ಸಂಡೂರು : ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬರೀ ಸುಳ್ಳು ಘೋಷಣೆ ಮಾಡುತ್ತಾ ಹೊರಟಿದೆ ಬಡವರ ಉದ್ಧಾರ ಮಾಡುವುದು ಬಿಟ್ಟು ಅಂಬಾನಿ ಅದಾನಿ ಶ್ರೀಮಂತ ಉದ್ಯಮಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಗುಡುಗಿದರು. ಅವರು ಸಂಡೂರು ಪಟ್ಟಣದಲ್ಲಿ ಜರುಗಿದ ನೂತನವಾಗಿ ಆಯ್ಕೆಯಾದ ಗ್ರಾಮಪಂಚಾಯಿತಿ ಸದಸ್ಯರುಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಉದ್ಯೋಗ ಖಾತ್ರಿ ಆಹಾರ ಭದ್ರತಾ ಕಾಯ್ದೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಅಳವಡಿಕೆ ಸೇರಿದಂತೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಿರುವುದು ಇತಿಹಾಸದಲ್ಲಿ ದಾಖಲಾಗಿದೆ ಎಂದರು.
ಭ್ರಷ್ಟಾಚಾರವನ್ನು ನಿಲ್ಲಿಸುತ್ತೇವೆ ಎಂದು ನೋಟ್ ಬ್ಯಾನ್ ಮಾಡುವುದರ ಮುಖಾಂತರ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿ ಸುವುದರ ಜೊತೆಗೆ ಭ್ರಷ್ಟಾಚಾರ ನಿಲ್ಲಿಸದೆ, ಹೊಸ ನೋಟುಗಳ ಮುದ್ರಣಕ್ಕೆ ಖರ್ಚು ಮಾಡಿದ ರೂಪಾಯಿ 98 ಕೋಟಿ ಲೆಕ್ಕವನ್ನು ಇಂದಿಗೂ ಮೋದಿ ಕೊಡದೆ ಪರದಾಡುತ್ತಿದ್ದಾರೆ, ಅಚ್ಚೆ ದಿನ್ ಆಯೆಗಾ …. ಇಸ್ ದೇಶ್ ಮೇ …. ಬಿಜೆಪಿಕೊ ಹಾರ್ನ್ ನೈ ಸಕ್ತ … ಮೋದಿ ಭಾಷಣದ ತುಣುಕುಗಳನ್ನು ಅಣಕು ಮಾಡಿ ಕಾರ್ಯಕರ್ತರನ್ನು ನಗಿಸಿದರು. ಗ್ರಾಮ ಪಂಚಾಯತಿಗಳಿಗೆ ಕೋಟಿಗಟ್ಟಲೆ ಹಣ ಅನುದಾನ ಬಿಡುಗಡೆಯಾಗುತ್ತಿದ್ದು ಅಲ್ಲಿನ ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಅನುದಾನ ಬಳಕೆ ಮಾಡಿಕೊಂಡು ಗ್ರಾಮಗಳ ಉದ್ಧಾರಕ್ಕೆ ಮುಂದಾಗಬೇಕಿದೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಅನ್ನಭಾಗ್ಯ ಕಾರ್ಯಕ್ರಮವನ್ನು ಜಾರಿಗೆ ತರುವುದರ ಮೂಲಕ ಹಸಿವು ಮುಕ್ತ ಕರ್ನಾಟಕಕ್ಕೆ ನಾಂದಿ ಹಾಡಿದರು ಜೊತೆಗೆ ರೈತರ ಸಾಲ ಮನ್ನಾ ಕೃಷಿ ಹೊಂಡ ನಿರ್ಮಾಣ, ಆರೋಗ್ಯ , ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಸಾಮಾಜಿಕ ಪ್ರಗತಿಗೆ ಶ್ರಮಿಸಿದರು ಎಂದು ನುಡಿದರು. ನಮ್ಮ ಒತ್ತಾಯದ ಗಿರಾಕಿಯಾಗಿ ಬಂದು ಈ. ತುಕಾರಾಂ ಅವರು ಶಾಸಕರಾಗಿದ್ದಾರೆ ಎಲ್ಲರಿಗೂ ಅಡ್ಜಸ್ಟ್ ಆಗುವುದು ಕಷ್ಟ, ಸೀಟ್ ಬೆಲ್ಟ್ ಇದ್ದಂಗೆ ನೀವೇ ಅಜೆಸ್ಟ್ ಆಗಿ ಹೋಗಿ ಆದರೆ ಪ್ರಾಮಾಣಿಕತೆ ಬಡವರ ಕಷ್ಟಕ್ಕೆ ಮತ್ತು ಸಂಡೂರಿನ ಕ್ಷೇತ್ರಕ್ಕೆ ಹೆಚ್ಚಿನ ಶ್ರಮ ಪಟ್ಟಿದ್ದಾರೆ ಎಂದು ಶಾಸಕರು ವ್ಯಕ್ತಿತ್ವವನ್ನು ಬಣ್ಣಿಸಿದರು.
