ಸೇವಾಲಾಲರು ಸಮಾಜ ಸುಧಾರಕರು: ಮೇಯರ್ ಬಿ.ಶ್ವೇತ

ಬಳ್ಳಾರಿ:        ಸೇವಾಲಾಲರು ತಮ್ಮ ಧನಾತ್ಮಕ ಚಿಂತನೆಗಳಿಂದ ಮೌಢ್ಯಗಳ ಬಗ್ಗೆ ಅರಿವು ಮೂಡಿಸಿದವರು. ಸಮುದಾಯದ ಜನರಿಗೆ ಜಾಗೃತಿ ಮೂಡಿಸುತ್ತಾ, ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದು ಕರೆ ನೀಡುವ ಮೂಲಕ ಸಮಾಜ ಸುಧಾರಕರಾಗಿದ್ದರು ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಬಿ.ಶ್ವೇತ ಅವರು ಹೇಳಿದರು.    

          ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣ ರಸ್ತೆಯ ವಾಲ್ಮೀಕಿ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿ ಅವರು ಮಾತನಾಡಿದರು.

 

          1739ರಲ್ಲಿ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಭೀಮಾನಾಯ್ಕ ಮತ್ತು ಧರ್ಮಿಣಿ ಮಾತೆ ದಂಪತಿಯ ಮಗನಾಗಿ ಜನ್ಮತಾಳಿದ ಸಂತ ಸೇವಾಲಾಲ್‍ರು ಸೂರಗೊಂಡನಕೊಪ್ಪದಲ್ಲಿ ಅನೇಕ ಪವಾಡಗಳನ್ನು ನಡೆಸಿದ್ದಾರೆ ಎಂದು ತಿಳಿಸಿದರು.

          ಸೇವಾಲಾಲರು ಒಬ್ಬ ದನಗಾಯಿ ಗೋಪಾಲಕನಾಗಿ ತಮ್ಮ ಜೀವನದ ಅನುಭವವನ್ನು ತಮ್ಮ ತತ್ವದ ಮೂಲಕ ಜನರಲ್ಲಿನ ಅಜ್ಞಾನವನ್ನು ದೂರ ಮಾಡಿದವರು. ಅಷ್ಟೇ ಅಲ್ಲದೆ ಶಿಕ್ಷಣದ ಮಹತ್ವವನ್ನು ಸಾರುವ ಮೂಲಕ ಎಲ್ಲರೂ ಅಕ್ಷರ ಜ್ಞಾನವನ್ನು ಪಡೆದು ಜಗತ್ತಿಗೆ ದಾರಿ ದೀಪವಾಗಬೇಕು ಎಂದು ಸಾರಿದವರು ಎಂದರು.

          ಸೇವಾಲಾಲರು ತಮ್ಮ ತತ್ವಗಳ ಮೂಲಕ ಲೋಕಕ್ಕೆ ಜ್ಞಾನದ ಮೂಲಕ ಮುಕ್ತಿ ಮಾರ್ಗ ತೋರಿಸಿದರು. ಸರ್ವರನ್ನು ಒಳಗೊಂಡ ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವನೆಯನ್ನು ಮೂಡಲು ಪ್ರೇರೇಪಿಸಿದರು. ತನ್ನ ಸಮಾಜದ ಜನರ ಕಷ್ಟಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಎಂದು ಹೇಳಿದರು.

 

          ಇಂತಹ ಮಹಾನ್ ಸಂತ ನಮ್ಮ ನಾಡಿನಲ್ಲಿ ನೆಲೆಸಿದ್ದರು ಎಂಬುದೇ ನಮಗೆ ಹೆಮ್ಮೆಯ ವಿಚಾರ. ಇವರಂತೆ ಹಲವು ಮಹನೀಯರ ವಿಚಾರಧಾರೆಗಳನ್ನು ನಾವುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿಗಳು ಅರ್ಥಪೂರ್ಣವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

          ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ದಾಖಲಾತಿ ವಿಭಾಗದ ಉಪಮುಖ್ಯ ವೈದ್ಯಾಧಿಕಾರಿಗಳಾದ ಡಾ.ಗುರುನಾಥ ಬಿ.ಚವ್ಹಾಣ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಸೇವಾಲಾಲರು ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದವರು. ಇದಲ್ಲದೆ ಮಾನವ ಜನ್ಮ ಪವಿತ್ರವಾದದ್ದು ಇದನ್ನು ಹಾಳು ಮಾಡಿಕೊಳ್ಳಬೇಡಿ, ವ್ಯಸನಗಳಿಂದ ದೂರವಿರಿ, ಅರಿಷಡ್ ವರ್ಗಗಳನ್ನು ಸುಟ್ಟು ಹಾಕಿ, ಪ್ರಾಮಾಣಿಕರಾಗಿ ಜೀವಿಸಿ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿರಿ ಎಂದು ತಿಳಿಸಿದವರು ಎಂದರು.

