ಹಾವೇರಿ,ಮಾ,9 : ರಷ್ಯಾ ಮತ್ತು ಯುಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಭಾರತದಿಂದ ಬಹಳಷ್ಟು ಮಂದಿ ಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಚಳಗೇರಿಯಿಂದಲೇ ನವೀನ್, ಅಮಿತ್, ಸುಮನ್ ಎಂಬ ಮೂರು ಜನ ವಿದ್ಯಾರ್ಥಿಗಳು ಯುಕ್ರೇನ್ ನಲ್ಲಿ ಓದುತ್ತಿದ್ದರು. ಅವರಲ್ಲಿ ಇಬ್ಬರು ಮಾತ್ರ ಬದುಕುಳಿದು ಮರಳಿ ಬಂದಿದ್ದಾರೆ. ಅಮಿತ್ ಮತ್ತು ನವೀನ್ ಯುದ್ಧ ನಡೆಯುವ ವೇಳೆ ಬಂಕರ್ ನಲ್ಲಿ ಇದ್ದರು, ಬೆಳಿಗ್ಗೆ ಹೊತ್ತು ಆಹಾರ ತರಲು ರೆಸ್ಟೋರೆಂಟ್ ಬಳಿ ನಿಂತಿದ್ದಾಗ ಶೆಲ್ ದಾಳಿಗೆ ನವೀನ್ ಮೃತಪಟ್ಟಿದ್ದಾರೆ. ಅವರ ತಂದೆ ನಂಜನಗೂಡು ಬಳಿಯ ಪೇಪರ್ ಮಿಲ್ ನಲ್ಲಿ ಕೆಲಸದಲ್ಲಿ ಇದ್ದರು. ಹೈಸ್ಕೂಲ್, ಪಿಯುಸಿ ಎಲ್ಲಾ ಮೈಸೂರಿನಲ್ಲಿ ಓದಿದ್ದ ನವೀನ್, ಮೆಡಿಕಲ್ ಓದಲು ಯುಕ್ರೇನ್ ಗೆ ಹೋಗಿದ್ದರು. ನವೀನ್ ಗೆ ಭಾರತದಲ್ಲಿ ಮೆಡಿಕಲ್ ಸೀಟು ಸಿಗದ ಕಾರಣ ಹೊರದೇಶಕ್ಕೆ ಹೋಗಬೇಕಾಯಿತು. ಈ ವೇಳೆ ಶೆಲ್ ದಾಳಿಗೆ ದುರ್ಮರಣಕ್ಕೀಡಾಗಿದ್ದು, ಇದು ನಾಡಿಗೆ ಆದ ನಷ್ಟ. ಮಾರ್ಚ್ ಒಂದರಂದು ದಾಳಿಗೆ ಬಲಿಯಾಗಿದ್ದರೂ ಈ ವರೆಗೆ ನವೀನ್ ಮೃತದೇಹವನ್ನು ಕುಟುಂಬದವರಿಗೆ ನೀಡಿಲ್ಲ. ತಂದೆ ತಾಯಿಗಳಿಗೆ ಕಡೇ ಬಾರಿ ಮಗನ ಮುಖ ನೋಡುವ ಆಸೆಯಿರುತ್ತೆ. ವಿದೇಶಾಂಗ ಸಚಿವಾಲಯ ಮೃತದೇಹ ತರುವ ಕೆಲಸ ಮಾಡಬೇಕಿತ್ತು, ಮಾಡಿಲ್ಲ.
