ರಾಜ್ಯಪಾಲರ ಭಾಷಣಕ್ಕೆ ಮುಖ್ಯಮಂತ್ರಿಗಳು ನೀಡಿದ ಉತ್ತರಕ್ಕೆ-ಸಿದ್ದರಾಮಯ್ಯ ಪ್ರತಿಕ್ರಿಯೆ

ಬೆಂಗಳೂರು,ಫೆ, 23 : ರಾಜ್ಯಪಾಲರು ಈ ಬಾರಿ ಸರ್ಕಾರದ ಒಂದು ವರ್ಷದ ಸಾಧನೆಯ ವರದಿಯನ್ನು ಸದನದಲ್ಲಿ ಓದಿದರು. ಸರ್ಕಾರವು ರಾಜ್ಯಪಾಲರ ಬಾಯಲ್ಲಿ ಹೇಳಿಸಿದ ಮಾತುಗಳಲ್ಲಿ ಬಹುಪಾಲು ಜೊಳ್ಳು ಹಾಗೂ ಈ ಸರ್ಕಾರಕ್ಕೆ ಯಾವುದೇ ಗೊತ್ತು ಗುರಿಗಳು ಇಲ್ಲ ಎಂಬುದರ ಸೂಚಕವಾಗಿವೆ. ಅನೇಕ ಕಡೆ ಕೇಂದ್ರದ ಕಾರ್ಯಕ್ರಮಗಳನ್ನು ಉಲ್ಲೇಖಿಸಲಾಗಿದೆ. ರಾಜ್ಯಪಾಲರ ಭಾಷಣದ ಮೇಲೆ ಸೂಚನೆಗಳನ್ನು ಮಂಡಿಸಿದ ಬಿಜೆಪಿಯ ಶಾಸಕರು ಮೋದಿಯವರನ್ನು ಮತ್ತು ಕೇಂದ್ರದ ಯೋಜನೆಗಳನ್ನು ಶ್ಲಾಘಿಸುವುದಕ್ಕಷ್ಟೆ ಸೀಮಿತಗೊಂಡರು. ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಕಳಪೆ ಭಾಷಣವನ್ನು ಹಿಂದೆಂದೂ ಕೇಳಿರಲಿಲ್ಲ. ಬಂಡವಾಳಿಗರ ಮತ್ತು ಕಾರ್ಪೋರೇಟ್ ಕುಳಗಳ ಮೂಗಿನ ನೇರಕ್ಕೆ ದೇಶವನ್ನು ಮುನ್ನಡೆಸುತ್ತಿರುವ ಮೋದಿ ಅವರು ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದರೆ, ಭಾರತದ ಅತಿ ಶ್ರೀಮಂತರಾದ ಅದಾನಿ ಅಂಬಾನಿ ಮುಂತಾದ 142 ಜನರ ಸಂಪತ್ತು 23 ಲಕ್ಷ ಕೋಟಿಗಳಿದ್ದದ್ದು ಈಗ ಅದು 53 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. ಆದರೆ ಜನರ ಮೇಲಿನ ತೆರಿಗೆ ಹೊರೆ, ಬೆಲೆ ಏರಿಕೆ ಎರಡೂ ದುಪ್ಪಟ್ಟಾಗಿವೆ.