ಶಾಸಕ ಈ ತುಕಾರಾಮ್ ಅವರು ಮಾತನಾಡಿ ತಾಲೂಕಿನ 580 ಕಿಲೋಮೀಟರ್ ರಸ್ತೆಗಳ ಪೈಕಿ 550 ಕಿಲೋಮೀಟರುಗಳ ರಸ್ತೆ ನಿರ್ಮಾಣವಾಗಿದೆ . ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೊರಾರ್ಜಿ ಆದರ್ಶ ಕಿತ್ತೂರಾಣಿ ಚೆನ್ನಮ್ಮ ಕಸ್ತೂರಿಬಾ 11 ಶಾಲೆಗಳು ಸ್ಥಾಪಿತವಾಗಿ ಮಕ್ಕಳು ಕಲಿಯುತ್ತಿದ್ದಾರೆ. ತಾಲೂಕಿನ ಗ್ರಾಮೀಣ ಭಾಗದ ಆರೋಗ್ಯ ಸೌಲಭ್ಯಕ್ಕಾಗಿ ಅಮೃತ ವಾಹಿನಿ ಯೋಜನೆಯಡಿಯಲ್ಲಿ 13 ವಾಹನ ಗಳು ನುರಿತ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯೊಂದಿಗೆ ದಿನನಿತ್ಯ ಹಳ್ಳಿಗಳಿಗೆ ಸಂಚರಿಸಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಮೊದಲ ಯೋಜನೆ ಇದಾಗಿದೆ ಎಂದರು. ಸಭೆಯಲ್ಲಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರುಗಳು, ವಿವಿಧ ಸಮಾಜದ ಮುಖಂಡರುಗಳನ್ನು ವಿಶೇಷವಾಗಿ ಕೊರೋನಾ ಸಂದರ್ಭದಲ್ಲಿ ಮೃತಪಟ್ಟ ಶವಗಳ ಅಂತ್ಯಸಂಸ್ಕಾರದಲ್ಲಿ ಕೆಲಸ ಮಾಡಿದ ಮುಸ್ಲಿಂ ಸಮಾಜದ ದಾದಾ ಕಲಂದರ್ ಮತ್ತು ಅವರ ತಂಡದ ಸದಸ್ಯರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ವಿರಕ್ತಮಠದ ಪ್ರಭು ಸ್ವಾಮೀಜಿ ಯಶವಂತನಗರದ ಗಂಗಾಧರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಮಾಜಿ ವಿಧಾನಪರಿಷತ್ ಸದಸ್ಯ ಕೆ ಎಸ್ ಎಲ್ ಸ್ವಾಮಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಫೀಕ್, ಮುಂಡರಗಿ ನಾಗರಾಜ್ ಮಾನಯ್ಯ ವಿಮಾನ ನಿಯಾಜಿ ಮಾಜಿ ಅಧ್ಯಕ್ಷ ಸಿ. ಮಹಾಬಲೇಶ್ ರೋಷನ್ ಜಮೀರ್, ಎಚ್ ಕೆ ಹಳ್ಳಿ ಜಯರಾಮ್, ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಿತ್ತರಿಕಿ ಸತೀಶ್, ಏಕಾಂಬ್ರೆಸ್ , ಆಶಾಲತಾ ಸೋಮಪ್ಪ, ತಮಟೆ ಲಕ್ಷ್ಮಣ್, ಜನಾರ್ಧನ್, ಪುರಸಭೆ ಅಧ್ಯಕ್ಷೆ ಅನಿತಾ ವಸಂತ್ ಕುಮಾರ್, ಉಪಾಧ್ಯಕ್ಷ ವೀರೇಶ ಸಿಂದೆ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿದ್ದು ಹಳ್ಳಿಗೌಡ, ಪುರಸಭೆ ಸದಸ್ಯರುಗಳು ಅನೇಕ ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು. ಎಸ್ ಲಾಡ್ ಫೌಂಡೇಶನ್ ವತಿಯಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಉಚಿತ ಕ್ಯಾಂಟೀನ್ ಉದ್ಘಾಟನೆಗೆ ಗಣ್ಯರು ಚಾಲನೆ ನೀಡಿದರು.