ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ

ಬೆಂಗಳೂರು,ಫೆ,22 : 2019-20 ರಲ್ಲಿ ಮಹಾರಾಷ್ಟ್ರ ಜಿಲ್ಲಾ ಮತ್ತು ಗ್ರಾಮ ಪಂಚಾಯತಿಗಳಿಗೆ ಚುನಾವಣೆ ಘೋಷಣೆ ಮಾಡಿ, ಪಂಚಾಯತ್ ಕಾಯ್ದೆ 1961 ರ ಸೆಕ್ಷನ್ 12 ಕ್ಲಾಸ್ (2) ಸಬ್ ಕ್ಲಾಸ್ (c) ಚುನಾವಣಾ ಆಯೋಗ ಜಾರಿ ಮಾಡಿದ್ದ ಅಧಿಸೂಚನೆಯನ್ವಯ ಹಿಂದುಳಿದ ಜಾತಿ, ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಪಂಚಾಯತಿ ಸಮಿತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಕೊಡುತ್ತಿದ್ದ ಮೀಸಲಾತಿಯನ್ನು ಪ್ರಶ್ನಿಸಿ ವಿಕಾಸ್ ಕೃಷ್ಣರಾವ್ ಗೌಳಿ ಎಂಬುವವರು ನಾಲ್ಕು ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದರು. ಈ ನಾಲ್ಕು ಮೇಲ್ಮನವಿಗಳನ್ನು ಒಟ್ಟುಗೂಡಿಸಿ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ 4 ಮಾರ್ಚ್ 2021 ರಲ್ಲಿ ತನ್ನ ಆದೇಶ ನೀಡಿದೆ. ಚುನಾವಣಾ ಆಯೋಗದ ಅಧಿಸೂಚನೆಯನ್ನು ಪ್ರಶ್ನಿಸುವ ಜೊತೆಗೆ ಅವರು ಆರ್ಟಿಕಲ್ 243(D), 243(T), 14, 16 ನ್ನು ಪ್ರಶ್ನಿಸಿದ್ದರು. ಮಹಾರಾಷ್ಟ್ರ ಸರ್ಕಾರ 27% ಹಿಂದುಳಿದ ಜಾತಿಗಳಿಗೆ, 18% ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ನೀಡಿತ್ತು. ಆದರೆ ಚುನಾವಣಾ ಅಧಿಸೂಚನೆಯಲ್ಲಿ ವಾಸಿಂ, ಬಂದಾರಾ, ಅಕೋಲಾ, ನಾಗ್ಪುರ್ ಮತ್ತು ಗೋಂಡಿಯಾ ಜಿಲ್ಲೆಗಳಲ್ಲಿ ಮೀಸಲಾತಿ ಪ್ರಮಾಣ 50% ಗಡಿ ದಾಟಿತ್ತು. ಆದರೆ 1992 ರ ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣ 50% ಗಿಂತ ಹೆಚ್ಚಿರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತನ್ನ ಅಂತಿಮ ಆದೇಶ ಚುನಾವಣಾ ಫಲಿತಾಂಶಕ್ಕೆ ಅನ್ವಯವಾಗುತ್ತದೆ ಎಂದು ಹೇಳಿ ಚುನಾವಣೆ ನಡೆಸಲು ಅವಕಾಶ ನೀಡಿತ್ತು. ಚುನಾವಣೆ ಮುಗಿದ ನಂತರ ಸುಪ್ರೀಂ ಕೋರ್ಟ್ ಅಂತಿಮ ಆದೇಶ ನೀಡಿತ್ತು, ಆ ಆದೇಶದಲ್ಲಿ ಮೂರು ಹಂತದಲ್ಲಿ ವಿಶ್ಲೇಷಣೆ ಆಗಬೇಕು, ಮೊದಲನೆಯದಾಗಿ ಚುನಾವಣೆಯಲ್ಲಿ ಮೀಸಲಾತಿ ನಿಗದಿಗಾಗಿ ಒಂದು ಪ್ರತ್ಯೇಕ ಆಯೋಗ ರಚನೆಯಾಗಬೇಕು, ಅವರು ಹಿಂದುಳಿದ ವರ್ಗಗಳ ಜನರ ಪರಿಸ್ಥಿತಿಯನ್ನು ಪ್ರಾಯೋಗಿಕ ಮತ್ತು ವಸ್ತುಸ್ಥಿತಿಯ ತನಿಖೆ ಮಾಡಬೇಕು. ಎರಡನೆಯದಾಗಿ ಈ ಸಮಿತಿ ಶಿಫಾರಸ್ಸು ಮಾಡುವುದಕ್ಕೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಇರಬೇಕು, ಮೀಸಲಾತಿ ಪ್ರಮಾಣ ತನ್ನ ಮಿತಿಗಿಂತ ಹೆಚ್ಚಾಗಬಾರದು. ಮೂರನೆಯದಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ನೀಡುವ ಒಟ್ಟು ಸ್ಥಾನಗಳು 50% ಗಿಂತ ಹೆಚ್ಚಿರಬಾರದು ಎಂದು ಹೇಳಿತು.

