ಸ್ವಜಾತಿ ಪ್ರೇಮ ಮೆರೆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ?
ಬೆಂಗಳೂರು: ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನಿವೃತ್ತ ಅಧಿಕಾರಿ ಕೆ.ಎಂ. ಆಶಾ ಅವರನ್ನು ನೇಮಿಸಿರುವುದು ಸಹಕಾರ ಇಲಾಖೆಯಲ್ಲಿ ಅಸಮಾಧಾನ ಭುಗಿಲೇಳುವಂತಾಗಿದೆ.
ನಿವೃತ್ತ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟಾಜ್ಞೆ ವಿಧಿಸಿದ್ದು, ಮತ್ತೊಂದೆಡೆ ತಮ್ಮದೇ ಸಮುದಾಯಕ್ಕೆ ಸೇರಿದ, ತಾವು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ಕೆ.ಎಂ. ಆಶಾ ಅವರನ್ನು ಸಹಕಾರ ಮಹಾ ಮಂಡಳಿಯ ಎಂ.ಡಿ ಹುದ್ದೆಗೆ ನೇಮಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ನಿವೃತ್ತರಿಗೆ ಹುದ್ದೆ ನೀಡುವುದು ಬೇಡ ಎಂಬ ಕಠಿಣ ನಿಲುವು ತಳೆದಿರುವ ಸಿದ್ದರಾಮಯ್ಯ ಅವರು, ಕೆ.ಎಂ. ಆಶಾ ಅವರ ವಿಚಾರದಲ್ಲಿ ಯಾಕೆ ಮೃದು ಧೋರಣೆ ತಳೆದಿದ್ದಾರೆ ಎಂದು ಸಹಕಾರ ಇಲಾಖೆಯ ಉನ್ನತ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ. ಇಲಾಖೆಯಲ್ಲಿ ಎಂ.ಡಿ ಹುದ್ದೆಗೆ ಅರ್ಹತೆ ಇರುವವರು ಸಾಕಷ್ಟು ಮಂದಿ ಇದ್ದಾರೆ. ನಿವೃತ್ತರನ್ನು ಆಯಾಕಟ್ಟಿನ ಹುದ್ದೆಗಳಿಗೆ ನೇಮಿಸಿಕೊಳ್ಳಬಾರದು ಎಂದು ಎಂದು ತಾವೇ ನಿರ್ದೇಶನ ನೀಡಿ ಹೊರಡಿಸಿದ ಆದೇಶವನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉಲ್ಲಂಘಿಸಿದ್ದಾರೆ.
ಹೀಗಾದರೆ ಇಲಾಖೆಯಲ್ಲಿ ಹಿರಿಯ ಹಾಗೂ ಅರ್ಹತೆ ಇರುವವರ ಬಗ್ಗೆ ಅವಿಶ್ವಾಸ ವ್ಯಕ್ತಪಡಿಸಿದಂತಾಗುತ್ತದೆ. ಇಂತಹ ನಿರ್ಧಾರದಿಂದ ಆಡಳಿತ ಯಂತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ದೂರಿದ್ದಾರೆ.
ಸಹಕಾರ ಮಾರಾಟ ಮಹಾ ಮಂಡಳ ಸಹಸ್ರಾರು ಕೋಟಿ ರೂಪಾಯಿ ವಹಿವಾಟು ಹೊಂದಿರುವ ಸಂಸ್ಥೆಯಾಗಿದ್ದು, ಇಂತಹ ಮಹತ್ವದ್ದ ಹುದ್ದೆಗೆ ಜಾತಿ, ಹಣ ಬಲಕ್ಕೆ ಆದ್ಯತೆ ನೀಡಿದರೆ ಹೇಗೆ?. ಸಹಕಾರ ವಲಯದಿಂದ ಬಂದಿರುವ ಸಚಿವ ಕೆ.ಎನ್. ರಾಜಣ್ಣ ಅವರೇ ಇಂತಹ ಕೆಟ್ಟಪದ್ಧತಿಗೆ ಬೆಂಬಲ ನೀಡುವುದು ಸರಿಯಲ್ಲ. ಸರ್ಕಾರ ಯಾವ ಸಂದೇಶ ರವಾನಿಸಲು ಮುಂದಾಗಿದೆ?. ಸಚಿವರು, ಮುಖ್ಯಮಂತ್ರಿಗಳು ಬೇಕಿದ್ದರೆ ತಮಗೆ ಸಲಹೆಗಾರರು ಒಳಗೊಂಡಂತೆ ಕಚೇರಿ ಹುದ್ದೆಗಳಿಗೆ ಬೇಕಿದ್ದರೆ ನಿವೃತ್ತರನ್ನು ನೇಮಕ ಮಾಡಿಕೊಳ್ಳಲಿ. ಆದರೆ ನಿವೃತ್ತರಿಗೆ ಎಂ.ಡಿ. ಹುದ್ದೆಗೆ ನೀಡಿರುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ಅವರು ಈ ವರ್ಷದ ಫೆಬ್ರವರಿ 19 ರಂದು ಎಲ್ಲಾ ಇಲಾಖೆಗಳು, ನಿಗಮ, ಮಂಡಳಿಗಳಲ್ಲಿ ನಿವೃತ್ತರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರು. ಆದರೆ ಕೆ.ಎಂ. ಆಶಾ ನೇಮಕ ಇದಕ್ಕೆ ವ್ಯತಿರಿಕ್ತವಾಗಿದೆ.
ಈ ಕುರಿತು ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ನಾಯಕ್ ಮಾತನಾಡಿ, ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಅವರು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಈ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಎಂ.ಡಿ. ಹುದ್ದೆಯನ್ನು ನಿರ್ವಹಿಸಲು ಇಲಾಖೆಯಲ್ಲಿ ಅರ್ಹರಿಗೆ ಅವಕಾಶ ಕಲ್ಪಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಈ ಬಗ್ಗೆ ಗಮನ ಹರಿಸಿ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.