ಶಾಲೆ ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಬೇಕು : ಬಸವರಾಜ ಪಾಟೀಲ್ ಸೇಡಂ

ಬಳ್ಳಾರಿ: ಶಾಲೆ ಕೇವಲ ಶಿಕ್ಷಣ ನೀಡದೇ ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಬೇಕು ಎಂದು ಮಾಜಿ ಸಂಸದ, ವಿಕಾಸ ಅಕಾಡಮಿಯ ಮುಖ್ಯಸ್ಥರಾದ ಬಸವರಾಜ ಪಾಟೀಲ್ ಸೇಡಂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಮಂಗಳವಾರ ನಡೆದ `ಆತ್ಮೀಯ ಗೌರವ ಸಮರ್ಪಣೆ’ಯನ್ನು ಸ್ವೀಕರಿಸಿದ ಅವರು, ಶಾಲೆಗಳು ಕೇವಲ ಬರೀ ಶಿಕ್ಷಣ ಕೇಂದ್ರವಾಗದೇ ಸಮಾಜವನ್ನು ಪರಿವರ್ತನೆ ಮಾಡುವ, ಸಮಾಜವನ್ನು ನಿರ್ಮಾಣ ಮಾಡುವ ಕೇಂದ್ರವಾಗಬೇಕು ಎಂದರು.

 

          2003 ರಲ್ಲಿ ಸೇಡಂನಲ್ಲಿ ಪ್ರಾರಂಭವಾದ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಗೆ ಇನ್ಫೋಸಿಸ್ ನೀಡಿದ 10 ಕೋಟಿ ರೂಪಾಯಿ ದೇಣಿಗೆಯಿಂದ ಗ್ರಾಮಗಳಲ್ಲಿ ವೈಯಕ್ತಿಕ 12 ಸಾವಿರ ಶೌಚಾಲಯಗಳ ನಿರ್ಮಾಣದ ಕ್ರಾಂತಿಯೇ ನಡೆದು ಇಡೀ ದೇಶದಲ್ಲೇ ಈ ಯೋಜನೆ ವಿಸ್ತರಣೆಗೆ ಕಾರಣವಾಯಿತು. ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯ ಯಶಸ್ಸು ಮತ್ತು ಶ್ರಮವನ್ನು ಗಮನಿಸಿದ ಇನ್ಫೋಸಿಸ್ನ ಸುಧಾಮೂರ್ತಿ ಮತ್ತು ಕೇಂದ್ರದ ಆಗಿನ ಸಚಿವ ಜೈರಾಂ ರಮೇಶ್ ಅವರು ಒಟ್ಟಾಗಿ ಶೌಚಾಲಯಗಳ ನಿರ್ಮಾಣವನ್ನು ಖುದ್ದಾಗಿ ನೋಡಿ ಸಂತೋಷಪಟ್ಟರು. ಆಗ, ಕೇಂದ್ರ ಸರ್ಕಾರ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ 3,600 ರೂಪಾಯಿ ಆರ್ಥಿಕ ಸಹಾಯ ನೀಡುತ್ತಿತ್ತು. ವೈಯಕ್ತಿಕ ಶೌಚಾಲಯಗಳ ನಿರ್ಮಾಣದ ಪ್ರಗತಿಯನ್ನು ವಿಶೇಷವಾಗಿ ಪರಿಗಣಿಸಿದ ಜೈರಾಂ ರಮೇಶ್ ಅವರು ಆಗಿನ ಸರ್ಕಾರದಲ್ಲಿಯೇ ಶೌಚಾಲಯ ನಿರ್ಮಾಣದ 3,600 ರುಪಾಯಿ ಸಹಾಯದ ಮೊತ್ತವನ್ನು 10 ಸಾವಿರಕ್ಕೆ ಹೆಚ್ಚಿಸಿ, ಆದೇಶಿಸಿದರು. ಈ ಯೋಜನೆಯ ಸದುಪಯೋಗವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪಡೆದು ದೇಶಾದ್ಯಂತ ವೈಯಕ್ತಿಕ ಶೌಚಾಲಯಗಳ ನಿರ್ಮಾಣದ ದೊಡ್ಡ ಕ್ರಾಂತಿಯನ್ನೇ ಮಾಡಿತು ಎಂದರು. 

ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ ಇನ್ಫೋಸಿಸ್ ಸಂಸ್ಥೆಯು 1,800 ಮನೆಗಳನ್ನು ಕಟ್ಟಲಿಕ್ಕೆ ನಮ್ಮ ಸಂಸ್ಥೆಗೆ ಅನುದಾನ ನೀಡಿತು. ಬಸವಕಲ್ಯಾಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ಅಂಜನಾದ್ರಿಯ ಅಭಿವೃದ್ಧಿಗೆ – ಭಕ್ತಾಧಿಗಳ ಗಮನ ಸೆಳೆಯಲು, ಗೃಹಿಣಿಯರ ಆರ್ಥಿಕ ಸ್ವಾವಲಂಭಕ್ಕೆ, ಯುವಶಕ್ತಿಯನ್ನು ಸಾಮರ್ಥ್ಯದ  ಅಭಿವೃದ್ಧಿಗೆ ವಿಶೇಷ ಯೋಜನೆಗಳ ಜಾರಿಗೆ ಶ್ರಮಿಸಿದೆ ಎಂದರು.

