ಕೆಎಸ್‌ಐಸಿ ಮೈಸೂರ್ ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ

ಕೆಎಸ್‌ಐಸಿ(ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ) ವತಿಯಿಂದ ಕರ್ನಾಟಕದ ಪಾರಂಪರಿಕ ಉತ್ಪನ್ನವಾದ ‘ಮೈಸೂರ್ ಸಿಲ್ಕ್’ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಮಾ.೧೦ ರಿಂದ ೧೩ ರವರೆಗೆ ನಗರದ ಹಳೇ ತಾಲ್ಲೂಕು ಕಚೇರಿ ರಸ್ತೆಯ ಶ್ರೀ ವೀರಶೈವ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಇವರು ಮಾ.೧೦ ರ ಬೆಳಿಗ್ಗೆ ೧೦.೩೦ ಕ್ಕೆ ‘ಮೈಸೂರು ಸಿಲ್ಕ್’ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಶ್ರೀ ವೀರಶೈವ ಕಲ್ಯಾಣ ಮಂದಿರದಲ್ಲಿ ಉದ್ಘಾಟಿಸಲಿದ್ದು, ಕೆಎಸ್‌ಐಸಿ ನಿರ್ದೇಶಕ ಜಿ.ಪಿ.ವಿಜಯಕುಮಾರ್ ಅಧ್ಯಕ್ಷತೆ ವಹಿಸುವರು. ಮಾರಾಟ ಮತ್ತು ಪ್ರದರ್ಶನವು ಬೆಳಿಗ್ಗೆ ೧೦ ರಿಂದ ರಾತ್ರಿ ೮ ಗಂಟೆವರೆಗೆ ಇರಲಿದೆ.
ಕೆಎಸ್‌ಐಸಿ ಕರ್ನಾಟಕ ಸರ್ಕಾರದ ಒಂದು ಉದ್ಯಮವಾಗಿದ್ದು, ಇದು ಸಾಂಪ್ರದಾಯಿಕ ಮೈಸೂರು ಸೀರೆಗಳಲ್ಲದೆ ಈಗ ನಾಜೂಕಾದ ವಿನ್ಯಾಸದ ಸಂಗ್ರಹಿತ ‘ಕ್ರೇಪ್ ಡಿ ಚೈನ್’ ಸೀರೆಗಳನ್ನು ಹಾಗೂ ಜಾರ್ಜೆಟ್ ಮತ್ತು ಸಾದಾ ಮುದ್ರಿತ ಸೀರೆಗಳನ್ನು, ಟೈ, ಸ್ಕಾರ್ಫ್ ಇತ್ಯಾದಿ ಉತ್ಪನ್ನಗಳನ್ನು ಪ್ರದರ್ಶಿತಗೊಳಿಸುತ್ತಿದೆ. ಇದಲ್ಲದೆ, ನವನವೀನ ‘ವಿವಾಹ ಸಂಗ್ರಹ’ ಸೀರೆಗಳನ್ನು ಪರಿಚಯಿಸಲಾಗಿದೆ ಹಾಗೂ ಕೆಎಸ್‌ಐಸಿ ಯು ತನ್ನ ಉತ್ಪನ್ನಗಳ ಮೇಲೆ ಶೇ.೨೫ ರವರೆಗೆ ರಿಯಾಯಿತಿಯನ್ನು ನೀಡುತ್ತಿದೆ.
ಭಾರತದಲ್ಲಿ ದೊರೆಯುವ ಇತರೆ ರೇಷ್ಮೆ ವಸ್ತ್ರಗಳಿಗಿಂತ ‘ಮೈಸೂರು ಸಿಲ್ಕ್ ವಿಭಿನ್ನವಾಗಿದೆ. ಇದು ಹಳೇ ಮೈಸೂರು ಪ್ರದೇಶದಲ್ಲಿ ದೊರೆಯುವ ಪ್ರಾಕೃತಿಕ ರೇಷ್ಮೆ ಗೂಡಿನಿಂದ ದೊರೆಯುವ ಅತ್ಯುತ್ತಮ ರೇಷ್ಮೆಯಿಂದ ಮಾಡಲ್ಪಟ್ಟಿದೆ. ಇದು ಬಟ್ಟೆಗಳಿಗೆ ವಿಶಿಷ್ಟವಾದ ಹೊಳಪು ಮತ್ತು ಭೌಗೋಳಿಕ ಸುವಾಸನೆಯನ್ನು ನೀಡುತ್ತದೆ. ಕೆಎಸ್‌ಐಸಿ ಮೈಸೂರು ಸಿಲ್ಕ್ ಸೀರೆಗಳು ಈಗಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟವಾಗುವ ಮತ್ತು ಬೇಡಿಕೆಯಲ್ಲಿರುವ ರೇಷ್ಮೆ ಸೀರೆಗಳಾಗಿವೆ.
