ಮೈಸೂರು,ಜ,3 : ಮೇಕೆದಾಟು ಯೋಜನೆ ಇವತ್ತು, ನಿನ್ನೆಯದಲ್ಲ. 1968 ರಲ್ಲಿ ಕಾಂಗ್ರೆಸ್ ಸರ್ಕಾರ ಯೋಜನೆ ಜಾರಿಗೆ ಚಿಂತನೆ ನಡೆಸಿತ್ತು. ಆದರೆ ಕಾವೇರಿ ಜಲ ವಿವಾದ ನ್ಯಾಯಾಲಯದಲ್ಲಿ ಇದ್ದುದ್ದರಿಂದ ಯೋಜನೆ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಕಾವೇರಿ ಜಲವಿವಾದ ಇತ್ಯರ್ಥವಾದದ್ದು 2018 ರಲ್ಲಿ. ಈಗಾಗಲೇ ಸಾಕಷ್ಟು ವಿಳಂಬವಾಗಿದೆ, ಇನ್ನಾದರೂ ಯೋಜನೆ ಶೀಘ್ರ ಜಾರಿಯಾಗಬೇಕು ಎಂದು ಕಾಂಗ್ರೆಸ್ ಪಕ್ಷ ಪಾದಯಾತ್ರೆ ಹಮ್ಮಿಕೊಂಡಿದೆ. ನಮ್ಮ ಪಾದಯಾತ್ರೆ ಬಗ್ಗೆ ಕುಮಾರಸ್ವಾಮಿ ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ 2017 ರಲ್ಲಿ ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಕೇಂದ್ರಕ್ಕೆ ಕಳುಹಿಸಿದ್ದೆವು. ಕೇಂದ್ರ ನಮ್ಮ ಡಿ.ಪಿ.ಆರ್ ಅನ್ನು ಒಪ್ಪಿರಲಿಲ್ಲ. ಮತ್ತೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರು ರೂ.9,500 ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಕೇಂದ್ರದ ಅನುಮೋದನೆ ಕಳುಹಿಸಿದ್ದರು. ಆಗ ಒಪ್ಪಿಗೆ ಸಿಗಲಿಲ್ಲ. ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಯಾವುದೇ ರೀತಿಯ ಕಾಲಹರಣ ಮಾಡಿಲ್ಲ. ಕೇಂದ್ರದಲ್ಲಿ ಇರುವುದು ಬಿಜೆಪಿ ಸರ್ಕಾರ. ಯೋಜನೆಗೆ ಅಂತಿಮಒಪ್ಪಿಗೆ ಕೊಡಬೇಕಿರುವುದು ಇವರೆ. ಮೇಕೆದಾಟು ಜಾರಿ ವಿರೋಧಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ನ ಮೊರೆ ಹೋಗಿದ್ದರೂ, ನ್ಯಾಯಾಲಯ ಅವರ ಮನವಿಯನ್ನು ಪುರಸ್ಕರಿಸಿ ಯಾವುದೇ ರೀತಿಯ ತಡೆಯಾಜ್ಞೆ ನೀಡಿಲ್ಲ. ತಮಿಳುನಾಡಿನ ತಮ್ಮ ಪಾಲಿನ ನೀರನ್ನು ಪಡೆಯುವ ಹಕ್ಕು ಬಿಟ್ಟರೆ ಕಾವೇರಿ ವಿಚಾರದಲ್ಲಿ ತಕರಾರು ಎತ್ತುವ ಇನ್ಯಾವುದೇ ರೀತಿಯ ಕಾನೂನು ಹಕ್ಕುಗಳು ಇಲ್ಲ.
