ಬೆಂಗಳೂರು: ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಸಂವಿಧಾನ ಬಾಹಿರ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷರ ನೇಮಕದಲ್ಲಿ ಸಂಘ ತಲೆ ಹಾಕಲ್ಲ ಎಂದು ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.
ಬೆಂಗಳೂರಿನ ಹೊರವಲಯದ ಚನ್ನೇನಹಳ್ಳಿ ಯಲ್ಲಿ ಕಳೆದ ಮೂರು ದಿನಗಳಿಂದ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ ಆರ್ ಎಸ್ ಎಸ್ ನ ಅಖಿಲ ಭಾರತೀಯ ಪ್ರತಿನಿಧಿ ಸಭಾದ ನಿರ್ಧಾರಗಳ ಬಗ್ಗೆ ಸಭೆ ಪತ್ರಿಕಾಗೋಷ್ಠಿಯಲ್ಲಿಂದು ವಿವರ ನೀಡಿದ ದತ್ತಾತ್ರೇಯ ಹೊಸ ಬಾಳೆ ಅವರು ರಾಷ್ಟ್ರಾಧ್ಯಕ್ಷರ ಆಯ್ಕೆ ವಿಚಾರ ಕೇಂದ್ರದ ಬಿಜೆಪಿಯೇ ನೋಡಿಕೊಳ್ಳಲಿದೆ. ರಾಷ್ಟ್ರಾಧ್ಯಕ್ಷರ ನೇಮಕಕ್ಕೂ ಸಂಘಕ್ಕೂ ಸಂಬಂಧ ಇಲ್ಲ. ಬಿಜೆಪಿ ಸಂಘವನ್ನು ಕೇಳಿ ನೇಮಕಾತಿ ಮಾಡಲ್ಲ. ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವುದನ್ನು ಸಂಘ ಖಂಡಿಸಿದೆ. ಸಂವಿಧಾನವು ಧರ್ಮ ಆಧಾರಿತ ಮೀಸಲಾತಿ ನೀಡುವುದಕ್ಕೆ ಅವಕಾಶ ನೀಡುವುದಿಲ್ಲ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ. ಯಾರಾದರೂ ಹಾಗೆ ಮಾಡಿದರೆ ಅದು ನಮ್ಮ ಸಂವಿಧಾನ ಶಿಲ್ಪಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದರು.
ಇನ್ನೂ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ಕೊಡಲು ಮುಂದಾಗಿದ್ದ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಪ್ರಯತ್ನಗಳನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ತಳ್ಳಿಹಾಕಿವೆ. ಅಂತಹ ಮೀಸಲಾತಿ ಒದಗಿಸಲು ಇರುವ ನಿಬಂಧನೆಗಳನ್ನು ನ್ಯಾಯಾಲಯಗಳು ತಿರಸ್ಕರಿಸಿವೆ ಎಂದು ತಿಳಿಸಿದರು.
ಮಹಾರಾಷ್ಟ್ರ ಹಾಗೂ ಬಿಜೆಪಿ ಸರ್ಕಾರದಲ್ಲಿ ಸಚಿವರ ಪಿಎಗಳಾಗಿ ಸಂಘದ ವ್ಯಕ್ತಿಗಳ ನೇಮಕಕ್ಕೆ ಸಿದ್ದರಾಮಯ್ಯ ಟೀಕಿಸಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಂಘ ಯಾರಿಗೂ ಪಿಎಗಳಾಗಿ ನೇಮಿಸಿಕೊಳ್ಳಿ ಎಂದು ಸೂಚನೆ ಕೊಡಲ್ಲ. ಸಂಘದ ಹಿನ್ನೆಲೆಯವರು ಸಚಿವರ ಪಿಎಗಳಾಗುತ್ತಾರೆ. ಅಂದರೆ ಅದು ಅವರ ಪ್ರತಿಭೆ ಮತ್ತು ಸಾಮರ್ಥ್ಯದಿಂದ ಮಾತ್ರ. ಅದರಲ್ಲಿ ತಪ್ಪೇನಿಲ್ಲ ಎಂದರು.
ಇನ್ನೂ ಸಂಸತ್ ಕ್ಷೇತ್ರಗಳ ಪುನರ್ ವಿಂಗಡಣೆಗೆ ದಕ್ಷಿಣದ ರಾಜ್ಯಗಳು ಆತಂಕ ವ್ಯಕ್ತಪಡಿಸುತ್ತಿರುವ ಬಗ್ಗೆ ಮಾತನಾಡಿ, ಪುನರ್ವಿಂಗಡಣೆ ವಿಚಾರದಲ್ಲಿ ಕೇಂದ್ರ ಇನ್ನೂ ಅಧಿಕೃತವಾಗಿ ಯಾವುದೇ ಕರಡು ಪ್ರಕಟಿಸಿಲ್ಲ. ಈ ಹಂತದಲ್ಲಿ ನಾವು ಏನನ್ನೂ ಹೇಳುವುದಿಲ್ಲ. ಈ ವಿಚಾರದಲ್ಲಿ ಕೇಂದ್ರಕ್ಕೆ ಸಂಘ ಯಾವುದೇ ಸಲಹೆ ಕೊಡುವುದಿಲ್ಲ ಎಂದು ಹೇಳಿದರು. ಔರಂಗಜೇಬ್ ಸಮಾಧಿ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಔರಂಗಜೇಬ್ ಭಾರತೀಯ ನೀತಿ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿನಿಧಿಸುವುದಿಲ್ಲ. ಔರಂಗಜೇಬ್ ಐಕಾನ್ ಆಗಬಹುದೇ ಎಂಬುದನ್ನು ಸಮಾಜ ನಿರ್ಧರಿಸಬೇಕು ಎಂದು ಹೇಳಿದರು.