‘ಕಾಂತಾರ’ ತಂಡಕ್ಕೆ ರಿಲೀಫ್: ಅರಣ್ಯ ಇಲಾಖೆ ಕ್ಲೀನ್ ಚಿಟ್

Kannada Nadu
‘ಕಾಂತಾರ’ ತಂಡಕ್ಕೆ ರಿಲೀಫ್: ಅರಣ್ಯ ಇಲಾಖೆ ಕ್ಲೀನ್ ಚಿಟ್

ಬೆಂಗಳೂರು: ‘ಕಾಂತಾರ: ಚಾಪ್ಟರ್ 1’ ಚಿತ್ರದ ಚಿತ್ರೀಕರಣದ ವೇಳೆ ಅರಣ್ಯ ನಿಯಮ ಉಲ್ಲಂಘನೆಯಾಗಿದೆ ಎಂದು ಸ್ಥಳೀಯರು ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತನಿಖೆ ಮಾಡಿತ್ತು. ಆದರೆ, ತನಿಖೆಯಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ ಎಂದು ಕಂಡುಬಂದಿದೆ. ಅರಣ್ಯ ಇಲಾಖೆಯು ರಿಷಬ್ ಶೆಟ್ಟಿ ನಾಯಕತ್ವದ ಚಿತ್ರತಂಡಕ್ಕೆ ಕ್ಲೀನ್ ಚಿಟ್  ನೀಡಿದೆ.

ರಿಷಬ್ ಶೆಟ್ಟಿ, ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ: ಚಾಪ್ಟರ್ 1’ ಚಿತ್ರ ತಂಡವು, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೇರೂರು ಗ್ರಾಮದ ಸಮೀಪ‌ ಇರುವ ಗವಿಗುಡ್ಡ ಪ್ರದೇಶದ ಡೀಮ್ಡ್ ಅರಣ್ಯ ಹಾಗು ಗೋಮಾಳ ಜಮೀನಿನಲ್ಲಿ ಚಿತ್ರೀಕರಣ ಮಾಡಲು ಅನುಮತಿ ಪಡೆದಿಕೊಂಡಿತ್ತು. ತಂಡದವರು ಅಕ್ರಮವಾಗಿ ಮರ‌ಕಡಿದು, ಸ್ಫೋಟಕ ಬಳಸಿ, ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಕೆಲ ಸ್ಥಳೀಯರ ಆರೋಪ ಮಾಡಿದ್ದರು. ಚಿತ್ರೀಕರಣದ ವೇಳೆ ಬ್ಲಾಸ್ಟ್ ಮಾಡಲಾಗಿದೆ, ಮರ‌ಕಡಿಯಲಾಗಿದೆ, ಇದರಿಂದ‌ ಕಾಡು ಪ್ರಾಣಿಗಳು ಗ್ರಾಮಗಳತ್ತ ನುಗ್ಗಿ ಬರುತ್ತಿವೆ. ಇದರಿಂದ ಸ್ಥಳೀಯರಿಗೆ ಸಮಸ್ಯೆ ಆಗುತ್ತಿದೆ ಎಂದು ಕೆಲವರು ಆರೋಪಿಸಿದ್ದರು. ಈ ಸಂಬಂಧ ಕೆಲ ಫೋಟೊಗಳು ಕೂಡ ವೈರಲ್ ಆಗಿತ್ತು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿತ್ತು. ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಚರ್ಚೆ ನಡೆದಿತ್ತು.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ‘ಈ ಬಗ್ಗೆ ತನಿಖೆ ನಡೆಸಿ  24 ಗಂಟೆಯೊಳಗೆ ವರದಿ ನೀಡಿ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಬಗ್ಗೆ ಸ್ಥಳ‌ಪರಿಶೀಲನೆ ನಡೆಸಿದ್ದ ಸಕಲೇಶಪುರ ಎಸಿಎಫ್ ಮಧು ಹಾಗು ಯಸಳೂರು ವಿಭಾಗದ ಆರ್​ಎಫ್​ಓ ಕೃಷ್ಣ ನೇತೃತ್ವದ ತಂಡ ಚಲನಚಿತ್ರದ ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿ ಮಹಜರ್ ನಡೆಸಿದ್ದರು. ಆ ಬಳಿಕ ಡಿಸಿಎಫ್​ಗೆ ವರದಿ ನೀಡಿದ್ದು, ‘ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿಯಲ್ಲಿ ಏನಿದೆ?

ಜನವರಿ 4ರಂದು ಅನುಮತಿ ಪಡೆಯದೆ ಡೀಮ್ಡ್ ಅರಣ್ಯದಲ್ಲಿ ಶೂಟಿಂಗ್ ಪರಿಕರ ತಂದ ಆರೋಪದಲ್ಲಿ 50 ಸಾವಿರ ದಂಡ ವಿಧಿಸಲಾಗಿತ್ತು. ಇದನ್ನು ಬಿಟ್ಟರೆ ಯಾವುದೇ ಬ್ಲಾಸ್ಟ್ ಮಾಡಿಲ್ಲ, ಮರಗಳನ್ನು ಕಡಿದಿಲ್ಲ, ಮರದಂತೆ ಪೇಂಟ್ ಮಾಡಿದ ವಸ್ತುಗಳನ್ನು ಬಳಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ಕಾಂತಾರ ಸಿನಿಮಾ ತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";