ತಮಿಳುನಾಡಿನ ಪಾಲಿನ 177.25 ಟಿ.ಎಂ.ಸಿ ನೀರಿನ ಜೊತೆಗೆ ಈ ವರ್ಷ ಸುಮಾರು 200 ಟಿ.ಎಂ.ಸಿ ಕಾವೇರಿ ನೀರು ವ್ಯರ್ಥವಾಗಿ ಸಮುದ್ರ ಪಾಲಾಗಿದೆ ಎಂಬ ಮಾಹಿತಿ ಇದೆ. ಈ ವ್ಯರ್ಥವಾಗುವ ನೀರನ್ನು ಸದ್ಬಳಕೆ ಮಾಡಲು ರೂಪಿಸಿರುವ ಯೋಜನೆಯೇ ಮೇಕೆದಾಟು ಅಣೆಕಟ್ಟು. ತಮಿಳುನಾಡು ಸರ್ಕಾರ ಕೇವಲ ರಾಜಕೀಯ ಕಾರಣಕ್ಕೆ ಈ ಯೋಜನೆಗೆ ವಿರೋಧ ಮಾಡುತ್ತಿದೆ ಅಷ್ಟೆ. ಕೆಲವು ದಿನಗಳ ಹಿಂದೆ ಸಚಿವ ಗೋವಿಂದ ಕಾರಜೊಳ ಅವರು ಮೇಕೆದಾಟು ಅನುಷ್ಠಾನದಲ್ಲಿ ಕಾಂಗ್ರೆಸ್ ಸರ್ಕಾರ ವಿಳಂಬ ನೀತಿ ಅನುಸರಿಸಿತ್ತು. ಈ ಬಗ್ಗೆ ನನ್ನ ಬಳಿ ಸಾಕ್ಷಿ ಇದೆ, ಮುಂದೆ ಬಿಡುಗಡೆ ಮಾಡುತ್ತೇನೆ ಎಂದು ಗಾಳಿಯಲ್ಲಿ ಗುಂಡು ಹಾರಿಸುವ ಬದಲು ಅವತ್ತೇ ತಮ್ಮ ಬಳಿಯಿರುವ ಸಾಕ್ಷಿ, ದಾಖಲೆಗಳನ್ನು ಬಿಡುಗಡೆ ಮಾಡಬೇಕಿತ್ತು. ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮೇಕೆದಾಟು ಜಾರಿ ವಿರೋಧಿಸಿ ಧರಣಿ ನಡೆಸುತ್ತಿರುವುದು ಸಿ.ಟಿ ರವಿಗೆ ಗೊತ್ತಿಲ್ಲವೇ? ಕಾವೇರಿ ನೀರನ್ನು ಹಂಚಿಕೊಂಡು ಬಾಳಬೇಕು ಎಂದು ಹಾರಿಕೆ ಉತ್ತರ ನೀಡುವ ಸಿ.ಟಿ ರವಿ ಅವರಿಗೆ ನ್ಯಾಯಾಲಯದ ಆದೇಶದಲ್ಲಿ ತಮಿಳುನಾಡಿಗೆ ನೀರಿನ ಹಂಚಿಕೆ ಮಾಡಿರುವುದು ಗೊತ್ತಿಲ್ಲವ? ರಾಜಕೀಯ ಲಾಭಕ್ಕಾಗಿ ಮೇಕೆದಾಟು ವಿರುದ್ಧ ತಮಿಳುನಾಡಿನವರನ್ನು ಎತ್ತಿಕಟ್ಟಿರುವುದೇ ಬಿಜೆಪಿಯವರು. ಈಗ ಎರಡೂ ಕಡೆ ಬಿಜೆಪಿಯವರ ಸರ್ಕಾರವಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಮುಖ್ಯಮಂತ್ರಿಗಳಾಗಲೀ, ಸಂಬಂಧಿತ ಸಚಿವರಾಗಲೀ ಮೇಕೆದಾಟು ಯೋಜನೆಗೆ ಅನುಮತಿ ಕೊಡಿ ಎಂದು ಕೇಂದ್ರ ಸರ್ಕಾರದ ಬಳಿ ಹೋಗಿ ಕೇಳಿದ್ದಾರ?
ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಹರಿದು ಹೋಗುವ 66 ಟಿ.ಎಂ.ಸಿ ನೀರನ್ನು ಸಂಗ್ರಹಿಸಿಟ್ಟು, ಬೇಸಿಗೆಯಲ್ಲಿ ನೀರಿನ ಕೊರತೆಯಾದಾಗ ತಮಿಳುನಾಡಿಗೂ ಬಿಡಲು ಅನುಕೂಲವಾಗುತ್ತೆ, ನಮ್ಮಲ್ಲಿ ಅಗತ್ಯ ಇರುವ ಕಡೆಗೆ ಕುಡಿಯುವ ನೀರನ್ನು ಒದಗಿಸಲು ಬಳಕೆ ಮಾಡಿಕೊಳ್ಳಲೂಬಹುದು. ವಿದ್ಯುತ್ ಉತ್ಪಾದನೆಗೆ ಬಳಕೆಯಾಗುವ ನೀರು ಕೂಡ ತಮಿಳುನಾಡಿಗೆ ಹರಿದು ಹೋಗುತ್ತೆ. ಇದರಿಂದಾಗಿ ನಮ್ಮ ಬೇರೆ ಬೇರೆ ಜಲಾಶಯಗಳಲ್ಲಿ ಸಂಗ್ರಹವಾಗುವ ನೀರನ್ನು ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳ ಜನರ ಉಪಯೋಗಕ್ಕೆ ಕೊಡಲು ಸಾಧ್ಯವಾಗುತ್ತೆ. ಮೇಕೆದಾಟು ಅಣೆಕಟ್ಟು ನಿರ್ಮಾಣವಾಗಿ ನೀರು ಸಂಗ್ರಹಗೊಂಡರೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 50 ವರ್ಷಗಳ ವರೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲ್ಲ. ಇದರಿಂದ ರಾಜ್ಯದ ಎರಡೂವರೆ ಕೋಟಿ ಜನರಿಗೆ ಅನುಕೂಲವಾಗುತ್ತದೆ. ರಾಜ್ಯಕ್ಕೆ ಮೇಕೆದಾಟು ಇಂದು ಇಷ್ಟೆಲ್ಲಾ ಅನುಕೂಲಗಳು ಇದ್ದಾಗ್ಯೂ ರಾಜ್ಯ ಬಿಜೆಪಿ ಸರ್ಕಾರ ಕಳೆದ ಎರಡೂವರೆ ವರ್ಷಗಳಿಂದ ನಿದ್ದೆ ಮಾಡುತ್ತಾಯಿದೆ. ವಿರೋಧ ಪಕ್ಷವಾಗಿ ನಾವು ಇದನ್ನೆಲ್ಲ ನೋಡಿಕೊಂಡು ಸುಮ್ಕನೆ ಇರಬೇಕ? ಬಿಜೆಪಿ ಅವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಅಷ್ಟೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ನಮ್ಮ ರಾಜ್ಯದವರೇ ಆದರೂ ಮೇಕೆದಾಟು ಯೋಜನೆಗೆ ವಿರೋಧ ಮಾಡುತ್ತಿದ್ದಾರೆ. ರಾಜ್ಯದ ಬಿಜೆಪಿ ರಾಜಕೀಯ ಲಾಭಕ್ಕಾಗಿ ಸರ್ಕಾರ ಪರೋಕ್ಷವಾಗಿ ತಮಿಳುನಾಡಿಗೆ ಬೆಂಬಲ ನೀಡುತ್ತಿದೆ. ಇದನ್ನು ವಿರೋಧಿಸಿ ಈ ತಿಂಗಳ 9 ನೇ ತಾರೀಖಿನಿಂದ ಪಾದಯಾತ್ರೆ ನಡೆಸುತ್ತಿದ್ದೇವೆ.
