ಬೆಂಗಳೂರು: ಅಭಿವೃದ್ಧಿಗೆ ಹಣ ನೀಡದೆ ಸಿಲಿಕಾನ್ ಸಿಟಿ ಗುಂಡಿಗಳ ಆಗರವಾಗಿದೆ ಎಂದು ಬೆಂಗಳೂರು ಉಸ್ತುವಾರಿಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಬಿಜೆಪಿ ದೂರು ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಬೆಂಗಳೂರು ನಗರ ಪ್ರತಿನಿಧಿಸುವ ಬಿಜೆಪಿ ಸಂಸದರು ಮತ್ತು ಶಾಸಕರ ನಿಯೋಗ ಇಂದು ಮಖ್ಯಮಂತ್ರಿ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ, ರಾಜಧಾನಿ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿತು. ಸರ್ಕಾರದಲ್ಲಿ ಪ್ರಭಾವಿ ಹಾಗೂ ರಾಜಧಾನಿ ನಗರ ಉಸ್ತುವಾರಿ ಹೊತ್ತಿರುವ ಶಿವಕುಮಾರ್ ಅವರಿಗೆ ಅಭಿವೃದ್ಧಿ ಕುರಿತು ಮನವಿ ಮಾಡದೆ, ಮುಂದಿನ ಮುಂಗಡಪತ್ರದಲ್ಲಿ ಹೆಚ್ಚು ಹಣ ಒದಗಿಸಿ ಎಂಬ ನೆಪದಲ್ಲಿ ಮುಖ್ಯಮಂತ್ರಿ ಅವರಿಗೆ ಪರಿಸ್ಥಿತಿ ವಿವರಿಸಿದ್ದಾರೆ.
ಇತ್ತೀಚೆಗಷ್ಟೇ ಐಟಿ ದಿಗ್ಗಜ ಮೋಹನ್ ದಾಸ್ ಪೈ ರಾಜಧಾನಿಯ ಕೆಟ್ಟ ಪರಿಸ್ಥಿತಿಯನ್ನು ಜನರ ಮುಂದಿಟ್ಟು, ಅಧಿಕಾರಿಗಳು ಜನರ ಮಾತನ್ನೇ ಕೇಳುತ್ತಿಲ್ಲ ಎಂದು ಕಿಡಿ ಕಾರಿದ್ದರು.
ಇದರ ಬೆನ್ನಲ್ಲೇ ಬಿಜೆಪಿ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮುಂದಿನ ಬಜೆಟ್‌ನಲ್ಲಾದರೂ ಹಣ ನೀಡಿ ಬೆಂಗಳೂರನ್ನು ಉಳಿಸಿ ಎಂದು ಕೋರಿದ್ದಾರೆ. ಬೆಂಗಳೂರು ಮಹಾನಗರದ ಅಭಿವೃದ್ಧಿ ದೃಷ್ಟಿಯಿಂದ ಶಾಸಕರಿಗೆ ಹೆಚ್ಚು ಅನುದಾನ ನೀಡಬೇಕು, 2025-26ನೇ ಸಾಲಿನ ಬಜೆಟ್‌ನಲ್ಲಿ 6 ರಿಂದ 8 ಸಾವಿರ ಕೋಟಿ ರೂ. ಮೀಸಲಿಡಬೇಕು ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಸಿಲಿಕಾನ್ ಸಿಟಿ ಬೆಂಗಳೂರಿನ ಮೂಲಸೌಕರ್ಯ ವೃದ್ಧಿಗೆ ಸಂಬಂಧಿಸಿದ ಯೋಜನೆಗಳಿಗೆ ಹಣ ಕೊಡಬೇಕಿದೆ, ಫ್ಲೈಓವರ್, ವಿವಿಧ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ, ಅವುಗಳಿಗೆ ಹೆಚ್ಚು ಅನುದಾನ ನೀಡಿ ಹೆಚ್ಚು ಒತ್ತು ಕೊಡಬೇಕೆಂದು ಕೋರಿರುವುದಾಗಿ ವಿವರಿಸಿದರು.
ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಮೆಟ್ರೊ ಪ್ರಯಾಣ ದರದಲ್ಲಿ ಕಡಿತ ಮಾಡುವಂತೆ ಸಲಹೆ ನೀಡಿದರು. ಅಭಿವೃದ್ಧಿಗೆ ಅನುದಾನವಲ್ಲದೆ, ಮೊದಲ ಬಾರಿ ಗೆದ್ದ ಶಾಸಕರಿಗೂ ಅನುದಾನ ಕೊಡುವಂತೆ ಮನವಿ ಮಾಡಲಾಯಿತು.
ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಪ್ರತಿಸಾರಿಯೂ ಬಿಬಿಎಂಪಿಗೆ 6ರಿಂದ 8 ಸಾವಿರ ಕೋಟಿ ರೂ. ಅನುದಾನ ಬಜೆಟ್‌ನಲ್ಲಿ ಮೀಸಲಿಡಲಾಗುತ್ತಿತ್ತು, ಕಳೆದೆರಡು ವರ್ಷಗಳಿಂದ ಬೆಂಗಳೂರು ಅಭಿವೃದ್ಧಿಗೆ ಅನುದಾನ ನೀಡಿಲ್ಲ ಎಂಬುದನ್ನು ಗಮನಕ್ಕೆ ತರಲಾಗಿದೆ. ಇತಿ-ಮಿತಿಯೊಳಗೆ ಎಷ್ಟು ಸಾಧ್ಯವೋ ಅಷ್ಟು ಅನುದಾನ ಒದಗಿಸುವುದಾಗಿ ಭರವಸೆ ನೀಡಿದ್ದಾರೆ, ಗ್ರೇಟರ್ ಬೆಂಗಳೂರು ನೆಪದಲ್ಲಿ ಬಿಬಿಎಂಪಿ ಚುನಾವಣೆ ಮುಂದೂಡದೆ, ಶೀಘ್ರ ಚುನಾವಣೆ ನಡೆಸಬೇಕೆಂಬ ಒತ್ತಾಯಕ್ಕೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅವೈಜ್ಞಾನಿಕ ಟನೆಲ್ ಮಾರ್ಗ ವಿಷಯವನ್ನೂ ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಲಿದ್ದೇವೆ.
ಈ ಹಿಂದೆ ಬೆಂಗಳೂರು ನಗರಕ್ಕೆ ಇಂಥ ದುಸ್ಥಿತಿ ಬಂದಿರಲಿಲ್ಲ, ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಬಿಜೆಪಿ ಅಲ್ಲದೆ ಕಾಂಗ್ರೆಸ್ ಶಾಸಕರಿಗೂ ಹೆಚ್ಚಿನ ಅನುದಾನ ನೀಡಿದ್ದರು ಎಂದರು.
ಆರ್. ಅಶೋಕ್ ಮಾತನಾಡಿ, ನಗರದ ರಸ್ತೆಗಳ ಅವ್ಯವಸ್ಥೆ, ಪಾರ್ಕ್ ವಾಚ್‌ಮನ್‌ಗಳಿಗೂ ಹಣ ನೀಡಲೂ ಸಾಧ್ಯವಾಗದ ಪರಿಸ್ಥಿತಿ ನೋಡಿ, ಎರಡು ವರ್ಷ ಕಾದು ವಿಧಿಯಿಲ್ಲದೆ ಮುಖ್ಯಮಂತ್ರಿ ಭೇಟಿ ಮಾಡಿದ್ದೇವೆ. ಒಂದೆಡೆ ಬೆಲೆ ಏರಿಕೆ, ಇನ್ನೊಂದೆಡೆ ಅಭಿವೃದ್ಧಿ ಕುಂಠಿತವಾಗಿದೆ, ಬಿಜೆಪಿ ಆಡಳಿತದಲ್ಲಿ ಪ್ರತೀ ವರ್ಷ ಅನುದಾನ ಕೊಡಲಾಗುತ್ತಿತ್ತು, ಪ್ರಸ್ತುತ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 120 ರಿಂದ 150 ಕೋಟಿ ರೂ. ನೀಡಲು ಮನವಿ ಮಾಡಿರುವುದಾಗಿ ತಿಳಿಸಿದರು.