ತಮ್ಮ ನಿವಾಸಿದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ

ಬೆಂಗಳೂರು, ಡಿ,27 : ಬಲವಂತದ, ಆಸೆ ಆಮಿಷ ಒಡ್ಡಿ ಮೋಸದಿಂದ ಮತಾಂತರ ಮಾಡುವುದಕ್ಕೆ ನಮ್ಮ ಪಕ್ಷದ ವಿರೋಧವೂ ಇದೆ. ಸೆಕ್ಷನ್ 295 ರಡಿ ಕಾನೂನು ಕ್ರಮ ಜರುಗಿಸಲು ಸಂವಿಧಾನದಲ್ಲಿ ಅವಕಾಶವಿದೆ. ಮದುವೆಯ ಕಾರಣಕ್ಕೆ ಮತಾಂತರವಾದರೆ ಹತ್ತು ವರ್ಷಗಳ ವರೆಗೆ ಶಿಕ್ಷೆ ಕೊಡಬಹುದು ಎಂಬ ನಿಯಮ ಮತಾಂತರ ನಿಷೇಧ ಕಾಯ್ದೆಯಲ್ಲಿ ಇದೆ. ಒಬ್ಬ ಪುರುಷ ಅಥವಾ ಮಹಿಳೆ ಅನ್ಯ ಧರ್ಮದವರನ್ನು ಪ್ರೀತಿಸಿ, ಮದುವೆಯಾಗೋದು ಮತಾಂತರವಾಗುತ್ತಾ? ಇದನ್ನು ನಿರ್ಬಂಧಿಸೋದು ಸಂವಿಧಾನ ಬಾಹಿರವಾಗುತ್ತದೆ. ಮತ ಕ್ರೋಢೀಕರಣವೇ ಮತಾಂತರ ನಿಷೇಧ ಕಾನೂನಿನ ಉದ್ದೇಶ. ಜನರನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸಲು ಹೊರಟಿದ್ದಾರೆ. ನಿರುದ್ಯೋಗ, ಭ್ರಷ್ಟಾಚಾರ, ಹಸಿವು, ಬಡತನ ಹೀಗೆ ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಇವುಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಸರ್ಕಾರ ಮಾಡುತ್ತಿರುವ ಹುನ್ನಾರ. ಈ ಕಾಯ್ದೆ ಒಂದು ಸೀಮಿತ ಧರ್ಮವನ್ನು ಗುರಿಯಾಗಿಟ್ಟುಕೊಂಡು ಜಾರಿಗೆ ತರುತ್ತಿರುವ ದುರುದ್ದೇಶದ ಕಾಯ್ದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನನಗೆ ಮಾಹಿತಿಯಿಲ್ಲ. ಸರ್ಕಾರದಲ್ಲಿ ಆಡಳಿತ ಯಂತ್ರವೇ ಇಲ್ಲದ ಕಾರಣ ಈ ವಿಚಾರ ಯಾವುದೇ ಪರಿಣಾಮ ಬೀರುವುದಿಲ್ಲ. ಅಧಿಕಾರಿಗಳಿಗೆ ವರ್ಗಾವಣೆಗೆ ಲಂಚ ಕೊಟ್ಟು ಸಾಕಾಗಿ ಹೋಗಿದೆ, ಈ ಸರ್ಕಾರ ತೊಲಗಿದರೆ ಸಾಕು ಎಂದು ಅವರಿಗೂ ಅನ್ನಿಸತೊಡಗಿದೆ. ಜನರ ಆಶಯವೂ ಇದೇ ಆಗಿದೆ. ಕೊರೊನಾ ಹಿನ್ನೆಲೆಯ ರಾತ್ರಿ ಕರ್ಫ್ಯೂಗೂ ಹಾಗೂ ನಮ್ಮ ಪಕ್ಷದ ಪಾದಯಾತ್ರೆಗೂ ಯಾವುದೇ ಸಂಬಂಧವಿಲ್ಲ. ಪಾದಯಾತ್ರೆಯನ್ನು ನಾವು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳೊಂದಿಗೆ ಮಾಡುತ್ತೇವೆ. ಪಾದಯಾತ್ರೆಯ ತಯಾರಿ ಕೆಲಸ ನಡೆಯುತ್ತಿದೆ. ಕೊರೊನಾ ಇದ್ದಾಗಲೇ ಬಿಜೆಪಿಯವರು ಜನಾಶೀರ್ವಾದ ಯಾತ್ರೆ ಮಾಡಿದ್ದಾರೆ, ಈಗ ಉತ್ತರ ಪ್ರದೇಶದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಅವರು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ನಮಗೆ ಬೇರೆ ಅವರಿಗೆ ಬೇರೆ ಎಂದು ಎರಡೆರಡು ಕಾನೂನು ಇದೆಯಾ? ಹೀಗಾಗಿ ನಮ್ಮ ಪಾದಯಾತ್ರೆಗೆ ಸರ್ಕಾರ ಯಾವುದೇ ರೀತಿಯ ಕಡಿವಾಣ ಹಾಕಲು ಬರಲ್ಲ.