ಮೈಸೂರ್ ಸಿಲ್ಕ್ ಸೀರೆಗಳ ಸಾಂಪ್ರದಾಯಿಕ ರೀತಿಯ ಉತ್ಪಾದನೆ, ಬಟ್ಟೆಯಲ್ಲಿ ಅಳವಡಿಸಲಾಗಿರುವ ಹುರಿ ಮಾಡುವ ವಿಧಾನ ಭಾರತದಲ್ಲಿ ದೊರೆಯುವ ಕ್ರೇಪ್ ಸಿಲ್ಕ್ ಬಟ್ಟೆಗಳಲ್ಲಿಯೇ ಅತ್ಯುತ್ತಮವಾಗಿರುವುದಲ್ಲದೇ ಬಟ್ಟೆಗೆ ವಿಶೇಷ ಮೆರಗನ್ನು ನೀಡಿದೆ. ಇದರಲ್ಲಿ ಉಪಯೋಗಿಸಲ್ಪಡುವ ರೇಷ್ಮೆಯು ಪರಿಶುದ್ದವಾಗಿದೆ ಹಾಗೂ ಜರಿಯು ಪರಿಶುದ್ದ ಚಿನ್ನದ್ದಾಗಿದ್ದು ಶೇ.೦.೬೫ ಚಿನ್ನ ಮತ್ತು ಶೇ.೬೫ ರಷ್ಟು ಬೆಳ್ಳಿಯಿಂದ ತಯಾರಿಸಲ್ಪಟ್ಟಿದೆ.
ಈ ಸೀರೆಗಳಿಗೆ ಭೌಗೋಳಿಕ ಗುರುತಿನ ನೋಂದಣಿ ಉI-೧೧ (ಜಿಯೋಗ್ರಾಫಿಕಲ್ ಇಂಡಿಕೇಷನ್ ರಿಜಿಸ್ಟ್ರೇಷನ್) ಪಡೆದುಕೊಂಡಿದೆ. ಇದು ಸರಕುಗಳ ಭೌಗೋಳಿಕ ಗುರುತಿನ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ ೧೯೯೯ ರಲ್ಲಿ ಲೋಕಸಭೆಯಲ್ಲಿ ಅನುಮೋದನೆಗೊಂಡಿದೆ. ಈ ನೋಂದಣಿಯ ಪ್ರಕಾರ ಕೆಎಸ್‌ಐಸಿ ಯು ‘ಮೈಸೂರ್ ಸಿಲ್ಕ್’ ನ ಏಕೈಕ ಮಾಲೀಕತ್ವ ಹೊಂದಿದೆ.
ಕೆಎಸ್‌ಐಸಿ ನಿಗಮಕ್ಕೆ ೨೦೧೬-೧೭, ೨೦೧೮-೧೯, ೨೦೧೯-೨೦ ಹಾಗೂ ೨೦೨೦-೨೧ ನೇ ಆರ್ಥಿಕ ವರ್ಷದಲ್ಲಿ ರಾಜ್ಯದ ಅತ್ಯುತ್ತಮ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಪ್ರದಾನ ಮಾಡಲಾಗುವ ‘ಮುಖ್ಯಮಂತ್ರಿಗಳ ವಾರ್ಷಿಕ ರತ್ನ’ ಪ್ರಶಸ್ತಿ ಲಭಿಸಿದೆ. ಕೆಎಸ್‌ಐಸಿಯು ೨೦೧೨ ರಲ್ಲಿ ಶತಮಾನೋತ್ಸವ ಪೂರೈಸಿದ ರಾಜ್ಯ ಸರ್ಕಾರದ ಮೊದಲ ಸರ್ಕಾರಿ ಉದ್ಯಮವಾಗಿದ್ದು, ಈ ಶತಮಾನೋತ್ಸವದ ನೆನಪಿಗಾಗಿ ದಿ: ೧೫-೧೦-೨೦೧೫ ರಲ್ಲಿ ಭಾರತೀಯ ಅಂಚೆ ಇಲಾಖೆಯ ವತಿಯಿಂದ ‘ಮೈಸ್ಟ್ಯಾಂಪ್ ಅಂಚೆ ಚೀಟಿ ಮತ್ತು ವಿಶೇಷ ಲಕೋಟೆ’ ಯನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *

Translate »
Scroll to Top