ಮನಮೋಹನಸಿಂಗರ ಕಾಲದಲ್ಲಿ ದೇಶ ಸಂಗ್ರಹಿಸುವ 100 ರೂ ತೆರಿಗೆಯಲ್ಲಿ ಜನರ ತೆರಿಗೆಯ ಪಾಲು 58 ರಷ್ಟಿತ್ತು. ಬಂಡವಾಳಿಗರ ತೆರಿಗೆ ಪಾಲು ಶೇ. 42 ರಷ್ಟಿತ್ತು. ಈಗ ಜನರ ಪಾಲು 75 ಕ್ಕೆ ಏರಿಕೆಯಾಗಿದೆ. ಬಂಡವಾಳಿಗರಿಂದ 25 ರೂಪಾಯಿ ಸಂಗ್ರಹಿಸುತ್ತಿದ್ದಾರೆ. ಇದರ ಫಲವಾಗಿ ದೇಶದ ಬಡವರ ಸಂಖ್ಯೆ ಹೆಚ್ಚುತ್ತಿದೆ. ದೇಶ ದೊಡ್ಡ ಸಾಲಗಾರನಾಗುತ್ತಿದೆ. 2014 ರಲ್ಲಿ 53 ಲಕ್ಷ ಕೋಟಿಗಳಿದ್ದ ದೇಶದ ಸಾಲ 2022 ರ ಕೊನೆಗೆ 152 ಲಕ್ಷ ಕೋಟಿಗಳಷ್ಟಾಗುತ್ತಿದೆ. ದೇಶವು ಸಂಗ್ರಹಿಸುವ 22 ಲಕ್ಷ ಕೋಟಿ ತೆರಿಗೆಯಲ್ಲಿ 9.40 ಲಕ್ಷ ಕೋಟಿ ಬಡ್ಡಿ ಕಟ್ಟಲಾಗುತ್ತಿದೆ. ಅಂದರೆ ದುಡಿದ 100 ರೂಪಾಯಿನಲ್ಲಿ 43 ರೂಪಾಯಿ ಬಡ್ಡಿ ಕಟ್ಟುವುದಕ್ಕೆ ಖರ್ಚು ಮಾಡಲಾಗುತ್ತಿದೆ. ಹಾಗಾಗಿ ಮೋದಿ ಸರ್ಕಾರ ದೇಶದ ಆಸ್ತಿಗಳನ್ನೆಲ್ಲ ಮಾರಾಟಕ್ಕಿಟ್ಟಿದ್ದು, ಏರ್ ಇಂಡಿಯಾ ಸಾಲವನ್ನು ಮೋದಿ ಸರ್ಕಾರವೆ ತೀರಿಸಿ ಕೇವಲ 2700 ಕೋಟಿಗಳನ್ನು ನಗದು ರೂಪದಲ್ಲಿ ಪಡೆದುಕೊಂಡು ಟಾಟಾಗಳಿಗೆ ಬಿಟ್ಟುಕೊಟ್ಟಿದೆ. ಇದನ್ನೇ ಆತ್ಮ ನಿರ್ಭರ ಭಾರತ ಎಂದು ದಾರಿತಪ್ಪಿಸಲಾಗುತ್ತಿದೆ. ರಾಜ್ಯದಿಂದ ಮೋದಿ ಸರ್ಕಾರವು 3 ಲಕ್ಷ ಕೋಟಿ ರೂಗಳಷ್ಟು ವಿವಿಧ ರೂಪದ ತೆರಿಗೆಗಳನ್ನು ಸಂಗ್ರಹಿಸುವ ಕೇಂದ್ರವು ವಾಪಸ್ಸು ನೀಡುತ್ತಿರುವುದು ಕೇವಲ 43 ಸಾವಿರ ಕೋಟಿ. ಇದರಿಂದ ರಾಜ್ಯದ ಆರ್ಥಿಕತೆಯೂ ದಿಕ್ಕುತಪ್ಪಿದೆ. 2018 ರ ವರೆಗೆ 2.42 ಲಕ್ಷ ಕೋಟಿಗಳಷ್ಟಿದ್ದ ರಾಜ್ಯದ ಸಾಲ ಈಗ 4.57 ಲಕ್ಷ ಕೋಟಿಗಳಷ್ಟಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಅಲ್ಪ ಸಂಖ್ಯಾತರ ಕಲ್ಯಾಣ, ಯುವಜನರ ಕಲ್ಯಾಣ ಮತ್ತು ನೇಕಾರರು ಮೀನುಗಾರರು ಕುಂಬಾರರು ಅಕ್ಕಸಾಲಿಗರು, ಮೇದಾರÀರು, ಕ್ಷೌರಿಕರು, ಉಪ್ಪಾರರು ವಿವಿಧ ವಾಹನ ಚಾಲಕರು, ಮಡಿವಾಳರು ಮುಂತಾದ ಕುಶಲ ಕರ್ಮಿಗಳ ಕುರಿತು ಒಂದಕ್ಷರದ ಪ್ರಸ್ತಾಪವಿಲ್ಲ. ಲೋಕೋಪಯೋಗಿ, ಸಣ್ಣ ಕೈಗಾರಿಕೆ, ನಗರ, ಪಟ್ಟಣಗಳ ಅಭಿವೃದ್ಧಿ ಕುರಿತು ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವಿಲ್ಲ. ರಾಜ್ಯಪಾಲರ ಭಾಷಣದಲ್ಲಿ ಜನರ ಕಲ್ಯಾಣದ ಕುರಿತು ಪ್ರಸ್ತಾಪವೂ ಇಲ್ಲ. ಅಭಿವೃದ್ಧಿ ಕುರಿತಾದ ಪ್ರಸ್ತಾಪವೂ ಇಲ್ಲ. ಈ ಕುರಿತು ತಾನು ಏನೂ ಮಾಡಿಲ್ಲ ಎಂದು ಸರ್ಕಾರವೆ ಪ್ರಾಮಾಣಿಕವಾಗಿ ಒಪ್ಪಿಕೊಂಡಿದೆ. ತನ್ನ ಅದಕ್ಷತೆಯನ್ನು ಒಪ್ಪಿಕೊಂಡದ್ದಕ್ಕಾಗಿ ಸರ್ಕಾರಕ್ಕೆ ಅಭಿನಂದಿಸುತ್ತೇನೆ. ಸರ್ಕಾರ ರಾಜ್ಯಪಾಲರ ಮೂಲಕ ಓದಿಸಿದ 116 ಪ್ಯಾರಾಗಳಲ್ಲಿ 22 ಪ್ಯಾರಾಗಳನ್ನು ಕೋವಿಡ್ ಯಶಸ್ವಿ ನಿರ್ವಹಣೆ, 8 ಪ್ಯಾರಾಗಳನ್ನು ಪ್ರವಾಹವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದೇವೆಂದು ಕೊಚ್ಚಿಕೊಳ್ಳಲು ದುರುಪಯೋಗಪಡಿಸಿಕೊಂಡಿದೆ. ಕೋವಿಡ್‍ನಿಂದ ರಾಜ್ಯದಲ್ಲಿ 4 ಲಕ್ಷ ಜನರು ಮರಣ ಹೊಂದಿದ್ದರೆ, ಅಸಂಖ್ಯಾತ ಮಕ್ಕಳು ತಬ್ಬಲಿಗಳಾಗಿವೆ. ವೃದ್ಧ ತಂದೆ ತಾಯಿಗಳು ಅನಾಥರಾಗಿದ್ದಾರೆ. ಆದರೂ ಸಹ ಸರ್ಕಾರ ತಾವು ಸಾಧನೆ ಮಾಡಿದ್ದೇವೆಂದು ರಾಜ್ಯಪಾಲರ ಬಾಯಲ್ಲಿ ಹೇಳಿಸಿದೆ. ಕಳೆದ ಮೇನಲ್ಲಿ ತೌಕ್ತೆ ಚಂಡಮಾರುತ ಬಂದಿತ್ತು. ಆಗಸ್ಟ್‍ನಲ್ಲಿ ಅತಿವೃಷ್ಟಿಯಾಗಿತ್ತು. ಅದರ ಪರಿಹಾರವನ್ನು ಇನ್ನೂ ನೀಡುವುದರಲ್ಲೇ ಇದ್ದಾರೆ. ಇದನ್ನು ಜವಾಬ್ಧಾರಿಯುತ ಸರ್ಕಾರ ಎನ್ನಬಹುದೆ? ನೀರಾವರಿ ಕುರಿತಂತೆಯೂ ರಾಜ್ಯಪಾಲರ ಮಾತುಗಳು ನಿಜಕ್ಕೂ ನಿರಾಶಾದಾಯಕವಾಗಿವೆ. ಯಾವ ಕಾರ್ಯಕ್ರಮಗಳನ್ನು ಎಷ್ಟು ಅನುದಾನದಲ್ಲಿ ರೂಪಿಸಲಾಗಿದೆ ಎಂಬ ಮಾಹಿತಿಯೇ ಇಲ್ಲ. ಈ ಸರ್ಕಾರದಲ್ಲಿ ಅತ್ಯಂತ ನಿರ್ಲಕ್ಷಿತ ಇಲಾಖೆಗಳಲ್ಲಿ ಕೃಷಿಯೂ ಒಂದು. ಪ್ಯಾರಾ 41 ರಲ್ಲಿ ಬೆಂಬಲ ಬೆಲೆ ಯೋಜನೆ ಬಗ್ಗೆ ಪ್ರಸ್ತಾಪಿಸಲಾಗಿದೆ. ನಾನೆಲ್ಲೊ ಈ ವರ್ಷದ ಬೆಂಬಲ ಬೆಲೆ ಇರಬೇಕೆಂದು ನೋಡಿದರೆ 2020-21 ರಲ್ಲಿ ಖರೀದಿಸಿದ್ದನ್ನು ಪ್ರಸ್ತಾಪಿಸಲಾಗಿದೆ.


