ಕಂಪ್ಲಿ: ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಭೀಕರ ದುರಂತವೊ0ದು ಸಂಭವಿಸಿದೆ. ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಆಕಸ್ಮಿಕವಾಗಿ ಸ್ಫೋಟಗೊಂಡ ಪರಿಣಾಮ, ಮನೆಯಲ್ಲಿದ್ದ ಸಕಲ ಸಾಮಾನುಗಳು ಸುಟ್ಟು ಕರಕಲಾಗಿವೆ.
ಹೌದು, ಕಂಪ್ಲಿ ಪಟ್ಟಣದ ಹರಿಜನ ಕಾಲನಿಯ ನಿವಾಸಿ ಯಲ್ಲಪ್ಪ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡು ನಂತರ ದೊಡ್ಡ ಮಟ್ಟದ ಸ್ಫೋಟ ಸಂಭವಿಸಿದೆ. ಬೆಂಕಿಯ ಕೆನ್ನಾಲಗೆಗೆ ಮನೆಯಲ್ಲಿದ್ದ ಬಟ್ಟೆಬರೆ, ಆಹಾರ ಧಾನ್ಯ ಹಾಗೂ ಪೀಠೋಪಕರಣಗಳು ಸೇರಿದಂತೆ ಎಲ್ಲಾ ವಸ್ತುಗಳು ಆಹುತಿಯಾಗಿದ್ದು, ಬಡ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.
ಅದೃಷ್ಟವಶಾತ್, ಘಟನೆ ನಡೆದ ಸಮಯದಲ್ಲಿ ಮನೆಯವರೆಲ್ಲರೂ ಹೊರಗಡೆ ಇದ್ದರು ಹಾಗೂ ಅಕ್ಕಪಕ್ಕದ ಮನೆಯವರು ಸಹ ತಕ್ಷಣವೇ ಜಾಗೃತರಾದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ವಿಷಯ ತಿಳಿದ ತಕ್ಷಣ ಗಂಗಾವತಿಯ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಕಂಪ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಟ್ಟಿನಲ್ಲಿ ಗ್ಯಾಸ್ ಸಿಲಿಂಡರ್ ಬಳಸುವಾಗ ಎಷ್ಟು ಜಾಗರೂಕರಾಗಿರಬೇಕು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕ್ಷಣಮಾತ್ರದ ಅಜಾಗರೂಕತೆ ಇಡೀ ಸಂಸಾರವನ್ನೇ ಬೀದಿಗೆ ತಂದು ನಿಲ್ಲಿಸಿದೆ.



