‘ಸಿದ್ದು ವರ್ಸಸ್ ಡಿಕೆಶಿ’ ಶೀತಲ ಸಮರ ದೆಹಲಿಗೆ

ಸಿದ್ದು ಬಣದ 'ಶಕ್ತಿ ಪ್ರದರ್ಶನ'ಕ್ಕೆ ವೇದಿಕೆ ಸಜ್ಜು?

Kannada Nadu
‘ಸಿದ್ದು ವರ್ಸಸ್ ಡಿಕೆಶಿ’ ಶೀತಲ ಸಮರ ದೆಹಲಿಗೆ

ಬೆಂಗಳೂರು: ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಏಪ್ರಿಲ್ 12ರಿಂದ ಎರಡು ದಿನಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದ ಶಾಸಕರು ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ದೆಹಲಿ ಭೇಟಿಯ ಹಿಂದಿನ ಅಸಲಿ ಅಜೆಂಡಾ ಏನು?
ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ನೇತೃತ್ವದಲ್ಲಿ ಸುಮಾರು 30 ರಿಂದ 35 ಶಾಸಕರ ತಂಡ ದೆಹಲಿಗೆ ತೆರಳುತ್ತಿದೆ. ಈ ಭೇಟಿಯ ಹಿಂದೆ ಪ್ರಮುಖವಾಗಿ ಮೂರು ಉದ್ದೇಶಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ
ಸಿದ್ದರಾಮಯ್ಯ ಪರ ಬ್ಯಾಟಿಂಗ್: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, “ಪಕ್ಷದ ಹಿತದೃಷ್ಟಿಯಿಂದ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು” ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರುವುದು ಈ ತಂಡದ ಮೊದಲ ಗುರಿ.
ಸಂಪುಟ ಪುನಾರಚನೆ ಲಾಬಿ: ಸಂಪುಟ ಪುನಾರಚನೆಗೆ ಹೈಕಮಾಂಡ್ ಹಸಿರು ನಿಶಾನೆ ತೋರುವ ಸಾಧ್ಯತೆಗಳಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳು ಈ ಭೇಟಿಯನ್ನು ತಮ್ಮ ‘ಅದೃಷ್ಟ ಪರೀಕ್ಷೆ’ಗೆ ಬಳಸಿಕೊಳ್ಳಲಿದ್ದಾರೆ.
ಉಪಚುನಾವಣೆ ನಂತರದ ರಕ್ಷಣೆ: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗಳ ಫಲಿತಾಂಶ ಏನೇ ಬಂದರೂ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಧಕ್ಕೆ ಬರಬಾರದು ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸುವುದು ಇವರ ಉದ್ದೇಶವಾಗಿದೆ.
ಹೈಕಮಾಂಡ್ ಭೇಟಿ ಮತ್ತು ಸಮಯದ ಮಹತ್ವ
ಕೇರಳ ವಿಧಾನಸಭಾ ಚುನಾವಣೆ ಏಪ್ರಿಲ್ 9ಕ್ಕೆ ಮುಕ್ತಾಯಗೊಳ್ಳಲಿದ್ದು, ಅದರ ಬೆನ್ನಲ್ಲೇ ಎಐಸಿಸಿ ನಾಯಕರು ಲಭ್ಯವಿರುತ್ತಾರೆ. ಹೀಗಾಗಿ ಏಪ್ರಿಲ್ 12ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಲು ಸಿದ್ದು ಬಣ ಯೋಜನೆ ರೂಪಿಸಿದೆ.
ದೆಹಲಿಗೆ ತೆರಳಲಿರುವ ಪ್ರಮುಖ ಶಾಸಕರು
ಈ ತಂಡದಲ್ಲಿ ಹಿರಿಯ ನಾಯಕರು ಹಾಗೂ ಪ್ರಭಾವಿ ಶಾಸಕರ ದಂಡೇ ಇದೆ. ಟಿ.ಬಿ. ಜಯಚಂದ್ರ, ಲಕ್ಷ್ಮಣ್ ಸವದಿ, ಬಿ.ಆರ್. ಪಾಟೀಲ್, ರಾಜು ಕಾಗೆ, ಕೆ.ಎಂ. ಶಿವಲಿಂಗೇಗೌಡ, ಎ.ಆರ್. ಕೃಷ್ಣಮೂರ್ತಿ ಸೇರಿದಂತೆ ಹಲವು ಶಾಸಕರು ಈ ತಂಡದಲ್ಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಡಿಕೆಶಿ ಬಣದ ಮುಂದಿನ ನಡೆ ಏನು?
ಸಿದ್ದರಾಮಯ್ಯ ಬಣದ ಈ ನಡೆಯಲ್ಲಿ ಪ್ರತಿತಂತ್ರ ರೂಪಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಬಲಿಗರು ಸಜ್ಜಾಗುತ್ತಿದ್ದಾರೆ. ಮೊದಲ ಬಾರಿಗೆ ಆಯ್ಕೆಯಾಗಿರುವ ಶಾಸಕರಾದ ಬಸವರಾಜ ಶಿವಗಂಗಾ ನೇತೃತ್ವದ ತಂಡವೊAದು ಸಿಎಂ ಬದಲಾವಣೆ ವಿಚಾರವನ್ನು ಮುನ್ನೆಲೆಗೆ ತರಲು ಸಜ್ಜಾಗಿದೆ ಎನ್ನಲಾಗಿದೆ.
ಸಂಧಾನದ ಪ್ರಕಾರ ಅಧಿಕಾರ ಹಂಚಿಕೆಯಾಗಬೇಕು ಎಂಬ ಬೇಡಿಕೆಯನ್ನು ಹೈಕಮಾಂಡ್ ಮುಂದೆ ಇಡಲು ಡಿ.ಕೆ. ಶಿವಕುಮಾರ್ ಕೂಡ ಶೀಘ್ರದಲ್ಲೇ ದೆಹಲಿಗೆ ತೆರಳುವ ಸಾಧ್ಯತೆ ಇದೆ.