ಕಿಸಾನ್ ಸಮ್ಮಾನ್ ಯೋಜನೆ 2019 ರಲ್ಲಿ ಪ್ರಾರಂಭವಾಯಿತು. ಆಗ ರಾಜ್ಯ ಸರ್ಕಾರ ಕೇಂದ್ರದ 6000 ದ ಜೊತೆಗೆ 4000 ರೂಗಳನ್ನು ನೀಡುವುದಾಗಿ ಹೇಳಿತ್ತು. ಆದರೆ 2019 ಮತ್ತು 2020 ರಲ್ಲಿ ನೀಡಿದ್ದು ಕೇವಲ ತಲಾವಾರು 2000 ರೂಪಾಯಿಗಳನ್ನು ಮಾತ್ರ. ನಮ್ಮ ಸರ್ಕಾರ ಬಂಡವಾಳ ಆಕರ್ಷಣೆಯಲ್ಲಿ ದೇಶದಲ್ಲಿ 1 ಅಥವಾ 2 ನೇ ಸ್ಥಾನಗಳತ್ತು. ಈಗ ಓಲಾ ಬೈಕ್, ಏಥರ್, ಟಾಟಾ ಎಲೆಕ್ಟ್ರಾನಿಕ್ಸ್ ಮುಂತಾದ ಬೃಹತ್ ಬಂಡವಾಳದ ಕಂಪೆನಿಗಳು 10000 ಕೋಟಿ ಬಂಡವಾಳ ಹೂಡಲು ತಯಾರಿದ್ದವು. ಆದರೆ ಈ ಸರ್ಕಾರ ಆಸಕ್ತಿ ವಹಿಸದ ಕಾರಣ ತಮಿಳುನಾಡಿನ ಪಾಲಾದವು. ರಾಜ್ಯವು ಕೈಗಾರಿಕಾಭಿವೃದ್ಧಿಯಲ್ಲೂ ಹಿಂದೆ ಬಿದ್ದಿದೆ. ಎನ್.ಇ.ಪಿ. ಯಂಥ ಮನೆಹಾಳು ನೀತಿಗಳನ್ನು ಸರ್ಕಾರ ಸಾಧನೆ ಎಂದು ಹೇಳಿಸಿದೆ. ಕಾಲೇಜು- ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರುಳಿಲ್ಲ, ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕಗಳಿಲ್ಲ. ವಿಶ್ವ ವಿದ್ಯಾಲಯಗಳಲ್ಲಿ ವೈಜ್ಞಾನಿಕ ಮನೋಭಾವಗಳಿರುವ ಅಧ್ಯಾಪಕರಿಲ್ಲ. ಸ್ವತಂತ್ರವಾಗಿ ಅಧ್ಯಯನ ಮಾಡುವ, ಬರೆಯುವ ಅಧ್ಯಾಪಕರಿಗೆ ಸರ್ಕಾರದ ಕಿರುಕುಳದ ಭಯ. ಹೀಗಾಗಿ ಸಂಸ್ಕøತದಂಥಹ ಭಾಷೆಗಳ ಹೇರಿಕೆಗಷ್ಟೆ ಎನ್‍ಇಪಿ ಸೀಮಿತವಾಗಿದೆ. ವಸತಿಯ ವಿಚಾರದಲ್ಲಿ ಕೇವಲ ಭವಿಷ್ಯ ನುಡಿಯಲಾಗಿದೆಯೇ ಹೊರತು ಸಾಧನೆಗಳಿಲ್ಲ.ಕಲ್ಯಾಣ ಕರ್ನಾಟಕದ ಹೆಸರು ಬದಲಾಯಿಸಿದೆವು, ಕಛೇರಿಯನ್ನು ಸ್ಥಳಾಂತರಿಸಿದೆವು ಎಂದು ಪ್ಯಾರಾ 75 ರಲ್ಲಿ ಹೇಳಿಕೊಳ್ಳಲಾಗಿದೆ. ಇದನ್ನು ಸಾಧನೆ ಎಂದು ಹೇಳಬಹುದೆ?