ಅನುಚ್ಛೇದ 15(4), 16(4) ಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ನೀಡುವ ಮೀಸಲಾತಿಗೆ ಸಂಬಂಧಿಸಿದವು. ರಾಜಕೀಯ ಮೀಸಲಾತಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದೆ. ಜೊತೆಗೆ ಹಿಂದುಳಿದ ವರ್ಗಗಳಿಗೆ ಚುನಾವಣೆಯಲ್ಲಿ ನೀಡಲಾಗಿದ್ದ 27% ಮೀಸಲಾತಿ ಸಂವಿಧಾನ ಬದ್ಧವಾಗಿಲ್ಲ, ಹಾಗಾಗಿ ಈ ಮೇಲಿನ ಮೂರು ಹಂತದ ವಿಶ್ಲೇಷಣೆ ಆಗುವವರೆಗೆ ಇವರನ್ನು ಸಾಮಾನ್ಯ ವರ್ಗದಲ್ಲಿ ಸೇರಿಸಿ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ನಿರ್ಣಯದಿಂದಾಗಿ ದೇಶದ ಎಲ್ಲಾ ರಾಜ್ಯಗಳಲ್ಲಿ ಹಿಂದುಳಿದ ಜಾತಿಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಸೌಲಭ್ಯ ಸಿಗುವುದಿಲ್ಲ. ಈಗ ನಮ್ಮಲ್ಲಿ ಬೆಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಯಬೇಕಿದ್ದು, ಈ ಚುನಾವಣೆಯಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಸೌಲಭ್ಯ ತಪ್ಪಿ ಹೋಗಲಿದೆ. ನಮ್ಮ ರಾಜ್ಯದಲ್ಲಿ ಹಿಂದುಳಿದ ಜಾತಿಗಳಿಗೆ 33% ಮೀಸಲಾತಿ ಇದೆ, ಆದರೆ ಇದು ಮುಂಬರುವ ಬೆಂಗಳೂರು ಮಹಾನಗರ ಪಾಲಿಕೆ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ ಅನ್ವಯವಾಗಲ್ಲ.

