ಸಿದ್ದರಾಮಯ್ಯ ‘ಮೌನ’ದ ಸುತ್ತ ನಾನಾ ವ್ಯಾಖ್ಯಾನ ಕುರ್ಚಿ ಕಾದಾಟದಲ್ಲಿ ಸಿಎಂಗೆ ಹಿನ್ನೆಡೆ?

‘ಅಸಹಾಯಕತೆ’ ಮತ್ತು ‘ಮಾಟ-ಮಂತ್ರ’ದ ಚರ್ಚೆ ತಂದಿಟ್ಟ ಆಪ್ತ ನಾಯಕರು!

Kannada Nadu
ಸಿದ್ದರಾಮಯ್ಯ ‘ಮೌನ’ದ ಸುತ್ತ ನಾನಾ ವ್ಯಾಖ್ಯಾನ ಕುರ್ಚಿ ಕಾದಾಟದಲ್ಲಿ ಸಿಎಂಗೆ ಹಿನ್ನೆಡೆ?

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಸದ್ಯ ಎಲ್ಲರ ಕಣ್ಣು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮೇಲಿದೆ. ಸದಾ ಹರಿತವಾದ ಮಾತುಗಳು, ಖಡಕ್ ನಿಲುವುಗಳಿಗೆ ಹೆಸರಾಗಿದ್ದ ಸಿಎಂ ಸಿದ್ದರಾಮಯ್ಯ ಈಗ ಅಚ್ಚರಿಯ ರೀತಿಯಲ್ಲಿ ‘ಮೌನ’ಕ್ಕೆ ಶರಣಾಗಿದ್ದಾರೆ. ಈ ಮೌನವೇ ಈಗ ಸ್ವಪಕ್ಷದೊಳಗೆ ದೊಡ್ಡ ಸಂಚಲನಕ್ಕೆ ಕಾರಣವಾಗಿದ್ದು, ಅವರ ಅತ್ಯಾಪ್ತರೇ ಸಿಎಂ ನಡೆಯ ಬಗ್ಗೆ ಆತಂಕ ಮತ್ತು ಅಚ್ಚರಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಸಿದ್ದರಾಮಯ್ಯಗೆ ‘ಕಾಂಪ್ರಾಮೈಸ್ ಪಾಲಿಟಿಕ್ಸ್’ ಅನಿವಾರ್ಯ: ಸತೀಶ್ ಜಾರಕಿಹೊಳಿ
ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಈಗ ಹೊಸ ಚರ್ಚೆಗೆ ನಾಂದಿ ಹಾಡಿದೆ. ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, “ಸಿದ್ದರಾಮಯ್ಯ ಅವರಿಗೆ ಈಗ ಕಾಂಪ್ರಾಮೈಸ್ ಪಾಲಿಟಿಕ್ಸ್ (ಸಂಧಾನ ರಾಜ¬ಕಾರಣ) ಅನಿವಾರ್ಯವಾಗಿದೆ,” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
“ಎಲ್ಲಾ ಸಮಯದಲ್ಲೂ ಒಂದೇ ರೀತಿಯ ರಾಜ¬ಕಾರಣ ಮಾಡಲು ಸಾಧ್ಯವಿಲ್ಲ. ಕೆಲವೊಮ್ಮೆ ಕಾಲದ ಅನಿವಾರ್ಯತೆ ನಾಯಕರನ್ನು ಬದಲಿಸುತ್ತದೆ. ಈಗ ಸಿದ್ದರಾಮಯ್ಯ ಅವರಿಗೆ ಕಾಂಪ್ರಾಮೈಸ್ ಮಾಡಿಕೊಳ್ಳುವುದು ಅನಿವಾರ್ಯ” ಎನ್ನುವ ಮೂಲಕ, ಸಿಎಂ ಕುರ್ಚಿ ಉಳಿಸಿಕೊಳ್ಳಲು ಅಥವಾ ಪಕ್ಷದ ಒಳಗಿನ ಭಿನ್ನಮತ ಶಮನ ಮಾಡಲು ಸಿದ್ದರಾಮಯ್ಯ ತಮ್ಮ
ಸಿದ್ಧಾಂತ ಅಥವಾ ನಿಲುವುಗಳಲ್ಲಿ ಸಡಿಲಿಕೆ ಮಾಡಿಕೊಳ್ಳುತ್ತಿದ್ದಾರೆಯೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದ್ದಾರೆ.