ರಾಜ್ಯ ಸರ್ಕಾರ ಅಮೃತ ಹೆಸರಿನಲ್ಲಿ ಹಲವು ಯೋಜನೆಗಳನ್ನು ರಾಜ್ಯಪಾಲರ ಬಾಯಲ್ಲಿ ಪ್ರಸ್ತಾಪ ಮಾಡಿಸಿದೆ. ಅದರಲ್ಲಿ 750 ಗ್ರಾಮಗಳನ್ನು ಆಯ್ಕೆ ಮಾಡಿ ತಲಾ 25 ಲಕ್ಷ ರೂಪಾಯಿಗಳನ್ನು ನೀಡಲಾಗುವುದೆಂದು ಪ್ಯಾರಾ 21 ರಲ್ಲಿ ಪ್ರಸ್ತಾಪಿಸಲಾಗಿದೆ. 25 ಲಕ್ಷ ರೂಪಾಯಿಗಳಲ್ಲಿ ಯಾವ ಗ್ರಾಮವನ್ನು ಅಮೃತ ಗ್ರಾಮ ಮಾಡಲಾಗುತ್ತದೆ? ನಮ್ಮ ಸರ್ಕಾರದ ಅವಧಿಯಲ್ಲಿ ತಲಾ 1 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಒಟ್ಟು ರೂ.1750 ಕೋಟಿಗಳನ್ನು ನೀಡಿ ಮುಖ್ಯಮಂತ್ರಿ ಸುವರ್ಣ ಗ್ರಾಮ ಯೋಜನೆಯಡಿ ಜಾರಿಗೆ ತಂದು ಯಶಸ್ವಿಯಾಗಿ ಅನುಷ್ಟಾನ ಮಾಡಿದ್ದೆವು. ಕೋವಿಡ್ ಸಂದರ್ಭದಲ್ಲಿ ಕಾರ್ಮಿಕ ನಿಧಿಯ ಹಣವನ್ನು ಕಾರ್ಮಿಕರಿಗೆ ಕೊಟ್ಟು ನಾವು ಸಾಧನೆ ಮಾಡಿದ್ದೇವೆ ಎಂದು ಪ್ಯಾರಾ 39 ರಲ್ಲಿ ಪ್ರಸ್ತಾಪಿಸಲಾಗಿದೆ. ಪಶುಪಾಲನೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ರಾಜ್ಯದ ಜಿಡಿಪಿಗೆ ರೂ.1 ಲಕ್ಷ ಕೋಟಿಯವರೆಗೂ ಕೊಡುಗೆ ನೀಡುತ್ತಿರುವ, ಸುಮಾರು 45 ಲಕ್ಷ ರೈತ ಕುಟುಂಬಗಳ ಜೀವನಾಧಾರವಾಗಿರುವ ಪಶುಪಾಲನೆಯನ್ನು ಈ ಮಟ್ಟಿಗೆ ನಿರ್ಲಕ್ಷಿಸಬಹುದೆ? ಪತ್ರಕರ್ತರಿಗೆ ಕೆ.ಎಸ್‍ಆರ್‍ಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಹಳೆಯ ಯೋಜನೆಯನ್ನೆ ಮುಂದುವರಿಸಿ ರಾಜ್ಯಪಾಲರ ಬಾಯಲ್ಲಿ ಸಾಧನೆ ಎಂದು ಹೇಳಿಸಲಾಗಿದೆ. ಸರ್ಕಾರ ಸುಳ್ಳು ಹೇಳಿ, ತನ್ನ ಬೆನ್ನನ್ನು ತಾನೆ ತಟ್ಟಿಕೊಂಡು ಓಡಾಡುತ್ತಿದೆ ಎಂಬುದಕ್ಕೆ ರಾಜ್ಯಪಾಲರ ಭಾಷಣವೆ ಸಾಕ್ಷಿ. ರಾಜ್ಯವು ಅತಿ ಕೆಟ್ಟ ಆಡಳಿತವನ್ನು ಎದುರಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ ಈ ಭಾಷಣವಿದೆ.

Leave a Comment

Your email address will not be published. Required fields are marked *

Translate »
Scroll to Top