2009 ರ ನವೆಂರ್ 5 ರಂದು ಚಿದಾನಂದ ಮೂರ್ತಿ ಅವರ ನಾಯಕತ್ವದಲ್ಲಿ ಜೈದೇವ್, ನರಹರಿ, ಬಿ.ಎನ್ ಮೂರ್ತಿ, ಆರ್.ಲೀಲಾ, ಮತ್ತೂರ್ ಕೃಷ್ಣಮೂರ್ತಿ ಮುಂತಾದ ಆರ್.ಎಸ್.ಎಸ್ ಮೂಲದ ನಾಯಕರು ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ರೂಪಿಸುವಂತೆ ಕಾನೂನು ಸಮಿತಿಗೆ ಮನವಿ ನೀಡಿದ್ದರು. ಇದರ ಜೊತೆಗೆ ಮಧ್ಯಪ್ರದೇಶದಲ್ಲಿ ಬಲವಂತದ ಮತಾಂತರ ನಿಷೇಧ ಕಾನೂನು ಜಾರಿಗೆ ತಂದಿದ್ದಾರೆ. ಆ ಕಾನೂನು ಸರಿಯಾಗಿದೆ, ತಾವು ದಿ ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಅಧಿನಿಯಮವನ್ನು ಮಾದರಿಯಾಗಿಟ್ಟುಕೊಂಡು, ಆ ಕಾನೂನಿನಲ್ಲಿ ಮಧ್ಯಪ್ರದೇಶ ತೆಗೆದು ಕರ್ನಾಟಕ ಎಂಬ ಪದ ಹಾಕಿದರೆ ಸಾಕು ಎಂದು ಸಲಹೆ ನೀಡಿದ್ದರು. ಮಳೀಮಠ್ಅವರು ಕಾನೂನು ಸಮಿತಿ ಅಧ್ಯಕ್ಷರಾಗಿದ್ದರು, ಅವರು ಒಂದು ಕರಡು ಪ್ರತಿ ರೂಪಿಸಿ ಸರ್ಕಾರಕ್ಕೆ ಕಳುಹಿಸಿದ್ದರು. 2015 ರಲ್ಲಿ ನಾನು ಅದನ್ನು ಸಚಿವ ಸಂಪುಟದ ಮುಂದೆ ಇಡುವಂತೆ ಸಹಿ ಮಾಡಿದ್ದೆ. ನಂತರ ಆ ಕಡತ ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯ ಅವರ ಬಳಿ ಹೋಗಿತ್ತು, ನಾನೇ ಆಂಜನೇಯ ಅವರಿಗೆ ಅದನ್ನು ಚರ್ಚೆಗೆ ನಡೆಸುವ ಅಗತ್ಯವಿಲ್ಲ ಎಂದು ಷರಾ ಬರೆಯುವಂತೆ ಹೇಳಿ ಕಡತವನ್ನು ಕ್ಲೋಸ್ ಮಾಡಿಸಿದ್ದೆ. ಬಿಜೆಪಿಯವರು ಬರೀ ಸುಳ್ಳು ಹೇಳುವವರಿಂದಲೇ ತುಂಬಿದೆ. ನರೇಂದ್ರ ಮೋದಿ ಅವರಿಂದ ಹಿಡಿದು ಎಲ್ಲರೂ ಬರೀ ಸುಳ್ಳು ಹೇಳೋರೆ. ಈ ಹಿಂದಿನ ಮತಾಂತರ ನಿಷೇಧ ಕರಡು ರೂಪಿಸಲು ತಮ್ಮದೇ ಸರ್ಕಾರ ಕಾರಣ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಇದನ್ನು ಆರ್.ಎಸ್.ಎಸ್ ನವರೇ ಮಾಡಿಸಿದ್ದು ಎಂದು ಈಶ್ವರಪ್ಪನವರೂ ಒಪ್ಪಿಕೊಂಡಿದ್ದಾರೆ. ಹೀಗಿದ್ದಾಗ ನಮ್ಮ ಪಾತ್ರ ಏನಿರಲು ಸಾಧ್ಯ? ಬಿಟ್ ಕಾಯಿನ್ ಹಗರಣ, 40% ಕಮಿಷನ್ ಪ್ರಕರಣ, ರೈತ ವಿರೋಧಿ ಕಾನೂನುಗಳ ವಾಪಾಸಾತಿ ಮುಂತಾದ ವಿಚಾರಗಳ ಚರ್ಚೆ ಮಾಡಬೇಕು, ಸದನವನ್ನು ಒಂದು ವಾರ ವಿಸ್ತರಿಸಿ ಎಂದು ಹಲವು ಬಾರಿ ಮನವಿ ಮಾಡಿದೆ. ಸರ್ಕಾರ ಇದಕ್ಕೆ ಅವಕಾಶ ನೀಡದೆ ತರಾತುರಿಯಲ್ಲಿ ಸದನ ಮುಗಿಸಿತು. ಮುಂದೆ ನಾವು ಅಧಿಕಾರಕ್ಕೆ ಬಂದ ಒಂದೇ ವಾರದೊಳಗೆ ಅಥವಾ ಪ್ರಥಮ‌ ಅಧಿವೇಶನದಲ್ಲೇ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುತ್ತೇವೆ. ಇದರಲ್ಲಿ ಅನುಮಾನವೇ ಇಲ್ಲ.

Leave a Comment

Your email address will not be published. Required fields are marked *

Translate »
Scroll to Top