ಎಲ್ಲಾ ದೇಶಗಳ ಜನರು ವಿದೇಶಗಳಿಗೆ ಹೋಗಿ ವ್ಯಾಸಂಗ ಮಾಡೋದು ಸಹಜ. ಹಾಗೆಯೇ ನವೀನ್ ಕೂಡ ಹೋಗಿದ್ದರು. ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಂಡಂತೆ ಕಾಣುತ್ತಿಲ್ಲ. ಇದು ರಾಜಕೀಯ ಕಾರಣಕ್ಕಾಗಿ ಹೇಳುತ್ತಿರುವ ಮಾತಲ್ಲ. ರಷ್ಯಾ ದೇಶ ಯುಕ್ರೇನ್ ಮೇಲೆ ದಾಳಿ ಮಾಡಲಿದೆ ಎಂಬ ವಿಚಾರ ಬಹಳ ದಿನಗಳಿಂದ ಚರ್ಚೆಯಾಗುತ್ತಿತ್ತು. ಈ ಬಗ್ಗೆ ವಿದೇಶಾಂಗ ಕಚೇರಿಗೂ ಮಾಹಿತಿಯಿರುತ್ತೆ. ಯುದ್ಧ ಪ್ರಾರಂಭವಾಗುವ ಮೊದಲೇ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಅಲ್ಲಿರುವ ಭಾರತೀಯರನ್ನು ತವರಿಗೆ ಕರೆತರಬೇಕಿತ್ತು. ಬೇರೆ ದೇಶದ ಬಹುತೇಕ ಜನ ಅವರವರ ದೇಶಕ್ಕೆ ಹೋಗಿದ್ದಾರೆ, ಭಾರತೀಯರೇ ಹೆಚ್ಚು ಜನ ಅಲ್ಲಿ ಯುದ್ಧದ ಮಧ್ಯೆ ಸಿಕ್ಕಿಬಿದ್ದಿರುವುದು. ಒಂದೆರೆಡು ತಿಂಗಳ ಮೊದಲೇ ಭಾರತೀಯರನ್ನು ಕರೆತಂದಿದ್ದರೆ ನವೀನ್ ಪ್ರಾಣ ಉಳಿಯುತ್ತಿತ್ತು. ಕೂಡಲೇ ನವೀನ್ ಅವರ ಮೃತದೇಹವನ್ನು ಭಾರತಕ್ಕೆ ತರಿಸುವ ಕೆಲಸ ಮಾಡಬೇಕು ಎಂದು ವಿದೇಶಾಂಗ ಮಂತ್ರಿಗಳನ್ನು ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ. ಕೋಳಿವಾಡ ಅವರ ಪುತ್ರ ಈ ತಿಂಗಳ ಒಂದರಂದೇ ವಿದೇಶಾಂಗ ಇಲಾಖೆಗೆ ಪತ್ರ ಬರೆದು ವಿಮಾನ ನಮ್ಮ ಬಳಿಯೇ ಇದೆ, ನಾವು ಮೃತದೇಹವನ್ನು ತರುವ ವ್ಯವಸ್ಥೆ ಮಾಡುತ್ತೇವೆ, ನಮಗೆ ಅನುಮತಿ ನೀಡಿ ಎಂದು ಕೇಳಿದ್ದರು. ಆ ಪತ್ರಕ್ಕೆ ಇವತ್ತಿನವರೆಗೆ ಉತ್ತರ ಬಂದಿಲ್ಲ. ಇದರಲ್ಲೇ ಈ ವಿಷಯದಲ್ಲಿ ಕೇಂದ್ರ ಸರ್ಕಾರ ಎಷ್ಟು ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದೆ ಎಂಬುದು ಕಾಣುತ್ತೆ. ಇಂಥಾ ಸಂದರ್ಭದಲ್ಲಿ ವಿದೇಶಾಂಗ ಸಚಿವಾಲಯ ಪಾದರಸದಂತೆ ಕೆಲಸ ಮಾಡಬೇಕು. ವಿದೇಶಾಂಗ ಸಚಿವಾಲಯದ ಅಜಾಗರೂಕತೆಯಿಂದ ನವೀನ್ ಪ್ರಾಣ ಹೋಗಿದೆ.
ಯುದ್ಧ ಆರಂಭವಾದ ನಂತರ ಎಂಟು ದಿನ ವಿದ್ಯಾರ್ಥಿಗಳು ಬಂಕರ್ ನಲ್ಲಿ ದಿನ ಕಳೆದಿದ್ದಾರೆ. ಮೊದಲ ಎರಡು ದಿನ ಬಿಟ್ಟರೆ ಮತ್ತೆ ಊಟ ತಿಂಡಿ ಸರಿಯಾಗಿ ಸಿಗದೆ ಹಸಿವಿನಲ್ಲೇ ಇದ್ದೆವು ಎಂದು ಬದುಕುಳಿದು ವಾಪಾಸು ಬಂದಿರುವ ಸುಮನ ಮತ್ತು ಅಮಿತ್ ನನ್ನ ಜೊತೆ ಮಾತನಾಡುವಾಗ ಹೇಳಿದರು. ಯುಕ್ರೇನ್ ನಲ್ಲಿ ಓದಿ ಬಂದು ಹಳ್ಳಿಯಲ್ಲೇ ಆಸ್ಪತ್ರೆ ಇಟ್ಟು ಬಡವರ ಸೇವೆ ಮಾಡುವ ಕನಸು ತಮ್ಮ ಮಗನಿಗಿತ್ತು ಎಂದು ಮೃತ ನವೀನ್ ತಂದೆ ಶೇಖರ್ ಗೌಡ ನ್ನ ಬಳಿ ಹೇಳಿದರು. ಅವರ ಮಾತು ಕೇಳಿದಾಗ ಕರುಳು ಕಿತ್ತು ಬಂದಂತಾಗುತ್ತೆ. ಎಂಥಾ ಮಹತ್ವಾಕಾಂಕ್ಷೆ ಇತ್ತು, ಅದೆಲ್ಲಾ ಮಣ್ಣು ಪಾಲಾಯಿತು ಎಂದು ಬೇಸರವಾಗುತ್ತೆ. ಇಂಥಾ ಯುವಕರೇ ದೇಶದ ಆಸ್ತಿ. ಅವರ ಸಾವಿನಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ವಿದೇಶಾಂಗ ವ್ಯವಹಾರಗಳ ವಿಷಯದಲ್ಲಿ ನಾವು ರಾಜಕಾರಣ ಮಾಡಲ್ಲ, ಆದರೆ ಈ ಘಟನೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ನವೀನ್ ಮೆರಿಟ್ ವಿದ್ಯಾರ್ಥಿ ಹೌದು, ಆದರೆ ನೀಟ್ ಪರೀಕ್ಷೆಯಲ್ಲಿ ಸರ್ಕಾರಿ ಮೆಡಿಕಲ್ ಸೀಟು ಪಡೆಯುವಷ್ಟುರ್‍ಯಾಂಕ್ ಬಂದಿರಲಿಲ್ಲ. ಹೀಗಾಗಿ ವಿದೇಶಕ್ಕೆ ಹೋಗಬೇಕಾಯಿತು. ಪ್ರಹ್ಲಾದ್ ಜೋಶಿ ಕೇಂದ್ರ ಸಚಿವರಾಗಿದ್ದುಕೊಂಡು ಬೇಜಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಿ, ನವೀನ್ ಮೃತದೇಹ ತರಿಸುವ ಕೆಲಸ ಮಾಡಬೇಕು.
ಶಿಕ್ಷಣ ವ್ಯವಸ್ಥೆ ಸಂಪೂರ್ಣ ಸರಿಯಿದೆ ಎಂದು ಹೇಳಲಾಗಲ್ಲ. ಇಲ್ಲಿ ಸೀಟು ಸಿಗದವರು ಬೇರೆ ದೇಶಕ್ಕೆ ಹೋಗ್ತಾರೆ. ಬೇರೆ ದೇಶದ ವಿದ್ಯಾರ್ಥಿಗಳು ಭಾರತಕ್ಕೆ ಬರ್ತಾರೆ. ಇದೆಲ್ಲಾ ಸಾಮಾನ್ಯವಾಗಿ ನಡೆಯುತ್ತಾ ಇರುವ ಸಂಗತಿ. ನೀಟ್ ಪರೀಕ್ಷೆಯ ಅಂಕ ಮೆಡಿಕಲ್ ಸೀಟ್ ಸಿಗಲು ಮುಖ್ಯವಾಗುತ್ತೆ. ಶಿಕ್ಷಣ ವ್ಯವಸ್ಥೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಇದು ಸೂಕ್ತ ಸಮಯವಲ್ಲ. ಬೇರೊಂದು ಸಮಯದಲ್ಲಿ ಈ ಬಗ್ಗೆ ಮಾತನಾಡೋಣ. ಬೆಲೆಯೇರಿಕೆ ವಿಚಾರವನ್ನು ಸದನದಲ್ಲಿ ಎರಡು ಬಾರಿ ಪ್ರಸ್ತಾಪ ಮಾಡಿದ್ದೇನೆ. ಬೆಲೆ ನಿಯಂತ್ರಣದ ಅಧಿಕಾರ ಕೇಂದ್ರ ಸರ್ಕಾರದ ಬಳಿಯಿದೆ, ನಾವು ಅದನ್ನು ಪ್ರಶ್ನೆ ಮಾಡಬಹುದು. ಸರ್ಕಾರಕ್ಕೆ ಕಣ್ಣು ಕಿವಿ ಇಲ್ಲ. ಏನು ಮಾಡೋದು? ಪಂಜಾಬ್, ಗೋವಾ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗಳಿಸಲಿದೆ. ಗೋವಾದಲ್ಲಿ ಸರಳ ಬಹುಮತದಿಂದ ಸರ್ಕಾರ ರಚಿಸುವ ಎಲ್ಲಾ ಅವಕಾಶ ಕಾಂಗ್ರೆಸ್ ಗೆ ಇದೆ. ಮೇಕೆದಾಟು ಯೋಜನೆ ಜಾರಿಗೆ ಸುಪ್ರೀಂ ಕೋರ್ಟ್ ನಲ್ಲಿ ಯಾವುದೇ ತಡೆಯಾಜ್ಞೆ ಇಲ್ಲ. ಸುಪ್ರೀಂ ಕೋರ್ಟ್ 2018 ರಲ್ಲಿ ಅಂತಿಮ ತೀರ್ಪು ನೀಡಿ ಯಾವ ರಾಜ್ಯಗಳಿಗೆ ಎಷ್ಟು ನೀರು ಎಂದು ಹೇಳಿದೆ. ಕೇಂದ್ರ ಜಲಸಂಪನ್ಮೂಲ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರು ತಮಿಳುನಾಡಿನ ಪರ ಹೇಳಿಕೆ ನೀಡಿದ್ದಾರೆ ಅನ್ನಿಸುತ್ತೆ. ಮೇಕೆದಾಟು ಯೋಜನೆ ವಿವಾದಾತ್ಮಕ ವಿಚಾರ ಎಂದು ಅವರು ಏಕೆ ಹೇಳಿದ್ದು? ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಬಗೆಹರಿದಿದೆ. ಮತ್ತೆ ಇದು ಹೇಗೆ ವಿವಾದ ಆಗುತ್ತೆ?