 

          ಸೇವಾಲಾಲರು ಅನೇಕ ಪವಾಡಗಳನ್ನು ಮಾಡಿದ್ದಾರೆ. ಬಂಡಿಯನ್ನು ನಗಾರಿಯನ್ನಾಗಿ ಬಾರಿಸುವುದು, ಕೆಸರನ್ನು ಹುಗ್ಗಿ ಪಾಯಸವನ್ನಾಗಿಸುವುದು, ನೀರನ್ನು ತುಪ್ಪ ಮಾಡಿ ಯಜ್ಞ ಮಾಡುತ್ತಿದ್ದರು ಎನ್ನುವ ಪ್ರತೀತಿ ಇದೆ. ದೇವಿ ಮರಿಯಮ್ಮ ಅವರಿಂದ ದೊರೆತ ದಿವ್ಯಶಕ್ತಿಯನ್ನು ಬಂಜಾರರು ಸೇರಿ ಅಲೆಮಾರಿ ಜೀವನ ನಡೆಸುವ ಸಮುದಾಯಗಳನ್ನು ಉದ್ಧರಿಸಲು ಬಳಸಿದ ಸಂತ ಇವರು ಎಂಬ ಕಥೆಗಳು ಚಾಲ್ತಿಯಲ್ಲಿವೆ. ಮಹಾರಾಷ್ಟ್ರದ ಪೌರಾಗಢದಲ್ಲಿ (ಪೌರಾದೇವಿಯ ಸ್ಥಳ) ಸೇವಾಲಾಲರು ಐಕ್ಯರಾದರು ಎಂದು ಇತಿಹಾಸ ಹೇಳುತ್ತದೆ ಎಂದು ತಿಳಿಸಿದರು.

          ಕಾರ್ಯಕ್ರಮದಲ್ಲಿ ಪಿಹೆಚ್‍ಡಿ ಪದವಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕೆ.ವಸಂತ್ ಕುಮಾರ್ ತಂಡದವರು ಸುಗಮ ಸಂಗೀತಗಳನ್ನು ಪ್ರಸ್ತುತ ಪಡಿಸಿದರು.

 

          ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಮೇಯರ್ ಬಿ.ಜಾನಕಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕರಾದ ವೇದಾವತಿ.ಕೆ., ತಾರಾನಾಥ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ರವಿ. ಬಿ ಚೌವ್ಹಾಣ್ ಸೇರಿದಂತೆ ಸಮಾಜದ ಮುಖಂಡರು, ಜನ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸಂಭ್ರಮದ ಮೆರವಣಿಗೆ:

          ಸಂತ ಸೇವಾಲಾಲ್ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯು ಸಂಭ್ರಮದಿಂದ ನಡೆಯಿತು.

          ನಗರದ ಡಾ.ರಾಜ್‍ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಮೈದಾನದ ಆವರಣದಿಂದ ಆರಂಭಗೊಂಡ ಮೆರವಣಿಗೆಗೆ ಮಹಾನಗರ ಪಾಲಿಕೆಯ ಮೇಯರ್ ಬಿ.ಶ್ವೇತ ಅವರು ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.

          ವಿವಿಧ ಸಾಂಸ್ಕಸ್ಕೃತಿಕ ಕಲಾತಂಡಗಳು, ಲಂಬಾಣಿ ಕಸೂತಿಯ ವೇಷ ಧರಿಸಿದ ಮಹಿಳೆಯರು ಮೆರವಣಿಗೆಗೆ ಮೆರಗು ತಂದರು.

 

          ಮೆರವಣಿಗೆಯು ಮುನಿಸಿಪಲ್ ಮೈದಾನದಿಂದ ಆರಂಭವಾಗಿ ಇಂದಿರಾ ವೃತ್ತ, ಗಡಿಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಹಳೇ ಬ್ರೂಸ್‍ಪೇಟೆ ಪೊಲೀಸ್ ಠಾಣೆ, ತೇರು ಬೀದಿ, ಹೆಚ್.ಆರ್.ಗವಿಯಪ್ಪ ವೃತ್ತದ ಮಾರ್ಗವಾಗಿ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವಾಲ್ಮೀಕಿ ಭವನದ ವೇದಿಕೆ ಕಾರ್ಯಕ್ರಮದವರೆಗೆ ಸಾಗಿ ಬಂದಿತು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top