ಸಚಿವರ ಮತ್ತು ನಾಯಕರ ಪ್ರತಿಕ್ರಿಯೆ
ಇತ್ತೀಚೆಗಷ್ಟೇ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು “ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರುತ್ತಾರೆ” ಎಂದು ಹೇಳಿಕೆ ನೀಡಿದ್ದರು. ಇತ್ತ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯಿಸಿ, “ನಾಯಕತ್ವದ ಬಗ್ಗೆ ಹೈಕಮಾಂಡ್ ಮತ್ತು ಉಭಯ ನಾಯಕರು ನಿರ್ಧರಿಸುತ್ತಾರೆ. ಏಪ್ರಿಲ್ 9ರ ನಂತರದ ಬೆಳವಣಿಗೆಗಳು ಬಹಳ ಮುಖ್ಯವಾಗಿದ್ದು, ಅಲ್ಲಿಯವರೆಗೆ ಇತರರ ಮಾತುಗಳಿಗೆ ಮಹತ್ವವಿಲ್ಲ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ಸಿದ್ದು ವರ್ಸಸ್ ಡಿಕೆಶಿ’ ಬಣಗಳ ನಡುವಿನ ಶೀತಲ ಸಮರ ಈಗ ದೆಹಲಿಯ ಅಂಗಳಕ್ಕೆ ಶಿಫ್ಟ್ ಆಗಿದೆ. ಸಿದ್ದರಾಮಯ್ಯ ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳಲು ಮತ್ತು ಸಂಪುಟಕ್ಕೆ ಹೊಸಬರನ್ನು ಸೇರಿಸಿಕೊಳ್ಳಲು ಕವಡೆ ಹಾಕುತ್ತಿದ್ದರೆ, ಇತ್ತ ಡಿಕೆಶಿ ಬಣ ಬದಲಾವಣೆಯ ನಿರೀಕ್ಷೆಯಲ್ಲಿದೆ. ಏಪ್ರಿಲ್ 12ರ ದೆಹಲಿ ಭೇಟಿಯು ರಾಜ್ಯ ರಾಜಕಾರಣದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡುತ್ತದೆಯೇ ಅಥವಾ ಯಥಾಸ್ಥಿತಿ ಮುಂದುವರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";