ಜನರಿಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಕಂದಾಯ ಇಲಾಖೆ ಬದ್ಧ : ಕೃಷ್ಣಭೈರೇಗೌಡ

ಬೆಂಗಳೂರು: ಕಂದಾಯ ಎಲ್ಲಾ ಇಲಾಖೆಗಳ ಮಾತೃ ಇಲಾಖೆ. ಒಂದಲ್ಲಾ ಒಂದು ರೀತಿಯಲ್ಲಿ ಪ್ರತಿನಿತ್ಯ ಜನರೊಂದಿಗೆ ಒಡನಾಟ ಇಟ್ಟುಕೊಂಡಿರುವ ಇಲಾಖೆ. ಆದರೆ, ಇಂತಹ ಮಹತ್ವದ ಇಲಾಖೆಯಲ್ಲೂ ಕೆಲ ಭ್ರಷ್ಟ ಅಧಿಕಾರಿಗಳು ಹಾಗೂ ನೌಕರರೂ ಇದ್ದಾರೆ ಎಂಬ ವಿಚಾರವನ್ನು ತಳ್ಳಿಹಾಕುವಂತಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಮುನ್ನ ನೀಡಿದ ಮಾತಿನಂತೆ ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಲು, ಜನರಿಗೆ ಶುದ್ಧ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಇಲಾಖೆ/ಸರ್ಕಾರ  ಬದ್ಧವಾಗಿದೆ.

ಕಂದಾಯ ಇಲಾಖೆಯಲ್ಲಿ ಬೇರುಬಿಟ್ಟಿರುವ ಭ್ರಷ್ಟಾಚಾರವನ್ನು ಕೊನೆಗೊಳಿಸಿ, ಇಲಾಖೆಯ ಮೇಲೆ ಜನರಿಗೆ ಸಕಾರಾತ್ಮಕ ಭಾವನೆ ಮೂಡಬೇಕು ಎಂಬ ಉದ್ದೇಶದಿಂದಲೇ ಪಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನನ್ನು ಸಚಿವನನ್ನಾಗಿ ಮಾಡಿ ಕಂದಾಯ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ.

            ಈ ನಿಟ್ಟಿನಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ತರಲಾಗಿದೆ. ಅಧಿಕಾರಿ ವಲಯಕ್ಕೆ ಚುರುಕು ಮುಟ್ಟಿಸಲಾಗಿದೆ. ಅಲ್ಲದೆ, ಕಳೆದ ಹಲವಾರು ವರ್ಷಗಳಿಂದ ಬಾಕಿ ಇದ್ದಂತಹ ಅಧಿಕಾರಿಗಳ ಮೇಲಿನ ಶಿಸ್ತುಕ್ರಮ ಕಡತಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ತಪ್ಪಿತಸ್ಥಅಧಿಕಾರಿಗಳಿಗೆ ಶಿಕ್ಷೆಯನ್ನು ಖಚಿತಗೊಳಿಸಲು ಕೆಲಸವೂ ನಡೆಯುತ್ತಿದೆ.

 

ಕಳೆದ ಜುಲೈ 26 ರಂದು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದ 66 ಅಧಿಕಾರಿಗಳ ವಿರುದ್ಧದ ವಿಚಾರಣೆ ನಡೆಸಿ ಶಿಕ್ಷೆಯ ಪ್ರಮಾಣವನ್ನು ಘೋಷಿಸಲಾಗಿತ್ತು. ಇದೀಗ ಮತ್ತೆ ತೀರ್ಮಾನವಾಗದೆ ಬಾಕಿ ಇದ್ದಂತಹ ಸುಮಾರು 108 ಪ್ರಕರಣಗಳನ್ನು ಪ್ರಸ್ತುತ ಇತ್ಯರ್ಥಗೊಳಿಸಲಾಗಿದೆ. ಭ್ರಷ್ಟಾಚಾರ ಸಾಭೀತಾಗಿರುವ ಅಧಿಕಾರಿಗಳಿಗೆ ಶಿಕ್ಷೆಯನ್ನೂ ಖಚಿತಪಡಿಸಲಾಗಿದೆ.

ಭ್ರಷ್ಟ ಅಧಿಕಾರಿಗಳ ವಿರುದ್ಧ ಇಲಾಖೆ ತೆಗೆದುಕೊಂಡಿರುವ ಕಾನೂನು/ಶಿಸ್ತುಕ್ರಮ ಮಾಹಿತಿ ಈ ಕೆಳಕಂಡಂತಿದೆ.

ಇಲಾಖೆಯ ಅಧಿಕಾರಿಗಳು/ನೌಕರರ ವಿರುದ್ಧದ ಸುಮಾರು 108 ಶಿಸ್ತುಕ್ರಮ ಕಡತಗಳು ವಿಚಾರಣೆಯಾಗದೆ ಅಥವಾ ವಿಚಾರಣೆ ಆಗಿಯೂ ಇತ್ಯರ್ಥgಗೊಳ್ಳದೆ ಕಳೆದ 5 ರಿಂದ 7 ವರ್ಷಗಳ ಕಾಲ ಸಚಿವಾಲಯದಲ್ಲೇ ಬಾಕಿ ಇದ್ದವು. ಪ್ರಸ್ತುತ ಆ ಎಲ್ಲಾ ಕಡತಗಳನ್ನೂ ವಿಲೇವಾರಿ ಮಾಡಲಾಗಿದೆ.

