ಕಂದಾಯ ಇಲಾಖೆಯ ಆರು ತಿಂಗಳ ಸಾಧನೆ?

16 ಜಿಲ್ಲೆ-4 ವಿಭಾಗಾವಾರು ಪ್ರಗತಿ ಪರಿಶೀಲನಾ ಸಭೆ

ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಪ್ರತಿ ತಿಂಗಳು ಮಾಸಿಕ ಸಭೆ

ಸಾವಿರಾರು ತಕರಾರು ಅರ್ಜಿಗಳ ವಿಲೇ

ಸರ್ಕಾರಿ ಕಚೇರಿಗಳಿಗೆ ಭೇಟಿ, ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದನೆ

ಜನರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ

ಬೆಂಗಳೂರಿನ ಒತ್ತುವರಿ ತೆರವಿಗೆ ವಿಶೇಷ ಕಾರ್ಯತಂತ್ರ

ಅಕ್ರಮ ಎಸಗಿದ ಅಧಿಕಾರಿಗಳ ಫೈಲ್ ವಿಲೇ, ಶಿಕ್ಷೆ ದೃಢ!

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಆರು ತಿಂಗಳಾಗಿವೆ. ಜನರ ಆಶೋತ್ತರಗಳನ್ನು ಹೊರೆ ಸರ್ಕಾರದ ಮೇಲಿದೆ. ಹೀಗಾಗಿ ಜನರಿಗೆ ಉತ್ತಮ ಸರ್ಕಾರ ಮತ್ತು ಆಡಳಿತ ನೀಡುವ ಜವಾಬ್ದಾರಿಯೂ ನಮಗಿದೆ.

ಇದೇ ಕಾರಣಕ್ಕೆ ಜನರ ದೈನಂದಿನ ಬದುಕಿನ ಜೊತೆಗೆ ಒಂದಲ್ಲಾ ಒಂದು ರೀತಿಯಲ್ಲಿ ಬೆಸೆದುಕೊಂಡೊ  ಕಂದಾಯ ಇಲಾಖೆಯಲ್ಲಿ ಮನೆ ಮಾಡಿರುವ ನೂರಾರು ಸಮಸ್ಯೆಗಳಿಗೆ ಪರಿಹಾರ ನೀಡುವ ಮತ್ತು ಇಲಾಖೆಯನ್ನು ಜನಸ್ನೇಹಿಯನ್ನಾಗಿಸುವ ಉದ್ದೇಶದಿಂದಾಗಿಯೇ ಈ ಮಹತ್ವದ ಇಲಾಖೆಯ ಜವಾಬ್ದಾರಿಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನನಗೆ ವಹಿಸಿದ್ದರು.

 

ಕಂದಾಯ ಇಲಾಖೆಯ ಜವಾಬ್ದಾರಿ ವಹಿಸಿ ಕಳೆದ ಆರು ತಿಂಗಳಿನಿಂದ ಇಲಾಖೆಯ ಕೆಲಸದ ಕಾರ್ಯವೈಖರಿಯನ್ನು ಬದಲಿಸಲು ಸಾಕಷ್ಟು ಶ್ರಮಿಸಲಾಗಿದೆ. ಜನರ ನೂರಾರು ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಲಾಗಿದೆ, ಬಗೆಹರಿಸಲಾಗಿದೆ. ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಕಟು ಎಚ್ಚರಿಕೆ ರವಾನಿಸಲಾಗಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ ಮತ್ತು ಭ್ರಷ್ಟ ಅಧಿಕಾರಿಗಳಿಗೂ ಕಾನೂನಿನ ರುಚಿ ತೋರಿಸಲಾಗಿದೆ. 