ನಮ್ಮ ಸರ್ಕಾರದ ಅವಧಿಯಲ್ಲಿ ಕಾಂತರಾಜ್ ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮನೆ ಮನೆಗೆ ತೆರಳಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಮಾಡಿದೆ‌. ಹೀಗಾಗಿ ರಾಜ್ಯ ಸರ್ಕಾರ ತಕ್ಷಣ ಸುಪ್ರೀಂ ಕೋರ್ಟ್ ಹೇಳಿರುವ ಮೂರು ಹಂತದ ವಿಶ್ಲೇಷಣೆಯನ್ನು ಪೂರ್ಣಗೊಳಿಸಿರುವ ವರದಿ ನಮ್ಮ ಬಳಿಯಿದೆ, ಈ ಆಧಾರದ ಮೇಲೆ ಮೀಸಲಾತಿ ನೀಡಲು ಅವಕಾಶ ಕೇಳಬೇಕು. ಸರ್ಕಾರ ಇದನ್ನು ಮಾಡದೆ ಹೋದರೆ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಜನರ ಮೀಸಲಾತಿ ಸೌಲಭ್ಯ ಕೈತಪ್ಪಿಹೋಗುತ್ತೆ. ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದಂತೆ ಕಾಣುತ್ತಿದೆ. ಈಶ್ವರಪ್ಪ ಅವರು ಒಮ್ಮೆ ಈ ವಿಷಯವನ್ನು ಉಲ್ಲೇಖಿಸಿದ್ದು ಬಿಟ್ಟರೆ ಸರ್ಕಾರ ಯಾವತ್ತೂ ಈ ಬಗ್ಗೆ ಚರ್ಚೆ ನಡೆಸಿರುವ ಮಾಹಿತಿ ಇಲ್ಲ. ಕೂಡಲೇ ರಾಜ್ಯ ಸರ್ಕಾರ ಕಾನೂನು ತಜ್ಞರು ಹಾಗೂ ವಿರೋಧ ಪಕ್ಷದವರನ್ನು ಕರೆದು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಸಂವಿಧಾನಕ್ಕೆ 73 ಹಾಗೂ 74 ನೇ ತಿದ್ದುಪಡಿ ತಂದು ಹಿಂದುಳಿದ ವರ್ಗ, ಮಹಿಳೆಯರಿಗೆ ನೀಡಿದ್ದ ಮೀಸಲಾತಿ ಮಣ್ಣುಪಾಲಾಗುತ್ತದೆ. ಕಾಂತರಾಜ್ ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರಬೇಕು ಎಂದು ಪಕ್ಷದ ಪರವಾಗಿ ಆಗ್ರಹಿಸುತ್ತೇನೆ. ಸರ್ಕಾರ ಕಾಂತರಾಜ್ ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಒಪ್ಪಿಕೊಂಡು ಸುಪ್ರೀಂ ಕೋರ್ಟ್ ಮುಂದೆ ಹೋಗಬೇಕು. ನನ್ನ ಪ್ರಕಾರ ಈ ವರದಿ ಸುಪ್ರೀಂ ಕೋರ್ಟ್ ನ ಆದೇಶದಲ್ಲಿರುವ ಷರತ್ತುಗಳನ್ನು ಪೂರೈಸುತ್ತದೆ.

ಶವ ಯಾತ್ರೆಗೆ ಅವಕಾಶ ಸರಿಯಲ್ಲ: ಶಿವಮೊಗ್ಗ ನಗರದಲ್ಲಿ ಬಿಜೆಪಿ ಕಾರ್ಯಕರ್ತ ಹರ್ಷ ಅವರ ಕೊಲೆಯಾದದ್ದು ಭಾನುವಾರ. ಆ ದಿನದ ರಾತ್ರಿಯಿಂದಲೇ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಾಗಿದೆ. ಕಳೆದ ಮೂರು ದಿನಗಳಲ್ಲಿ ಶಿವಮೊಗ್ಗದಲ್ಲಿ 3 ಕೊಲೆಗಳು ನಡೆದಿವೆ. ಶಿವಮೊಗ್ಗ ಗೃಹ ಸಚಿವರ ತವರು ಜಿಲ್ಲೆ, ಅಲ್ಲೇ ಈ ರೀತಿ ಕೊಲೆಗಳು ನಿರಂತರವಾಗಿ ನಡೆಯುತ್ತವೆ ಎಂದರೆ ಹೇಗೆ? ಹಿಂದಿನ ದಿನವೇ 144 ಸೆಕ್ಷನ್ ಜಾರಿಯಾಗಿದ್ದರೂ ಮೃತನ ಶವಯಾತ್ರೆ ಪೊಲೀಸ್ ಇಲಾಖೆ ಅವಕಾಶ ನೀಡಿದ್ದು ಹೇಗೆ? ಈ ಶವಯಾತ್ರೆಯಲ್ಲಿ ಸಚಿವ ಈಶ್ವರಪ್ಪ, ಸ್ಥಳೀಯ ಸಂಸದ ರಾಘವೇಂದ್ರ ಕೂಡ ಭಾಗವಹಿಸಿದ್ದರು, ಅಂದರೆ ಈ ಶವಯಾತ್ರೆಯನ್ನು ರಾಜ್ಯ ಸರ್ಕಾರದ ಪ್ರಾಯೋಜಿತ ಶವಯಾತ್ರೆ ಎನ್ನಬೇಕಾಗುತ್ತದೆ. ತಮ್ಮದೇ ಸರ್ಕಾರ 144 ಸೆಕ್ಷನ್ ಹಾಕಿದೆ, ಸರ್ಕಾರದ ಸಚಿವರ ಎದುರೇ ಕಲ್ಲುತೂರಾಟ ನಡೆದಿದೆ, ಅಂಗಡಿ, ವಾಹನಗಳಿಗೆ ಬೆಂಕಿ ಹಾಕಲಾಗಿದೆ, ಜನ ಗುಂಪು ಗುಂಪಾಗಿ ಕತ್ತಿ, ತಲ್ವಾರ್ ಹಿಡಿದು ಓಡಾಡ್ತಾರೆ, ಈ ಮೆರವಣಿಗೆಯಲ್ಲಿ ಈಶ್ವರಪ್ಪ ಮುಂದೆ ನಿಂತಿದ್ದಾರೆ ಎಂದರೆ ಇದು ನಾಗರೀಕ ಸರ್ಕಾರವ? ಇವತ್ತು ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ, ಆಸ್ತಿ ಪಾಸ್ತಿ ನಷ್ಟವಾಗಿದ್ದರೆ ಅದಕ್ಕೆ ಸಚಿವ ಈಶ್ವರಪ್ಪ ಅವರೇ ಹೊಣೆ. ರಾಜ್ಯದಲ್ಲಿ ಈಶ್ವರಪ್ಪ ಅವರದೇ ಪಕ್ಷದ ಸರ್ಕಾರ ಇದೆ. ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ವಿರುದ್ಧ ಸಾಕ್ಷಗಳು ಇದ್ದರೆ ಕೂಡಲೇ ಆ ಸಂಘಟನೆಗಳನ್ನು ನಿಷೇಧ ಮಾಡಲು. ನಿಷೇಧ ಮಾಡಬೇಡಿ ಎಂದು ಅವರಿಗೆ ಅಡ್ಡ ಬರುತ್ತಿರುವವರಾದರೂ ಯಾರು?