            ಸದರಿ ಪ್ರಕರಣಗಳ ಪೈಕಿ ತಹಶೀಲ್ದಾರ್ 35, ಜಿಲ್ಲಾ ನೋಂದಣಾಧಿಕಾರಿ 06, ಕೇಂದ್ರ ಸ್ಥಾನಿಕ ಸಹಾಯಕರು 13, ಹಿರಿಯ ಉಪ ನೋಂದಣಾಧಿಕಾರಿಗಳು 20, ಉಪ ನೋಂದಣಿ ಅಧಿಕಾರಿಗಳು 26, ಪ್ರಥಮ ದರ್ಜೆ ಸಹಾಯಕರು 02, ದ್ವಿತೀಯ ದರ್ಜೆ ಸಹಾಯಕರು 06 ಪ್ರಕರಣಗಳು ಒಳಗೊಂಡಿವೆ.

 

ಈ ಪ್ರಕರಣಗಳ ಪೈಕಿ 4 ಜನ ಅಧಿಕಾರಿ/ನೌಕರರಿಗೆ ವಾರ್ಷಿಕ ವೇತನ ಬಡ್ತಿ ತಡೆಹಿಡಿಯುವ ದಂಡನೆ ನೀಡಲಾಗಿದೆ. ಶಿಸ್ತುಕ್ರಮ ಜರುಗಿಸುವ ಮುನ್ನವೇ ನಿವೃತ್ತಿಗೊಂಡಿರುವ 06 ಜನ ಅಧಿಕಾರಿ/ನೌಕರರಿಗೆ ನಿವೃತ್ತಿ ವೇತನದಲ್ಲಿ ಶೇ.05 ರಿಂದ ಶೇ.10ರ ವರೆಗೆ ನಿವೃತ್ತಿ ವೇತನ ಕಡಿತಗೊಳಿಸುವ ಶಿಕ್ಷೆ ನೀಡಲಾಗಿದೆ. ಉಳಿದಂತೆ ಲೋಕಾಯುಕ್ತಕ್ಕೆ 15 ಪ್ರಕರಣಗಳನ್ನು ತನಿಖೆಗೆ ವಹಿಸಲಾಗಿದೆ. 30 ಪ್ರಕರಣಗಳನ್ನು ಇಲಾಖೆ ವಿಚಾರಣೆ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ. 1 ಪ್ರಕರಣದಲ್ಲಿ ವಾಗ್ದಂಡನೆ ನೀಡಿದ್ದರೆ,  ಲೋಕಾಯುಕ್ತ ತನಿಖಾ ವರದಿ ಶಿಫಾರಸಿನಂತೆ ಉಳಿದ ಪ್ರಕರಣಗಳಲ್ಲಿ ಅಧಿಕಾರಿ/ನೌಕರರಿಗೆ ಮೇಲಿನ ಆರೋಪಗಳು ಸಾಬೀತಾಗದ ಕಾರಣ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ. 

ಒಟ್ಟಾರೆ ಹಲವು ವರ್ಷಗಳಿಂದ ಧೂಳು ಹಿಡಿದಿದ್ದ ಕಡತಗಳನ್ನು ಕೆದಕಿ ತೆಗೆದು ಯಾವುದನ್ನೂ ಮರೆಮಾಚದೆ ಎಲ್ಲ ಪ್ರಕರಣಗಳ ಬಗ್ಗೆಯೂ ಸೂಕ್ತ ಕಾನೂನು/ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ. ಇಲಾಖೆಯಲ್ಲಿನ ಭ್ರಷ್ಟ ಅಧಿಕಾರಿಗಳಿಗೆ ಈ ಮೂಲಕ ಚುರುಕು ಮುಟ್ಟಿಸಲಾಗಿದೆ. ಭ್ರಷ್ಟಾಚಾರವನ್ನು ಕೊನೆಗೊಳಿಸಲು ಈ ಮೂಲಕ ದೃಢ ಹೆಜ್ಜೆ ಇಡಲಾಗಿದೆ ಎಂದು ಈ ಮೂಲಕ ತಿಳಿಯಪಡಿಸುತ್ತೇನೆ.

 

ಅಲ್ಲದೆ, ಇನ್ನು ಮುಂದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ವಿಳಂಭಕ್ಕೆ ಅವಕಾಶವಿಲ್ಲದಂತೆ ಕಡತಗಳನ್ನು ಮಂಡಿಸಲು ಮತ್ತು ವಿಚಾರಣೆ ಪ್ರಕ್ರಿಯೆಯನ್ನು ನಿಗಧಿತ ಅವದಿಯಲ್ಲಿ ಪೂರ್ಣಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Facebook
Twitter
LinkedIn
WhatsApp
Email
Telegram
Print

Leave a Comment

Your email address will not be published. Required fields are marked *

Translate »
Scroll to Top