16 ಜಿಲ್ಲೆ-4 ವಿಭಾಗಾವಾರು ಪ್ರಗತಿ ಪರಿಶೀಲನಾ ಸಭೆ:

ಕಳೆದ ಆರು ತಿಂಗಳಲ್ಲಿ ಬೀದರ್, ದಕ್ಷಿಣ ಕನ್ನಡ, ಶಿವಮೊಗ್ಗ, ತುಮಕೂರು, ಧಾರವಾಡ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಚಾಮರಾಜನಗರ, ಯಾದಗಿರಿ, ಹಾವೇರಿ, ದಾವಣಗೆರೆ, ಬಾಗಲಕೋಟೆ, ಕೊಪ್ಪಳ, ಗದಗ, ರಾಮನಗರ, ಹಾಸನ ಸೇರಿದಂತೆ 16 ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ.

ಅಲ್ಲದೆ, ಬೆಳಗಾವಿ, ಮೈಸೂರು, ಗುಲಬರ್ಗಾ ಹಾಗೂ ಬೆಂಗಳೂರು ವಿಭಾಗಾವಾರು ಪ್ರಗತಿ ಪರಿಶೀಲನಾ ಸಭೆಯನ್ನೂ ನಡೆಸಲಾಗಿದ್ದು, ಅಧಿಕಾರಿಗಳಿಗೆ ಹಲವಾರು ಸಲಹೆ ಸೂಚನೆಗಳನ್ನು ನೀಡಲಾಗಿದೆ. ಇಲಾಖೆಯ ಕೆಲಸಗಳು ಜನರಿಗೆ ಮತ್ತಷ್ಟು ಹತ್ತಿರವಾಗಲು ಅಗತ್ಯವಾದ ಕ್ರಮಗಳ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸಲಾಗಿದೆ. ಪರಿಣಾಮ ಜನರ ದಶಕಗಳ ಹಲವಾರು ಸಮಸ್ಯೆಗಳಿಗೆ ಇಂದು ಪರಿಹಾರ ದೊರೆತಿದೆ.

ಬಗರ್ ಹುಕುಂ ಅರ್ಜಿಗಳ ವಿಲೇ, ಕಂದಾಯ ಗ್ರಾಮಗಳ ಶೀಘ್ರ ಘೋಷಣೆ, ರೈತರಿಗೆ ಬರ ಪರಿಹಾರ ಮತ್ತು ಅಗತ್ಯ ಸೇವೆಗಳನ್ನು ನೀಡುವ ಹಾಗೂ ಕುಡಿಯುವ ನೀರಿನ ಸಮಸ್ಯೆಗಳು ಕಂಡುಬರುವ ಭಾಗದಲ್ಲಿಅಗತ್ಯವಾಗಿ ಏನೆಲ್ಲಾ ಕ್ರಮಗಳನ್ನು ಜರುಗಿಸಬೇಕು? ಎಂಬ ಕುರಿತು ಸಭೆಯಲ್ಲಿ ಎಲ್ಲಾ ಅಧಿಕಾರಿಗಳಿಗೆ ವಿಶೇಷ ಸೂಚನೆಗಳನ್ನು ನೀಡಲಾಗಿದೆ.

ಸಾವಿರಾರು ತಕರಾರು ಅರ್ಜಿಗಳ ವಿಲೇ:

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 5 ವರ್ಷಕ್ಕೂ ಹಳೆಯ ಸಾವಿರಾರು ತಕರಾರು ಅರ್ಜಿಗಳನ್ನು ತ್ವರಿತ ಗತಿಯಲ್ಲಿ ವಿಲೇ ಮಾಡುವ ಮೂಲಕ ಜನರಿಗೆ ನೆಮ್ಮದಿ ನೀಡಲಾಗಿದೆ.