ಕೇಂದ್ರ ಸರ್ಕಾರ ತಮಿಳುನಾಡಿನ ಮತಗಳಿಗಾಗಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ನಮಗೆ ಬರೀ ಪರಿಸರ ಅನುಮತಿ ಪತ್ರ ಬೇಕಿದೆ. ಹಾಗಾಗಿ ನಾನು ಇಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಎರಡೂ ಕಡೆ ಬಿಜೆಪಿ ಬಂದರೆ ಡಬ್ಬಲ್ ಇಂಜಿನ್ ಸರ್ಕಾರ ಬರುತ್ತೆ, ಕರ್ನಾಟಕ ಸ್ವರ್ಗ ಆಗುತ್ತೆ ಎಂದಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷವಾಗ್ತಾ ಬಂತು, ಒಂದು ಪರಿಸರ ಅನುಮತಿ ಪತ್ರ ಪಡೆಯಲು ಆಗಿಲ್ಲ. ಮಹದಾಯಿ ಯೋಜನೆ ಕೆಲಸ ಶುರು ಮಾಡಬೇಕು ಅಷ್ಟೆ. ಯಡಿಯೂರಪ್ಪ ಅವರು ಹಿಂದೆ ನಾವು ಅಧಿಕಾರಕ್ಕೆ ಬಂದ ಇಪ್ಪತ್ನಾಲ್ಕು ಗಂಟೆಯೊಳಗೆ ಮಹದಾಯಿ ಸಮಸ್ಯೆಗೆ ಪರಿಹಾರ ಹುಡುಕಿಕೊಡ್ತೇವೆ, ಇದನ್ನು ರಕ್ತದಲ್ಲಿ ಬರೆದುಕೊಡ್ತೀನಿ ಎಂದಿದ್ದರು. ಇವೆಲ್ಲಾ ಬರೀ ಸುಳ್ಳು. ಬಿಜೆಪಿಯವರು ಸ್ವದೇಶಿ ಉತ್ಪಾದನೆ ಮಾಡುತ್ತೇವೆ ಎಂದು ಹೇಳಿ ಸುಳ್ಳುಗಳ ಉತ್ಪಾದನೆ ಮಾಡುತ್ತಿದ್ದಾರೆ. ಬಿಜೆಪಿಯವರದು ಹೇಡಿ ಸರ್ಕಾರ. ಮೋದಿ ಅವರ ಎದುರು ನಿಂತು ಮಾತನಾಡಿ, ಪರಿಸರ ಅನುಮತಿ ಪತ್ರ ಪಡೆಯುವ ಧೈರ್ಯ ರಾಜ್ಯ ಬಿಜೆಪಿ ಸರ್ಕಾರಕ್ಕಾಗಲೀ, ಬಿಜೆಪಿ ಸಂಸದರಿಗಾಗಲೀ ಇಲ್ಲ. ರಾಜ್ಯದಿಂದ ಪ್ರತೀ ವರ್ಷ ರೂ. 3 ಲಕ್ಷ ಕೋಟಿ ವಿವಿಧ ರೀತಿಯ ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಹೋಗುತ್ತೆ. ಇದರಲ್ಲಿ ಕನಿಷ್ಠ 42% ತೆರಿಗೆ ಪಾಲು ಕೊಟ್ಟರೆ ರೂ. 1,26,000 ಕೋಟಿ ನಮ್ಮ ರಾಜ್ಯಕ್ಕೆ ಕೊಡಬೇಕು. ಆದರೆ ನಮಗೆ ಕೊಡುತ್ತಿರೋದು ರೂ. 47,000 ಮಾತ್ರ. ಮನಮೋಹನ್ ಸಿಂಗ್ ಅವರ ಸರ್ಕಾರದ ಕೊನೆಯಲ್ಲಿ ಇದ್ದ ದೇಶದ ಒಟ್ಟು ಸಾಲ ರೂ. 53 ಲಕ್ಷ ಕೋಟಿ, ಬಿಜೆಪಿ ಅಧಿಕಾರಕ್ಕೆ ಬಂದ ಎಂಟು ವರ್ಷದಲ್ಲಿ ಈ ಸಾಲ ರೂ. 152 ಲಕ್ಷ ಕೋಟಿಗೆ ಹೆಚ್ಚಾಗಿದೆ. ಸುಮಾರು ನೂರು ಲಕ್ಷ ಕೋಟಿ ಸಾಲ ಮಾಡಿದ್ದಾರೆ, ಆದರೂ ಬೆಲೆಯೇರಿಕೆ ನಿಂತಿಲ್ಲ.
