ಸೆಟ್ ಹಾಕಿ ಮೂರು ವರ್ಷವಾದ್ರೂ ಬಿಡುಗಡೆಯಾಗ್ತಿಲ್ಲ ದ್ರುವ ಸರ್ಜಾ ಅವ್ರ KD ಚಿತ್ರ !
ಈ ವರ್ಷ ಸ್ಟಾರ್ ನಟರ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. 7 ತಿಂಗಳು ಕಳೆದರೂ ಯಾವುದೇ ದೊಡ್ಡ ಸಿನಿಮಾ ಬರಲಿಲ್ಲ. ಮುಂದಿನ ತಿಂಗಳು ‘ಎಕ್ಕ’ ಸಿನಿಮಾ ಬರಲು ಸಜ್ಜಾಗುತ್ತಿರುವುದೇ ಸಮಾಧಾನಕರ ವಿಚಾರ. ಇನ್ನು ಕಳೆದ ಡಿಸೆಂಬರ್‌ನಲ್ಲೇ ತೆರೆಗೆ ಬರಬೇಕಿದ್ದ ‘KD’ ಇನ್ನು ಬಿಡುಗಡೆ ಆಗುವ ಲಕ್ಷಣ ಕಾಣ್ತಲ್ಲ.
ಜೋಗಿ ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ನಟನೆಯ ‘KD’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಬೇಕಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಪ್ರೇಮ್ ನಿರ್ದೇಶನದ ಅಂದ್ಮೇಲೆ ಕೊಂಚ ಕುತೂಹಲ ಮೂಡುತ್ತದೆ. ಇನ್ನು ಧ್ರುವ ಸರ್ಜಾ, ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್ ಸೇರಿ ದೊಡ್ಡ ಕಲಾವಿದರ ದಂಡೇ ಸಿನಿಮಾದಲ್ಲಿದೆ.ಕಿಚ್ಚ ಸುದೀಪ್ ಕೂಡ ‘KD’ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಇದೆಲ್ಲದರ ನಡುವೆ ‘KD’ ಸಿನಿಮಾ ರಿಲೀಸ್ ಪದೇ ಪದೆ ತಡವಾಗುತ್ತಿರುವುದು ಸಿನಿರಸಿಕರ ಬೇಸರಕ್ಕೆ ಕಾರಣವಾಗಿದೆ. 2022ರ ಏಪ್ರಿಲ್‌ನಲ್ಲಿ ಸೆಟ್ಟೇರಿದ್ದ ಸಿನಿಮಾ 3 ವರ್ಷ ಕಳೆದರೂ ಬಿಡುಗಡೆ ಆಗಲಿಲ್ಲ ಎನ್ನುವುದೇ ವಿಪರ್ಯಾಸ. ಸ್ಟಾರ್ ನಟರು ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಎನ್ನುವ ಬೇಡಿಕೆ ಇದ್ದರೂ ಯಾರೋ ಕೇಳುವವರು ಇಲ್ಲ.
ವರ್ಷದ ಹಿಂದೆ ‘KD’ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಮಾತನಾಡಿತ್ತು. ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಖಚಿತ ಎಂದಿತ್ತು. ಪರಭಾಷೆಯ ಯಾವುದೇ ಸಿನಿಮಾ ಬಂದರೂ ವಾರ್ ಗ್ಯಾರಂಟಿ, ನಾವ್ ಮಾತ್ರ ಸಿನಿಮಾ ಬಿಡುಗಡೆ ಮುಂದೂಡುವುದಿಲ್ಲ ಎಂದು ನಿರ್ದೇಶಕ ಪ್ರೇಮ್ ಘಂಟಾಘೋಷವಾಗಿ ಹೇಳಿದ್ದರು. ಡಿಸೆಂಬರ್ ಕಳೆದು 7 ತಿಂಗಳಾದರೂ ‘KD’ ಸಿನಿಮಾ ತೆರೆಗೆ ಬರುವ ಸುಳಿವೇ ಇಲ್ಲ.