ಕಳೆದ ಆರು ತಿಂಗಳ ಹಿಂದೆ ಉಪ ವಿಭಾಗಾಧಿಕಾರಿ (ಎಸಿ ಕೋರ್ಟ್) ನ್ಯಾಯಾಲಯದಲ್ಲೇ ರಾಜ್ಯಾದ್ಯಂತ ಸುಮಾರು 62,000 ತಕರಾರು ಅರ್ಜಿಗಳು ವಿಲೇ ಆಗದೆ ಬಾಕಿ ಉಳಿದಿದ್ದವು. ಆದರೆ, ನಾನು ಇಲಾಖೆಯ ಜವಾಬ್ದಾರಿ ವಹಿಸುತ್ತಿಂದ್ದಂತೆ ಈ ಎಲ್ಲಾ ಅರ್ಜಿಗಳನ್ನು ಶೀಘ್ರ ವಿಲೇಗೆ ಸೂಚಿಸಲಾಗಿತ್ತು.

 

ಪರಿಣಾಮ ಇಂದು ಸುಮಾರು 30,000 ಅರ್ಜಿಗಳನ್ನು ಕೇವಲ ಆರು ತಿಂಗಳಲ್ಲಿ ವಿಲೇವಾರಿ ಮಾಡಲಾಗಿದೆ. ಇನ್ನೂ ತಹಶೀಲ್ದಾರ್ ನ್ಯಾಯಾಲಯದಲ್ಲಿ ರಾಜ್ಯಾದ್ಯಂತ ಬಾಕಿ ಇದ್ದ ಸುಮಾರು ಶೇ.60 ರಷ್ಟು ತಕರಾರು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಈ ಮೂಲಕ ರೈತರ ದಶಕಗಳ ಸಮಸ್ಯೆಗೆ ಪರಿಹಾರ ನೀಡಲಾಗಿದೆ.

ಜಿಲ್ಲಾಧಿಕಾರಿಗಳ ಮಾಸಿಕ ಸಭೆ:

ತಕರಾರು ಅರ್ಜಿಗಳ ವಿಲೇ, ಬಗರ್ ಹುಕುಂ ಅರ್ಜಿಗಳ ವಿಲೇ ಹಾಗೂ ಕಂದಾಯ ಗ್ರಾಮಗಳ ತ್ವರಿತ ಘೋಷಣೆ ವಿಚಾರದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಪ್ರಗತಿ ಏನಿದೆ? ಬರ ಪರಿಹಾರ ನೀಡಿಕೆಗೆ ಸಂಬಂಧಿಸಿದಂತೆ “ಫ್ರೂಟ್ಸ್” ತಂತ್ರಾಂಶದಲ್ಲಿ ಶೇಕಡಾ ಎಷ್ಟು ರೈತರ ಸಂಪೂರ್ಣ ಮಾಹಿತಿಯನ್ನು ನಮೂದಿಸಲಾಗಿದೆ?

ಕುಡಿಯುವ ನೀರಿನ ಪೂರೈಕೆಗೆ ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳೇನು? ಎಂಬ ವಿಚಾರದ ಕುರಿತು ತಿಳಿದುಕೊಳ್ಳುವ ಸಲುವಾಗಿಯೇ ಕಳೆದ ಆರು ತಿಂಗಳಿಂದ ಪ್ರತೀ ತಿಂಗಳು ಜಿಲ್ಲಾಧಿಕಾರಿಗಳ ಸಭೆ ಕರೆದು ಪರಿಶೀಲಿಸಲಾಗಿದೆ.

ಅಕ್ರಮ ಎಸಗಿದ್ದ ಅಧಿಕಾರಿಗಳಿಗೆ ಕಾನೂನು ಬಿಸಿ:

ಇಲಾಖೆಯಲ್ಲಿ ಅಕ್ರಮ ಎಸಗಿ, ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸಿಲುಕಿಬಿದ್ದೂ ಸಹ ಕಳೆದ ಐದು ವರ್ಷಗಳಿಂದ ಶಿಕ್ಷೆಗೆ ಒಳಗಾಗದಿದ್ದ, ಸುಮಾರು 350ಕ್ಕೂ ಅಧಿಕ ಭ್ರಷ್ಟ ಅಧಿಕಾರಿಗಳ ಫೈಲ್‌ಗಳನ್ನು ಕಳೆದ ಆರು ತಿಂಗಳಲ್ಲಿ ವಿಲೇವಾರಿ ಮಾಡಲಾಗಿದೆ.

