ಕಮಲ್ ಹಾಸನ್ ವಿಚಾರದಲ್ಲಿ ಸುಮ್ಮನೆ ಶಿವಣ್ಣನ ಟಾರ್ಗೆಟ್ ಮಾಡ್ತಿದ್ದಾರೆ – ಸುದೀಪ್..!
ಕಮಲ್ ಹಾಸನ್ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಕನ್ನಡ ಅಭಿಮಾನಿಗಳಿಗೆ ಶಿವಣ್ಣ ಮೌನವಾಗಿ ಕೂತದ್ದು ತಪ್ಪು .
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಅಪರೂಪದ ಸ್ಟಾರ್. ಕ್ಲಾಸ್ – ಮಾಸ್ ಸೇರಿದಂತೆ ಯಾವ ಪಾತ್ರಕ್ಕಾದರೂ ಸೈ ಅನ್ನುವಂಥಾ ಮನಸ್ಥಿತಿ ಅವರದ್ದು. ಬಹುಶಃ ಡಾ. ರಾಜ್‌ಕುಮಾರ್ ಅವರನ್ನು ಹೊರತು ಪಡಿಸಿದರೆ ವೆರೈಟಿ ವೆರೈಟಿ ಪಾತ್ರಗಳನ್ನು ಮಾಡಿದ, ಹೊಸಾ ಹೊಸಾ ಪ್ರಯೋಗಗಳಿಗೆ ಒಗ್ಗಿಕೊಂಡ ಮತ್ತೋರ್ವ ಸ್ಟಾರ್ ಅಂದರೆ ಅದು ಡಾ.ಶಿವರಾಜ್ ಕುಮಾರ್ ಮಾತ್ರ.
ಇನ್ನು ಶಿವಣ್ಣ ಕೇವಲ ಚಿತ್ರರಂಗಕ್ಕೆ ಸೀಮಿತವಾದವರಲ್ಲ. ನಾಡು-ನುಡಿಯ ವಿಚಾರದಲ್ಲಿ ಹಲವಾರು ಬಾರಿ ರಸ್ತೆಗೆ ಇಳಿದವರು ಶಿವರಾಜ್ ಕುಮಾರ್. ಕಾವೇರಿ. ಮಹದಾಯಿ ಹೋರಾಟಗಳಲ್ಲಿ ಭಾಗವಹಿಸಿದ್ದ ಶಿವಣ್ಣ ಹಿಂದೊಮ್ಮೆ ಡಬ್ಬಿಂಗ್ ವಿರುದ್ಧದದ ಹೋರಾಟದ ನೇತೃತ್ವವನ್ನು ಕೂಡ ವಹಿಸಿಕೊಂಡಿದ್ದರು.
ಇಂಥಾ ಶಿವರಾಜ್‌ಕುಮಾರ್ ಅವರ ವಿರುದ್ಧ ಇತ್ತೀಚಿಗೆ ಹಲವಾರು ಜನ ಮಾತನಾಡಿದರು. ಕಮಲ್ ಹಾಸನ್ ವಿಚಾರದಲ್ಲಿ ಶಿವರಾಜ್ ಕುಮಾರ್ ಅವರನ್ನು ಗುರಿಯಾಗಿಸಿದರು. ಕಮಲ್ ಹಾಸನ್ ಮಾತನಾಡುವಾಗ ಶಿವಣ್ಣ ಮೌನವಾಗಿ ಕುಳಿತುಕೊಂಡಿದ್ದು ತಪ್ಪು, ಅಲ್ಲಿಯೇ ಕಮಲ್ ಹಾಸನ್ ಗ್ರಹಚಾರ ಬಿಡಿಸಬೇಕಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಚಂದ್ರು ಸೇರಿ ಹಲವರು ಶಿವರಾಜ್‌ಕುಮಾರ್ ಅವರನ್ನು ನಾಡದ್ರೋಹಿ ಎಂದು ಕೂಡ ಕರೆದರು. ಇದೀಗ ಈ ಎಲ್ಲ ವಿಚಾರದ ಕುರಿತು ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಶಿವಣ್ಣನ ಟಾರ್ಗೆಟ್ ಮಾಡಿದರು ಎಂದು ಹೇಳಿದ್ದಾರೆ.
