ್ಮಾನ ಗೌರವಗಳಿಗೆ ಭಾಜನರು. ವೃತ್ತಿಯಲ್ಲಿ ಪತ್ರಕರ್ತರು.

ಗೊರೂರು ಅನಂತರಾಜು ಹಾಸನ

 

ಹುಣಸಿನಕೆರೆ ಬಡಾವಣೆ, 29ನೇ ವಾಡ್೯, ಶ್ರೀ ಶನೈಶ್ಚರ ದೇವಸ್ಥಾನ ರಸ್ತೆ, ಹಾಸನ 

Facebook
Twitter
LinkedIn
Telegram
Email
Print
WhatsApp

Leave a Comment

Your email address will not be published. Required fields are marked *

Translate »
Scroll to Top