ಈ ಪಟ್ಟಿಯಲ್ಲಿ ಹಲವು ತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳು, ಉಪ ನೋಂದಣಾಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಇದ್ದು, ಹಲವರಿಗೆ ಕಡ್ಡಾಯ ನಿವೃತ್ತಿ, ಪಿಂಚಣಿಯಲ್ಲಿ ಕಡಿತ ಸೇರಿದಂತೆ ಹಲವು ಶಿಕ್ಷೆಗಳಿಗೆ ಗುರಿಪಡಿಸಲಾಗಿದೆ. ಅಲ್ಲದೆ, ಇನ್ನುಳಿದ ಪ್ರಕರಣಗಳನ್ನೂ ಸಹ ಶೀಘ್ರದಲ್ಲಿ ವಿಲೇ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ.

ಸರ್ಕಾರಿ ಕಚೇರಿಗಳಿಗೆ ಭೇಟಿ, ಜನರ ಸಮಸ್ಯಗಳಿಗೆ ಸ್ಥಳದಲ್ಲೇ ಸ್ಪಂದನೆ:

ಕಳೆದ ಆರು ತಿಂಗಳ ಅವಧಿಯಲ್ಲಿ 16 ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲಾಗಿದೆ. ಈ ಎಲ್ಲಾ ಅವಧಿಯಲ್ಲೂ ಸ್ಥಳೀಯ ತಾಲೂಕು ಕಚೇರಿ ಮತ್ತು ನಾಡ ಕಚೇರಿಗಳಿಗೆ ದಿಢೀರ್ ಭೇಟಿ ನೀಡಲಾಗಿತ್ತು. ಈ ವೇಳೆ ರೆಕಾರ್ಡ್ ರೂಂಗಳನ್ನು ಪರಿಶೀಲಿಸುವ ಜೊತೆಗೆ, ಅಧಿಕಾರಿಗಳು ಯಾವೆಲ್ಲಾ ಸೇವೆಗಳನ್ನು ಜನರಿಗೆ ಎಷ್ಟು ದಿನದಲ್ಲಿ ನೀಡುತ್ತಿದ್ದಾರೆ? ಎಂಬ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿತ್ತು.

 

ಅಲ್ಲದೆ, ಸಾರ್ವಜನಿಕರಿಂದಲೂ ಅಹವಾಲು ಸ್ವೀಕರಿಸಲಾಗಿತ್ತು. ಸಣ್ಣ ಪುಟ್ಟ ಕೆಲಸಗಳಿಗೆ ತಿಂಗಳುಗಳಿಂದ-ವರ್ಷಗಳಿಂದ ಅಲೆದಿದ್ದರೂ ಅಧಿಕಾರಿಗಳು ಕೆಲಸ ಮಾಡಿಕೊಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಜನರ ಸೇವೆಗೆ ತ್ವರಿತವಾಗಿ ಸ್ಪಂದಿಸದ ಅಧಿಕಾರಿಗಳಿಗೆ ಸ್ಥಳದಲ್ಲೇ ನೊಟೀಸ್ ಜಾರಿ ಮಾಡಲಾಗಿದೆ. ಅಲ್ಲದೆ, ಜನರ ಕೆಲಸಗಳನ್ನೂ ಅಲ್ಲಿಯೇ ಮಾಡಿಕೊಟ್ಟು, ಜನಸ್ನೇಹಿ ಸೇವೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಬೆಂಗಳೂರಿನ ಒತ್ತುವರಿ ತೆರವಿಗೆ ವಿಶೇಷ ಕಾರ್ಯತಂತ್ರ:

ಬೆಂಗಳೂರಿನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿ ಖಾಸಗಿಯವರ-ಭೂಗಳ್ಳರ ಪಾಲಾಗಿದೆ. ಹೀಗಾಗಿ ಈ ಭೂಮಿಯನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯುವ ಸಲುವಾಗಿ ಜಿಲ್ಲಾಧಿಕಾರಿಗಳು ಹಾಗೂ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಈ ತಂಡಕ್ಕೆ ಪ್ರತೀ ವಾರಾಂತ್ಯದಲ್ಲಿ ಒತ್ತುವಾರಿ ತೆರವು ಕಾರ್ಯಾಚರಣೆಗೆ ಸೂಚಿಸಲಾಗಿದೆ.

ಈ ತಂಡ ಈಗಾಗಲೇ ಬೆಂಗಳೂರಿನಲ್ಲಿ ನೂರಾರು ಕೋಟಿ ಮೌಲ್ಯದ ಕನಿಷ್ಟ 60 ಎಕರೆಗೂ ಅಧಿಕ ಸರ್ಕಾರಿ ಭೂಮಿಯಲ್ಲಿ ಖಾಸಗಿ ಒತ್ತುವರಿಯನ್ನು ತೆರವುಗೊಳಿಸಿದೆ. ಈ ಕಾರ್ಯಾಚರಣೆ ಮುಂದಿನ ದಿನಗಳಲ್ಲೂ ಮುಂದುವರೆಯಲಿದ್ದು, ಸರ್ಕಾರಿ ಭೂಮಿಗಳನ್ನು ಗುರುತಿಸಿ ರಕ್ಷಿಸುವ ಅಧಿಕಾರಿಗಳ “ಬೀಟ್” ವ್ಯವಸ್ಥೆಗೂ ಈಗಾಗಲೇ ಚಾಲನೆ ನೀಡಲಾಗಿದೆ.

 

ಜಿಲ್ಲಾ ಪ್ರವಾಸ, ಪ್ರಗತಿ ಪರಿಶೀಲನಾ ಸಭೆ, ಸರ್ಕಾರಿ ಕಚೇರಿಗಳಿಗೆ ದಿಡೀರ್ ಭೇಟಿಯ ಜೊತೆಗೆ ಕಳೆದ ಆರು ತಿಂಗಳಿನಿಂದ ವಿಕಾಸಸೌಧದ ಕಚೇರಿಯಲ್ಲೂ ಅಧಿಕಾರಿಗಳ ನೂರಾರು ಸಭೆಗಳನ್ನು ನಡೆಸಲಾಗಿದೆ. ಸರಳ ಆಡಳಿತಕ್ಕೆ ಸೂಚಿಸಲಾಗಿದೆ. ದಿನಂಪ್ರತಿ ಕಚೇರಿಗೆ ಆಗಮಿಸುವ ನೂರಾರು ಜನರನ್ನು ಮಾತನಾಡಿಸಿ ಅವರ ನ್ಯಾಯಯುತ ಮನವಿ, ಕೋರಿಕೆಗೆ ಸ್ಪಂದಿಸಲಾಗಿದೆ. ಅವರ ಸಮಸ್ಯಗಳನ್ನು ಬಗೆಹರಿಸಲಾಗಿದೆ. ಮುಂದಿನ ದಿನಗಳಲ್ಲೂ ಸಹ ಜನರಿಗೆ ಸರಳ, ಸುಲಭ ಮತ್ತು ತ್ವರಿತ ಆಡಳಿತ ನೀಡುವ ನಿಟ್ಟಿನಲ್ಲೇ ನಮ್ಮ ಕಾರ್ಯವೈಖರಿ ಇರಲಿದೆ ಎಂಬುದನ್ನು ಈ ಮೂಲಕ ತಿಳಿಸಿಕೊಳ್ಳಲು ಇಚ್ಚಿಸುತ್ತೇನೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top