ವರಲಕ್ಷ್ಮಿ ಹಬ್ಬ ನಿರ್ದೇಶಕ ಪ್ರೇಮ್‌ಗೆ ಅದೃಷ್ಟ. ಈ ಹಿಂದೆ ‘ಜೋಗಿ’ ಸಿನಿಮಾ ಕೂಡ ಅದೇ ಹಬ್ಬದ ಸಂಭ್ರಮದಲ್ಲಿ ತೆರೆಗೆ ಬಂದಿತ್ತು. ಹಾಗಾಗಿ ‘KD’ ಸಿನಿಮಾ ಕೂಡ ಈ ವರ್ಷ ವರಲಕ್ಷ್ಮಿ ಹಬ್ಬಕ್ಕೆ ಬರಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಮತ್ತೆ ಒಂದು ತಿಂಗಳು ಸಿನಿಮಾ ಮುಂದೂಡುವ ಸುಳಿವು ಸಿಗುತ್ತಿದೆ. ಸೆಪ್ಟೆಂಬರ್ 4ಕ್ಕೆ ಸಿನಿಮಾ ಬಿಡುಗಡೆ ಆಗಬಹುದು ಎಂದು ಇದೀಗ ಗಾಂಧಿನಗರದಲ್ಲಿ ಗುಲ್ಲಾಗಿದೆ. ಹಾಗಾಗಿ ಇನ್ನು 3 ತಿಂಗಳು ಕಾಯಬೇಕಿದೆ.
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ‘KD’ ಚಿತ್ರ ನಿರ್ಮಾಣ ಮಾಡಿದೆ. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದ್ದು ಈಗಾಗಲೇ 2 ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಇತ್ತೀಚೆಗೆ ವಿದೇಶದಲ್ಲಿ ‘ಸೆಟ್ಟಾಗಲ್ಲ ಹೋಗೆ ನಂಗೂ ನಿಂಗೂ’ ಸಾಂಗ್ ಶೂಟ್ ಮಾಡಿಕೊಂಡು ಬಂದಿದೆ ಚಿತ್ರತಂಡ. ರೀಷ್ಮಾ ನಾಣಯ್ಯ ಚಿತ್ರದಲ್ಲಿ ಧ್ರುವ ಸರ್ಜಾ ಜೋಡಿಯಾಗಿ ನಟಿಸಿದ್ದಾರೆ.
70ರ ದಶಕದ ಭೂಗತಲೋಕದ ಕತೆಯನ್ನು ‘KD’ ಚಿತ್ರದಲ್ಲಿ ಪ್ರೇಮ್ ಕಟ್ಟಿಕೊಡುತ್ತಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದಲ್ಲಿ ಕಾಳಿದಾಸ ಆಲಂ ಎಂಬ ಪಾತ್ರದಲ್ಲಿ ಧ್ರುವ ನಟಿಸುತ್ತಿದ್ದು ಆತನ ಪತ್ನಿ ಮಚ್ಚ್‌ಲಕ್ಷ್ಮಿ ಆಗಿ ರೀಷ್ಮಾ ಮಿಂಚಿದ್ದಾರೆ.
ಅದ್ಯಾಕೋ ಧ್ರುವ ಸರ್ಜಾ ನಟನೆಯ ಸಿನಿಮಾಗಳೆಲ್ಲಾ ಬಿಡುಗಡೆ ಆಗುವುದು ತಡವಾಗುತ್ತದೆ. ಒಂದೊಂದು ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಮೂರ್ನಾಲ್ಕು ವರ್ಷ ತೆಗೆದುಕೊಳ್ಳುತ್ತಿದ್ದಾರೆ. ಬಳಿಕ ಸಿನಿಮಾ ತೆರೆಗೆ ಬಂದು ನಿರಾಸೆ ಮೂಡಿಸುತ್ತದೆ. ಇನ್ನಾದರೂ ಅವರು ಬದಲಾಗಿ ಬೇಗ ಬೇಗ ಸಿನಿಮಾಗಳನ್ನು ಮಾಡಬೇಕಿದೆ.