ದಲಿತ ವಿರೋಧಿ ಮುಖ್ಯಮಂತ್ರಿ ವಿರುದ್ಧ “ಸಿದ್ದರಾಮಯ್ಯ ಹಠಾವೋ, ದಲಿತ್ ಬಚಾವೋ” ಆಂದೋಲನಕ್ಕೆ ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟ ಕರೆ

ಬೆಂಗಳೂರು:ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ವಿರುದ್ಧ “ಸಿದ್ದರಾಮಯ್ಯ ಹಠಾವೋ, ದಲಿತ್ ಬಚಾವೋ” ಆಂದೋಲನಕ್ಕೆ ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಬಿ.ಆರ್. ಬಾಸ್ಕರ್ ಪ್ರಸಾದ್, ಈ ಹೋರಾಟವನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು. ನಗರದ ಫ್ರೀಡಮ್ ಪಾರ್ಕ್ ನಲ್ಲಿ ಬುಧವಾರ [ಆ.28] ರಂದು ಬೆಳಗ್ಗೆ 11.00 ಗಂಟೆಗೆ ಈ ಸಂಬಂಧ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ರಾಜ್ಯದ ಎಲ್ಲಾ ಭಾಗಗಳಿಂದ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ದಲಿತರ ವಿಚಾರದಲ್ಲಿ ಇಂದಿನ ಕಾಂಗ್ರೆಸ್ ಸರ್ಕಾರಕ್ಕೂ ಹಿಂದಿನ ಬಿಜೆಪಿ ಸರಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದರು.  

ಈ ಸರ್ಕಾರದಲ್ಲಿ ಪ್ರತಿ ನಿತ್ಯ ದಲಿತರ ಮೇಲೆ ಕೊಲೆ ಮತ್ತು ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ರಕ್ಷಣೆಗೆ ಸರ್ಕಾರ ಮುಂದಾಗಿಲ್ಲ. ದೌರ್ಜನ್ಯ ಪ್ರಕರಣಗಳಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಹೇಳಿದ್ದು, ಈ ವರೆಗೆ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಪೌರಕಾರ್ಮಿರ ಸೇವೆಯನ್ನು ಕಾಯಂಗೊಳಿಸಿಲ್ಲ. ಲಕ್ಷಾಂತರ ಬ್ಯಾಕ್ ಲಾಗ್ ಹುದ್ದೆಗಳು ಬಾಕಿ ಉಳಿದಿವೆ ಎಂದರು.

ಪಿಟಿಸಿಎಸ್ ಕಾಯ್ದೆಯ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿಲ್ಲ. ಪ್ರಬುದ್ಧ ಯೋಜನೆಯಡಿ ದಲಿತ ವಿದ್ಯಾರ್ಥಿಗಳಿಗೆ ಪರಮ ಅನ್ಯಾಯವಾಗುತ್ತಿದೆ. ಐಎಎಸ್ ಅಧಿಕಾರಿ ಮಣಿವಣ್ಣನ್ ದಲಿತ ವಿರೋಧಿಯಾಗಿದ್ದು, ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಉಸ್ತುವಾರಿ ಮುಂದುವರೆಸಿರುವುದು ಸರಿಯಲ್ಲ. ದಲಿತ ವಿದ್ಯಾರ್ಥಿವೇತನ, ವಿಧ್ಯಾರ್ಥಿ ನಿಲಯಗಳ ದುರವಸ್ಥೆ, ವಿಧ್ಯಾರ್ಥಿಗಳ ಉತ್ತೇಜನದಿಂದ ಮೀಸಲಾದ ನಗದು ಹಣ ದುರುಪಯೋಗವಾಗುತ್ತಿದೆ. ಪರಿಶಿಷ್ಠ ವರ್ಗಗಳಿಗೆ ಮೀಸಲಾದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು, ಒಳಮೀಸಲಾತಿ ಜಾರಿಗೆ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದರು.

ಹಕ್ಕು ಪತ್ರಕ್ಕಾಗಿ 94ಸಿ, 94 ಸಿಸಿ ಅಡಿ ಹಾಕಿಕೊಂಡಿರುವ ದಲಿತರ ಅರ್ಜಿಗಳನ್ನು ಇನ್ನೂ ವಿಲೇವಾರಿ ಮಾಡಿಲ್ಲ. ಅರಣ್ಯ ಹಕ್ಕಿನಡಿ ಅರ್ಜಿ ಹಾಕಿರುವ ಬಡ ಕುಟುಂಬಗಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಹಕ್ಕು ಪತ್ರ ವಿತರಿಸಬೇಕು. ಬಲಾಢ್ಯರು ಒತ್ತುವರಿ ಮಾಡಿರುವ ಸರ್ಕಾರಿ ಭೂಮಿಗಳನ್ನು ತೆರವುಗೊಳಿಸಿ ಬಡಜನರಿಗೆ ನೆಲ ಮತ್ತು ನೆಲೆ ಒದಗಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಚಾಲಕರಾದ ಪ್ರೊ. ಹರಿರಾಮ್, ಚಳುವಳಿ ರಾಜಣ್ಣ, ದಲಿತ ರಮೇಶ್, ಸಿದ್ದಾಪುರ ಮಂಜುನಾಥ್, ಶಂಕರ್ ರಾಮಲಿಂಗಯ್ಯ, ಮೋಹನ್ ದಾಸರಿ, ನ್ಯಾಯವಾದಿ ಬಾಲನ್ ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top