‘ಮಾಟ-ಮಂತ್ರ’ದ ಅಸ್ತ್ರ ಪ್ರಯೋಗಿಸಿದ ಕೆ.ಎನ್. ರಾಜಣ್ಣ!
ಮತ್ತೊಂದೆಡೆ, ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆಗಳು ಕಾಂಗ್ರೆಸ್ ಪಾಳಯದಲ್ಲಿ ಇನ್ನಷ್ಟು ಗೊಂದಲ ಸೃಷ್ಟಿಸಿವೆ. ಮೊನ್ನೆ ಅಷ್ಟೇ “ಸಿಎಂ ಧ್ವನಿ ಕುಗ್ಗಿದಾಗ ಅಸಹಾಯಕತೆ ಕಾಡುತ್ತದೆ, ಇಂತಹ ಅಸಹಾಯಕತೆಯನ್ನು ನಾನು ನಿರೀಕ್ಷಿಸಿರಲಿಲ್ಲ” ಎಂದಿದ್ದ ರಾಜಣ್ಣ, ಮಂಗಳವಾರ (ಏಪ್ರಿಲ್ ೨೧) ಮತ್ತೊಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. “ಸಿದ್ದರಾಮಯ್ಯ ಅವರ ಮೇಲೆ ಮಾಟ-ಮಂತ್ರ ಆಗಿರಬಹುದು” ಎಂದು ಹೇಳುವ ಮೂಲಕ ರಾಜಕೀಯ ಆಯಾಮಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ. ಸದಾ ವೈಚಾರಿಕತೆ ಮಾತನಾಡುವ ರಾಜಣ್ಣ ಅವರ ಬಾಯಲ್ಲಿ ಇಂತಹ ಮಾತುಗಳು ಬಂದಿರುವುದು ಸಿಎಂ ಮೌನದ ಆಳ ಎಷ್ಟು ಎನ್ನುವುದನ್ನು ಸಾರಿ ಹೇಳುತ್ತಿದೆ.
ನಾಯಕತ್ವ ಬದಲಾವಣೆಯ ಮುನ್ಸೂಚನೆಯೇ?
ಕಾಂಪ್ರಾಮೈಸ್ ಪಾಲಿಟಿಕ್ಸ್ ಎನ್ನುವ ಪದದ ಹಿಂದೆ ಹೈಕಮಾಂಡ್ ಸೂಚನೆ ಅಥವಾ ಅಧಿಕಾರ ಹಂಚಿಕೆಯ ಸೂತ್ರ ಇರಬಹುದು ಎಂದು ಅಂದಾಜಿಸಲಾಗಿದೆ. ಸಿಎಂ ಅವರ ಧ್ವನಿ ಕುಗ್ಗಿರುವುದು ಅವರ ಆಪ್ತರಿಗೇ ನೋವು ನೀಡುತ್ತಿದ್ದು, ಇದು ಕರ್ನಾಟಕ ಕಾಂಗ್ರೆಸ್‌ನಲ್ಲಿ ಶೀಘ್ರದಲ್ಲೇ ದೊಡ್ಡ ಮಟ್ಟದ ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನಾರಚನೆಯ ಮುನ್ಸೂಚನೆ ನೀಡುತ್ತಿದೆ.
ಸದ್ಯಕ್ಕೆ ಅಹಿಂದ ನಾಯಕನ ಮೌನ ಮತ್ತು ಅವರ ಆಪ್ತರ ಈ ‘ಶಾಕಿಂಗ್’ ಹೇಳಿಕೆಗಳು ಮೈಸೂರಿನಿಂದ ಬೆಂಗಳೂ¬ರಿನವರೆಗೆ ತಲ್ಲಣ ಸೃಷ್ಟಿಸಿವೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಈ ಮೌನ ಮುರಿಯುತ್ತಾರಾ ಅಥವಾ ‘ಅನಿವಾರ್ಯ’ ಸಂಧಾನಗಳಿಗೆ ತಲೆಬಾಗುತ್ತಾರಾ ಎಂದು ಕಾದು ನೋಡಬೇಕಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";