ಹರ್ಷ ಕೊಲೆ ಪ್ರಕರಣವನ್ನು ಎನ್.ಐ.ಎ ಇಂದಲೋ ಅಥವಾ ಬೇರೆ ಯಾವ ತನಿಖಾ ಸಂಸ್ಥೆಯ ಮೂಲಕವಾದರೂ ತನಿಖೆ ನಡೆಸಲಿ. ನನ್ನ ತಕರಾರು ಇಲ್ಲ. ನಿನ್ನೆಯ ಶವ ಯಾತ್ರೆಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗಿದೆ, ಇಬ್ಬರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ, ಸಾಕಷ್ಟು ಜನರ ಮೇಲೆ ಹಲ್ಲೆ, ಕಲ್ಲು ತೂರಾಟ ನಡೆದಿದೆ. ಈ ಎಲ್ಲಾ ಕಾರಣಗಳಿಗಾಗಿ ಒಟ್ಟು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸುತ್ತೇನೆ. ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರು ರಾಷ್ಟ್ರೀಯ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಾಷ್ಟ್ರ ಧ್ವಜಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿಯುತವಾದುದ್ದು ಎಂದು ಹೇಳಿದ್ದಾರೆ. ಈಶ್ವರಪ್ಪ ಅವರು ದೇಶ ಮತ್ತು ಸರ್ಕಾರಕ್ಕಿಂತ ದೊಡ್ಡವರಲ್ಲ. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ಜೊತೆಗೆ ಕೂಡಲೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಮೊದಲು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿ ದೇಶದ್ರೋಹ ಎಸಗಿದ್ದರು, ಈಗ ತಮ್ಮ ಸರ್ಕಾರವೇ ವಿಧಿಸಿದ್ದ 144 ಸೆಕ್ಷನ್ ಮೀರಿ ಕಾನೂನಿಗೆ ಅಗೌರವ ತೋರಿದ್ದಾರೆ. ಇಂದು ಸಂಜೆ ವಿಧಾನಸಭೆ ಮತ್ತು ವಿಧಾನ ಪರಿಷತ್ ನ ಎಲ್ಲಾ ಕಾಂಗ್ರೆಸ್ ಸದಸ್ಯರು ವಿಧಾನಸೌಧದಿಂದ ರಾಜಭವನದ ವರೆಗೆ ಕಾಲ್ನಡಿಗೆ ಮೂಲಕ ತೆರಳಿ, ರಾಜ್ಯಪಾಲರನ್ನು ಭೇಟಿಯಾಗಿ ಈಶ್ವರಪ್ಪ ಅವರನ್ನು ವಜಾಗೊಳಿಸುವಂತೆ ಮನವಿ ಮಾಡುತ್ತೇವೆ.

Leave a Comment

Your email address will not be published. Required fields are marked *

Translate »
Scroll to Top