ನಮ್ಮ ಸಂಸ್ಥೆಯು ಸರ್ಕಾರದ ಜೊತೆ ಭಿಕ್ಷೆ ಬೇಡುವುದಿಲ್ಲ. ಹಣಕ್ಕಾಗಿ ಸರ್ಕಾರದ ಜೊತೆ ಜಗಳವಾಡುವುದಿಲ್ಲ. ಸಾರ್ವಜನಿಕ ದೇಣಿಗೆಯಿಂದಲೇ ಈವರೆಗೆ 220 ಕೋಟಿ ರೂಪಾಯಿ ಮೌಲ್ಯದ ಜನಪರ ಕೆಲಸಗಳನ್ನು ನಿರ್ವಹಿಸಲಾಗಿದೆ. ಇನ್ಫೋಸಿಸ್ ನೆರವಿನಿಂದಾಗಿ 6000 ಕಂಪ್ಯೂಟರ್ಗಳನ್ನು ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ ಉಚಿತವಾಗಿ ನೀಡಿ, ಶಿಕ್ಷಕರಿಗೆ 1000 ರೂಪಾಯಿ ಶುಲ್ಕದಲ್ಲಿ ಊಟ – ವಸತಿ ಸಮೇತ ಕಂಪ್ಯೂಟರ್ ಬಳಕೆಯ ತರಬೇತಿಯನ್ನು ನೀಡಲಾಗಿದೆ ಎಂದರು.

ಬಸವಕಲ್ಯಾಣವನ್ನು ಪ್ರವಾಸಿ ನಕ್ಷೆಯಲ್ಲಿ ಸೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಮಾಜ ಸೇವೆಗೆ ನಮ್ಮಲ್ಲಿರುವ ಸಜ್ಜನ ಶಕ್ತಿ ಜಾಗೃತಗೊಂಡು ಸಮಾಜಮುಖಿ ಶಕ್ತಿ ಮತ್ತು ಸದೃಢ ಸಮಾಜ ನಿರ್ಮಾಣದ ಚಿಂತನೆಗಳನ್ನು ಸದಾಕಾಲ ಎಚ್ಚರವಾಗಿದ್ದುಕೊಂಡು ಕಾಯಕ ಮತ್ತು ದುಡಿಮೆ ಸಾಯದಂತೆ – ಗುಲಾಮಗಿರಿ ನಮ್ಮನ್ನು ಆವರಿಸದಂತೆ ನಮ್ಮ ಸಂಸ್ಥೆಯು ಸದಾಕಾಲ ಜನಸೇವೆ ಮಾಡುತ್ತಿದೆ ಎಂದು ಅವರು ಹೇಳಿದರು.

ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು, ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ,ಸಂಸ್ಥೆಯು ಸಮಾಜ ಪರಿವರ್ತನೆಯಲ್ಲಿ ವ್ಯವಸ್ಥಿತವಾಗಿ ಪಾಲ್ಗೊಂಡಿರುವುದು ಶ್ಲಾಘನೀಯ. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯೂ ರೈತಣ್ಣನ ಊಟ, ರೈತಣ್ಣನ ಆಸ್ಪತ್ರೆ ಮತ್ತು ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಮೂಲಕ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮದೇ ಆದ  ಶೈಲಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಾ ಬಂದಿರುತ್ತದೆ ಎಂದು ಹೇಳಿದರು.

ರಂಗತೋರಣದ ಕಾರ್ಯದರ್ಶಿ ಕಪ್ಪಗಲ್ ಪ್ರಭುದೇವ ಅವರು ಸ್ವಾಗತ ಕೋರಿ, ಕಾರ್ಯಕ್ರಮ ನಿರೂಪಿಸಿದರು.

 

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು ವಂದಿಸಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ, ಉಪಾಧ್ಯಕ್ಷರಗಳಾದ  ಎಸ್. ದೊಡ್ಡನಗೌಡ, ಸೊಂತಗಿರಿಧರ, ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನ ಗೌಡ, ವಿ. ರಾಮಚಂದ್ರ, ಜಂಟಿ ಖಜಾಂಚಿಯಾದ ನಾಗಳ್ಳಿ ರಮೇಶ, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಉಪ ಸಮತಿ ಚೇರ್ಮನಗಳು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top