‘ರಿಪಬ್ಲಿಕ್ ಕನ್ನಡ ಟಿವಿ’ ಆಯೋಜಿಸಿದ್ದ ”ಕನ್ನಡ ಸಂಗಮ 2025” ಕಾನ್‌ಕ್ಲೇವ್‌ನಲ್ಲಿ ಭಾಗವಹಿಸಿದ್ದ ಕಿಚ್ಚ ಸುದೀಪ್, ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ. ಮನ ಬಿಚ್ಚಿ ಮಾತನಾಡಿದ್ದಾರೆ. ಇದೇ ಸಮಯದಲ್ಲಿ ಭಾಷಾಭಿಮಾನ-ನಾಡು-ನುಡಿ ಮತ್ತು ಚಿತ್ರರಂಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸುದೀಪ್, ಶಿವಣ್ಣ ಅವರದ್ದು ಮೃದುವಾದ-ಮಗುನಂತಹ ಮನಸು, ಆ ತರಹದ ವ್ಯಕ್ತಿಯನ್ನು ನಾನು ನೋಡಿಲ್ಲ ಎಂದು ಹೇಳಿದ್ದಾರೆ. ಅವರಿಗೆ ಯಾವ ಸಮಯದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ನೀಡಬೇಕೆನ್ನುವುದು ಆ ಕ್ಷಣಕ್ಕೆ ಥಟ್ಟಂತ ಗೊತ್ತಾಗುವುದಿಲ್ಲ ಎಂದು ಹೇಳಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು ಅವರು ಮತ್ತೆ ಅದೇ ಹುಮ್ಮಸ್ಸಿನಿಂದ ಚಿತ್ರರಂಗಕ್ಕೆ ನಮ್ಮ ರಾಜ್ಯಕ್ಕೆ ಮರಳಿದ್ದಾರೆ. ಅವರು ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುವಾಗ ಇಲ್ಲಿ ಪೂಜೆ ಪುನಸ್ಕಾರಗಳೆಲ್ಲ ನಡೆಯುತ್ತಿತ್ತು ಎಂದಿರುವ ಸುದೀಪ್ ಇಂತಹ ಶಿವಣ್ಣ ಸದ್ಯ ಮರಳಿ ಬಂದಿರುವಾಗ ಈ ವಿಚಾರದಲ್ಲಿ ಶಿವಣ್ಣ ಅವರನ್ನು ಎಳೆದು ತರುವ ಅವಶ್ಯಕತೆ ಇತ್ತಾ, ಅವರನ್ನು ಟಾರ್ಗೆಟ್ ಮಾಡುವ ಅವಶ್ಯಕತೆ ಇತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.
ಮುಂದುವರೆದು ಅವರು ಕರೆದರು, ಇವರು ಹೋದರು.. ಕೆಲ ಒಮ್ಮೆ ಸ್ಪೀಕರ್‌ಗಳಲ್ಲಿ ಯಾರು ಏನ್ ಮಾತನಾಡ್ತಿದ್ದಾರೆ ಅನ್ನೋದು ಕೆಳಗಡೆ ಕುಳಿತ ವ್ಯಕ್ತಿಗಳಿಗೆ ಸರಿಯಾಗಿ ಗೊತ್ತಾಗುವುದಿಲ್ಲ ಎಂದು ಹೇಳಿರುವ ಸುದೀಪ್, ಅವರಿಗೆ ಆ ತರ ಏನಾದರೂ ಅನಿಸಿದ್ದರೆ ಅವರು ಅಲ್ಲಿಯೇ ಹೇಳುತ್ತಿದ್ದರು ಎಂದು ಹೇಳಿದ್ದಾರೆ. ಮನೆಯ ಅತಿಥಿಯಾಗಿ ಹೋದಾಗ ಅತಿಥಿಯಾಗಿ ಹೋದಾಗ ಅಲ್ಲಿ ಕುಂತ್ಕೊಂಡು ಮಾತನಾಡಲು ಆಗದಿರಬಹುದು, ಆಮೇಲೆ ವಾಹಿನಿಗಳ ಮೂಲಕ ಅವರು ಹೇಳಿರಬಹುದು ಎಂದು ಹೇಳಿರುವ ಸುದೀಪ್ ಬೇರೆ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ ಆದರೆ ಚಿತ್ರರಂಗದ ವಿಚಾರಕ್ಕೆ ಬಂದರೆ ಶಿವಣ್ಣ ಅವರನ್ನು ಕಾಪಾಡುವುದು ನಮ್ಮ ಧರ್ಮ ಎಂದು ಹೇಳಿದ್ದಾರೆ. ಈಗಾಗಲೇ ನಾವು ಅನೇಕರನ್ನು ಕಳೆದುಕೊಂಡಿದ್ದೇವೆ, ನಮಗೆ ಶಿವಣ್ಣ ಬೇಕು ಎಂದು ಸುದೀಪ್ ಈ ಸಮಯದಲ್ಲಿ ಹೇಳಿದ್ದಾರೆ. ಇನ್ನು ಶಿವಣ್ಣ ಚಿತ್ರರಂಗಕ್ಕೆ ತಮ್ಮ 40 ವರ್ಷಗಳನ್ನು ನೀಡಿದ್ದಾರೆ. ಕಲಾಸೇವೆಯನ್ನು ಮಾಡಿದ್ದಾರೆ. ಈ ವಿಚಾರದ ಕುರಿತು ಕೂಡ ಮಾತನಾಡಿರುವ ಸುದೀಪ್, ಕನ್ನಡ ಚಿತ್ರರಂಗಕ್ಕೆ ಸೇವೆಯನ್ನು ಮಾಡಿರುವ ಶಿವಣ್ಣ ನಾಡು ನುಡಿಯ ವಿಚಾರ ಬಂದಾಗ ಮೊದಲಿಂದ ಮುಂದೆ ಬಂದಿದ್ದಾರೆ. ಹೀಗಿರುವಾಗ ಯಾರದ್ದೋ ತಪ್ಪಿಗೆ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದು ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.