ಸ್ವಾತಂತ್ರ್ಯ ನಂತರದಿಂದ ಹಿಡಿದು ನಾನು ಮುಖ್ಯಮಂತ್ರಿಯಾಗಿದ್ದ ಕೊನೆ ವರ್ಷದ ವರೆಗೆ ರಾಜ್ಯದ ಒಟ್ಟು ಸಾಲ ರೂ. 2,42,000 ಕೋಟಿ ಇತ್ತು, ಮುಂದಿನ ವರ್ಷ ಮಾರ್ಚ್ ವೇಳೆಗೆ ರೂ. 5,18,345 ಕೋಟಿ ಆಗಲಿದೆ. ಅಂದರೆ ಸುಮಾರು ಎರಡು ಪಟ್ಟಿಗಿಂತ ಹೆಚ್ಚು. ಮುಂದಿನ ಸಾಲಿನ ಬಜೆಟ್ ಗಾತ್ರ ರೂ. 2,65,720 ಕೋಟಿ, ಅದರಲ್ಲಿ ಸಾಲದ ಅಸಲು ಮತ್ತು ಬಡ್ಡಿ ರೂಪದಲ್ಲಿ ರೂ. 43,000 ಕೋಟಿ ಕಟ್ಟಬೇಕು. ಬಿಜೆಪಿಯವರ ಕೈಯಲ್ಲಿ ರಾಜ್ಯ ಮತ್ತು ದೇಶ ಉಳಿಯುತ್ತಾ? ಮಹಾತ್ಮ ಗಾಂಧಿ ಅವರು ದಂಡಿಯಾತ್ರೆ ಮಾಡಿದ್ದು ದೇಶದ ಸ್ವಾತಂತ್ರ್ಯಕ್ಕಾಗಿ, ನಾವು ಬಳ್ಳಾರಿ ವರೆಗೆ ಪಾದಯಾತ್ರೆ ಮಾಡಿದ್ದು ಅಕ್ರಮ ಗಣಿಗಾರಿಕೆ ನಿಲ್ಲಲಿ ಎಂದು. ಇವರೆಡೂ ಆಗಿತ್ತೋ ಇಲ್ಲವೋ? ಈಗ ಮತ್ತೆ ಪಾದಯಾತ್ರೆ ಮಾಡಿರುವುದು ಬೆಂಗಳೂರು ನಗರಕ್ಕೆ ಕುಡಿಯುವ ನೀರು ಕೊಡಲು. ಇದರಿಂದ ಹತಾಶರಾಗಿ ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಹಿಜಾಬ್ ವಿವಾದ ಕೋರ್ಟ್ ನಲ್ಲಿದೆ. ತೀರ್ಪು ಬಂದ ಮೇಲೆ ಮಾತನಾಡುತ್ತೇನೆ. ಮೊದಲು ಕೇಸರಿ ಶಾಲು ಹಾಕೊಂಡು ಮಕ್ಕಳು ಶಾಲೆಗೆ ಬರ್ತಿದ್ರಾ? ಈಗ ವಿವಾದ ಮಾಡಲು ಹುಟ್ಟುಹಾಕಿದ್ದಾರೆ. ಕೋರ್ಟ್ ತೀರ್ಪು ಏನು ಬರುತ್ತೋ ನೋಡೋಣ.