ಚಿಕ್ಕಮಗಳೂರು : ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಿಂದ ಬಾಬಾ ಬುಡನ್ ಗಿರಿಯ 6 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕವಿಕಲ್ಗಂಟಿ ಎಂಬ ಸ್ಥಳದಲ್ಲಿ ಭೂಕುಸಿತದಿಂದಾಗಿ ಬಂದ್ ಆಗಿತ್ತು. ಅಲ್ಲದೆ, ಕೆಲವೆಡೆ ರಸ್ತೆಯೂ ಕಿತ್ತುಹೋಗಿತ್ತು. ಈ ಸಂಬಂಧ ಸಚಿವ ಕೃಷ್ಣ ಬೈರೇಗೌಡ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಇದೇ ಸಂದರ್ಭದಲ್ಲಿ ಶೀಘ್ರ ರಸ್ತೆ ನಿರ್ಮಾಣ ಕೆಲಸ ಆರಂಭಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ ಅವರು, ಬಿಜೆಪಿ -ಜೆಡಿಎಸ್ ಒಟ್ಟಾಗಿ ಆಪರೇಷನ್ ಮಾಡಿ ಜನರಿಂದ ಆಯ್ಕೆಯಾದ ಸರ್ಕಾರವನ್ನು ಬೀಳಿಸೋ ಪುರುಷಾರ್ಧಕ್ಕೆ ಜನ ಇವರನ್ನು ಆಯ್ಕೆ ಮಾಡಿ ಕಳಿಸಿರೋದಾ ಎಂದು ಪ್ರಶ್ನಿಸಿದರಲ್ಲದೆ, ಸರ್ಕಾರ ಬೀಳಿಸೋದನ್ನೇ ಇವರು ರಾಜ್ಯದ ಅಭಿವೃದ್ಧಿ ಅಂತ ತಿಳಿದಿರುವ ಹಾಗಿದೆ. ಸರ್ಕಾರ ಬೀಳಿಸೋದು ಇರಲಿ, ಕೇಂದ್ರದಿಂದ ಯಾವೆಲ್ಲಾ ಯೋಜನೆಯನ್ನು ಇವರು ರಾಜ್ಯಕ್ಕೆ ತಂದಿದ್ದಾರೆ? ಇವರಿಂದ ರಾಜ್ಯಕ್ಕೆ ಕೊಡುಗೆ ಏನು? ಮೊದಲು ತಿಳಿಸಲಿ ಎಂದು ಟೀಕಿಸಿದರು.
ಆಪರೇಷನ್ ಕಮಲ ಮಾಡುವುದೇ ದೊಡ್ಡ ಕೊಡುಗೆಯಾ? ಇವರ ವೈಫಲ್ಯ ಮುಚ್ಚಿಹಾಕಲು ಜನರ ಗಮನ ಬೇರೆಡೆ ಸೆಳೆಯುವ ಯತ್ನ ಮಾಡುತ್ತಿದ್ದಾರೆ. ಕುಮಾರಸ್ವಾಮಿಯವರು ನಮ್ಮ ಭದ್ರಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಯೋಜನೆಗೆ ಕೇಂದ್ರದಿಂದ ಅನುಮತಿ ಕೊಡಿಸಲಿ ಸಾಕು ನಾನು ಅವರ ಕೈಮುಗಿಯುತ್ತೇನೆ ಎಂದು ಛೇಡಿಸಿದರು.