ರೇಣುಕಾಸ್ವಾಮಿ ಕೊಲೆ ಪ್ರಕರಣ : ಶೀಘ್ರದಲ್ಲೇ ಚಾರ್ಜ್‍ ಶೀಟ್ ಸಲ್ಲಿಕೆ

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಅಂತಿಮಘಟ್ಟ ತಲುಪಿದ್ದು ಶೀಘ್ರದಲ್ಲಿಯೇ ನಟ ದರ್ಶನ್ ಸೇರಿದಂತೆ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಹಾಗೂ ಇತರರ ವಿರುದ್ಧ ಮೂರು ಮಾದರಿಯಲ್ಲಿ ಅಂದರೆ, ಮೌಖಿಕ ಸಾಕ್ಷ್ಯಗಳು, ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹ ಮಾಡಲಾಗಿದೆ. ಶೀಘ್ರದಲ್ಲಿಯೇ ಮೊಕದ್ದಮೆಯ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾಜೆಟ್ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳ ಸಾಕ್ಷ್ಯಗಳನ್ನು ಬೆಂಗಳೂರು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಅಲ್ಲದೆ, ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸಲಾಗಿದ್ದು, ಪೂರ್ಣ ವರದಿ ಬಂದ ಬಳಿಕ ಮತ್ತೊಮ್ಮೆ ಸಾಕ್ಷ್ಯಗಳ ಹೋಲಿಕೆ ಮಾಡಿ ಸ್ಪಷ್ಟೀಕರಣ ಪಡೆಯಲಾಗುವುದು ಎಂದರು.

ವಿಧಿವಿಜ್ಞಾನ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದ ಸಾಕ್ಷ್ಯಗಳಿಗೆ ಸಂಬಂಧಿಸಿದಂತೆ ಕೆಲವು ವರದಿಗಳು ಬಂದಿವೆ, ಇನ್ನೂ ಕೆಲವು ವರದಿಗಳಿಗಾಗಿ ಕಾಯಲಾಗುತ್ತಿದೆ.

ಎಲ್ಲ ವರದಿಗಳು ಕೈಸೇರಿದ ನಂತರ ಕೆಲವು ಸ್ಪಷ್ಟೀಕರಣಗಳ ಅವಶ್ಯಕತೆ ಎದುರಾದರೆ, ಅವುಗಳನ್ನೂ ಪಡೆದು, ಆದಷ್ಟು ಬೇಗ ಅಂತಿಮ ಆರೋಪ ಪಟ್ಟಿ ಸಲ್ಲಿಕೆ ಮಾಡಲಿದ್ದೇವೆ, ಎಷ್ಟು ಸಾಕ್ಷ್ಯಗಳನ್ನು ಒಟ್ಟು ಮಾಡಲಾಗಿದೆ ಎಂಬ ನಿಖರ ಸಂಖ್ಯೆ ತಮ್ಮ ಬಳಿ ಇಲ್ಲ ಎಂದರು.

 

ಪ್ರಕರಣದ ತನಿಖೆಯನ್ನು ಎಲ್ಲಾ ಹಂತಗಳಲ್ಲೂ ಸೂಕ್ಷ್ಮವಾಗಿ ಅವಲೋಕನ ಮಾಡಿ ಒಂದಲ್ಲ, ಎರಡಲ್ಲಾ, ಮೂರು ಬಾರಿ ಸಾಕ್ಷ್ಯಗಳ ಕೂಲಂಕಷ ಪರಿಶೀಲನೆ ಮಾಡಿ ದಾಖಲೆ ಸಿದ್ಧಪಡಿಸಿದ್ದೇವೆ ಎಂದರು.

ಜೂನ್ 9ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ನಡೆದಿತ್ತು, 10ರಂದು ಮೃತದೇಹ ಪತ್ತೆಯಾಗಿತ್ತು, ಮೂವರು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಪೊಲೀಸ್ ಠಾಣೆಗೆ ಶರಣಾಗಿದ್ದರು.

 

ಬಂಧಿತರ ವಿಚಾರಣೆ ಸಂದರ್ಭದಲ್ಲಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಹಾಗೂ ಇತರರು ಭಾಗಿಯಾಗಿರುವುದು ಪತ್ತೆಯಾಯಿತು.

ಜೂನ್ 11 ರಂದು ಬೆಳಗ್ಗೆ ಮೈಸೂರಿನಲ್ಲಿ ನಟ ದರ್ಶನ್, ಬೆಂಗಳೂರಿನಲ್ಲಿ ಪವಿತ್ರಾಗೌಡ ಹಾಗೂ ದರ್ಶನ್‌ನ ಕೆಲವು ಸಹಚರರನ್ನು ಬಂಧಿಸಲಾಯಿತು.

 

ಕೊಲೆ ಪ್ರಕರಣದ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಮೂವರು ಆರೋಪಿಗಳನ್ನು ತುಮಕೂರು ಕಾರಾಗೃಹದಲ್ಲಿ ಇರಿಸಲಾಗಿದೆ, ಕಳೆದ ಎರಡು ತಿಂಗಳಿನಿಂದ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗುತ್ತಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top