ಬೆಂಗಳೂರು: ಪ್ರಮುಖ ಭಾಷೆಗಳಲ್ಲಿ ತಯಾರಾದ ಚಿತ್ರಗಳು ಪರಭಾಷೆಗಳಿಗೆ ಡಬ್ಬಿಂಗ್ ಆಗುವುದು ಸಹಜ. ಆದರೆ ನಮ್ಮ ಅರಭಾಷೆ ತುಳುವಿನಲ್ಲಿ ತೆರೆಕಂಡು ಯಶಸ್ವಿಯಾದ ಚಿತ್ರ ಕನ್ನಡಕ್ಕೆ ಡಬ್ಬಂಗ್ ಆಗಿರುವುದು ವಿರಳ. ಆದರೆ ತುಳು ಭಾಷೆಯಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡು “ದಸ್ಕತ್” ಇದೀಗ ಕನ್ನಡ ಭಾಷೆಯಲ್ಲಿ ಡಬ್ ಆಗಿ ತೆರೆ ಕಂಡಿದೆ. ಪ್ಯಾನ್ ಇಂಡಿಯಾ ವೇದಿಕೆಯಡಿ ಒಂದು ಚಿತ್ರ ಐದಾರು ಭಾಷೆಗಳಿಗೆ ಡಬ್ ಆಗುವುದು ಸಹಜ. ಆದರೆ ದಸ್ಕತ್ ಕನ್ನಡದಲ್ಲಿ ಕರಾವಳಿ ಕಂಪು, ಸೊಗಡನ್ನು ಎಲ್ಲೆಡೆ ಪಸರಿಸುತ್ತಿದೆ.
ಕಳೆದ ಡಿಸೆಂಬರ್ 13 ರಂದು ದಸ್ಕತ್ ತೆರೆ ಮೇಲೆ ಮೂಡಿ ಬಂದಿತ್ತು. 70 ದಿನಗಳ ದಾಖಲೆ ಪ್ರದರ್ಶನದ ನಂತರ ಇದೀಗ ಕನ್ನಡದಲ್ಲಿ ಬಿಡುಗಡೆಯಾಗಿದೆ. ನಿರ್ದೇಶಕ ಅನಿಲ್ ಪೂಜಾರಿ ವೇಣೂರು ಪ್ರಯತ್ನದ ಫಲವಾಗಿ ದಸ್ಕತ್ ಕನ್ನಡದಲ್ಲಿ ತೆರೆ ಕಂಡು ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ. ನಿರ್ಮಾಪಕ ಅರೆ ಬೆನ್ನಮಂಗಲದ ಜಗದೀಶ್ ಅವರ ಪ್ರಯತ್ನದ ಪಲವಾಗಿ ದಸ್ಕತ್ ಕನ್ನಡ ಅವತರಣಿಕೆ ಕಂಡಿದೆ. ಜಗದೀಶ್ ಮೂಲತಃ ಆರ್.ಎಸ್.ಎಸ್. ಕಟ್ಟಾಳು. ಕಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸನಿಹದಲ್ಲಿರುವ ಬಂಡಿಕೊಡಿಗೆ ಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿಯೂ ಜಗದೀಶ್ ಅತ್ಯುತ್ತಮ ಕೆಲಸ ಮಾಡಿದ್ದರು.
ದಸ್ಕತ್ ಎಂದರೆ ಅಂಕಿತ ಹಾಕುವುದು. ಸಹಿ ಹಾಕುವುದರಿಂದ ಆಗುವ ಅನಾಹುತಗಳು, ಅವಾಂತರಗಳ ಸುತ್ತ ಈ ಚಿತ್ರಕಥೆ ಆವರಿಸಿಕೊಂಡಿದೆ. ಬೆಂಗಳೂರಿನಲ್ಲಿ ನಡೆದ 16 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನ ಕಂಡು ಮೆಚ್ಚುಗೆಗೆ ಕಾರಣವಾಗಿತ್ತು.
ರಾಜ್ಯದ ಕರಾವಳಿ ಭಾಗವಷ್ಟೇ ಅಲ್ಲದೇ ಕೆನಡಾ, ನೈಜೀರಿಯಾ, ದುಬೈ ಸೇರಿದಂತೆ ಕೆಲವು ದೇಶಗಳಲ್ಲಿ ತುಳು ಭಾಷೆಯ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಇದೀಗ ಕನ್ನಡದ ದಸ್ಕತ್ ಹಲವು ದೇಶಗಳಲ್ಲಿ ತೆರೆಯ ಮೇಲೆ ಮೂಡಿ ಬರಲಿದೆ. ಮೂರು ತುಳು ಸಿನೆಮಾಗಳಲ್ಲಿ ನಟಿಸಿರುವ ದೀಕ್ಷಿತ್ ಇದೇ ಮೊದಲ ಬಾರಿಗೆ ಕನ್ನಡದ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಮನೆಮಾತಾಗಿರುವ ಭವ್ಯ ಪೂಜಾರಿ ನಾಯಕಿಯಾಗಿ ನಟಿಸಿದ್ದಾರೆ.