ಮೇಕೆದಾಟು ಯೋಜನೆಗಾಗಿ ನಮ್ಮ ಪಾದಯಾತ್ರೆಯನ್ನು ಗಿಮಿಕ್ ಎಂದು ಕರೆಯುವುದಾದರೆ ಅಡ್ವಾಣಿ ಅವರು ಮಾಡಿದ್ದ ರಥಯಾತ್ರೆಯನ್ನು ನಾವು ಏನೆಂದು ಕರೀಬೇಕು? ಈ ಹಿಂದೆ ನಾವು ಕಾಂಗ್ರೆಸ್ ನಡಿಗೆ ಕೃಷ್ಣ ಕಡೆಗೆ ಎಂಬ ಪಾದಯಾತ್ರೆ ಮಾಡುವಾಗ ಗೋವಿಂದ ಕಾರಜೋಳ ಅವರು ಸಿದ್ದರಾಮಯ್ಯ ಮತ್ತು ಅಂದಿನ ಕೆಪಿಸಿಸಿ ಅಧ್ಯಕ್ಷರಾದ ಪರಮೇಶ್ವರ ಅವರು ದೇಹದ ತೂಕ ಇಳಿಸಿಕೊಳ್ಳಲು ಪಾದಯಾತ್ರೆ ಮಾಡಿದ್ದು ಎಂದು ಸದನದಲ್ಲಿ ವ್ಯಂಗ್ಯವಾಡಿದ್ದರು. 2008-09 ರಲ್ಲಿ ಕೃಷ್ಣ ಮೇಲ್ದಂಡೆ ಮೂರನೆ ಹಂತ ಕಾಮಗಾರಿಗೆ ರೂ. 17,702 ಕೋಟಿ ಬೇಕು ಎಂದು ಅಂದಾಜು ಮಾಡಲಾಗಿತ್ತು, ಈ ಹಿನ್ನೆಲೆಯಲ್ಲಿ ನಾನು ಕೂಡಲ ಸಂಗಮದಲ್ಲಿ ಮಾತನಾಡುವಾಗ ಕಾವೇರಿ ಮತ್ತು ಕೃಷ್ಣ ನದಿ ಪ್ರದೇಶದ ನೀರಾವರಿಗೆ ಯೋಜನೆಗಳ ಅಭಿವೃದ್ಧಿ ಮತ್ತು ಪೂರ್ಣಗೊಳಿಸುವ ಕಾಮಗಾರಿಗಳಿಗೆ ವಾರ್ಷಿಕ ಹತ್ತು ಸಾವಿರ ಕೋಟಿ ರೂಪಾಯಿಯಂತೆ ಮುಂದಿನ ಐದು ವರ್ಷಗಳಲ್ಲಿ ರೂ. 50,000 ಕೋಟಿ ಖರ್ಚು ಮಾಡುತ್ತೇವೆ ಎಂದು ಹೇಳಿದ್ದೆ, ಇದನ್ನೆ ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಿದ್ದೆವು. ನಮ್ಮ ಸರ್ಕಾರ ಐದು ವರ್ಷಗಳಲ್ಲಿ ರೂ. 52,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ, ಖರ್ಚು ಮಾಡಿದ್ದೆವು. ಇದನ್ನು ನಾವು ರಾಜಕೀಯ ಕಾರಣಕ್ಕಾಗಿ ಮಾಡಿದ್ದಲ್ಲ. ನಮ್ಮ ಬದ್ಧತೆ ಆಗಿತ್ತು, ಹಾಗಾಗಿ ನುಡಿದಂತೆ ನಡೆದಿದ್ದೇವೆ. ಕೊವಿಡ್ ನೆಪ ಹೇಳಿ ಸರ್ಕಾರ ನಮ್ಮ ಪಾದಯಾತ್ರೆಯನ್ನು ತಡೆಯುವ ಪ್ರಯತ್ನ ಮಾಡುವ ಸಾಧ್ಯತೆಗಳು ಇವೆ. ಆದರೆ ನಾವು ಎಲ್ಲಾ ರೀತಿಯ ಕೊವಿಡ್ ನಿಯಮಗಳನ್ನು ಅನುಸರಿಸಿಯೇ ಪಾದಯಾತ್ರೆ ನಡೆಸುತ್ತೇವೆ. ಕೊವಿಡ್ ನಿಯಮಗಳನ್ನು ಮುರಿಯುವವರು ಬಿಜೆಪಿಯವರೇ. ಉತ್ತರ ಪ್ರದೇಶದ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ನಡೆಸುತ್ತಿರುವ ಸಭೆಗಳಲ್ಲಿ ಸೇರುವ ಜನ ಮಾಸ್ಕ್ ಹಾಕಿಕೊಂಡು ಬರುತ್ತಾರ? ಸ್ಯಾನಿಟೈಸರ್ ಬಳಸುತ್ತಾರ? ಸ್ವತಃ ಪ್ರಧಾನಿಗಳೇ ನಿಮಯ ಉಲ್ಲಂಘನೆ ಮಾಡುತ್ತಿರೋದು. 40% ಕಮಿಷನ್ ಹಗರಣ, ಬಿಟ್ ಕಾಯಿನ್ ಹಗರಣದ ಬಗ್ಗೆ ಚರ್ಚೆಗೆ ಸದನದಲ್ಲಿ ಅನುಮತಿ ಕೋರಿದ್ದೆ, ಸಮಯಾವಕಾಶ ಕೊರತೆ ಇರುವುದು ಗೊತ್ತಾದಾಗ ಸದನವನ್ನು ಒಂದು ವಾರ ವಿಸ್ತರಿಸುವಂತೆ ಮನವಿ ಕೂಡ ಮಾಡಿದ್ದೆ. ಸರ್ಕಾರ ಈ ನಡುವೆ ಮತಾಂತರ ನಿಷೇಧ ಕಾಯ್ದೆ ತಂದು ಚರ್ಚೆ ಸಾಧ್ಯವಾಗಿಲ್ಲ.